ADVERTISEMENT

ಯುವಜನೋತ್ಸವದಲ್ಲಿ ಗೋಲಿ, ಚಿನ್ನಿ–ದಾಂಡು, ಬುಗುರಿ...

ಬಸೀರ ಅಹ್ಮದ್ ನಗಾರಿ
Published 14 ಜನವರಿ 2023, 3:06 IST
Last Updated 14 ಜನವರಿ 2023, 3:06 IST
ಧಾರವಾಡದಲ್ಲಿ ಬಾಲಕನೊಬ್ಬ ಅಪ್ಪಟ ಗ್ರಾಮೀಣ ದೇಸಿ ಕ್ರೀಡೆ ಬುಗರಿ ಆಡಿದ ಬಗೆ...
ಧಾರವಾಡದಲ್ಲಿ ಬಾಲಕನೊಬ್ಬ ಅಪ್ಪಟ ಗ್ರಾಮೀಣ ದೇಸಿ ಕ್ರೀಡೆ ಬುಗರಿ ಆಡಿದ ಬಗೆ...   

ಹುಬ್ಬಳ್ಳಿ: ಹೊಡಿ... ಹೊಡಿ... ಗುರಿ ಇಡು.. ಬಿಡಬೇಡ... ಅದಕ್ಕೆ ತಗುಲಿದರೆ ನೀನೆ ಗೆದ್ದಂತೆ... ಇರು.. ಇರು.. ಈಗಲೇ ಹೊಡಬೇಡ, ಆ ಕಡೆ ತಿರುಗಲಿ.. ಎಸಿ ಜೋರಾಗಿ ಎಸಿ..

ರೆಡಿನಾ.. ರೆಡಿನಾ.. ಎನ್ನುತ್ತಲೇ ಕೋಲಿನಿಂದ ಚಿಣ್ಣಿಯನ್ನು ಚಿಮ್ಮಿಸಿದರೆ ಅಷ್ಟು ದೂರ ಹೋಗಿ ಬಿತ್ತದು..

ಗೋಲಿಯಾಟ, ಲಗೋರಿಯಾಟ, ಬುಗುರಿ ಮುಂತಾದ ಗ್ರಾಮೀಣ ಆಟಗಳು ಮೈದಾನದಲ್ಲಿ ಆಡುತ್ತಿದ್ದರೆ ಹಿರಿಯರಿಗೆಲ್ಲ ಬಾಲ್ಯಕ್ಕೆ ಮರಳಿದಂತೆ.

ADVERTISEMENT

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ದೇಶಿ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ.

ಗ್ರಾಮೀಣ ಭಾಗದಲ್ಲೂ ಅಪರೂಪ ಎನಿಸುತ್ತಿರುವ ‌ಲಗೋರಿ, ಚಿನ್ನಿ–ದಾಂಡು, ಬುಗರಿ, ಗೋಲಿ, ಸಂಗ್ರಾಣಿ ಕಲ್ಲೆತ್ತುವ ಆಟಗಳು ಯುವಜನೋತ್ಸವದಲ್ಲಿ ಸ್ಥಳೀಯ ಯುವ ಸಮೂಹವನ್ನು ಸೆಳೆಯುತ್ತಿವೆ. ಯುವಜನೋತ್ಸವದ ಎರಡನೇ ದಿನವಾದ ಶುಕ್ರವಾರ ಹಲವು ವಿದ್ಯಾರ್ಥಿಗಳು ಗೋಲಿ ಆಟವಾಡಿ ಖುಷಿಪಟ್ಟರು.

‘ಯುವಜನೋತ್ಸವದಲ್ಲಿ ಕ್ರೀಡಾ ಭಾರತಿ ಸಹಯೋಗದಲ್ಲಿ ಗ್ರಾಮೀಣ ದೇಶಿ ಕ್ರೀಡೆಗಳನ್ನು ಪ್ರದರ್ಶಿಸಲಾಗುತ್ತಿದೆ. ಆಸಕ್ತರಿಗೆ ಲಗೋರಿ, ಚಿನ್ನಿ–ದಾಂಡು, ಬುಗರಿ, ಗೋಲಿ ಆಟವನ್ನು ಹೇಳಿಕೊಟ್ಟು, ಅದನ್ನು ಆಡಲು ಹುರಿದುಂಬಿಸಲಾಗುತ್ತಿದೆ. ಇತ್ತೀಚೆಗೆ ಗ್ರಾಮೀಣ–ನಗರ ಪ್ರದೇಶಗಳೆಂಬ ಭೇದವಿಲ್ಲದೇ ಮೊಬೈಲ್‌, ಟಿ.ವಿಗಳಲ್ಲಿ ಮುಳುಗಿ ಹೋಗಿದ್ದಾರೆ. ಅವ‌ರನ್ನು ಅದರಿಂದ ಆಚೆ ತರಲು ಈ ಕ್ರೀಡೆಗಳು ನೆರವಾಗಬಲ್ಲವು. ಗೋಲಿ ಆಟದಿಂದ ದೃಷ್ಟಿ ತೀಕ್ಷ್ಣವಾಗುತ್ತದೆ, ನಿಖರ ಗುರಿ ಇಡಲು ಏಕಾಗ್ರತೆ ಬೇಕಾಗುತ್ತದೆ. ಇಂಥ ಆಟಗಳ ಮೂಲಕವೇ ಅವರನ್ನು ಸಮಸ್ಯೆಗಳಿಂದ ಹೊರಬರುವಂತೆ ಮಾಡಬಹುದು’ ಎನ್ನುತ್ತಾರೆ ದೇಶಿ ಕ್ರೀಡೆಗಳ ಆಟದ ಉಸ್ತುವಾರಿ ಮಂಜುನಾಥ ಹೆಬ್ಸೂರ.

‘ಚಂದ್ರಶೇಖರ ಜಹಗೀರದಾರ್‌ ಹಾಗೂ ಮಂಜುನಾಥ ಎಂ.ಆರ್‌. ಅವರ ನೇತೃತ್ವದಲ್ಲಿ 60 ಜನರ ತಂಡವು ಯುವ ಜನರಿಗೆ ದೇಸಿ ಕ್ರೀಡೆ
ಗಳನ್ನು ಆಡಿಸಲು, ನಿಯಮಗಳನ್ನು ತಿಳಿಸಿಕೊಡಲು ಶ್ರಮಿಸುತ್ತಿದೆ’ ಎಂದೂ ಅವರು ಹೇಳಿದರು.

ಕಿಟ್‌ ನೀಡಲು ಚಿಂತನೆ: ‘ಗ್ರಾಮೀಣ ಯುವಜನರು ಬರೀ ಯುವಜನೋತ್ಸವದಲ್ಲಿ ಈ ದೇಸಿ ಕ್ರೀಡೆಗಳನ್ನು ಆಡಿದರೆ ಸಾಲದು. ಅವರು ಮನೆಗಳಿಗೆ ಮರಳಿದ ಬಳಿಕವೂ ಅದನ್ನು ಆಡುವಂತಾಗಬೇಕು. ಹೀಗಾಗಿ ಆಸಕ್ತರಿಗೆ ದೇಶಿ ಕ್ರೀಡೋಪಕರಣ ಒಳಗೊಂಡ ಕಿಟ್‌ ನೀಡಲು ಚಿಂತನೆ ನಡೆದಿದೆ. ಈನಿಟ್ಟಿನಲ್ಲಿ ಒಂದು ಸಾವಿರ ಕಿಟ್‌ಗಳ ವಿತರಣೆಗೆ ಕ್ರಮವಹಿಸಲಾಗಿದೆ’ ಎಂದೂ ಮಂಜುನಾಥ ಹೆಬ್ಸೂರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.