ADVERTISEMENT

ಆರ್‌ಟಿಇ: ದಾಖಲಾತಿ ಪ್ರಮಾಣ ಕುಸಿತ

ಬದಲಾದ ನಿಯಮ: ಸರ್ಕಾರಿ ಶಾಲೆ ಇದ್ದಲ್ಲಿ ಖಾಸಗಿಯಲ್ಲಿಲ್ಲ ಅವಕಾಶ

ಗೋವರ್ಧನ ಎಸ್‌.ಎನ್‌.
Published 4 ಆಗಸ್ಟ್ 2024, 5:06 IST
Last Updated 4 ಆಗಸ್ಟ್ 2024, 5:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಅಡಿ ದಾಖಲಾತಿ ಪಡೆಯುವ ನಿಯಮವನ್ನು ಸರ್ಕಾರ ಬದಲಾಯಿಸಿದ್ದರಿಂದ ಆರ್‌ಟಿಇ ಅಡಿ ದಾಖಲಾತಿ ಪ್ರಮಾಣ ಈ ವರ್ಷವೂ ಕುಸಿತವಾಗಿದೆ. ವಿವಿಧ ಖಾಸಗಿ ಶಾಲೆಗಳಲ್ಲಿ 574 ಆರ್‌ಟಿಇ ಸೀಟುಗಳಿದ್ದರೂ, 302 ಮಕ್ಕಳಿಗೆ ಮಾತ್ರ ಪ್ರವೇಶಾತಿ ಅವಕಾಶ ಸಿಕ್ಕಿದೆ.

ಕಾಯ್ದೆ ಜಾರಿಯಾದ ಕೆಲ ವರ್ಷಗಳವರೆಗೆ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳ ಪ್ರವೇಶಾತಿಗೆ ಪೋಷಕರು ಮುಗಿಬಿದ್ದರು. 2017ರಲ್ಲಿ ದಾಖಲಾತಿ ನಿಯಮದಲ್ಲಿ ಬದಲಾವಣೆ ತರಲಾಯಿತು. ಅದರಂತೆ, ಮಗುವು ವಾಸವಿರುವ ವಾರ್ಡ್‌ ಇಲ್ಲವೇ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳು ಇಲ್ಲದಿದ್ದರೆ ಮಾತ್ರ ಖಾಸಗಿ ಶಾಲೆಗಳಿಗೆ ದಾಖಲಾತಿ ಪಡೆಯಬಹುದಾಗಿದೆ. 

ನಿಯಮ ಬದಲಾವಣೆಯಿಂದಾಗಿ, ಮಗು ವಾಸವಿರುವ ವಾರ್ಡ್‌ ಅಥವಾ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದರೆ ಅಲ್ಲಿಯೇ ಪ್ರವೇಶಾತಿ ಪಡೆಯಬೇಕು. ಪೋಷಕರು ಸರ್ಕಾರಿ ಶಾಲೆಗೆ ಮಗುವನ್ನು ಸೇರಿಸಲು ಇಚ್ಛಿಸದಿದ್ದರೂ, ಆರ್‌ಟಿಇ ಅಡಿ ಖಾಸಗಿ ಶಾಲೆಗೆ ಸೇರಿಸಲು ಅವಕಾಶ ಇರುವುದಿಲ್ಲ. ಇದರಿಂದ ಬಹುತೇಕ ಪೋಷಕರು ಆರ್‌ಟಿಇ ಅಡಿ ಅರ್ಜಿ ಹಾಕುವುದೇ ಇಲ್ಲ. ನಿಯಮ ಅರಿಯದೆ, ಸರ್ಕಾರಿ ಶಾಲೆ ಇದ್ದೂ ಖಾಸಗಿ ಶಾಲೆಗೆ ಆದ್ಯತೆ ನೀಡಿ ಅರ್ಜಿ ಸಲ್ಲಿಸಿದರೆ, ಅಂತಹ ಅರ್ಜಿಗಳು ತಿರಸ್ಕೃತವಾಗುತ್ತಿವೆ. 

ADVERTISEMENT

‘ಕಾಯ್ದೆಯಂತೆ ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಮೀಸಲಿರಿಸಲಾಗುತ್ತದೆ. ಆದರೆ, ಸರ್ಕಾರಿ ಅಥವಾ ಅನುದಾನಿತ ಶಾಲೆ ಇದ್ದೂ, ಮಕ್ಕಳು ಅಲ್ಲಿಗೆ ಪ್ರವೇಶಾತಿ ಪಡೆಯದೆ, ಖಾಸಗಿ ಶಾಲೆ ಸೇರಿದರೆ ದೊಡ್ಡ ಮೊತ್ತದ ಶುಲ್ಕವನ್ನು ಸರ್ಕಾರ ಭರಿಸಬೇಕಾಗುತ್ತದೆ. ಹಾಗಾಗಿ, ಕೆಲ ವರ್ಷಗಳಿಂದ ‘ನೆರೆಹೊರೆ ಶಾಲೆ’ ಪರಿಕಲ್ಪನೆಯನ್ನು ಬದಲಾಯಿಸಲಾಗಿದೆ’ ಎಂದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ತಿಳಿಸಿದರು.

‘ಮಗುವು ಶಿಕ್ಷಣ ಪಡೆಯಲು ಒಂದು ಕಿ.ಮೀ. ದಾಟಿ ಹೋಗಬಾರದೆಂಬ ಉದ್ದೇಶ ಸರ್ಕಾರದ್ದು. ಅದಕ್ಕಾಗಿ ಅವಕಾಶ ನೀಡಲಾಗಿತ್ತು. ಅಲ್ಲದೆ, ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆಯಬೇಕೆಂದು ಬಯಸುತ್ತಾರೆ. ಸರ್ಕಾರಿ ಶಾಲೆಗಳಲ್ಲೇ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸಿರುವುದು ಅನುಕೂಲವಾಗಿದೆ’ ಎಂದು ಹೇಳಿದರು.  

ಆರ್‌ಟಿಇ; ಜಿಲ್ಲೆಯ ಮಾಹಿತಿ ವರ್ಷ;ಮೀಸಲಾದ ಸೀಟು;ದಾಖಲಾತಿ

2022;422;230 2023;459;246 2024;574;302

ಆರ್‌ಟಿಇ ಕುರಿತು ಜಾಗೃತಿ ಮೂಡಿಸಲಾಗಿದೆ. ಪೋಷಕರು ಖಾಸಗಿ ಶಾಲೆಗೆ ಆದ್ಯತೆ ನೀಡುತ್ತಾರೆ. ಸರ್ಕಾರಿ ಶಾಲೆ ಇದ್ದರೆ ಅಲ್ಲಿಯೇ ದಾಖಲಿಸಬೇಕು.
ಎಸ್‍.ಕೆ. ಮಾಕಣ್ಣವರ, ಆರ್‌ಟಿಇ, ನೋಡಲ್ ಅಧಿಕಾರಿ
ಸರ್ಕಾರಿ ಶಾಲೆಗಳಲ್ಲಿ ಕೊರತೆಗಳೇ ಹೆಚ್ಚು. ಖಾಸಗಿಯವರ ಲಾಬಿಗೆ ಮಣಿದು ಸರ್ಕಾರ ಒಂದೆಡೆ ಅವಕಾಶ ಕೊಟ್ಟು ಇನ್ನೊಂದೆಡೆ ಕಿತ್ತುಕೊಳ್ಳುತ್ತಿದೆ.
ಬಸವರಾಜ್ ಎಸ್‌., ಎಸ್‌ಎಫ್‌ಐ, ರಾಜ್ಯ ಘಟಕದ ಪದಾಧಿಕಾರಿ 
ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಪಾವತಿ ಮಾಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ಇದರಿಂದ ಸಂಸ್ಥೆಗಳು ನಷ್ಟ ಅನುಭವಿಸುವಂತಾಗಿದೆ. 
ಜಯಪ‍್ರಕಾಶ ಟೆಂಗಿನಕಾಯಿ, ಅಧ್ಯಕ್ಷ, ಧಾರವಾಡ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.