ADVERTISEMENT

ಹುಬ್ಬಳ್ಳಿ: ‘ಸ್ಮಾರ್ಟ್‌’ ಊರಿನಲ್ಲಿ ಅವ್ಯವಸ್ಥೆಯ ಆಗರ

ಗೋವರ್ಧನ ಎಸ್‌.ಎನ್‌.
Published 17 ಜೂನ್ 2024, 5:09 IST
Last Updated 17 ಜೂನ್ 2024, 5:09 IST
ಹುಬ್ಬಳ್ಳಿಯ ಚನ್ನಮ್ಮ ವೃತ್ತ ಸಂಪರ್ಕಿಸುವ ಬಸವವನದ ರಸ್ತೆ ಹದಗೆಟ್ಟಿದೆ ಪ್ರಜಾವಾಣಿ ಚಿತ್ರ–ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಚನ್ನಮ್ಮ ವೃತ್ತ ಸಂಪರ್ಕಿಸುವ ಬಸವವನದ ರಸ್ತೆ ಹದಗೆಟ್ಟಿದೆ ಪ್ರಜಾವಾಣಿ ಚಿತ್ರ–ಗೋವಿಂದರಾಜ ಜವಳಿ   

ಹುಬ್ಬಳ್ಳಿ: ‘ಇದು ಸ್ಮಾರ್ಟ್‌ಸಿಟಿ ಅಂತೆ. ಇಲ್ಲಿನ ರಸ್ತೆಗಳಲ್ಲಿ ಓಡಾಡಿದ್ರೆ ಗೊತ್ತಾಗುತ್ತೆ, ಎಷ್ಟು ಸ್ಮಾರ್ಟ್‌ ಅಂತಾ...’ 

ಸ್ಟೇಷನ್‌ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವಿಜಯಕುಮಾರ್‌ ಎಂಬುವರು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು. ಇಲ್ಲಿನ ರಸ್ತೆಗಳ ಬಗೆಗಿರುವ ಅತೀವ ಬೇಸರ ಅವರ ಪ್ರತಿ ಮಾತಿನಲ್ಲೂ ಕಂಡುಬರುತ್ತಿತ್ತು. 

‘ಹೊಸ ರಸ್ತೆ ಮಾಡ್ತೀವಿ ಅಂತಾರೆ. ಇರೋ ರಸ್ತೆ ಹಾಳು ಮಾಡ್ತಾರೆ. ಅದಕ್ಕೆ ವರ್ಷಗಟ್ಟಲೆ ಸಮಯ ತೆಗೆದುಕೊಳ್ತಾರೆ. ನಡುವೆ ಮತ್ಯಾವುದೋ ಕಾಮಗಾರಿಗಾಗಿ ರಸ್ತೆ ಅಗೀತಾರೆ. ಅದನ್ನು ಹಾಗೇ ಬಿಟ್ಟು ಹೋಗ್ತಾರೆ. ಮತ್ತೆ ರಸ್ತೆ ಹಾಳು. ಇದು ಮುಗಿಯದ ಕಥೆ. ಹುಬ್ಬಳ್ಳಿ ನಿವಾಸಿಗಳ, ವಾಹನ ಸವಾರರ ಗೋಳು ಹೇಳತೀರದು’ ಎಂದು ಬೈಕ್‌ ಸ್ಟಾರ್ಟ್‌ ಮಾಡಿ ತೆರಳಿದರು. ಮುಂದೆಯೇ ಇದ್ದ ಗುಂಡಿಯಲ್ಲಿ ಬೈಕ್‌ ಇಳಿದು, ಮೇಲೆ ಹತ್ತಿ ಸಾಗಿತು.

ADVERTISEMENT

ಹುಬ್ಬಳ್ಳಿಯ ನಿವಾಸಿಗಳು ಹಾಗೂ ಇಲ್ಲಿ ವಾಹನ ಚಲಾಯಿಸುವ ಯಾರನ್ನೇ ಮಾತನಾಡಿಸಿದರೂ ಇಂತಹ ಆಕ್ರೋಶದ ಮಾತುಗಳೇ ಕೇಳಿಬರುತ್ತವೆ. ‘ಇಲ್ಲಿನ ಪರಿಸ್ಥಿತಿ ಹಿಂದಿನಿಂದಲೂ ಹೀಗೇ ಇದೆ, ಮುಂದೆಯೂ ಹೀಗೆಯೇ ಇರುತ್ತದೆ. ಜನರ ಸಮಸ್ಯೆಯನ್ನು ಯಾರೂ ಕೇಳುವುದಿಲ್ಲ’ ಎಂಬ ನಿರಾಶಾವಾದವೂ ಬಹುತೇಕರಲ್ಲಿದೆ.

ನಗರದ ಚನ್ನಮ್ಮ ವೃತ್ತದಿಂದ ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆ, ಸ್ಟೇಷನ್ ರಸ್ತೆ, ಧಾರವಾಡಕ್ಕೆ ಹೋಗುವ ರಸ್ತೆ, ಕೊಪ್ಪಿಕರ್‌ ರಸ್ತೆ, ಜನತಾಬಜಾರ್‌, ದುರ್ಗದಬೈಲ್‌, ಶಾ ಬಜಾರ್‌, ಗಾಂಧಿ ಮಾರುಕಟ್ಟೆಯಲ್ಲಿರುವ ಪ್ರಮುಖ ರಸ್ತೆಗಳಲ್ಲೇ ಗುಂಡಿಗಳಿವೆ, ಎತ್ತರದ ಒಳಚರಂಡಿ ಚೇಂಬರ್‌ಗಳೂ ಇವೆ. ಜೆಜೆಎಂ ಪೈಪ್‌ಲೈನ್‌, ಒಳಚರಂಡಿ, ಕೇಬಲ್‌ ಅಳವಡಿಕೆಗಾಗಿ ರಸ್ತೆ ಅಗೆದಿದ್ದರಿಂದ ಉಂಟಾಗಿದ್ದ ತೊಂದರೆ ಇನ್ನೂ ಪರಿಹಾರವಾಗಿಲ್ಲ. ವಿವಿಧೆಡೆ ರಸ್ತೆಗಳನ್ನು ಇನ್ನೂ ಅಗೆಯಲಾಗುತ್ತಿದೆ. ಒಂದಿಲ್ಲೊಂದು ಕಾಮಗಾರಿ ನಡೆಯುತ್ತಲೇ ಇರುವುದರಿಂದ ಸಂಚಾರಯೋಗ್ಯ ರಸ್ತೆಗಳನ್ನು ದೀರ್ಘ ಕಾಲದವರೆಗೆ ಕಾಣಲು ಸಾಧ್ಯವಾಗುವುದೇ ಇಲ್ಲ.

ಹೊಸ ರಸ್ತೆಗಳೂ ಸರಿ ಇಲ್ಲ: ‘ವಿದ್ಯಾನಗರ–ತೋಳನಕೆರೆ, ಉಣಕಲ್‌ ಕ್ರಾಸ್‌–ಹೊಸೂರು ಕ್ರಾಸ್‌, ಓಲ್ಡ್‌ ಇನ್‌ಕಂಟ್ಯಾಕ್ಸ್‌ ರಸ್ತೆ– ಕಿಮ್ಸ್‌ ಹಿಂದೆ, ಕೋಟಿಲಿಂಗನಗರ, ಲೋಹಿಯಾನಗರದಲ್ಲಿ ಟೆಂಡರ್‌ಶ್ಯೂರ್‌ ರಸ್ತೆಗಳನ್ನು ಮಾಡಲಾಗಿದೆ. ಆದರೆ ನಡುವೆ ಅಂತರವಿರಿಸಿ, ಪೇವರ್ಸ್‌ ಹಾಕಿದ್ದಾರೆ. ಎಷ್ಟೋ ಕಡೆ ಪೇವರ್ಸ್‌ ಒಡೆದಿವೆ. ರಸ್ತೆ ಇಕ್ಕೆಲದ ಎತ್ತರ ಒಂದೇ ಸಮನಾಗಿಲ್ಲ’ ಎಂದು ವಾರ್ಡ್‌ ಸಮಿತಿ ಬಳಗದ ಸಂಚಾಲಕ ಲಿಂಗರಾಜ ಧಾರವಾಡಶೆಟ್ಟರ ತಿಳಿಸಿದರು. 

‘ಈ ಅಂತರದಲ್ಲಿ ಬೈಕ್‌ಗಳ ಸಿಲುಕುತ್ತವೆ. ಇದು ಪ್ರಾಣಕ್ಕೆ ಕುತ್ತು ತರಬಹುದು. ರಸ್ತೆಗಳ ತಿರುವಿನಲ್ಲೂ ಅಪಾಯ ಎದುರಾಗುವಂತಹ ಸ್ಥಿತಿ ಇದೆ. ವಾರ್ಡ್‌ ಸಮಿತಿ ರಚನೆಯಾದರೆ ಇಂತಹುದೆಲ್ಲವನ್ನೂ ಪ್ರಶ್ನಿಸಿ, ವ್ಯವಸ್ಥಿತ ಕಾಮಗಾರಿಗೆ ಆಗ್ರಹಿಸಬಹುದು’ ಎಂದರು.

ಆಟೊ ಚಾಲಕರಿಗೆ ಸಂಕಷ್ಟ: ‘ಹಾಳಾದ ರಸ್ತೆಗಳಲ್ಲಿ ಸಂಚರಿಸುವುದರಿಂದ ಆಟೊಗಳಿಗೆ ಹಾನಿಯಾಗುತ್ತಿದೆ. ಒಳ ರಸ್ತೆಗಳು ತೀರಾ ಹದಗೆಟ್ಟಿರುವುದರಿಂದ ಸುತ್ತಿಬಳಸಿ ಹೋಗಬೇಕು. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬಿದ್ದಾಗ ಆಟೊಗಳು ಉರುಳಿಬಿದ್ದ ಉದಾಹರಣೆಗಳಿವೆ. ರಸ್ತೆಗಳು ಸರಿಹೋಗುವವರೆಗೂ ಅಪಾಯದ ಆತಂಕವಂತೂ ಇದೆ’ ಎನ್ನುತ್ತಾರೆ ಶ್ರಮಜೀವಿ ಆಟೊರಿಕ್ಷಾ ಚಾಲಕರ ಸಂಘದ  ಪ್ರಧಾನ ಕಾರ್ಯದರ್ಶಿ ಪುಂಡಲೀಕ ಬಡಿಗೇರ. 

ಹುಬ್ಬಳ್ಳಿಯ ಮೂರುಸಾವಿರ ಮಠದ ಸಮೀಪದ ರಸ್ತೆ ಹಾಳಾಗಿದೆ ಪ್ರಜಾವಾಣಿ ಚಿತ್ರ–ಗುರು ಹಬೀಬ
ಹಳೇಹುಬ್ಬಳ್ಳಿ ಅಸಾರ್‌ಹೊಂಡದಲ್ಲಿರುವ ರಸ್ತೆಯನ್ನು ಅಗೆದಿದ್ದು ಒಳಚರಂಡಿ ಚೇಂಬರ್‌ ಒಡೆದು ಕೊಳಚೆ ನೀರು ಸಂಗ್ರಹಗೊಂಡಿದೆ ಪ್ರಜಾವಾಣಿ ಚಿತ್ರ–ಗುರು ಹಬೀಬ
ಹುಬ್ಬಳ್ಳಿಯ ಆರ್‌.ಎನ್‌. ಶೆಟ್ಟಿ ರಸ್ತೆ ಕೆಸರುಮಯವಾಗಿದೆ ಪ್ರಜಾವಾಣಿ ಚಿತ್ರ–ಗುರು ಹಬೀಬ
ತಗ್ಗು–ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ಅಂಗವಿಕಲರು ವೃದ್ಧರು ಓಡಾಡುವುದು ಕಷ್ಟ. ವಾಹನ ಸವಾರರೂ ಬಿದ್ದು ಗಾಯಗೊಂಡ ನಿದರ್ಶನವಿದೆ
–ರೇಣುಕಾ ಅರವಿಂದನಗರ ನಿವಾಸಿ
‘ಸ್ಮಾರ್ಟ್‌ ಸಿಟಿ’ ಹುಬ್ಬಳ್ಳಿಯ ರಸ್ತೆಗಳೂ ಸ್ಮಾರ್ಟ್‌ ಆಗಬೇಕಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು
–ವಿಶ್ವನಾಥ ಕುಲಕರ್ಣಿ ವಿದ್ಯಾನಗರ ನಿವಾಸಿ
ರಸ್ತೆಗಳಲ್ಲಿ ಸಾಗುವಾಗ ವಾಹನ ಚಾಲಕರು ಸಂಚಾರ ನಿಯಮ ಪಾಲಿಸಬೇಕು. ಕಾನೂನು–ನಿಯಮ ಪಾಲನೆ ಜಾಗೃತಿ ನಮ್ಮ ಸಂಸ್ಕೃತಿ ಆಗಬೇಕು
ರವೀಶ್‌ ಸಿ.ಆರ್‌.ಡಿಸಿಪಿ ಅಪರಾಧ ಹಾಗೂ ಸಂಚಾರ ವಿಭಾಗ
ಒಳರಸ್ತೆಗಳ ಸ್ಥಿತಿ; ಅಧೋಗತಿ
ಪ್ರಮುಖ ರಸ್ತೆಗಳೇ ಹಾಳಾಗಿರುವಾಗ ಒಳ ರಸ್ತೆಗಳ ಸ್ಥಿತಿ ಊಹೆಗೂ ನಿಲುಕದಾಗಿದೆ. ಹಲವು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕೆಲವು ಬಡಾವಣೆಯ ರಸ್ತೆಗಳು ಡಾಂಬರು ಕಾಂಕ್ರೀಟ್‌ ಕಂಡಿವೆ. ಬಹುತೇಕ ರಸ್ತೆಗಳು ಇನ್ನೂ ಅಸ್ತಿಪಂಜರದಂತಿವೆ. ಮೋಹನ ಏಕಬೋಟೆ ರಸ್ತೆ ಕಾರವಾರ ರಸ್ತೆ ಸಮೀಪದಲ್ಲೇ ಇರುವ ಓಣಿಗಳ ರಸ್ತೆಗಳು ಕೇಶ್ವಾಪುರದ ಒಳರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಇನ್ನೂ ಕೆಲವೆಡೆ ಮಣ್ಣಿನ ರಸ್ತೆಗಳೇ ಇವೆ. ಬೇಸಿಗೆಯಲ್ಲಿ ದೂಳು ಮಳೆ ಬಂದರೆ ಕೆಸರು: ಹಾಳಾದ ರಸ್ತೆಗಳಲ್ಲಿ ಬೇಸಿಗೆಯಲ್ಲಿ ಸಾಗಿದಾಗ ವಿಪರೀತವಾದ ದೂಳು ಆವರಿಸುತ್ತದೆ. ಇದರಿಂದ ಕಣ್ಣುಉರಿ ಕೆಮ್ಮು ಉಸಿರಾಟ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಚರಂಡಿ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಗುಂಡಿ ತೋಡಿದ ಮಣ್ಣನ್ನು ಅಲ್ಲಿಯೇ ಬಿಡುವುದರಿಂದ ರಸ್ತೆ ಪೂರ್ತಿ ಕೆಸರಾಗುತ್ತದೆ. ಮಣ್ಣಿನ ರಸ್ತೆಗಳು ಕೆಸರುಗದ್ದೆಗಳಾಗುತ್ತವೆ.   
ಮಳೆಗಾಲದ ನಂತರ ಹೊಸ ರಸ್ತೆ ನಿರ್ಮಾಣ
ಮಳೆಗಾಲದಲ್ಲಿ ರಸ್ತೆ ಗುಂಡಿಗಳಿಗೆ ಡಾಂಬರು ಹಾಕಿದರೂ ಹಾಳಾಗುತ್ತದೆ. ತಾತ್ಕಾಲಿಕವಾಗಿ ವೆಟ್‌ಮಿಕ್ಸ್‌ ಹಾಕಲು ತಿಳಿಸಿದ್ದೇನೆ. ಮಳೆಗಾಲದ ನಂತರ ಡಾಂಬರು ಹಾಕಿ ರಸ್ತೆಗಳ ಗುಂಡಿ ಮುಚ್ಚಲಾಗುತ್ತದೆ. ಮಣ್ಣಿನ ರಸ್ತೆಗಳಿಗೆ ಸದ್ಯಕ್ಕೆ ಗರಸು ಹಾಕಲಾಗಿದೆ. ಹೊಸ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ.  ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಆದ್ಯತೆ ಮೇರೆಗೆ ಕ್ರಮ ಆರ್‌.ಎನ್‌. ಶೆಟ್ಟಿ
ರಸ್ತೆ ವಿಶ್ವೇಶ್ವರನಗರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರಸ್ತೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೇನೆ. ರಸ್ತೆ ನಿರ್ಮಾಣದಲ್ಲಿ ಎದುರಾಗುವ ತಾಂತ್ರಿಕ ತೊಂದರೆ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಕೊರತೆಯಿದೆ. ಎಲ್ಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ವ್ಯವಸ್ಥಿತವಾಗಿ ಕಾಮಗಾರಿ ನಡೆಸಲು ತಿಳಿಸಿದ್ದೇನೆ. ಇದಕ್ಕಾಗಿ ಪಾಲಿಕೆಯಲ್ಲಿ ನೋಡಲ್ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ. ಹೊಸ ಯೋಜನೆಗಳನ್ನು ಕೊರತೆ ಇಲ್ಲದಂತೆ ಅನುಷ್ಠಾನ ಮಾಡಲು ಶ್ರಮಿಸಲಾಗುತ್ತಿದೆ. ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ಮೇರೆಗೆ ಕ್ರಮ ವಹಿಸಲಾಗುತ್ತಿದೆ. ಮಹೇಶ ಟೆಂಗಿನಕಾಯಿ ಶಾಸಕ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ
ಸಮಸ್ಯೆ ಪರಿಹರಿಸಲು ಯತ್ನ
ಬಹಳಷ್ಟು ರಸ್ತೆಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಗ್ಯಾಸ್‌ ಲೈನ್‌ 24x7 ನೀರು ಪೂರೈಕೆ ಯುಜಿಡಿ ಹೆಸರಿನಲ್ಲಿ ಮತ್ತೆ ಮತ್ತೆ ರಸ್ತೆ ಅಗೆಯುತ್ತಾರೆ. ಈ ಬಗ್ಗೆ ಹು–ಧಾ ಮಹಾನಗರ ಪಾಲಿಕೆ ಗಂಭೀರವಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹಲವು ಬಾರಿ ಸಭೆ ನಡೆಸಿ ನಿರ್ಲಕ್ಷ್ಯ ವಹಿಸಿದವರಿಗೆ ದಂಡ ಹಾಕುವಂತೆ ಸೂಚಿಸಿದರೂ ಕೇಳುವುದಿಲ್ಲ. ವಲಯ ಅಧಿಕಾರಿಗಳು ಕಚೇರಿಯಲ್ಲೇ ಇರುತ್ತಾರೆ. ಹೊರಗೆಬಂದು ಕೆಲಸ ಮಾಡುವುದಿಲ್ಲ. ಸಾವಿರಾರು ಕೋಟಿ ಹಣ ತಂದರೂ ಪ್ರಯೋಜನವಿಲ್ಲ ಎನ್ನುವಂತಾಗಿದೆ. ಸಾಕಷ್ಟು ಸಮಸ್ಯೆಗಳಿದ್ದು ಹಂತ ಹಂತವಾಗಿ ಪರಿಹರಿಸಲಾಗುವುದು.  ಪ್ರಸಾದ ಅಬ್ಬಯ್ಯ ಶಾಸಕ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.