ADVERTISEMENT

ಪಾಕಿಸ್ತಾನ, ಭಯೋತ್ಪಾದನೆ ಬಿಟ್ಟರೆ ಬಿಜೆಪಿ ಬಳಿ ಬೇರೆ ವಿಷಯವೇ ಇಲ್ಲ: ಸಂತೋಷ ಲಾಡ್‌

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 15:26 IST
Last Updated 6 ಮಾರ್ಚ್ 2024, 15:26 IST
ಸಂತೋಷ ಲಾಡ್‌
ಸಂತೋಷ ಲಾಡ್‌   

ಹುಬ್ಬಳ್ಳಿ: ‘ಚುನಾವಣೆ ಸಮಯದಲ್ಲಿ ಬಿಜೆಪಿಯವರಿಗೆ ಪಾಕಿಸ್ತಾನ, ಭಯೋತ್ಪಾದನೆ, ತಾಲಿಬಾನ್‌, ದೇವಸ್ಥಾನ ಇವಿಷ್ಟು ಶಬ್ದಗಳನ್ನು ಬಿಟ್ಟರೆ ಬೇರೆ ವಿಷಯವೇ ಇರುವುದಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಲು ಅವರ ಬಳಿ ಏನೂ ಇಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಿಜೆಪಿಯವರು ಹೇಳುವ ಅತ್ಯಂತ ಬಲಿಷ್ಠ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರಿ 10 ವರ್ಷಗಳಾದರೂ ಡಾಲರ್‌ ಎದುರು ರೂಪಾಯಿಯ ಮೌಲ್ಯ ಕುಸಿಯುವುದನ್ನು ಏಕೆ ತಡೆಯುತ್ತಿಲ್ಲ, ಜಿಡಿಪಿ ಏಕೆ ಕಡಿಮೆಯಾಗುತ್ತಿದೆ, ಇದಲ್ಲದೇ, ಚೀನಾ ಒಳನುಸುಳುವಿಕೆ ಬಗ್ಗೆಯೂ ಚರ್ಚೆಯಾಗುತ್ತಿಲ್ಲ’ ಎಂದು ತಿಳಿಸಿದರು.

‘ಡಾಲರ್‌ ಮೌಲ್ಯ ಏಕೆ ಕುಸಿಯುತ್ತಿದೆ ಎಂದು ನೇರ ಪ್ರಶ್ನೆ ಕೇಳಿದ್ದೇನೆ. ಇದಕ್ಕೆ ಉತ್ತರಿಸುವ ಬದಲು ಜೋಶಿ ಅವರು, ಹಾರಿಕೆ ಉತ್ತರ ನೀಡಿದ್ದಾರೆ. ಅವರನ್ನು ಬೈಯದಿದ್ದರೆ ನನ್ನ ಸಚಿವ ಸ್ಥಾನ ಹೋಗುತ್ತದೆ ಎಂದು ಹೇಳಿದ್ದಾರೆ. ಇಂತಹ ಉತ್ತರಗಳಿಗೆ ಏನೆಂದು ಹೇಳೋಣ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಅಧಿಕಾರಕ್ಕೆ ಬಂದು ಇಷ್ಟು ವರ್ಷ ಏನು ಮಾಡಿದೀರಿ ಎಂದು ಬಿಜೆಪಿಯವರನ್ನು ಕೇಳಿದರೆ ಗುಡಿ ಕಟ್ಟಿಸಿದ್ದೇವೆ ಎನ್ನುತ್ತಾರೆ. ಅಭಿವೃದ್ಧಿ ಬಗ್ಗೆ ಅವರು ಮಾತೇ ಆಡುವುದಿಲ್ಲ. ಎಂತಹ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ’ ಎಂದರು.

ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದರಿಂದ ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ‘ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ‘ಪಾಕಿಸ್ತಾನ ಜಿಂದಾಬಾದ್‌’ ಎಂದು ಘೋಷಣೆ ಕೂಗಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕಾ?’ ಎಂದರು.

‘ನಾವು ಯುಪಿಎ–1, ಯುಪಿಎ–2 ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಆಧಾರದ ಮೇಲೆ ಮತ ಕೇಳುತ್ತೇವೆ. ಇದಲ್ಲದೇ, ಬಿಜೆಪಿಯ ಸುಳ್ಳುಗಳನ್ನು ಕೂಡ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.