ಅವಳಿ ನಗರಗಳ ಮಧ್ಯೆ ಕ್ಷಿಪ್ರ ಸಂಪರ್ಕಕ್ಕಾಗಿ ಅಭಿವೃದ್ಧಿಯಾಗಿರುವ ಹಾಗೂ ಅಭಿವೃದ್ಧಿಯ ಹಂತದಲ್ಲೇ ಇರುವ ಎಚ್‌ಡಿಬಿಆರ್‌ಟಿಎಸ್‌ನ ‘ಚಿಗರಿ’ ಓಡಲು ರಾಯಾಪುರ ಕೆರೆಯನ್ನು ಮತ್ತಷ್ಟು ಇಬ್ಭಾಗ ಮಾಡಲಾಗಿದೆ. ಸ್ಥಳೀಯರ ಹೋರಾಟ ಇಲ್ಲದಿದ್ದರೆ ಈ ಕೆರೆ ಈಗ ಇಷ್ಟೂ ಉಳಿದಿರುತ್ತಿರಲಿಲ್ಲ. ಇಷ್ಟಾದರೂ, ಆ ಹೋರಾಟ ಫಲಪ್ರದವಾಗಿಲ್ಲ.
ರಾಯಾಪುರ ಊರ ಕೆರೆ 5 ಎಕರೆ 33 ಗುಂಟೆ ಪ್ರದೇಶದಲ್ಲಿದೆ. ಹುಬ್ಬಳ್ಳಿ–ಧಾರವಾಡ ರಸ್ತೆಗಾಗಿ ಸಾಕಷ್ಟು ಹಿಂದೆಯೇ ಈ ಕೆರೆಯ ಮೇಲೆ ಏಕಪಥ ರಸ್ತೆ ನಿರ್ಮಾಣವಾಗಿತ್ತು. ಆದರೆ ಕೆರೆಗೆ ತನ್ನತನ ಕಳೆದುಕೊಂಡಿರಲಿಲ್ಲ. ಚಿಗರಿ ಸಂಚಾರಕ್ಕಾಗಿ ಸುಮಾರು ಶೇ 10ರಷ್ಟು ಕೆರೆ ಪ್ರದೇಶವನ್ನು ಎಚ್‌ಡಿಬಿಆರ್‌ಟಿಎಸ್ (ಹುಬ್ಬಳ್ಳಿ–ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ) ಆವರಿಸಿಕೊಂಡಿದೆ. ಕೆರೆ ಅಂಗಳವನ್ನೇ ಒತ್ತುವರಿ ಮಾಡಿಕೊಂಡು, ರಸ್ತೆಯನ್ನು ಸಾಕಷ್ಟು ವಿಸ್ತರಿಸಿದೆ. ಹೀಗಾಗಿ ರಾಯಾಪುರ ಕೆರೆ ತುಂಡುತುಂಡಾಗಿದೆ. ರಸ್ತೆ ಮಧ್ಯದಲ್ಲಿ ಪೈಪ್‌ಗಳನ್ನು ಅಳವಡಿಸಿ ಸಂಪರ್ಕ ಕಲ್ಪಿಸಿರುವುದಷ್ಟೇ ಸಮಾಧಾನ.
ರಾಯಾಪುರ ಕೆರೆಗೆ ಇನ್ನೂ ಜೀವಬಂದಿಲ್ಲ. ಇನ್ನೂ ಉಸಿರುಗಟ್ಟಿಸುವ ಕುಣಿಕೆ ಅದರ ಕುತ್ತಿಗೆಯಲ್ಲಿ ಬಿಗಿಯಾಗಿಯೇ ಇದೆ. ರಸ್ತೆ ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ‘ಕೆರೆಯನ್ನು ಅಭಿವೃದ್ಧಿ ಮಾಡಿ, ಅದರ ಆಳವನ್ನು ಹೆಚ್ಚು ಮಾಡಿ, ನೀರು ಸಂಗ್ರಹದಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಬಿಆರ್‌ಟಿಎಸ್ ಅಧಿಕಾರಿಗಳು ಭರವಸೆ ನೀಡಿದ್ದರು. ಭರವಸೆ ನೀಡಿದ್ದು 2017ರಲ್ಲಿ. ಆದರೆ ಈವರೆಗೆ ಕೆರೆಯನ್ನು ಅಭಿವೃದ್ಧಿಪಡಿಸುವಲ್ಲಿ ಒಂದು ಗುದ್ದಲಿ ಹಾಕುವ ಕಾಮಗಾರಿಯೂ ನಡೆದಿಲ್ಲ. ಬದಲಿಗೆ, ‘ಕೆರೆಯ ಆಳವನ್ನಷ್ಟೇ ಹೆಚ್ಚು ಮಾಡುತ್ತೇವೆ ಎಂದು ನಾವು ಹೇಳಿದ್ದೇವೆ. ಅಭಿವೃದ್ಧಿಯೇನೂ ಮಾಡುವುದಿಲ್ಲ’ ಎಂದು ಬಿಆರ್‌ಟಿಎಸ್ ಅಧಿಕಾರಿಗಳು ಇದೀಗ ಹೇಳುತ್ತಿದ್ದಾರೆ.
ಇಷ್ಟಕ್ಕೇ ಮುಗಿಯುವುದಿಲ್ಲ, ಬಿಆರ್‌ಟಿಎಸ್ ಯೋಜನೆಗಾಗಿ ದೊಡ್ಡ ಮರಗಳನ್ನೆಲ್ಲ ಕಡಿತಗೊಳಿಸಲಾಯಿತು. ಒಂದಕ್ಕೆ ಹತ್ತು ಸಸಿ ನೆಡುತ್ತೇವೆ, ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಅದೂ ಈಡೇರಿಲ್ಲ ಎಂಬುದು ಸ್ಥಳೀಯ ನಾಗರಿಕರ ಆರೋಪ. ರಾಯಾಪುರ ಕೆರೆಯ ವೈಶಿಷ್ಟ್ಯ ಎಂದರೆ, ಒಳಚರಂಡಿ ನೀರಿನ ಸಮಸ್ಯೆ ಇಲ್ಲದೆ ಇಂದಿಗೂ ನೀರಿನಿಂದ ಕಂಗೊಳಿಸುತ್ತಿದೆ. ಆದರೆ, ತ್ಯಾಜ್ಯ, ಕಟ್ಟಡ ತ್ಯಾಜ ಹಾಗೂ ಗಿಡಗಂಟಿಗಳಿಂದ ಆವರಿಸಿಕೊಂಡು ಅವಶೇಷದಂತೆ ಉಳಿದಿರುವುದು ಶೋಚನೀಯ.
ರಾಯಾಪುರದಲ್ಲಿ 29 ಗುಂಟೆಯ ಕುಂಟೆಯೂ ಇದೆ. ಹೆದ್ದಾರಿಯಲ್ಲಿ ಕೆ.ಎಂ.ಎಫ್‌ನ ತರಬೇತಿ ಕೇಂದ್ರದ ಹಾಸ್ಟೆಲ್ ಹಿಂಭಾಗದಲ್ಲಿದೆ. ತ್ಯಾಜ್ಯ ಸುರಿಯುವ ಪ್ರದೇಶವಾಗಿ, ಬಡಾವಣೆಗಾಗಿ ಶೇ 3ರಷ್ಟು ಪ್ರದೇಶ ಒತ್ತುವರಿಯೂ ಆಗಿದೆ. ನೀರು ಇಂಗುವ, ವೃಕ್ಷವನವನ್ನಾಗಿಯೂ ಇದನ್ನು ಪರಿವರ್ತಿಸಬಹುದು.
ಹುಬ್ಬಳ್ಳಿ ಹೋಬಳಿಯಲ್ಲಿರುವ ಸುತಗಟ್ಟಿಯಲ್ಲಿ ಮೂರು ಕೆರೆಗಳಿವೆ. ಸುತಗಟ್ಟಿ ಊರ ಒಳಗಿರುವ ಕೆರೆಯನ್ನು ಕುಡಿ ಕೆರೆ ಎಂದೂ ಕರೆಯುತ್ತಾರೆ. ನೀರಿನ ಸಂಗ್ರಹವಿರುವ ಮೂರು ಮೀಟರ್ ಆಳ ಹೊಂದಿರುವ ಈ ಕೆರೆಗೆ ಹೊಲಸು ನೀರು ಯಥೇಚ್ಛವಾಗಿ ಹರಿಯುತ್ತಲೇ ಇದೆ. ತ್ಯಾಜ್ಯ, ಕಟ್ಟಡಗಳ ಅವಶೇಷಗಳನ್ನು ಸುರಿಯಲಾಗುತ್ತಿದೆ. ಶೇ 0.5ರಷ್ಟು ಪ್ರದೇಶವನ್ನು ರಸ್ತೆಗೆ ಒತ್ತುವರಿ ಮಾಡಲಾಗಿದೆ. ಒಂದು ಕಾಲದಲ್ಲಿ ಈ ಕೆರೆ ಜನರ ದಾಹ ನೀಗಿಸುತ್ತಿತ್ತು.
ಸುತಗಟ್ಟಿಯ ಕುಂಟೆ–2 ಇನ್ನೂ ಜೀವಂತವಾಗಿದೆ. ಕಾನೂನು ವಿಶ್ವವಿದ್ಯಾಲಯದ ಎದುರು, ಕೆಳಭಾಗದಲ್ಲಿದ್ದು, ಉತ್ತಮ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಒತ್ತುವರಿ, ಒಳಚರಂಡಿ ನೀರಿನ ಸಮಸ್ಯೆ ಇಲ್ಲದಿದ್ದರೂ, ತ್ಯಾಜ್ಯ, ಕಟ್ಟಡಗಳ ಅವಶೇಷಗಳಿಗೆ ತಾಣವಾಗಿದೆ. ತ್ಯಾಜ್ಯವನ್ನು ಸುಡಲಾಗುತ್ತಿದೆ. ಇನ್ನು, 1 ಎಕರೆ 13 ಗುಂಟೆಯಲ್ಲಿದ್ದ ಸುತಟ್ಟಿಯ 2ನೇ ಕುಂಟೆ ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿಸಿರುವ ಟ್ವಿನ್ ಸಿಟಿ ವ್ಯಾಪ್ತಿಯಲ್ಲಿ ಕೃಷಿ ಪ್ರದೇಶವಾಗಿ ಬಹುಪಾಲು ತನ್ನ ವ್ಯಾಪ್ತಿಯನ್ನು ಕಳೆದುಕೊಂಡಿದೆ.
ಈಗಲಾದರೂ ಅಭಿವೃದ್ಧಿ ಮಾಡಿ...
ರಾಯಾಪುರ ಕೆರೆಯ ಮೇಲೆ ಬಿಆರ್‌ಟಿಎಸ್ ರಸ್ತೆ ಮಾಡುವ ಸಂದರ್ಭದಲ್ಲಿ ಕೆರೆಯ ಆಳವನ್ನು ಹೆಚ್ಚು ಮಾಡಿ, ಈ ಹಿಂದಿನ ನೀರಿನ ಸಂಗ್ರಹಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಲಾಗಿತ್ತು. ಜೊತೆಗೆ ಸುತ್ತಲೂ ಸಾಧ್ಯವಾದಷ್ಟು ಪ್ರದೇಶವನ್ನು ಕೆರೆಗೆ ತೆಗೆದುಕೊಂಡು ಅದನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈವರೆಗೆ ಏನೂ ಆಗಿಲ್ಲ. ಅಲ್ಲದೆ, ಸುಮಾರು ನಾಲ್ಕು ಸಾವಿರ ಮರಗಳನ್ನು ಈ ಯೋಜನೆಗಾಗಿ ಕಡಿಯಲಾಗಿತ್ತು. ಒಂದಕ್ಕೆ ಹತ್ತು ಸಸಿ ನೆಡುವ ಭರವಸೆಯೂ ಪೂರ್ತಿ ಈಡೇರಿಲ್ಲ. ಇದಲ್ಲದೆ, ರಸ್ತೆಯ ಎರಡೂ ಬದಿಯಲ್ಲಿ ಸಸಿ ನೆಟ್ಟು, ಪೋಷಿಸುವ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಈಗಲಾದರೂ ಈ ಕಾರ್ಯಗಳನ್ನು. ಬಿಆರ್‌ಟಿಎಸ್ ಸಂಸ್ಥೆ ಆದ್ಯತೆಯ ಮೇಲೆ ಮಾಡಬೇಕು ಎನ್ನುತ್ತಾರೆಸುಸ್ಥಿರ ಅಭಿವೃದ್ಧಿ ಕಾರ್ಯಕರ್ತಡಾ. ಪ್ರಕಾಶ ಭಟ್.
ಹಸಿರು ಸಮಿತಿಯ ನಿರ್ಲಕ್ಷ್ಯ
ರಾಯಾಪುರ ಕೆರೆ ಉಳಿಸುತ್ತೇವೆ, ಅಭಿವೃದ್ಧಿ ಮಾಡುತ್ತೇವೆ. ನೀರಿನ ಸಂಗ್ರಹವನ್ನೂ ಹೆಚ್ಚಿಸುತ್ತೇವೆ. ರಸ್ತೆ ಬದಿಯಲ್ಲಿ ಗಿಡ ನೆಡುತ್ತೇವೆ ಎಂದು ಹೇಳಿದ್ದರೂ ಮಾಡಲಿಲ್ಲ. ಹಸಿರು ಸಮಿತಿಯವರು ಬನ್ನಿ ತೋರಿಸುತ್ತೇವೆ, ಎಲ್ಲೆಲ್ಲಿ ಗಿಡ ನೆಡಬೇಕು, ಹೇಗೆ ಅಭಿವೃದ್ಧಿ ಮಾಡಬೇಕು ಎಂದು ಹೇಳಿದೆವು. ಸಭೆ ನಡೆಸಿ ಎಂದು ಸಾಕಷ್ಟು ಬಾರಿ ಹೇಳಿದರೂ ಕೇಳಿಲ್ಲ. ಹಸಿರು ಸಮಿತಿಯನ್ನು ಬಿಆರ್‌ಟಿಎಸ್ ಸಂಪೂರ್ಣ ನಿರ್ಲಕ್ಷಿಸಿದೆ. ರಸ್ತೆಯ ಮಧ್ಯದಲ್ಲಿ ಶೋ ಗಿಡಗಳನ್ನು ನೆಟ್ಟಿದ್ದಾರೆ. ಇದರಿಂದ ಪ್ರಯೋಜನವಿಲ್ಲ ಎನ್ನುವುದುಹುಬ್ಬಳ್ಳಿ–ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷಶಂಕರ ಕುಂಬಿ ಅವರ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.