ADVERTISEMENT

ಸಚಿವ ಜಮೀರ್ ಅಹಮದ್‌ರನ್ನು ಸಂಪುಟದಿಂದ‌ ಕಿತ್ತೊಗೆಯಿರಿ: ಪ್ರಲ್ಹಾದ ಜೋಶಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 4:31 IST
Last Updated 30 ಅಕ್ಟೋಬರ್ 2024, 4:31 IST
<div class="paragraphs"><p>ಕೇಂದ್ರ ಸಚಿವ&nbsp;ಪ್ರಲ್ಹಾದ ಜೋಶಿ</p></div>

ಕೇಂದ್ರ ಸಚಿವ ಪ್ರಲ್ಹಾದ ಜೋಶಿ

   

ಹುಬ್ಬಳ್ಳಿ: ರಾಜ್ಯದಲ್ಲಿ ಕೋಮು ದ್ವೇಷ ಹರಡುತ್ತಿರುವ, ಇಸ್ಲಾಮೀಕರಣ ಮಾಡಲು ಮುಂದಾಗಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ನಗರದಲ್ಲಿ‌ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಡೋಂಗಿ ಜಾತ್ಯತೀತತೆ ಮತ್ತು ಮುಸ್ಲಿಮರ ತುಷ್ಟೀಕರಣ ನೀತಿಯಿಂದಾಗಿ ದೇವಸ್ಥಾನಗಳ‌ ಒಂದು ಇಂಚು ಜಾಗವೂ ಹೆಚ್ಚಾಗಿಲ್ಲ. ಆದರೆ, ಎಲ್ಲ ಪ್ರಮುಖ ಮತ್ತು ಹೆಚ್ಚು ಆದಾಯ ಇರುವ ದೇವಸ್ಥಾನಗಳನ್ನು ಸರ್ಕಾರ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ಆರೋಪಿಸಿದರು‌.

ADVERTISEMENT

ಬಿಜೆಪಿ ಸರ್ಕಾರ ಇದ್ದಾಗಲೂ ರೈತರಿಗೆ ನೋಟಿಸ್ ನೀಡಲಾಗಿತ್ತು ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ.

ಆ ಸಮಯದಲ್ಲಿ ನೋಟಿಸ್ ಕೊಟ್ಟಿದ್ದರೂ ತಪ್ಪೆ. ಆಗ ಯಾರೂ ನಮ್ಮ ಗಮನಕ್ಕೆ ತಂದಿರಲಿಲ್ಲ. ನಮ್ಮ ಸರ್ಕಾರ ಇದ್ದುದರಿಂದ ವಕ್ಫ್ ಮಂಡಳಿಯವರು ಗೋಪ್ಯವಾಗಿ ನೋಟಿಸ್ ನೀಡಿದ್ದರು. ಆಗ ನಮ್ಮ‌ ಗಮನಕ್ಕೆ ಬಂದಿದ್ದರೆ ಮಂಡಳಿಯವರಿಗೆ ಎಚ್ಚರಿಕೆ ನೀಡಿ, ನೋಟಿಸ್ ಹಿಂಪಡೆಯಲು ಹೇಳುತ್ತಿದ್ದೆವು. ಈಗ ರೈತರು ನಮ್ಮ ಗಮನಕ್ಕೆ ತಂದಿದ್ದರಿಂದ ಹೋರಾಟ ಮಾಡಲಾಗುತ್ತಿದೆ ಎಂದರು.

ವಕ್ಫ್ ಆಸ್ತಿ ವಿವಾದ ಈಗಲೂ ಬೆಳಕಿಗೆ ಬರುತ್ತಿರಲಿಲ್ಲ. ಕೆಲವು ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಬಂದಿದ್ದರಿಂದ ಉಳಿದವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ತಮ್ಮ ದಾಖಲೆಗಳನ್ನು ಪರಿಶೀಲಿಸಿದಾಗ ಇದು ಬೆಳಕಿಗೆ ಬಂದಿದೆ ಎಂದು ಹೇಳಿದರು.

ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ರೈತರ ಪಹಣಿಯಲ್ಲಿ ಈಗಲೂ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ರೈತರು ಜಮೀನು ಹೊಂದಿದ್ದಾರೆ. ಇತ್ತೀಚಿನ ವರ್ಷಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ಕೂಡಲೇ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ಪ್ರತಿ ಜಿಲ್ಲೆಗಳಿಗೆ ಹೋಗಿ ವಕ್ಫ್ ಮಂಡಳಿಯವರು ವಕ್ಫ್ ಅದಾಲತ್ ಅನ್ನು ನಡೆಸುತ್ತಿದ್ದು ಕೂಡಲೇ ಅದನ್ನು ನಿಲ್ಲಿಸಬೇಕು. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ವಕ್ಫ್ ಆಸ್ತಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಬಗ್ಗೆ ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಧರಣಿ ನಡೆಸುತ್ತಿದ್ದು, ಅಲ್ಲಿಗೆ ತೆರಳಿ ಅವರಿಗೆ ಆತ್ಮ ಸ್ಥೈರ್ಯ ತುಂಬಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.