ADVERTISEMENT

ಭಾವೈಕ್ಯದ ಬಾಳು ಕಲಿಸಿದ ಜಾನಪದ ಲೋಕ: ರಾಮು ಮೂಲಗಿ

ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಹಂತಿ ಪದಕಾರ ರಾಮು ಮೂಲಗಿ

ಮಹಮ್ಮದ್ ಶರೀಫ್
Published 10 ನವೆಂಬರ್ 2024, 4:43 IST
Last Updated 10 ನವೆಂಬರ್ 2024, 4:43 IST
ರಾಮು ಮೂಲಗಿ
ರಾಮು ಮೂಲಗಿ   

ಹುಬ್ಬಳ್ಳಿ: ‘ಪ್ರಾಥಮಿಕ ಶಿಕ್ಷಣ ಹುಬ್ಬಳ್ಳಿಯಲ್ಲಿ ಮುಗಿಸಿ ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶರೀಫಜ್ಜನ ಕ್ಷೇತ್ರ ಶಿಶುವಿನಹಾಳದ ಶರೀಫಗಿರಿ ವಸತಿ ಶಾಲೆಯಲ್ಲಿದ್ದುಕೊಂಡು ಹೈಸ್ಕೂಲು ಓದಬೇಕಾಗಿ ಬಂತು. ಮಠದಲ್ಲಿ ಕಡ್ಡಾಯ ಹಾಡು ಹಾಡದೆ ಊಟ ನೀಡುತ್ತಿರಲಿಲ್ಲ. ಊಟಕ್ಕಾಗಿ ಹಾಡುತ್ತಿದ್ದ ಶರೀಫಜ್ಜನ ಅವೇ ಹಾಡುಗಳು ಇಂದು ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ...’

ಹೀಗೆಂದವರು ಈಚೆಗೆ ಜಾನಪದ ಅಕಾಡೆಮಿಯ 2023ನೇ ಸಾಲಿನ ಗೌರವ ಪ್ರಶಸ್ತಿ ಪಡೆದ ಹುಬ್ಬಳ್ಳಿಯ ಹಂತಿ ಪದಕಾರ, ಜಾನಪದ ವಿದ್ವಾಂಸ ರಾಮು ಮೂಲಗಿ. ತತ್ವಪದ, ಗೀಗೀಪದ, ಸೋಬಾನೆ ಪದ, ಡೊಳ್ಳಿನ ಪದ, ಭಜನೆ ಮುಂತಾದ ಹಲವು ಜಾನಪದ ಪ್ರಕಾರಗಳ ಕುರಿತು ಆಳ ಜ್ಞಾನ ಹೊಂದಿರುವ 61 ವರ್ಷದ ರಾಮು ಅವರು, ತಮ್ಮದೇ ಬಳಗವನ್ನು ಕಟ್ಟಿಕೊಂಡು ಜಾನಪದ ಸಾಹಿತ್ಯವನ್ನು ಯುವ ಸಮೂಹಕ್ಕೆ ದಾಟಿಸುವ ಶ್ರಮ ನಡೆಸುತ್ತ ಬಂದವರು.

‘ಪ್ರಶಸ್ತಿಗಾಗಿ ಕೆಲಸ ಮಾಡಬಾರದು, ನಾವು ಮಾಡಿದ ಕೆಲಸಕ್ಕೆ ಪ್ರಶಸ್ತಿ ಹುಡುಕಿಕೊಂಡು ಬರುವಂತಿರಬೇಕು’ ಎನ್ನುವ ಮೂಲಗಿ ಅವರು, ಮಾತಿನಲ್ಲಿಯೇ ಪ್ರಶಸ್ತಿಯನ್ನು ಬದಿಗಿಡುತ್ತಾರೆ. ‘ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರಿಂದ ಚಿಕ್ಕಪ್ಪನ ಮನೆಯಲ್ಲಿ ಬೆಳೆದೆ. ಕೃಷಿ ಕೆಲಸ ಮಾಡಿಕೊಂಡೇ ಶಾಲೆ ಕಲಿತೆ. ರೈತರು ಕೆಲಸದ ವೇಳೆ ಹಾಡುವ ಹಂತಿಪದದಂತಹ ಹಾಡುಗಳನ್ನು ಕೇಳುತ್ತ, ಹಾಡುತ್ತ, ಅದು ಬದುಕಿನ ಭಾಗವೇ ಆಯಿತು’ ಎನ್ನುತ್ತಾರೆ.

ADVERTISEMENT

ಮೊಹರಂನಲ್ಲಿ ಅಲಾವಿ ಕುಣಿತದಲ್ಲಿ ಹೆಜ್ಜೆ ಹಾಕುತ್ತ ಹಾಡುತ್ತ ಬೆಳೆದೆ. ಜಾನಪದ ಇಂತಹ ಭಾವೈಕ್ಯವನ್ನು ನಮ್ಮಲ್ಲಿ ಆಳವಾಗಿ ಬೆಳೆಸಿತು. ಅಕ್ಕಪಕ್ಕದ ಗದ್ದೆಗಳಲ್ಲಿ ರೈತರು ಕೆಲಸದ ವೇಳೆ ‘ಸವಾಲ್ –ಜವಾಬ್‌’ ಮಾದರಿಯ ಒಗಟು ಬಿಡಿಸುವ ಹಾಡುಗಳ ಸ್ಪರ್ಧೆಯೇ ನಡೆಯುತ್ತಿತ್ತು. ಗೆದ್ದವರಿಗೆ ಬಹುಮಾನ ನೀಡಲಾಗುತ್ತಿತ್ತು. ಇಂತಹ ವಾತಾವರಣದಲ್ಲಿ ಬೆಳೆದಿರುವುದರಿಂದ ಸಹಜವಾಗಿಯೇ ಜಾನಪದ ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಿತು. ನಂತರ ಈ ಭಾಗದ ಜಾನಪದದ ವಿಷಯದಲ್ಲಿಯೇ ಪಿಎಚ್‌ಡಿ ಅಧ್ಯಯನ ಮಾಡಿದೆ ಎಂದು ಮೆಲುಕು ಹಾಕುತ್ತಾರೆ.

‘ಕಾರ್ಯಕ್ರಮ ನಡೆಸಲು ಹುಬ್ಬಳ್ಳಿಯಲ್ಲಿ ಕೈಗೆಟಕುವ ದರದಲ್ಲಿ ವೇದಿಕೆ, ಸಭಾಭವನಗಳಿಲ್ಲ. ಇರುವ ಸಭಾಭವನಗಳು ನಿರ್ವಹಣೆ ಇಲ್ಲ. ಜನ ಪ್ರತಿನಿಧಿಗಳಿಗೆ ಆಸಕ್ತಿಯಿಲ್ಲ. ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ನಾವು ಶ್ರಮಪಟ್ಟೆವು. ಅಲ್ಲಿ ನಡೆಯಬೇಕಾದ ಸಂಶೋಧನೆ, ಅಧ್ಯಯನಗಳ ಕುರಿತು ನಮ್ಮ ಕನಸುಗಳು ಹಲವಿದ್ದವು. ಆದರೆ ಈಗ ಅದರ ಪರಿಸ್ಥಿತಿ ನೋಡಿದರೆ ಅತ್ತಕಡೆ ಮುಖ ಮಾಡಲು ಮನಸ್ಸಾಗುತ್ತಿಲ್ಲ. ಹುಬ್ಬಳ್ಳಿಯಲ್ಲಿ ‘ಜಾನಪದ ಜಗತ್ತು’ ಸ್ಥಾಪನೆ ಇನ್ನೂ ಆಗಿಲ್ಲ’ ಎಂದು ಬೇಸರಿಸುತ್ತಾರೆ ಅವರು.

1990ರ ಸುಮಾರಿಗೆ ಜಾನಪದ ಜಾತ್ರೆ ಎಂಬ ದೊಡ್ಡಮಟ್ಟದ ಕಾರ್ಯಕ್ರಮವನ್ನು ಇಲ್ಲಿನ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಳ್ಳುವ ಮೂಲಕ ಮನೆಮಾತಾದ ಅವರು, 2011ರಲ್ಲಿ ‘ಅತ್ಯುತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ’ ಪಡೆದರೂ ಅದರೊಂದಿಗೆ ಸಿಕ್ಕ ₹1ಲಕ್ಷ ಮೊತ್ತವನ್ನು ಕರ್ನಾಟಕ ಏಕೀಕರಣದ ರೂವಾರಿ ಅದರಗುಂಚಿ ಶಂಕರಗೌಡರ ಹೆಸರಿನಲ್ಲಿ ದತ್ತಿ ಇರಿಸಿದ್ದಾರೆ.

‘ಜನಪದರು ಕರ್ನಾಟಕ ಜನಪದ ಟ್ರಸ್ಟ್‌’ ರಚಿಸಿ, 13 ವರ್ಷಗಳಿಂದ ‘ಮನೆ ಮನೆಯಲ್ಲಿ ಶ್ರಾವಣ ಜಾನಪದ’ ಕಾರ್ಯಕ್ರಮ ನಡೆಸುತ್ತ ಬಂದಿದ್ದು, ಈಗ ‘ಕಾಲೇಜಿನತ್ತ ಜಾನಪದ’, ‘ಶಾಲೆಯಂಗಳದಲ್ಲಿ ಜಾನಪದ’ ಪಸರಿಸುವ ಗುರಿ ಹೊಂದಿದ್ದಾರೆ. ‘ಜಾನಪದ ಹಾಡು, ಸಾಹಿತ್ಯ ಎಂದಿಗೂ ಅಳಿಯುವುದಿಲ್ಲ. ನಾವು ಧರಿಸುವ ಬಟ್ಟೆ ಬದಲಾಗಬಹುದು, ದೇಹ ಒಂದೇ ಆಗಿರುತ್ತದೆ. ಹಾಗೆಯೇ ಮೂಲ ಜಾನಪದ ಅದರ ಸ್ಥಾನವನ್ನು ಉಳಿಸಿಕೊಂಡೇ ಇರುತ್ತದೆ’ ಎಂಬ ದೃಢ ನುಡಿ ರಾಮು ಮೂಲಗಿ ಅವರದು.

ಯಾವುದು ಜನಪದ ಹಾಡು?

‘ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುವ ಜಾನಪದ ಹಾಡುಗಳ ಸ್ಪರ್ಧೆಗೆ ತೀರ್ಪುಗಾರನಾಗಿ ಹೋಗುತ್ತಿದ್ದಾಗ ಜಾನಪದದ ಹೆಸರಲ್ಲಿ ಅವರು ಹಾಡುತ್ತಿದ್ದ ಹಾಡು ಕೇಳಿ ಅಚ್ಚರಿಯಾಗುತ್ತಿತ್ತು. ಈಗಿನ ಕಾಲದವರು ಏನೇನೋ ಹಾಡು ಗೀಚುತ್ತಾರೆ. ಯುವಕರು ಅದನ್ನೇ ಜಾನಪದ ಎಂದು ನಂಬಿದ್ದಾರೆ. ಅದು ‘ಖೋಟಾ ಜಾನಪದ’ ಎಂದು ಅವರಿಗೆ ತಿಳಿಹೇಳಬೇಕಿದೆ’ ಎನ್ನುತ್ತಾರೆ ರಾಮು ಮೂಲಗಿ. ‘ಮೂಲ ಜಾನಪದ ಹಾಡು ಜನಪ್ರಿಯ ಜಾನಪದ ಹಾಗೂ ಖೋಟಾ ಜಾನಪದ ಹಾಡುಗಳು ಬೇರೆ ಬೇರೆ. ಈ ಅರಿವು ಮುಖ್ಯ. ಬೇಂದ್ರೆ ಕೆ.ಎಸ್‌.ನರಸಿಂಹಸ್ವಾಮಿ ಬೆಟಗೇರಿ ಕೃಷ್ಣಶರ್ಮರಂಥವರು ಬರೆದ ಹಲವು ಹಾಡುಗಳು ಜನಮಾನಸದಲ್ಲಿ ಬೆರೆತಿವೆ. ಅವು ಜನಪ್ರಿಯ ಜನಪದ ಹಾಡುಗಳು. ತಲೆಮಾರುಗಳಿಂದ ಜನರು ಹಾಡುತ್ತ ಬಂದವು ಜಾನಪದ ಹಾಡುಗಳು’ ಎಂದು ಸ್ಪಷ್ಟಪಡಿಸುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.