ಧಾರವಾಡ: ಸೂರ್ಯ ಗ್ರಹಣ ಸಂಭವಿಸಿ ಕೆಲವೇ ದಿನಗಳಲ್ಲಿ ಎದುರಾದ ಚಂದ್ರಗ್ರಹಣವನ್ನು ನಗರದ ಜನ ವೀಕ್ಷಿಸಿ ಸಂಭ್ರಮಿಸಿದರು. ಆಗಸದಲ್ಲಿ ಅಪರೂಪದ ಕೆಂಪು ಚಂದ್ರನನ್ನು ಕಣ್ತುಂಬಿಕೊಂಡರು.
ಇನ್ನೂ ಕೆಲವರು ಚಂದ್ರಗ್ರಹಣ ನಿಮಿತ್ತ ಬೆಳಿಗ್ಗೆಯಿಂದಲೇ ಉಪವಾಸ, ಪೂಜ, ಜಪದಲ್ಲಿ ತೊಡಗಿ ಧಾರ್ಮಿಕವಾಗಿ ಆಚರಿಸಿದರು. ಮಂಗಳವಾರ ಗ್ರಹಣಕ್ಕೂ ಮೊದಲೇ ದೇವಾಲಯಗಳು ಬಾಗಿಲು ಮುಚ್ಚಿದ್ದವು. ಗ್ರಹಣ ಮೋಕ್ಷಕಾಲ ಮುಗಿಯುತ್ತಲೇ ದೇವಾಲಯಗಳು ತೆರೆದು, ತೊಳೆದು, ಪೂಜೆಗಳು ನಡೆದವು.
ಮತ್ತೊಂದೆಡೆ ಗ್ರಹಣ ಕುರಿತು ಇರುವ ಮೂಢನಂಬಿಕೆ ಹೋಗಲಾಡಿಸಲು ಕೆಲವು ಸಂಘಟನೆಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ನಗರದ ಕಲಾಭವನ ಆವರಣದಲ್ಲಿ ಸೇರಿದ ಹಿರಿಯ–ಕಿರಿಯರು ಅಡುಗೆ ತಯಾರಿಸಿ ಗ್ರಹಣ ಸಂದರ್ಭದಲ್ಲಿ ಸವಿದರು. ಜತೆಗೆ ಗ್ರಹಣದಂತ ಖಗೋಳ ವಿಸ್ಮಯ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.
ಚಂದ್ರಗ್ರಹಣವು ಸೌರಮಂಡಳದ ಸಹಜ ಪ್ರಕ್ರಿಯೆಯಾಗಿದೆ. ಯಾರೂ ಭಯಪಡಬೇಕಾದದ್ದಿಲ್ಲ.ಇಂದು ವಿಜ್ಞಾನ ಬೆಳೆದಿದ್ದು, ಆಧುನಿಕ ಯುಗದಲ್ಲಿ ಮೂಢನಂಬಿಕೆಗಳಿಗೆ ಕಿವಿಗೊಡದೆ ವೈಜ್ಞಾನಿಕ ತಳಹದಿಯಲ್ಲಿ ಯೋಚಿಸಬೇಕು ಎಂದು ಯುವಕರಿಗೆ ಹಿರಿಯರು ಹೇಳಿದರು.
ಇತ್ತ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲೂ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಭಾಗಗಳಿಂದ ಬಂದ ಆಸಕ್ತರು ಕೆಂಪು ಚಂದ್ರನ ಕಣ್ತುಂಬಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.