ADVERTISEMENT

ಕೇಂದ್ರ ಸರ್ಕಾರ ಪತನ ಸಾಧ್ಯತೆ; ಸಚಿವ ಲಾಡ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 15:42 IST
Last Updated 10 ಸೆಪ್ಟೆಂಬರ್ 2024, 15:42 IST
ಸಂತೋಷ್ ಲಾಡ್
ಸಂತೋಷ್ ಲಾಡ್   

ಹುಬ್ಬಳ್ಳಿ: ‘ದೇಶದಲ್ಲಿ ಮುಂಬರುವ ದಿನಗಳಲ್ಲಿ ನಡೆಯುವ ನಾಲ್ಕು ರಾಜ್ಯಗಳ ಚುನಾವಣೆ ನಂತರ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ’ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ, ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿಯೂ ಅವರು ಸೋಲುವ ಸಾಧ್ಯತೆ ಇದೆ’ ಎಂದರು.

‘ರಾಜ್ಯದಲ್ಲಿ ನಮ್ಮ ಸರ್ಕಾರದ ಬಗ್ಗೆ ಬಿಜೆಪಿಯವರು ಕಳೆದ ಒಂದೂವರೆ ವರ್ಷದಿಂದ ಭವಿಷ್ಯ ಹೇಳುತ್ತಿದ್ದಾರೆ. ನಮ್ಮ ಪಕ್ಷದ 136 ಶಾಸಕರಿದ್ದು, ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಇರಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸಿ.ಎಂ ಬದಲಾವಣೆ ವಿಷಯದಲ್ಲಿ ಪಕ್ಷದ ನಾಯಕರು ನೀಡುತ್ತಿರುವ ಹೇಳಿಕೆ ವೈಯಕ್ತಿಕ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ’ ಎಂದರು.

‘ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಸಿದ್ಧವಿದ್ದರೂ ರಾಜ್ಯ ಸರ್ಕಾರ ಖರೀದಿಗೆ ಮುಂದೆ ಬರುತ್ತಿಲ್ಲ’ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಈ ಹಿಂದೆ ನಾವು ಕೇಳಿದಾಗ ಅಕ್ಕಿ ಸಂಗ್ರಹ ಇದ್ದರೂ ಕೊಡಲಿಲ್ಲ. ಹೀಗಾಗಿ ನಾವು ಅಕ್ಕಿ ಬದಲು ಹಣ ಕೊಡುತ್ತಿದ್ದೇವೆ. ಈಗ ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದರೆ ಮಾತ್ರ ರಾಜ್ಯ ಸರ್ಕಾರ ಖರೀದಿ ಬಗ್ಗೆ ತೀರ್ಮಾನಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.