ಧಾರವಾಡ: ‘ಪತಿ–ಪತ್ನಿ ನಡುವೆ ಖಾಸಗಿತನದ ಹಕ್ಕು ಇರಬೇಕೇ ಎಂಬ ವಿಷಯ ಕುರಿತು ಸರ್ ಸಿದ್ಧಪ್ಪ ಕಂಬಳಿ ಕಾನೂನು ಕಾಲೇಜು ಅ. 19ರಿಂದ ಎರಡು ದಿನಗಳ ಅಣಕು ನ್ಯಾಯಾಲಯ ಆಯೋಜಿಸಿದ್ದು, ದೇಶದ 35 ತಂಡಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ’ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ವಿಶ್ವನಾಥ ತಿಳಿಸಿದರು.
‘ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಈ ಕಾಲೇಜು ಆಯೋಜಿಸುತ್ತಿರುವ 22ನೇ ಅಣಕು ನ್ಯಾಯಾಲಯ ಇದಾಗಿದ್ದು, ಲೋಕಪಾಲ ಸದಸ್ಯರೂ ಆಗಿರುವ ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ದಿಲೀಪ ಭೋಸ್ಲೆ ಅ. 19ರಂದುಚಾಲನೆ ನೀಡಲಿದ್ದಾರೆ. ಪ್ರಭಾರ ಕುಲಪತಿ ಪ್ರೊ. ಅಶೋಕ ಎಸ್. ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಭವಿಷ್ಯದ ವಕೀಲರಾದ ಯುವ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗೆ ವೇದಿಕೆ ಕಲ್ಪಿಸುವುದು, ವಕೀಲಿ ವೃತ್ತಿಗೆ ಅಗತ್ಯವಿರುವ ಅಧ್ಯಯನ ಹಾಗೂ ವಾದ ಮಂಡಣೆಯಂತ ಕೌಶಲವನ್ನು ಕರಗತ ಮಾಡಿಕೊಳ್ಳಲು ಅನುಕೂಲವಾಗುವಂತೆ ಇಂಥ ಅಣಕು ನ್ಯಾಯಾಲಯ ಆಯೋಜಿಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಸಮಾಜದಲ್ಲಿನ ಕೆಲ ಜಟಿಲ ಸಮಸ್ಯೆಗಳನ್ನೇ ಆಯ್ಕೆ ಮಾಡಲಾಗುತ್ತದೆ. ಆ ವಿಷಯ ಕುರಿತು ಆಳವಾಗಿ ಅಧ್ಯಯನ ನಡೆಸಿ, ವಾದ ಮಂಡಣೆ ಹಾಗೂ ವರದಿ ಸಲ್ಲಿಕೆ ಅಣಕು ನ್ಯಾಯಾಲಯದ ಭಾಗ’ ಎಂದು ವಿವರಿಸಿದರು.
‘ಎರಡು ತಿಂಗಳಿಂದ ಇದರ ನೋಂದಣಿ ಪ್ರಕ್ರಿಯೆ ನಡೆದಿದೆ. ಕರ್ನಾಟಕದ 16 ತಂಡಗಳು ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 35 ತಂಡಗಳು ಪಾಲ್ಗೊಳ್ಳುತ್ತಿವೆ. ಪ್ರತಿ ತಂಡಕ್ಕೆ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ನಿವೃತ್ತ ನ್ಯಾಯಾಧೀಶರು, ಹಿರಿಯ ವಕೀಲರು, ಸರ್ಕಾರಿ ವಕೀಲರನ್ನು ಒಳಗೊಂಡ ನಿರ್ಣಾಯಕರತಂಡ ಇರಲಿದೆ. ಸ್ಪರ್ಧಿಗಳು ಈ ತಂಡದ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದು ಪ್ರೊ. ವಿಶ್ವನಾಥ ತಿಳಿಸಿದರು.
‘ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜರುಗಲಿರುವ ಈ ಸ್ಪರ್ಧೆಯ ಸಮಾರೋಪ ಅ. 20ರಂದು ಭಾನುವಾರ ನಡೆಯಲಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಬಹುಮಾನ ಅತ್ಯುತ್ತಮ ವಿಷಯ ಮಂಡನೆ, ಅತ್ಯುತ್ತಮ ಮಹಿಳೆ ಹಾಗೂ ಪುರುಷ ವಕೀಲ ಬಹುಮಾನಕ್ಕೆ ಭಾಜನರಾದವರಿಗೆ ಟ್ರೋಫಿ ವಿತರಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.