ಗುಡಗೇರಿ: ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ವೇಳೆ ವಿದ್ಯುತ್ ಸ್ಥಗಿತಗೊಂಡಾಗ ಚಿಮಣಿ ದೀಪ ಹಚ್ಚಲು ಸೀಮೆ ಎಣ್ಣೆ ದೊರೆಯದ ಕಾರಣ ಜನ ಪರದಾಡುವಂತಾಗಿದೆ.
ಜಿಲ್ಲೆಯನ್ನು ಸೀಮೆ ಎಣ್ಣೆ ಮುಕ್ತ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ನಾಲ್ಕೈದು ತಿಂಗಳಿನಿಂದ ಸೀಮೆ ಎಣ್ಣೆ ಸರಬರಾಜು ನಿಲ್ಲಿಸಲಾಗಿದೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲ ಮನೆಗಳು ಕುಸಿದಿದ್ದರಿಂದಲೂ ವಿದ್ಯುತ್ ಸಂಪರ್ಕವಿರಲಿಲ್ಲ. ಇದೇ ವೇಳೆ ಸೀಮೆ ಎಣ್ಣೆಯೂ ಸಿಗದ ಕಾರಣ ಜನ ಸಾಕಷ್ಟು ಹೊತ್ತು ಕತ್ತಲಲ್ಲೇ ಕಳೆದರು. ಮೊದಲಾದರೆ ಸೀಮೆ ಎಣ್ಣೆಯಿಂದ ದೀಪ ಹಚ್ಚುತ್ತಿದ್ದರು. ಈಗ ದೀಪ ಹಚ್ಚಲು ದುಬಾರಿ ಬೆಲೆ ತೆತ್ತು ಅಡುಗೆ ಎಣ್ಣೆ ಖರೀದಿಸಿ ಬೆಳಕು ಪಡೆಯಬೇಕಾದ ಸ್ಥಿತಿ ಎದುರಾಗಿದೆ.
ಈ ಕುರಿತು ಸಮಸ್ಯೆ ತೋಡಿಕೊಂಡ ಗುಡಗೇರಿ ಗ್ರಾಮದ ವಿಜಯಕುಮಾರ ಹಾಲಿ ‘ಮೊದಲು ಬಿಪಿಎಲ್ ಕಾರ್ಡ್‌ಗೆ ಸೀಮೆ ಎಣ್ಣೆ ಕೊಡಲಾಗುತ್ತಿತ್ತು. ಸರ್ಕಾರ ಉಚಿತವಾಗಿ ಸಿಲಿಂಡರ್ ನೀಡಿದ್ದರಿಂದ ಸೀಮೆ ಎಣ್ಣೆ ವಿತರಣೆ ನಿಲ್ಲಿಸಲಾಗಿದೆ. ಹೊಗೆ ಮುಕ್ತ ಜಿಲ್ಲೆ ಮಾಡುವ ಸರ್ಕಾರದ ಯೋಜನೆ ಸ್ವಾಗತಾರ್ಹವೇ; ಆದರೆ, ಗ್ರಾಮೀಣ ಪ್ರದೇಶದಲ್ಲಿ ಮೇಲಿಂದ ಮೇಲೆ ವಿದ್ಯುತ್ ಸಂಪರ್ಕ ಕಡಿತವಾಗುವುದರಿಂದ ದೀಪ ಹಚ್ಚುವ ಸಲುವಾಗಿಯಾದರೂ ಕನಿಷ್ಠ ಒಂದು ಲೀಟರ್ ಸೀಮೆ ಎಣ್ಣೆ ನೀಡಬೇಕು’ ಎಂದರು.
ತಾಲ್ಲೂಕು ಸೀಮೆ ಎಣ್ಣೆ ವಿತರಕ ಎ.ಬಿ. ಉಪ್ಪಿನ ಪ್ರತಿಕ್ರಿಯಿಸಿ ‘ಸರ್ಕಾರ ಸರಬರಾಜು ನಿಲ್ಲಿಸಿದ್ದರಿಂದ ಜನರಿಗೆ ಕೊಡಲು ಆಗುತ್ತಿಲ್ಲ. ಅಂತ್ಯ ಸಂಸ್ಕಾರಕ್ಕೂ ಇಲ್ಲದಂತಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.