ಹುಬ್ಬಳ್ಳಿ: ‘ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಮೊಘಲ್ ದೊರೆಗಳ ವಿರುದ್ಧ ಹೋರಾಡಿದ್ದು ನಿಜವಾದರೂ ಮುಸ್ಲಿಂರ ಬಗ್ಗೆ ದ್ವೇಷವಿರಲಿಲ್ಲ’ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಮರಾಠಾಶ್ರೀ ಭಾರತಿಮಠ ಟ್ರಸ್ಟ್ ಸೋಮವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶಿವಾಜಿಯವರಿಗೆ 13 ಮಂದಿ ಮುಸ್ಲಿಂ ಯೋಧರು ಅಂಗರಕ್ಷಕರಾಗಿದ್ದರು. 60 ಸಾವಿರಕ್ಕೂ ಹೆಚ್ಚು ಮುಸ್ಲಿಂ ಸೈನಿಕರಿದ್ದರು. ಇತಿಹಾಸದಲ್ಲಿನ ಈ ಅಂಶಗಳನ್ನು ಎಲ್ಲರೂ ತಿಳಿಯಬೇಕು’ ಎಂದರು.
‘ಮುಸ್ಲಿಂ ದೊರೆ ಅಫ್ಜಲ್ ಖಾನ್ ಹತ್ಯೆಗೆ ಶಿವಾಜಿಯ ಪಡೆಯಲ್ಲಿದ್ದ ಮುಸ್ಲಿಂ ಯೋಧ ರುಸ್ತುಂ ಏ– ಜಮಾಲ್ ಎಂಬುವರು ನೆರವಾಗಿದ್ದರು. ಅವರು ಹುಲಿಯ ಉಗುರುಗಳನ್ನು ಶಿವಾಜಿಗೆ ನೀಡಿ, ಅಫ್ಜಲ್ ಖಾನ್ ಎದೆ ಸೀಳಲು ಹೇಳಿದ್ದರು. ಆ ಹುಲಿಯ ಉಗುರುಗಳನ್ನು ಈಗಲೂ ಲಂಡನ್ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಡಲಾಗಿದೆ’ ಎಂದರು.
‘ಶಿವಾಜಿ ದೇಶ ಮತ್ತು ಹಾಗೂ ಧರ್ಮದ ಪರ ಹೋರಾಟ ಮಾಡಿದ್ದು ನಿಜ. ಆದರೆ, ಅವರ ನೈಜ ಇತಿಹಾಸ ಓದಬೇಕು. ಜೊತೆಗೆ ಇಂದಿನ ರಾಜಕೀಯ ಸ್ಥಿತಿಯನ್ನೂ ಅರ್ಥಮಾಡಿಕೊಳ್ಳಬೇಕು’ ಎಂದರು.
ಇದಕ್ಕೂ ಮುನ್ನ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ಹಿಂದೂ ಸಮಾಜ ಮತ್ತು ಭಾರತದ ಮೇಲೆ ಆಕ್ರಮಣ ನಡೆದಾಗ ಶಿವಾಜಿ ಮಹಾರಾಜರು ತಮ್ಮದೇ ಸೈನ್ಯ ಕಟ್ಟಿಕೊಂಡು ಹೋರಾಡಿದರು. ಹಿಂದೂ ಸಮಾಜಕ್ಕೆ ತೊಂದರೆ ಕೊಡುತ್ತಿದ್ದ ಅಫ್ಜಲ್ ಖಾನ್‌ನನ್ನು ಶಿವಾಜಿ ಕೊನೆಗಾಣಿಸಿದರು’ ಎಂದರು.
‘ಯಾವುದೇ ರಾಜಮನೆತನಕ್ಕೆ ಸೇರದ ಶಿವಾಜಿ ಅವರು ಶೂನ್ಯದಿಂದ ರಾಜನ ಪಟ್ಟಕ್ಕೇರಿದವರು. ಹಲವು ಕಷ್ಟಗಳನ್ನು ಎದುರಿಸಿದ ಅವರ ಜೀವನ ಚರಿತ್ರೆಯನ್ನು ಹಾಗೂ ಭಗವದ್ಗೀತೆಯನ್ನು ಓದಿದವರು ಮಾನಸಿಕವಾಗಿ ಗಟ್ಟಿಯಾಗುತ್ತಾರೆ. ಯಾವತ್ತೂ ಆತ್ಮಹತ್ಯೆ ಬಗ್ಗೆ ಯೋಚಿಸಲ್ಲ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಸುನೀಲ ದಳವಿ, ಸಚಿನ ಕಾಮಕರ ಖಜಾಂಚಿ, ಪರಶುರಾಮ ತಹಶೀಲ್ದಾರ್, ರಾಮ ಶಿಂಧೆ, ಕೇಶವ ಯಾದವ್, ಅಪ್ಪಾಸಾಹೇಬ ಚೌಹಾಣ, ಶ್ಯಾಮರಾವ್ ಶಿಂಧೆ, ಜ್ಯೋತಿಬಾ ಶಿಂಧೆ, ಶಿವಕುಮಾರ್ ಶಿಂಧೆ, ಗಾವಡೆ ಉಪಸ್ಥಿತರಿದ್ದರು.
ಮುಖಂಡರಾದ ಅರುಣ ಶಿರ್ಕ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ನಾರಾಯಣ ವೈದ್ಯ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.
ಶಿವಾಜಿ ಜಯಂತಿ: ಅದ್ದೂರಿ ಮೆರವಣಿಗೆ
ಹುಬ್ಬಳ್ಳಿ: ಶಿವಾಜಿ ಜಯಂತಿ ಅಂಗವಾಗಿ ಸೋಮವಾರ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ವಿವಿಧ ಸಂಘ– ಸಂಸ್ಥೆಗಳು ಶಿವಾಜಿ ಭಾವಚಿತ್ರಕ್ಕೆ ಪುಷ್ಟವೃಷ್ಟಿಗೈದು ಸ್ಮರಿಸಿದರು. ಇಲ್ಲಿನ ಮರಾಠಾ ಗಲ್ಲಿಯಲ್ಲಿ ಮರಾಠಾಶ್ರೀ ಭಾರತಿಮಠ ಟ್ರಸ್ಟ್ ಆಯೋಜಿಸಿದ್ದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ನೂರಾರು ಜನ ಶಿವಾಜಿ ಅಭಿಮಾನಿಗಳು ‘ಜೈ ಶಿವಾಜಿ ಜೈ ಭವಾನಿ’ ಎಂದು ಘೋಷಣೆಗಳನ್ನು ಕೂಗಿದರು. ಮರಾಠಾ ಗಲ್ಲಿ ಬ್ರಾಡ್‌ವೇ ವೃತ್ತ ಕೊಪ್ಪಿಕರ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಡಿ.ಜೆ. ಅಬ್ಬರಕ್ಕೆ ಯುವಕರು ಹೆಜ್ಜೆ ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.