ಹುಬ್ಬಳ್ಳಿ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ 60 ವರ್ಷ ಮೇಲ್ಪಟ್ಟವರ ‘ಸಂಧ್ಯಾ ಸುರಕ್ಷಾ’ ಪಿಂಚಣಿ ಯೋಜನೆಯಡಿ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರಕ್ಕೆ ನಿಗದಿ ಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ 17,589 ಪ್ರಕರಣಗಳ ಪಿಂಚಣಿ ರದ್ದುಗೊಳಿಸಲಾಗಿದೆ.
60 ವರ್ಷ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ‘ಸಂಧ್ಯಾ ಸುರಕ್ಷಾ’ ಯೋಜನೆ 2007ರ ಜುಲೈ 2ರಿಂದ ಆರಂಭಿಸಲಾಯಿತು. ಇದರಡಿ ಫಲಾನುಭವಿಗಳಿಗೆ ತಿಂಗಳಿಗೆ ₹500 ಪಿಂಚಣಿ ಸಿಗುತ್ತದೆ.
2011ರ ಜೂನ್ 21ರಲ್ಲಿ ವಾರ್ಷಿಕ ಆದಾಯ ಮಿತಿಯನ್ನು ಗ್ರಾಮೀಣ ಪ್ರದೇಶದಲ್ಲಿ ₹12 ಸಾವಿರ ಮತ್ತು ನಗರ ಪ್ರದೇಶದಲ್ಲಿ ₹17 ಸಾವಿರಕ್ಕೆ ನಿಗದಿ ಪಡಿಸಲಾಗಿತ್ತು. 2021ರ ಫೆಬ್ರುವರಿ 10ರಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಮಂಜೂರಾತಿ ಪಡೆಯಲು ಕುಟುಂಬದ ವಾರ್ಷಿಕ ಆದಾಯವನ್ನು ₹32 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಸಣ್ಣ ರೈತರು, ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು ಮತ್ತು ಮೀನುಗಾರರು ಈ ಯೋಜನೆಯಡಿ ಫಲಾನುಭವಿಗಳು ಅಗಿದ್ದಾರೆ. ಫಲಾನುಭವಿಗಳ ಪತ್ನಿ ಅಥವಾ ಪತಿಯ ಸಂಯೋಜಿತ ಠೇವಣಿಗಳ ಒಟ್ಟು ಮೌಲ್ಯವೂ ₹10 ಸಾವಿರಕ್ಕಿಂತ ಹೆಚ್ಚಿರಬಾರದು.
ಹಾವೇರಿಯಲ್ಲಿ 2,010, ಬೆಳಗಾವಿಯಲ್ಲಿ 1,880, ಯಾದಗಿರಿಯಲ್ಲಿ 1,454 ಫಲಾನುಭವಿಗಳ ಪಿಂಚಣಿ ರದ್ದುಗೊಂಡಿದೆ. ಹಾವೇರಿಯಲ್ಲಿ ಅತಿ ಹೆಚ್ಚು ಮತ್ತು ಚಾಮರಾಜನಗರದಲ್ಲಿ ಅತಿ ಕಡಿಮೆ 16 ಪಿಂಚಣಿ ಪ್ರಕರಣಗಳು ರದ್ದುಗೊಂಡಿವೆ.
‘ವಾರ್ಷಿಕ ಆದಾಯ ಹೆಚ್ಚಳದಿಂದ ಹಿರಿಯ ನಾಗರಿಕರಿಗೆ ಸಮಸ್ಯೆಯಾಗಿದೆ. ₹32 ವಾರ್ಷಿಕ ಆದಾಯ ಹೊಂದಿದ ಹಿರಿಯ ನಾಗರಿಕರ ಅರ್ಜಿ ನಮೂನೆ ಸಂಗ್ರಹಿಸಲಾಗಿದ್ದು, ವಾರ್ಷಿಕ ಆದಾಯ ಕಡಿಮೆ ಮಾಡಲು ಸರ್ಕಾರಕ್ಕೆ ಕೋರಲಾಗುವುದು’ ಎಂದು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎ.ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.