ADVERTISEMENT

ಶಾಲೆ ಆರಂಭಿಸಲು ಆಗ್ರಹ: 7 ತಾಸು ಹೆದ್ದಾರಿ ಬಂದ್‌

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:12 IST
Last Updated 25 ಜನವರಿ 2021, 16:12 IST
ಕಲಘಟಗಿ ತಾಲ್ಲೂಕಿನ ಜೋಡಳ್ಳಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲೆ ಪುನರಾರಂಭಿಸಲು ಒತ್ತಾಯಿಸಿ ಕಲಘಟಗಿ-ಧಾರವಾಡ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟಿಸಿದರು
ಕಲಘಟಗಿ ತಾಲ್ಲೂಕಿನ ಜೋಡಳ್ಳಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಾಲೆ ಪುನರಾರಂಭಿಸಲು ಒತ್ತಾಯಿಸಿ ಕಲಘಟಗಿ-ಧಾರವಾಡ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟಿಸಿದರು   

ಕಲಘಟಗಿ: ಸರ್ಕಾರದಿಂದ ಅನುದಾನ ಪಡೆದು ಕಾರ್ಯನಿರ್ವಹಿಸುತ್ತಿದ್ದ ತಾಲ್ಲೂಕಿನ ಜೋಡಳ್ಳಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆಯನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಸೋಮವಾರ ವಿದ್ಯಾರ್ಥಿಗಳು ಹಾಗೂ ಪೋಷಕರು ಏಳು ತಾಸು ಕಲಘಟಗಿ-ಧಾರವಾಡ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

ಶಾಲೆಯ ಆಡಳಿತ ಮಂಡಳಿಯ ಶಂಕರಗೌಡ ಪಾಟೀಲ ಎಂಬುವವರು 1990ರಲ್ಲಿ ಶಾಲೆ ಆರಂಭಿಸಿದ್ದರು. 2006ರಲ್ಲಿ ಸರ್ಕಾರದ ಅನುದಾನಕ್ಕೆ ಒಳಪಟ್ಟು ಇಲ್ಲಿಯವರೆಗೆ ನಡೆಯುತ್ತಾ ಬಂದಿದೆ. ಆದರೆ, ಸರ್ಕಾರ ಅನುದಾನ ಹಿಂಪಡೆದು, ಶಿಕ್ಷಕರನ್ನು ಬೇರೆ ಕಡೆ ನಿಯುಕ್ತಿಗೊಳಿಸಿದೆ ಎಂದು ಪ್ರತಿಭಟನಾ ನಿರತರು ಹೇಳಿದರು.

ಈಗ ವಿದ್ಯಾರ್ಥಿಗಳನ್ನು ಬೇರೆ ಶಾಲೆಗೆ ಕಳುಹಿಸಲಾಗುತ್ತಿದೆ. ಇದನ್ನು ಬಿಟ್ಟು ಶಾಲೆ ಪುನರಾರಂಭಿಸಬೇಕು ಎಂದು ಗ್ರಾಮದ ನಾಗಪ್ಪ ಮಂಜರಗಿ ಆಗ್ರಹಿಸಿದರು. ಸಂಗಮೇಶ್ವರ ಪ್ರೌಢಶಾಲೆಯ 173 ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಧಿಕಾರಿ ಉಮಾದೇವಿ ಬಸಾಪುರ ’ಶಾಲೆಯಲ್ಲಿ ಮೂಲ ಸೌಕರ್ಯಗಳು ಇಲ್ಲದ ಕಾರಣ ಸರ್ಕಾರ ಅನುದಾನ ವಾಪಸ್‌ ಪಡೆದಿದೆ. ನಾವು ತಾತ್ಕಾಲಿಕವಾಗಿ ಮಕ್ಕಳಿಗೆ ಬೇರೆ ಕಡೆ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದೇವೆ‘ ಎಂದರು.

ನಂತರ ಶಾಸಕ ಸಿ. ಎಂ ನಿಂಬಣ್ಣವರ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಮಾತನಾಡಿ ’ಮೇಲಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಪರಿಹರಿಸಲಾಗುವುದು‘ ಎಂದರು.

ಏಳು ತಾಸು ಹೆದ್ದಾರಿ ಬಂದ್‌ ಮಾಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಸಿಪಿಐ ಪ್ರಭು ಸೂರಿನ್‌ ಬಂದೋಬಸ್ತ್‌ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.