ADVERTISEMENT

Ranji Trophy | ಮನೀಷ್ ಪಾಂಡೆ ಅಬ್ಬರದ ಆಟ

ರಣಜಿ; ಕರ್ನಾಟಕಕ್ಕೆ ಇನಿಂಗ್ಸ್ ಮುನ್ನಡೆ, ಹಾರ್ದಿಕ್ ಆಲ್‌ರೌಂಡ್ ಆಟ

ಸತೀಶ ಬಿ.
Published 18 ಫೆಬ್ರುವರಿ 2024, 0:30 IST
Last Updated 18 ಫೆಬ್ರುವರಿ 2024, 0:30 IST
<div class="paragraphs"><p>ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ಚಂಡೀಗಢ ಎದುರಿನ ರಣಜಿ ಪಂದ್ಯದಲ್ಲಿ ಶತಕ ಗಳಿಸಿದ ಕರ್ನಾಟಕ ತಂಡದ ಮನಿಷ್ ಪಾಂಡೆ ಅವರ ಬ್ಯಾಟಿಂಗ್ ವೈಖರಿ </p></div>

ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ಚಂಡೀಗಢ ಎದುರಿನ ರಣಜಿ ಪಂದ್ಯದಲ್ಲಿ ಶತಕ ಗಳಿಸಿದ ಕರ್ನಾಟಕ ತಂಡದ ಮನಿಷ್ ಪಾಂಡೆ ಅವರ ಬ್ಯಾಟಿಂಗ್ ವೈಖರಿ

   

-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ನೆತ್ತಿ ಸುಡುವ ಬಿಸಿಲಿನಲ್ಲೂ ಅಬ್ಬರಿಸಿದ ಮನೀಷ್‌ ಪಾಂಡೆ ಚುರುಕಾದ ಶತಕ ಸಿಡಿಸಿದರು.

ADVERTISEMENT

ಪಾಂಡೆ (ಬ್ಯಾಟಿಂಗ್‌ 102; 101ಎ, 4X14, 6X3) ಗಳಿಸಿದ ಶತಕದ ನೆರವಿನಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ  1 ರನ್ ಮುನ್ನಡೆ ಗಳಿಸಿತು.

ಚಂಡೀಗಢ ತಂಡವು ಗಳಿಸಿದ್ದ 267 ರನ್‌ಗಳಿಗೆ ಉತ್ತರವಾಗಿ ಕರ್ನಾಟಕವು ಎರಡನೇ ದಿನದಾಟದ ಅಂತ್ಯಕ್ಕೆ 63 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 268 ರನ್‌ ಗಳಿಸಿತು.

71 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಮನೀಷ್, ಶತಕ ಪೂರೈಸಲು ಕೇವಲ 24 ಎಸೆತ ತೆಗೆದುಕೊಂಡರು. ಇದು ಈ ಋತುವಿನಲ್ಲಿ ಅವರ 3ನೇ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 25ನೇ ಶತಕ. ಅವರು ಮಧ್ಯಮವೇಗಿ ಹರತೇಜಸ್ವಿ ಕಪೂರ್ ಹಾಕಿದ ಇನಿಂಗ್ಸ್‌ನ 55 ಓವರ್‌ನಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್‌ ಸಹಿತ 17 ರನ್ ಚಚ್ಚಿದರು.

ನಾಲ್ಕನೇ ವಿಕೆಟ್‌ಗೆ ಹಾರ್ದಿಕ್‌ ರಾಜ್‌ ಪಾಲುದಾರಿಕೆಯಲ್ಲಿ 153 (188) ರನ್‌ ಗಳಿಸಿದರು.  ಹಾರ್ದಿಕ್ (ಬ್ಯಾಟಿಂಗ್‌ 49; 116ಎ, 4X4) ಮನೀಷ್‌ಗೆ ಬೆಂಬಲ ನೀಡಿದರು.

ಇದಕ್ಕೂ ಮುನ್ನ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ 8 ರನ್‌ಗಳಾಗಿದ್ದಾಗ ಆರಂಭಿಕ ಆಟಗಾರ ಆರ್.ಸಮರ್ಥ್‌ (4) ನಿರ್ಗಮಿಸಿದರು.

ಈ ಹಂತದಲ್ಲಿ ತಂಡದ ನಾಯಕ ಮಯಂಕ್‌ ಅಗರವಾಲ್‌ ಮತ್ತು ಉಪನಾಯಕ ನಿಕಿನ್‌ ಜೋಸ್‌ ಎರಡನೇ ವಿಕೆಟ್‌ಗೆ 70 (105 ಎ) ರನ್‌ ಸೇರಿಸಿ, ವಿಕೆಟ್ ಪತನ ತಡೆದರು.

ಅರ್ಧಶತಕ ಗಳಿಸಿದ್ದ ಮಯಂಕ್‌ (57; 90ಎ, 4X9, 6X1) ಅವರನ್ನು ಕರಣ್ ಕೈಲಾ ಬೌಲ್ಡ್ ಮಾಡಿದರು. ಮಯಂಕ್ ಅವರಿಗೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೂರನೇ ಪಂದ್ಯ. ನಿಕಿನ್‌ (37) ಹರತೇಜಸ್ವಿ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ ಮಯಂಕ್ ಸಿಧುಗೆ ಕ್ಯಾಚಿತ್ತರು.

6ಕ್ಕೆ 219 ರನ್‌ಗಳೊಂದಿಗೆ ಶನಿವಾರ ಎರಡನೇ ದಿನದಾಟ ಮುಂದುವರಿಸಿದ ಚಂಡೀಗಢ ತಂಡ  ಅದಕ್ಕೆ 48 ರನ್ ಸೇರಿಸಿ, 106.4 ಓವರ್‌ಗಳಲ್ಲಿ 267 ರನ್‌ಗಳಿಸಿತು.

ವೈಶಾಖ ವಿಜಯಕುಮಾರ್‌ ಎಸೆತದಲ್ಲಿ ಗುರಿಂದರ್ ಸಿಂಗ್ (16) ಬೌಲ್ಡ್ ಆದರೆ,  ಮಯಂಕ್ ಸಿಧು (31) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಬೆಳಿಗ್ಗೆ ಪಾನೀಯ ವಿರಾಮದ ನಂತರ ದಾಳಿಗಿಳಿದ ಹಾರ್ದಿಕ್ ರಾಜ್ ಕೊನೆಯ ಎರಡು ವಿಕೆಟ್‌ ಉರುಳಿಸಿದರು. ವೈಶಾಖ ವಿಜಯಕುಮಾರ್ ಮತ್ತು ಹಾರ್ದಿಕ್ ತಲಾ 4 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಜಗಜಿತ್‌ ಸಿಂಗ್‌ (25; 46 ಎ, 4X2, 6X1) ಒಂಬತ್ತನೇ ವಿಕೆಟ್‌ಗೆ ಹರತೇಜಸ್ವಿ ಸಿಂಗ್‌ ಜತೆಯಾಟದಲ್ಲಿ 31 (54) ರನ್ ಕಲೆಹಾಕಿದರು.

ಶತಕ ಗಳಿಸಿದ ಕರ್ನಾಟಕದ ಮನಿಷ್ ಪಾಂಡೆ ಬ್ಯಾಟ್ ಎತ್ತಿ ಹಿಡಿದು ಸಂಭ್ರಮಿಸಿದರು  -

ಚಂಡೀಗಢಕ್ಕೆ 5ರನ್‌ ದಂಡ ವಿಕೆಟ್ ಕೀಪರ್ ಹಿಂದೆ ಇಟ್ಟಿದ್ದ ಹೆಲ್ಮೆಟ್‌ಗೆ ಚೆಂಡು ಬಡಿದಿದ್ದರಿಂದ ಚಂಡೀಗಢ ತಂಡಕ್ಕೆ ಐದು ರನ್‌ಗಳ ದಂಡ ವಿಧಿಸಲಾಯಿತು. ಇದರಿಂದ ಕರ್ನಾಟಕ ತಂಡದ ಖಾತೆಗೆ ಐದು ರನ್‌ ಸೇರ್ಪಡೆಯಾದವು. ಶನಿವಾರ ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಹಾರ್ದಿಕ್‌ ರಾಜ್ ರೋಹಿತ್ ಧಂಡಾ ಹಾಕಿದ ಓವರ್‌ನ ಕೊನೆಯ ಎಸೆತವನ್ನು ಬಾರಿಸಿದರು. ಚೆಂಡು ವಿಕೆಟ್ ಕೀಪರ್ ಹಿಂದೆ ಇಟ್ಟಿದ್ದ ಹೆಲ್ಮೆಟ್‌ಗೆ ತಾಗಿತು. ಅಂಪೈರ್‌ ಸ್ವರೂಪಾನಂದ ಅವರು ಚಂಡೀಗಢ ತಂಡಕ್ಕೆ 5 ರನ್‌ಗಳ ದಂಡ ವಿಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.