ಅಳ್ನಾವರ: ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅವರ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಸೆರೆ ಸಿಕ್ಕ ಡೋರಿ ಗ್ರಾಮದ ರಾಯಣ್ಣನ ಮಡ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜತೆಗೆನಾಡಿನ ಭವ್ಯ ಇತಿಹಾಸ ಜನರಿಂದ ಮರೆ ಆಗುತ್ತಿದೆ ಎಂಬ ಅಳಕು ಬೆಣಚಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರಿಂದ ಕೇಳಿ ಬರುತ್ತಿದೆ.
ಡೋರಿ ಗ್ರಾಮದಲ್ಲಿನ ಪುಟ್ಟ ಮಡದಲ್ಲಿ ಈಜುವಾಗಬ್ರಿಟಿಷರ್ ಕುತಂತ್ರಕ್ಕೆ ರಾಯಣ್ಣ ಸೆರೆ ಸಿಕ್ಕಿದ್ದ ಎಂದು ಇತಿಹಾಸ ಹೇಳುತ್ತಿದೆ. ನಿತ್ಯ ಈಜುತ್ತಿದ್ದ ರಾಯಣ್ಣನ ಮಡ ಸಂಪೂರ್ಣ ಅಭಿವೃದ್ಧಿಆಗಲಿ ಎಂಬ ಬಹುವರ್ಷದ ಬೇಡಿಕೆನನೆಗುದಿಗೆ ಬಿದ್ದಿದೆ.
ಮಲೆನಾಡಿನ ಸೆರಗಿನ ಸುಂದರ ಪರಿಸರದಲ್ಲಿ ಮೆಳೈಸಿದ ಬೆಣಚಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಣಚಿ, ಡೋರಿ, ಕಿವಡೆಬೈಲ ಹಾಗೂ ದೋಪೆನಟ್ಟಿ ಗ್ರಾಮಗಳು ಬರುತ್ತವೆ. ಬೆಣಚಿ ಗ್ರಾಮ ಪಂಚಾಯ್ತಿ ಅಮೃತ ಗ್ರಾಮ ಪಂಚಾಯ್ತಿ ಯೋಜನೆಗೆ ಆಯ್ಕೆಯಾಗಿದೆ. ಆದರೆ, ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಸಮರ್ಪಕ ರಸ್ತೆ ಇಲ್ಲ.ಧಾರವಾಡ- ಅಳ್ನಾವರ ರಸ್ತೆ ಮಾರ್ಗದಲ್ಲಿ ಡೋರಿ ಗ್ರಾಮಕ್ಕೆ ಸೇರುವ ಅರವಟಗಿ ಬಳಿ ರಾಯಣ್ಣನ ಹೆಸರಿನ ದ್ವಾರ ಬಾಗಿಲು ಬೇಕು. ಇತಿಹಾಸ ತಿಳಿಸುವ ಕಾರ್ಯ ಆಗಬೇಕು ಎಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸುತ್ತಾರೆ.
‘ಬೆಣಚಿ ಗ್ರಾಮಸ್ಥರು ಸ್ಮಶಾನಕ್ಕೆ ಹೋಗಲು ಹಳ್ಳ ದಾಟಿ ಹೋಗಬೇಕಿದೆ. ಮಳೆಗಾಲದಲ್ಲಿ ತೀವ್ರ ತೊಂದರೆ ಆಗುತ್ತಿದ್ದು, ಹಳ್ಳಕ್ಕೆ ಅಡ್ಡಲಾಗಿ ಸೇತುವೆ ಕಟ್ಟಬೇಕು. ರಸ್ತೆ ಅಭಿವೃದ್ಧಿ ಮಾಡಬೇಕು’ ಎಂದು ಗ್ರಾಮಸ್ಥ ತುಕಾರಾಂ ಪಾಟೀಲ ತಿಳಿಸಿದರು.
‘ಕಿವಡಬೈಲ್ ಹಾಗೂ ದೋಪೆನಟ್ಟಿ ಗ್ರಾಮಗಳಲ್ಲೂ ಹಲವಾರು ಸಮಸ್ಯೆಗಳಿವೆ. ಗೌಳಿ ಜನಾಂಗವಿರುವ ಕಿವಡಬೈಲ್‌ನಲ್ಲಿ ಮೂಲಸೌಕರ್ಯ ಒದಗಿಸಬೇಕು. ಸರ್ಕಾರಿ ಶಾಲೆ ಅಭಿವೃದ್ಧಿಯಾಗಬೇಕು. ಪಡಿತರ ಧಾನ್ಯ ಪಡೆಯಲು ಕಾಡಂಚಿನಲ್ಲಿ ಸಾಗಿ ದೂರದ ಡೋರಿ ಗ್ರಾಮಕ್ಕೆ ಹೋಗಬೇಕಾಗಿದೆ’ ಎಂದು ಬಾಬು ಪಾಟೀಲ ಸಮಸ್ಯೆ ಬಿಚ್ಚಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.