ADVERTISEMENT

ಸಂಕಷ್ಟದಲ್ಲಿ ಬೆಳೆದ ಸಾವಿತ್ರಿಬಾಯಿ ಫುಲೆ: ಉಪನ್ಯಾಸಕ ಮಾರುತಿ ಕಟ್ಟಿಮನಿ

ಕೇಶವಕುಂಜದಲ್ಲಿ ನಡೆದ ಜನ್ಮದಿನದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 15:42 IST
Last Updated 2 ಜನವರಿ 2022, 15:42 IST
ಹುಬ್ಬಳ್ಳಿಯಲ್ಲಿ ಭಾನುವಾರ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಅತಿಥಿಗಳು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಹುಬ್ಬಳ್ಳಿಯಲ್ಲಿ ಭಾನುವಾರ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಅತಿಥಿಗಳು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಹುಬ್ಬಳ್ಳಿ: ‘ಒಂಬತ್ತನೇ ವಯಸ್ಸಿಗೆ ಮದುವೆಯಾಗಿ, 17ನೇ ವಯಸ್ಸಲ್ಲಿ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಸಂಕಷ್ಟಗಳ ನಡುವೆಯೇ ಬೆಳೆದು ಅಕ್ಷರದ ತಾಯಿಯಾಗಿ ಕೀರ್ತಿ ಪಡೆದರು’ ಎಂದು ಉಪನ್ಯಾಸಕ ಮಾರುತಿ ಕಟ್ಟಿಮನಿ ಹೇಳಿದರು.

ಲೋಕಹಿತ ಟ್ರಸ್ಟ್ ಹಾಗೂ ಸಾಮರಸ್ಯ ವೇದಿಕೆ ವತಿಯಿಂದ ಭಾನುವಾರ ನಗರದ ಕೇಶವಕುಂಜದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಫುಲೆ ಸಮಾಜ ಸುಧಾರಕಿಯಾಗಿ, ಲೇಖಕಿಯಾಗಿ, ಶಾಲೆಯ ಆಡಳಿತಾಧಿಕಾರಿಯಾಗಿ ನಮಗೆಲ್ಲ ದೊಡ್ಡ ಪ್ರೇರಣೆ. ಅವರಿಗೆ ಮನೆಯೇ ಮೊದಲ ಪಾಠಶಾಲೆ ಆಗಲಿಲ್ಲ. ತಾಯಿ ಸಹ ಮೊದಲ ಗುರು ಆಗಿರಲಿಲ್ಲ. ಬಾಲ್ಯದಲ್ಲಿಯೇ ಜ್ಯೋತಿಬಾಯಿ ಫುಲೆ ಅವರನ್ನು ಮದುವೆಯಾಗಿ ಸಂಸಾರದ ಭಾರ ಹೊತ್ತಿದ್ದರು. ಹೆಣ್ಣನ್ನು ನಿಕೃಷ್ಟವಾಗಿ ನೋಡುವ ಕಾಲ ಅದಾಗಿತ್ತು. ಆದರೆ, ಅವರ ಪತಿ ಅವರಿಗೆ ಮೊದಲ ಗುರುವಾಗಿ ಶಿಕ್ಷಣ ನೀಡಿದರು. ಸ್ತ್ರೀಯರಿಗೆ ಪ್ರೇರಣೆ ನೀಡಲು ಸಂಸ್ಥೆ ತೆರೆದು ಜಾಗೃತಿ ಮೂಡಿಸಿದ್ದರು’ ಎಂದರು.

ADVERTISEMENT

‘ಸಾವಿತ್ರಿಬಾಯಿ ಅವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಮನೆಮನೆಗೆ ತೆರಳಿ, ಶಾಲೆಗೆ ಕರೆದುಕೊಂಡು ಬರುತ್ತಿದ್ದರು. ಹೆಣ್ಣುಮಕ್ಕಳು ಶಿಕ್ಷಣ ಪಡೆಯಬಾರದು ಎನ್ನುವ ಕಾರಣಕ್ಕೆ ಆ ಸಂದರ್ಭದಲ್ಲಿ ಸಮಾಜ ಅವರಿಗೆ ಸಾಕಷ್ಟು ಅವಮಾನ ಮಾಡುತ್ತದೆ. ಅವೆಲ್ಲವನ್ನೂ ಅವರು ಸಮರ್ಥವಾಗಿ ಎದುರಿಸಿದರು’ ಎಂದು ಹೇಳಿದರು.

‘ಪ್ಲೇಗ್ ರೋಗಿಯೊಬ್ಬರಿಗೆ ಸಾವಿತ್ರಿಬಾಯಿ ಅವರು ಉಪಚಾರ ಮಾಡುತ್ತಿದ್ದಾಗ, ಅದೇ ರೋಗದಿಂದಲೇ ಅವರು ಮೃತಪಟ್ಟರು. ಮಗುವನ್ನು ದತ್ತು ತಗೆದುಕೊಂಡು ಉತ್ತಮ ಶಿಕ್ಷಣ ನೀಡಿದ್ದರು. ಅವರ ಸಾಧನೆ ಗುರುತಿಸಿ ಬ್ರಿಟಿಷ್ ಸರ್ಕಾರ ಅವರನ್ನು ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಗುರುತಿಸಿತ್ತು’ ಎಂದರು.

ಆಕಾಶವಾಣಿ ಕಲಾವಿದೆ ವೀಣಾ ಅಠವಲೆ ಮಾತನಾಡಿ, ‘ಮಹಿಳೆಗೆ ಕುಟುಂಬ ನಡೆಸುವುದು ದೊಡ್ಡ ಜವಾಬ್ದಾರಿ. ಇಂದಿನ ದಿನಗಳಲ್ಲಿ ಉದ್ಯೋಗಕ್ಕೆ ಹೋಗಿ ಮನೆಯನ್ನು ಸಹ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಅವಳಿಗೆ ಕುಟುಂಬದ ಸದಸ್ಯರು ಹಾಗೂ ಪತಿಯ ಸಹಕಾರ ಅಗತ್ಯ’ ಎಂದು ಹೇಳಿದರು.

ರಾಷ್ಟ್ರೋತ್ಥಾನದ ಆಡಳಿತಾಧಿಕಾರಿ ಶ್ರೀಧರ ಜೋಶಿ, ಸಾಮರಸ್ಯ ವೇದಿಕೆ ಸಂಯೋಜಕ ವೀರಣ್ಣ ಶಿರಸಂಗಿ, ವಾಣಿಶ್ರೀ ಕುಲಕರ್ಣಿ ಇದ್ದರು.

‘ಸ್ತ್ರೀಶಕ್ತಿ ಜಾಗೃತವಾಗಲಿ’: ‘ಸಾಮರಸ್ಯ ವೇದಿಕೆಯಿಂದ‌ ದೇಶದಾದ್ಯಂತ ಒಂದೂವರೆ ಲಕ್ಷಕ್ಕೂ ಹೆಚ್ಚು ಸೇವಾ ಚಟುವಟಿಕೆಗಳು ನಡೆಯುತ್ತಿವೆ. ಸಾಕಷ್ಟು ಮಾತೆಯರು ಅದರಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ, ಇಲ್ಲಿಯ ಮಾತೆಯರು ಸಹ ತಮ್ಮಲ್ಲಿರುವ ಸ್ವಲ್ಪ ಸಮಯವನ್ನು ಸಮಾಜ‌ ಸೇವೆಗೆ ಮೀಸಲಿಡಬೇಕು. ಪರರ ವಿಚಾರ, ಧರ್ಮವನ್ನು ಗೌರವಿಸುವುದೇ ನಿಜವಾದ ಬಂಗಾರ. ಬಡವ, ಶ್ರೀಮಂತ, ಜಾತಿ, ಮತ, ಧರ್ಮಗಳ ಭೇದ ಮರೆತು‌ ಎಲ್ಲರೂ ಸಾಮರಸ್ಯದಿಂದ ಬದುಕಬೇಕು. ಆಸಕ್ತಿಕರ ಕ್ಷೇತ್ರದಲ್ಲಿ ತೊಡಗಿಕೊಂಡು ಸಹಬಾಳ್ವೆ ಬದುಕು ನಡೆಸುವಲ್ಲಿ ನಾವು ಚಿಂತನೆ ನಡೆಸಬೇಕು. ಸ್ತ್ರೀಶಕ್ತಿ ಜಾಗೃತವಾದರೆ ಸಮಾಜದಲ್ಲಿ ಗಹನವಾದ ಬದಲಾವಣೆ ಸಾಧ್ಯ’ ಎಂದು ಉಪನ್ಯಾಸಕ ಮಾರುತಿ ಕಟ್ಟಿಮನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.