ಅಳ್ನಾವರ: ಸಾಲು ಮರದ ತಿಮ್ಮಕ್ಕನ ನೆನಪಿನಲ್ಲಿ ಪಟ್ಟಣದ ಹೊರವಲಯದ ಡೌಗಿನಾಲಾ ಹಳ್ಳದ ದಂಡೆಯ ಮೇಲೆ ಸುಂದರವಾದ ವೃಕ್ಷ ಉದ್ಯಾನ ತಲೆ ಎತ್ತಿದೆ.
ಅರಣ್ಯ ಇಲಾಖೆ ನಿರ್ಮಿಸಿರುವ ಈ ಉದ್ಯಾನ ಸೋಮವಾರ (ಏ. 11)ರಂದು ಲೋಕಾರ್ಪಣೆಗೊಳ್ಳಲಿದೆ.
ಹಿಂದೆ ಕಟ್ಟಿಗೆ ಡಿಪೊ ಆಗಿದ್ದ ಈ ತಾಣ ಇದೀಗ ಉದ್ಯಾನವಾಗಿ ಬದಲಾಗಿದೆ. ಅಳ್ನಾವರ ಭಾಗದ ಮರಗಳನ್ನು ಸಾಗಿಸಲು ರೈಲು ಹಳಿಯ ಬಳಿಯೇ ಈ ಡಿಪೊ ಇತ್ತು. ಆದರೆ ಅರಣ್ಯ ಇಲಾಖೆಯು ಡಿಪೊವನ್ನು ಸರ್ಕಾರ ರದ್ದು ಮಾಡಿದ ನಂತರ, ಈ ಜಾಗ ಪಾಳು ಬಿದ್ದಿತ್ತು. ಹಳಿಯಾಳ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಇದಕ್ಕೆ ಹಸಿರು ಸ್ಪರ್ಶ ನೀಡಿದ್ದಾರೆ.
ಉದ್ಯಾನದಲ್ಲಿ ಏನಿದೆ?: 10 ಎಕರೆ ವಿಸ್ತಾರದ ಈ ಜಾಗದಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತ ಮರಗಳೇ ಪ್ರಮುಖ ಆಕರ್ಷಣೆಯಾಗಿವೆ. ಜತೆಗೆ ಮಕ್ಕಳಿಗಾಗಿ ಸುಮಾರು 12 ವಿವಿಧ ಬಗೆ ಆಟಿಕೆಗಳನ್ನು ಅಳವಡಿಸಲಾಗಿದೆ. ವಯಸ್ಕರ ಶಾರೀರಿಕ ಕಸರತ್ತಿಗೆ ಹನ್ನೊಂದು ವಿವಿಧ ಬಗೆಯ ಜಿಮ್ ಸಲಕರಣೆಗಳು ಇಲ್ಲಿವೆ.
ಹಸಿರು ಉದ್ಯಾನದ ನಡುವೆ ಸಾಲು ಮರದ ತಿಮ್ಮಕ್ಕನ ಪ್ರತಿಮೆ ಇಡಲಾಗಿದೆ. ಜತೆಗೆ ಹಾರ್ನ್‌ಬಿಲ್‌ನ ನಾಲ್ಕು ಪ್ರಭೇದದ ಪಕ್ಷಿಗಳ ಪ್ರತಿಮೆಗಳೂ ಇವೆ.
‘ಔಷಧೀಯ ಸಸ್ಯಗಳನ್ನು ಬೆಳೆಸಲು ಆದ್ಯತೆ ನೀಡಲಾಗಿದೆ. ಆಯುಷ್ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಸಸ್ಯಗಳನ್ನು ನೆಡಲಾಗಿದೆ. ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಲು ಒತ್ತು ನೀಡಲಾಗಿದೆ. 14 ಕಡೆ ಕಸದ ತೊಟ್ಟಿಗಳನ್ನು ಇಡಲಾಗಿದೆ’ ಎಂದು ಉಪ ವಲಯ ಅರಣ್ಯಾಧಿಕಾರಿ ಪ್ರಕಾಶ ಕಂಬಾರ ತಿಳಿಸಿದರು.
ಈ ಹಿಂದೆ ಡಿಪೊ ಇದ್ದ ಸಂದರ್ಭದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಕಟ್ಟೆ ಕಟ್ಟಲಾಗಿದೆ. ಸ್ಥಳೀಯರು ವಂತಿಗೆ ಸಂಗ್ರಹಿಸಿ ಗುಡಿ ನಿರ್ಮಿಸಿದ್ದಾರೆ. ಉದ್ಯಾನದಲ್ಲಿ ಈ ದೇವಸ್ಥಾನವೂ ಆಕರ್ಷಣೆಯಾಗಿದೆ’ ಎಂದು ಪುಂಡಲಿಕ ಪಾರ್ದಿ ಹೇಳಿದರು.
‘ಅರಣ್ಯ ಇಲಾಖೆ ಜತೆಗೆ ಸಾರ್ವಜನಿಕರೂ ಉದ್ಯಾನದ ಅಂದ ಹೆಚ್ಚಿಸಲು ಕೈಜೋಡಿಸಿದ್ದಾರೆ. ಪ್ರವೇಶ ದ್ವಾರಕ್ಕೆ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನ ಎಂಬ ನಾಮ ಫಲಕ ಅಳವಡಿಸಿರುವುದು ಅರ್ಥಪೂರ್ಣವಾಗಿದೆ’ ಎಂದು ಹಿರಿಯರಾದ ಎಂ.ಸಿ. ಹಿರೇಮಠ ಹೇಳಿದರು.
ಇದರೊಂದಿಗೆ ಪ್ರತ್ಯೇಕವಾದ ಈಜುಕೊಳ, ರೇನ್ ಡ್ಯಾನ್ಸ್ ಮತ್ತು ಹಳ್ಳದಲ್ಲಿ ಬೋಟಿಂಗ್ ವ್ಯವಸ್ಥೆಯೂ ಇರಬೇಕು ಎಂಬ ಬೇಡಿಕೆಯೂ ಜನರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.