ADVERTISEMENT

ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣವಾಗಲಿ: ಚಂದ್ರಶೇಖರ ಕಂಬಾರ ಕರೆ

ಡಾ.ಚಂದ್ರಶೇಖರ ಕಂಬಾರ
Published 4 ಜನವರಿ 2019, 12:03 IST
Last Updated 4 ಜನವರಿ 2019, 12:03 IST
ಸಮ್ಮೇಳನ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಮಾತನಾಡಿದರು.
ಸಮ್ಮೇಳನ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಮಾತನಾಡಿದರು.   

ಧಾರವಾಡದಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರ ಭಾಷಣ.

––

ಓಂ ಪ್ರಥಮದಲ್ಲಿ ಸಾವಳಗಿ ಶಿವಲಿಂಗೇಶ್ವರ ಮತ್ತು ಎಸ್.ಎಸ್. ಭೂಸನೂರಮಠ ಗುರುದೇವರುಗಳನ್ನು ನೆನೆದು ಕನ್ನಡ ತಾಯಿಗೆ ಸುಪ್ರಭಾತ ಹೇಳೋಣ...

ADVERTISEMENT

ಮುಂಗೋಳಿ ಕೂಗ್ಯಾವು ಮೂಡsಣ ಬೆಳಗಿ!
ತಂಗಾಳಿ ಬೀಸ್ಯಾವು ತವರೀ ಹೂವರಳಿ
ಹೂಹೂವಿನೊಳಗೊಂದು ಕೈಲಾಸವರಳ್ಯಾವು
ಕೈಲಾಸ ಕೈಮುಗಿದು ಭೂಲೋಕಕಿಳಿದಾವು
ಸಾವಿರದ ಶರಣವ್ವ ಕನ್ನಡದ ತಾಯೇ ||ತಾಯೇ||

ಪಡುಗಡಲ ತೆರೆಗಳಲಿ ಪಾದ ತೊಳೆದವಳೆ
ಬೆಟ್ಟಬಯಲುಗಳನ್ನ ತೊಟ್ಟು ನಿಂತವಳೆ
ಮಲೆನಾಡ ಶಿಖರದಲಿ ಮಳೆಬಿಲ್ಲ ಮುಡಿದವಳೆ
ಅವ್ವಾ ಅಂದಾಗೊಮ್ಮೆ ಸಾಕಾರಗೊಂಬವಳೆ
ನಗೆಮೊಗದ ಜಗದಂಬೆ ಬೆಳಕಿನ ತಾಯೇ ||ತಾಯೇ||

ಕುರಿತು ಓದದ ಕಾವ್ಯ ಪರಿಣತರ ಮಾತೆ
ಸಂತsರ ಶರಣsರ ಮಂತ್ರsದ ಮಾತೆ
ಶಬ್ದಕ್ಕೆ ಬೆಳಕನ್ನ ಮುಡಿಸುವ ಕವಿಗsಣ
ದಿನಬೆಳಗು ಹಾಡುವರು ನಿನ್ನ ಕೀರ್ತಿಯನೆ
ಸಾವಿರದ ಶರಣವ್ವ ಕನ್ನಡದ ತಾಯೇ ||ತಾಯೇ||

ಹಕ್ಕಿ ಹರ‍್ಯಾಡಾವು ಹಾಡುsತ ಏನಂತ?
ಬಾಗಿದವರಿಗೆ ಭಾಗ ಹೃದಯ ಕೊಡುವವಳೆ
ನಿನ್ಹಾಂಗ ಧರ್ಮದಲಿ ಧಾರಾಳತನದಲ್ಲಿ
ಈ ಭೂಮಿಯಲಿ ಕಾಣೆ ಧರೆಗೆ ದೊಡ್ಡವಳೆ
ಸಾವಿರದ ಶರಣವ್ವ ಕನ್ನಡದ ತಾಯೇ || ತಾಯೇ||

ಧಾರವಾಡದ ಎಲ್ಲ ಪೂಜ್ಯ ಹಿರಿಯರೇ, ನಾಡಿನ ಸನ್ಮಾನ್ಯರೇ, ಸಾಹಿತ್ಯ ಸಂಸ್ಕೃತಿ ಸಹೃದಯರೇ ನಾನು ನಿಮ್ಮವನು. ಇದೇ ನೆಲದಲ್ಲಿ ನಿಮ್ಮೆದುರಿನಲ್ಲಿಯೇ ಓಡಾಡಿ ನಿಮ್ಮಿಂದಲೇ ನಾಲ್ಕಕ್ಷರ ಕಲಿತು ದೊಡ್ಡವನಾದವನು. ನನಗೆ ಕಲಿಸಿದ ಗುರುಗಳೊಬ್ಬರೂ ಈಗ ನನ್ನೆದುರಿಗಿಲ್ಲ ನಿಜ, ಸಾಲದ್ದಕ್ಕೆ ನನ್ನಿಬ್ಬರು ಸ್ನೇಹಿತರು: ಕಲಬುರ್ಗಿ ಮತ್ತು ಗಿರಡ್ಡಿ ಅವರನ್ನೂ ಕಳೆದುಕೊಂಡು ಹತಾಶ ಭಾವದಿಂದ ನಿಂತ ನನ್ನನ್ನು ಅವರೆಲ್ಲರ ಚೇತನಗಳು ಆಶೀರ್ವದಿಸುತ್ತಿವೆಯೆಂಬ ನಂಬಿಕೆಯಿಂದ ಒಂದೆರಡು ನುಡಿಗಳನ್ನಾಡುತ್ತೇನೆ; ಸಹನೆಯಿಂದ ಕೇಳುವಿರಾಗಿ ನಂಬಿದ್ದೇನೆ.

ನಮ್ಮ ದೇಶದ ಆಧುನಿಕ ಚರಿತ್ರೆಯನ್ನು ನೆನೆವಾಗ ಬ್ರಿಟಿಷರನ್ನು ನೆನೆಯದೆ ಅದರಲ್ಲೂ ಶಿಕ್ಷಣ ಹಾಗೂ ಸಂಸ್ಕೃತಿಗಳ ವಿಷಯ ನೆನೆವಾಗ ಬ್ರಿಟಿಷ್ ಆಡಳಿತ ಮತ್ತು ಮೆಕಾಲೆ ಮಹಾಶಯನನ್ನು ನೆನೆಯದೆ ಮುಂದುವರಿಯುವಂತೆಯೇ ಇಲ್ಲ. ಭಾರತದ ಆಧುನಿಕ ಚರಿತ್ರೆ ಸುರುವಾದದ್ದು 1836ರಲ್ಲಿ. ಮೆಕಾಲೆಯವರು ‘ಭಾರತೀಯರಿಗೆ ಎಂಥ ಶಿಕ್ಷಣ ಕೊಡಬೇಕೆಂದು’ ತೀರ್ಮಾನಿಸಲು ತಮ್ಮ ನೇತೃತ್ವದಲ್ಲಿ ಆರು ಜನರ ಒಂದು ಆಯೋಗವನ್ನು ನಿಯಮಿಸಿದರು. ಅದರಲ್ಲಿ ಮೂರು ಜನ ಬ್ರಿಟಿಷ್ ಪಂಡಿತರು, ಇನ್ನು ಮೂವರು ಭಾರತೀಯ ಪಂಡಿತರು - ಇವರಲ್ಲಿ ರಾಜಾರಾಮ್ ಮೋಹನ್‌ರಾಯ್ ಒಬ್ಬರಾಗಿದ್ದರು. ಆಯೋಗದಲ್ಲಿದ್ದ ಬ್ರಿಟಿಷ್ ಸದಸ್ಯರು ಭಾರತೀಯರಿಗೆ ದೇಶೀಯ ಪದ್ಧತಿಯಲ್ಲೇ ಶಿಕ್ಷಣ ಕೊಡಬೇಕೆಂದು ವಾದಿಸಿದರು. ಆದರೆ ಭಾರತೀಯ ಸದಸ್ಯರು ಭಾರತೀಯರಿಗೆ ಆಧುನಿಕ ಬ್ರಿಟಿಷ್ ಶಿಕ್ಷಣವನ್ನೇ ಕೊಡಬೇಕೆಂದು ಒತ್ತಾಯಿಸಿದರು. ಅಂತಿಮವಾಗಿ ಮೆಕಾಲೆ ತಮ್ಮ ನಿರ್ಣಾಯಕವಾದ ಅಧ್ಯಕ್ಷೀಯ ಮುದ್ರೆ ಒತ್ತಿ ಬ್ರಿಟಿಷ್ ಶಿಕ್ಷಣವನ್ನು ಅಳವಡಿಸಿದರು.

ಮೆಕಾಲೆಯವರ ಶೈಕ್ಷಣಿಕ ಸಿಫಾರಸುಗಳ ಆಧಾರದ ಮೇಲೆ ಇಂಗ್ಲಿಷ್ ನಮ್ಮ ಆಡಳಿತ ಭಾಷೆಯಾಯಿತು. ಅಲ್ಲಿಯವರೆಗೆ ಉರ್ದು ಮತ್ತು ಪಾರ್ಸಿ ನಮ್ಮ ಅಧಿಕೃತ ಭಾಷೆಗಳಾಗಿದ್ದರೂ ಅವು ನಮಗೇನೂ ಹೊಸದನ್ನು ಕಲಿಸಲಿಲ್ಲ. ಆದರೆ ಬ್ರಿಟಿಷರು ಬೇರೊಂದು ಬಗೆಯ ಸಂಸ್ಕೃತಿಯನ್ನು ತಂದರು; ಬೇರೊಂದು ಬಗೆಯ ರಾಜ್ಯ ವ್ಯವಸ್ಥೆಯನ್ನು ತಂದರು. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಇಂಗ್ಲಿಷ್ ಭಾಷೆಯನ್ನು ಕಲಿಸಿದರು. ಹಿಂದೆ ಆಳಿದವರು ತಮ್ಮ ಅರ‍್ಯಾಬಿಕ್, ಪರ್ಶಿಯನ್ ಭಾಷೆಗಳನ್ನು ನಮಗೆ ಕಲಿಸಿರಲಿಲ್ಲ. ಆದರೆ ಇವರು ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸಿದರು. ಇಂಗ್ಲಿಷ್ ಬರುವ ತನಕ ನಮಗೆ ಸಂಸ್ಕೃತವೇ ಜ್ಞಾನದ ಭಾಷೆಯಾಗಿತ್ತು.

ಬ್ರಿಟಿಷರು ಕೊಟ್ಟ ಶಿಕ್ಷಣ ವ್ಯವಸ್ಥೆಯಲ್ಲೇ ನಮ್ಮ ಮನಸ್ಸುಗಳು ತರಬೇತಿ ಹೊಂದಿದವೆಂಬ ತಿಳುವಳಿಕೆಯಿಂದಲೇ ನಾವೀಗ ಮುಂದುವರೆದೆವು, ಹಾಗಾಗಿ ನಮ್ಮವೇ ಮನಸ್ಸುಗಳನ್ನು ಪ್ರಶ್ನಿಸುವ ಸಾಮರ್ಥ್ಯವನ್ನೂ ಕಳೆದುಕೊಂಡೆವು. ಅವರು ನಮ್ಮನ್ನು ಮೂಢರು ಎಂದರು. ನಾವು ‘ಹೌದು’ ಎಂದೆವು. ಸಂಸ್ಕೃತದಲ್ಲಿರುವುದೆಲ್ಲ ‘ಮೂಢ ನಂಬಿಕೆ’ ಎಂದರು. ಇದಕ್ಕೂ ‘ಹೌದು’ ಎಂದೆವು. ಭಾರತೀಯರಿಗೆ ‘ಚಾರಿತ್ರಿಕ ಪ್ರಜ್ಞೆಯಿಲ್ಲ’ ಎಂದರು, ‘ಭಾರತೀಯರಲ್ಲಿರುವುದೆಲ್ಲ ಗೊಡ್ಡು ಪುರಾಣ’ ಎಂದರು. ಅವರು ಹೇಳಿದ್ದಕ್ಕೆಲ್ಲ ‘ಹೌದು’ ಎಂದೆವು. ಅದೇ ಕಾಲಕ್ಕೆ ಭೂಮಿಯನ್ನು ಸರ್ವೆ ಮಾಡುವ ಪದ್ಧತಿ ಬೆಳಕಿಗೆ ಬಂತು. ಇದರಿಂದ ಭೂಮಿಯ ಫಲವತ್ತತೆಯೇನೂ ಹೆಚ್ಚಾಗಲಿಲ್ಲ, ಆದರೆ ಆಳರಸರಿಗೆ ಆಳಲು ಅನುಕೂಲವಾಯಿತು. ಅವರೇ ನಮ್ಮ ದೇಶದ ಇತಿಹಾಸವನ್ನೂ ಬರೆಸಿದರು. ಇದು ಒಂದು ದೃಷ್ಟಿಯಿಂದ ಭಾರತದ ಅನುವಾದ. - ಹೀಗೆ ಸರ್ವೆ ಮೂಲಕ ನಮ್ಮ ಭೂಮಿಯನ್ನು, ಇತಿಹಾಸದ ಮೂಲಕ ಇಲ್ಲಿಯ ಸಂಸ್ಕೃತಿಯನ್ನು, ಇಂಗ್ಲಿಷ್ ಭಾಷೆಯ ಮೂಲಕ ಇಲ್ಲಿಯ ಸಾಹಿತ್ಯ ಮತ್ತು ಧರ್ಮಗಳನ್ನು ತಿಳಿದುಕೊಂಡರು. ಸಾಲದ್ದಕ್ಕೆ ಆಡಳಿತ, ಶಾಲೆ ಕಾಲೇಜು ವಿಶ್ವವಿದ್ಯಾಲಯ, ನ್ಯಾಯಾಲಯ, ಕಛೇರಿ, ಟಪಾಲು ಮುಂತಾದ ನಮ್ಮ ಊಹೆಗೂ ನಿಲುಕದ ಸಂಸ್ಥೆ, ಆಫೀಸು ಮುಂತಾದ ಕ್ರಾಂತಿಕಾರಕ ಬದಲಾವಣೆಗಳಿಂದಾಗಿ ಇಡೀ ದೇಶ ರೋಮಾಂಚಿತವಾಗುವಂತೆ ಮಾಡಿದರು.

ಈಗ ನಮ್ಮ ಸಾಹಿತ್ಯದ ಸ್ಫೂರ್ತಿಯನ್ನು ಪಶ್ಚಿಮದ ಆಧುನಿಕ ಸಾಹಿತ್ಯ ಪ್ರಕಾರಗಳಲ್ಲಿ ಕಂಡು ಅವುಗಳ ಪುನರ‍್ರಚನೆಯನ್ನು ನಮ್ಮ ಭಾಷೆಗಳಲ್ಲಿ ಮಾಡಬೇಕೆಂದಾಗ; ಇದಕ್ಕೆ ಬ್ರಿಟಿಷರ ಅನುವಾದದ ನಿಯಮಗಳು ಅಡ್ಡಬಂದವು. ಅವರ ಪ್ರಕಾರ ಒಂದು ಕೃತಿಗೆ ಒಬ್ಬನೇ ಕೃತಿಕಾರ. ಪಠ್ಯ ಅವನ ಸೊತ್ತು, ಅನುವಾದವೆಂದೂ ಮೂಲವಾಗಲಾರದು. ಅಥವಾ ಅನಿವಾರ್ಯವಾದಲ್ಲಿ ಅನುವಾದ, ಮೂಲಕ್ಕೆ ಸಮೀಪವಾಗಿರಬೇಕು. ಮೂಲಕ್ಕೆ ಎಷ್ಟೆಷ್ಟು ಸಮೀಪವಾಗಿದೆಯೋ ಅಷ್ಟಷ್ಟೂ ಒಳ್ಳೆಯದು.

ಆದರೆ ಅನುವಾದದ ನಮ್ಮ ಕಲ್ಪನೆಯೇ ಬೇರೆ, ನಮ್ಮ ಪ್ರಕಾರ ಮೂಲದಿಂದ ಅನುವಾದ ದೂರವಾದಷ್ಟೂ ಅದರ ಮೌಲ್ಯ ಹೆಚ್ಚಾಗುತ್ತದೆ, ಒಂದು ಪಠ್ಯವನ್ನು ಯಾವುದೇ ಭಾಷೆ ತನ್ನದಾಗಿಸಿಕೊಳ್ಳುವ ಕ್ರಮವೆಂದರೆ ಅದಕ್ಕೆ ಸ್ಥಳೀಯವಾದ ಪ್ರಸ್ತುತತೆಯನ್ನು ನೀಡುವುದು. ಪಂಪ ಕುಮಾರವ್ಯಾಸರ ಮಹಾಭಾರತಗಳು ನಮಗೆ ಲಭ್ಯವಿರುವುದೇ ಹೀಗೆ.

ಬಿ.ಎಂ.ಶ್ರೀ. ಅವರ "ಇಂಗ್ಲಿಷ್ ಗೀತೆ’’ಗಳ ಸ್ಫೂರ್ತಿಯಿಂದ ಭಾವಗೀತೆಗಳಿಗೆ ಸಮೃದ್ಧಿ ಬಂದರೂ ಬಹುಬೇಗ ನಮ್ಮ ಕವಿಗಳು ತಮ್ಮ ಸ್ಫೂರ್ತಿಯ ಮೂಲವನ್ನು ಕಂಡುಕೊಂಡರು. ನಮ್ಮ ಕವಿಗಳಿಗೆ ಪಶ್ಚಿಮದ ಹೊಸ ಸಾಹಿತ್ಯ ಪ್ರಕಾರಗಳ ಪರಿಚಯವಾಗಿ ಕೊಂಚ ಅನುಕರಿಸಿ, ತಕ್ಷಣ ಎಚ್ಚತ್ತು ಸದರಿ ಪ್ರಕಾರಗಳು ನಮ್ಮಲ್ಲಿ ಮೊದಲಿನಿಂದ ಇದ್ದುವೆಂಬಂತೆ ಹೊಸ ಕತೆ, ಕಾದಂಬರಿ, ನಾಟಕ, ಆತ್ಮಕತೆ, ಪ್ರವಾಸ ಸಾಹಿತ್ಯ ಮುಂತಾದ ಪ್ರಕಾರಗಳು ಬಂದು ಕನ್ನಡವನ್ನು ಅಲಂಕರಿಸಿದವು. ಕಾದಂಬರಿ, ನಾಟಕ ಸಾಹಿತ್ಯವಂತೂ ಪಶ್ಚಿಮದ ಮಾದರಿಗಳೊಂದಿಗೆ ಸ್ಪರ್ಧಿಸುವಂತೆ ಬಂದವು. ಆದರೆ ಇದೇ ಯಶಸ್ಸಿನ ಕತೆ ಶಿಕ್ಷಣದಲ್ಲಿ, ಅದರಲ್ಲೂ ವಿಜ್ಞಾನ ಶಿಕ್ಷಣದಲ್ಲಿ ಕಂಡುಬರಲಿಲ್ಲ. ಭಾರತೀಯ ಭಾಷೆಗಳ ಸಮಸ್ಯೆ ಸುರುವಾದದ್ದೇ ಇಲ್ಲಿ. ದೇಶಕ್ಕೆ ಸ್ವಾತಂತ್ರ್ಯ ಬಂದು ಬ್ರಿಟಿಷರು ತೊಲಗಿ ಎಪ್ಪತ್ತು ವರ್ಷಗಳಾದರೂ ಇಂಗ್ಲಿಷ್ ನಮ್ಮಿಂದ ತೊಲಗಿಲ್ಲ. ದಿನೇ ದಿನೇ ಹೆಚ್ಚು ಹೆಚ್ಚು ವ್ಯಾಪಿಸುತ್ತ ಹೆಚ್ಚು ಹೆಚ್ಚು ಆಳವಾಗಿ ಪ್ರಭಾವಶಾಲಿಯಾಗಿ ದೇಶೀಯ ಭಾಷೆಗಳ ಕತ್ತು ಹಿಸುಕುತ್ತಿದೆ!

ಸಾಮಾನ್ಯವಾಗಿ ನಮ್ಮ ದೇಶದ ಯಾವುದೇ ರಾಜ್ಯಭಾಷೆ ಕಾವ್ಯ, ಕಥೆ, ನಾಟಕಗಳಲ್ಲಿ ತನ್ನನ್ನು ಅಭಿವ್ಯಕ್ತಿಸಿಕೊಂಡಂತೆ ಶಾಸ್ತ್ರದ ಕಡೆಗೆ ಗಮನ ಹರಿಸಿಯೇ ಇಲ್ಲ. ಶಾಸ್ತ್ರಜ್ಞಾನವನ್ನೆಲ್ಲಾ ಸಂಸ್ಕೃತದಲ್ಲೇ ಸಂಗ್ರಹಗೊಂಡು ಅಗತ್ಯ ಬಿದ್ದಾಗ ಉಭಯ ಭಾಷಾ ಪಂಡಿತರಿಂದ ಪ್ರಯೋಜನ ಪಡೆದಿವೆ. ಇಷ್ಟಾಗಿ ಶಾಸ್ತ್ರಜ್ಞಾನವೇನೂ ನಿತ್ಯದ ಅಗತ್ಯವಲ್ಲವಾದ್ದರಿಂದ ಬಹುಶಃ ಆ ಕಡೆಗೆ ನಾವು ಗಮನ ಹರಿಸಿಲ್ಲವೆಂದು ತೋರುತ್ತದೆ. ಕಾವ್ಯ, ನಾಟಕಗಳ ಭಾಷೆ ಎಲ್ಲರ ನೆನಪು ಕನಸುಗಳನ್ನು ಅವಲಂಬಿಸಿದಂತೆ ಶಾಸ್ತ್ರಜ್ಞಾನವನ್ನು ಅವಲಂಬಿಸಿಲ್ಲ. ಆದರೆ ಬ್ರಿಟಿಷರು ಪರಿಚಯಿಸಿದ ಶಾಸ್ತ್ರಜ್ಞಾನ ದಿನನಿತ್ಯ ಉಪಯೋಗದ್ದು ಎಂದು ಖಾತ್ರಿಯಾದುದರಿಂದ, ಅದನ್ನು ಈಗ ಹೊಸದಾಗಿ ಕಲಿಯಬೇಕಾಯಿತು. ಈ ಹೊಸ ವಿಜ್ಞಾನ ತನ್ನ ಪರಿವಾರ ಸಮೇತ, ಅಂದರೆ ಶಿಕ್ಷಣ ಕಲಿಸುವ ವಿಧಾನ ಹಾಗೂ ಪ್ರಯೋಗಾಲಯ ಇವುಗಳ ಸಮೇತ ಬಂದಿತು. ಹೀಗೆ ದೊರೆತ ಜ್ಞಾನ ಅಮೂರ್ತವಾದುದಲ್ಲ. ದೊರೆತ ತಿಳುವಳಿಕೆಯನ್ನು ಪ್ರಯೋಗಾಲಯದಲ್ಲಿ ಪ್ರಯೋಗಿಸಿ ಪರಿಣಾಮವನ್ನು ಅಲ್ಲೇ ಕಣ್ಣೆದುರಲ್ಲೇ ಕಾಣುವಂತಾದುದು - ಅದರ ಆಕರ್ಷಣೆಯನ್ನು ಹೆಚ್ಚಿಸಿತು. ಕ್ರಾಂತಿಯಂತೆ ಜರುಗಿದ ಈ ಶಿಕ್ಷಣಕ್ಕೆ ನಾವು ಬಹುಬೇಗ ಒಗ್ಗಿ ಹೋದೆವು. ನಮ್ಮಲ್ಲಿ ಸಿಕ್ಕುವ ಇಂಗ್ಲಿಷ್ ವಿದ್ಯೆಗಿಂತ ಇನ್ನೂ ಹೆಚ್ಚಿನ ವಿದ್ಯೆ ಇಂಗ್ಲೆಂಡಿನಲ್ಲಿದೆ ಎಂದಾಗ ಗಾಂಧೀಜಿ, ನೆಹರೂ, ಅಂಬೇಡ್ಕರ್ ಮುಂತಾದವರು ಅಲ್ಲಿಗೂ ಹೋಗಿ ಬ್ಯಾರಿಸ್ಟರುಗಳಾಗಿ ಹಿಂದಿರುಗಿದ ಕತೆ ನಮಗೆ ಗೊತ್ತೇ ಇದೆ. ಅದನ್ನೇ ಇಲ್ಲಿ ಮುಂದುವರೆಸಿ ಆಕ್ಸ್‌ಫರ್ಡ್‌ ಮಾದರಿಯ ಕಾಲೇಜು ವಿಶ್ವವಿದ್ಯಾಲಯಗಳ ಕಟ್ಟಡಗಳೂ ಬಂದವು. ಕರ್ನಾಟಕ ಕಾಲೇಜಿನ ಕಟ್ಟಡ ನಮ್ಮ ಕಣ್ಣೆದುರಿನಲ್ಲೇ ಇದೆ. ಆದರೆ ಇಂಗ್ಲಿಷ್ ಸಾಹಿತ್ಯವನ್ನು ಸ್ಥಳೀಕರಿಸಿಕೊಂಡಂತೆ ವಿಜ್ಞಾನ ಶಿಕ್ಷಣವನ್ನು ನಾವು ಸ್ಥಳೀಕರಿಸಲಿಲ್ಲ. ನಮ್ಮ ದೇಶದ ಎಲ್ಲಾ ದೇಶೀ ಭಾಷೆಗಳ ದೌರ್ಬಲ್ಯವೂ ಇದೇ ಆಗಿದೆ.

ಸದರಿ ದೌರ್ಬಲ್ಯವನ್ನು ಮೀರುವ ಪ್ರಯತ್ನ ಮಾಡಿ ನಮ್ಮ ಭಾಷೆಗೆ ಮಾರ್ಗದರ್ಶನ ಮಾಡಿದ ಇಬ್ಬರು ದಾರ್ಶನಿಕರನ್ನು ನಾವು ನೆನೆಯಲೇ ಬೇಕು; ಒಬ್ಬರು ಶಿವರಾಮ ಕಾರಂತರು, ಇನ್ನೊಬ್ಬರು ಕುವೆಂಪು ಅವರು. ಶಿವರಾಮ ಕಾರಂತರು ಕನ್ನಡದ ಮೂಲಕ ವಿಜ್ಞಾನದ ತಿಳುವಳಿಕೆ ಸಾಧ್ಯವೆಂದು, ಅದು ನಮ್ಮ ಇಂದಿನ ಅಗತ್ಯವೆಂದು ತೋರಿಸಲು ವಿಜ್ಞಾನ ಪ್ರಪಂಚ ಬರೆದರು. ಹಾಗೆಂದೇ ಕುವೆಂಪು ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಅವರ ವಿಜ್ಞಾನದ ತಿಳುವಳಿಕೆಯನ್ನು ಜನಸಾಮಾನ್ಯರಿಗೆ, ಕನ್ನಡ ಭಾಷೆಯಲ್ಲಿ ತಿಳಿಸಬೇಕೆಂದು ಹಳ್ಳಿಗಳಲ್ಲಿ ಅವರ ಭಾಷಣಗಳನ್ನು ಏರ್ಪಡಿಸಿದರು. ಹಾಗೂ ಆ ಭಾಷಣಗಳನ್ನು ಬರೆಸಿ ಚಿಕ್ಕ ಪುಸ್ತಿಕೆಗಳಾಗಿ ಪ್ರಕಟಿಸಿ ವಿಜ್ಞಾನದ ಪ್ರಚಾರ ಕಾರ್ಯ ಸುರುಮಾಡಿದರು. ಮೈಸೂರು ವಿಶ್ವವಿದ್ಯಾಲಯದ ಈ ನಾಲ್ಕಾಣೆ ಮಾಲೆ ಎಷ್ಟು ಜನಪ್ರಿಯವಾಯಿತೆಂದರೆ ಈ ಪುಸ್ತಿಕೆಗಳನ್ನು ಮನೆಯಲ್ಲಿಟ್ಟುಕೊಳ್ಳುವುದೇ ಒಂದು ಘನತೆಯಾಯಿತು. ಇದೇ ಹುರುಪಿನಲ್ಲಿ ನಮ್ಮ ಪ್ರಾಧ್ಯಾಪಕರು ವಿಜ್ಞಾನವನ್ನು ಶಾಲೆ ಕಾಲೇಜುಗಳಲ್ಲಿ, ಕನ್ನಡದಲ್ಲಿ ಬೋಧನೆ ಮಾಡಿದ್ದರೆ ಇವತ್ತಿನ ನಮ್ಮ ಭಾಷಾ ಸಮಸ್ಯೆ ಇರುತ್ತಿರಲಿಲ್ಲ.

ಇಂಥದೇ ಒಂದು ಸಣ್ಣ ಪ್ರಯೋಗವನ್ನು ನಾನು ಕುಲಪತಿಯಾಗಿದ್ದಾಗ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರು ಮಾಡಿದೆವು. ಅಂದಿನ ಪಿ.ಯು. ವಿಜ್ಞಾನದ ನಾಲ್ಕು ಪಠ್ಯಗಳನ್ನು ಕನ್ನಡಕ್ಕೆ ಅನುವಾದಿಸಿ ನಾಡಿನಾದ್ಯಂತ ಬಿಡುಗಡೆ ಮಾಡಿದೆವು. ಈ ಯೋಜನೆ ಎಷ್ಟು ಜನಪ್ರಿಯವಾಯಿತೆಂದರೆ ಲಕ್ಷಾಂತರ ಪ್ರತಿಗಳು ಮಾರಾಟವಾಗಿ ಆ ವರ್ಷಗಳಲ್ಲಿ ಹಳ್ಳಿಗಾಡಿನ ಕಾಲೇಜುಗಳ ಪರೀಕ್ಷೆಯ ಫಲಿತಾಂಶ ಅತ್ಯುತ್ತಮವಾಗಿತ್ತೆಂದು ಅಂದಿನ ಶಿಕ್ಷಣಾಧಿಕಾರಿಗಳೇ ಹೇಳಿದರು. ಸ್ವಯಂ ಶಿವರಾಮ ಕಾರಂತರು ಕೂಡ ನಮ್ಮ ಈ ಯೋಜನೆಯನ್ನು ಮೆಚ್ಚಿಕೊಂಡರು.

ಅಂದರೆ ಮಕ್ಕಳು ಈವರೆಗೆ ಇಂಗ್ಲಿಷ್ ಪಠ್ಯಗಳನ್ನು ಕಂಠಪಾಠ ಮಾಡಿ ಉತ್ತರಿಸುತ್ತಿದ್ದರು. ಈಗ ಕನ್ನಡದಲ್ಲಿ ವಿಷಯ ತಿಳಿದುಕೊಂಡು ಇಂಗ್ಲಿಷಿನಲ್ಲಿ ಉತ್ತರ ಬರೆದರು. ಮೊದಲನೆಯದು ಕಂಠಪಾಠದ ಪರೀಕ್ಷೆ, ಎರಡನೆಯದು ವಿಷಯ ತಿಳಿದುದರ ಪರೀಕ್ಷೆ. ಈಗಲೂ ನಾನು ಹೇಳುವುದೇನೆಂದರೆ ವಿಜ್ಞಾನದ ಯಾವುದೇ ಪಠ್ಯವಿರಲಿ ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟರೆ ವಿದ್ಯಾರ್ಥಿಗಳಿಗೆ ಖಂಡಿತ ಸಹಾಯವಾಗುತ್ತದೆ. ಆದರೆ ಯಾವಾಗ ವಿಜ್ಞಾನದ ಶಿಕ್ಷಣಕ್ಕೆ ಕನ್ನಡದ ಆಸರೆ ಇಲ್ಲವಾಯಿತೋ ಆಗಲೇ ಇಂಗ್ಲಿಷ್ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಯಿತು. ಈಗ ಕನ್ನಡ ಉಳಿಯುವ ಬಗ್ಗೆಯೇ ಅನುಮಾನ ಬರುವಷ್ಟರ ಮಟ್ಟಿಗೆ ಇಂಗ್ಲಿಷ್‌ನ ವ್ಯಾಪ್ತಿ ಹೆಚ್ಚಿದೆ.

ಒಂದು ರಾಜ್ಯದ ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ್ದು. ಇದನ್ನರಿತು ತನ್ನ ರಾಜ್ಯದ ಪ್ರಜೆಗಳಿಗೆ ಎಂಥ ಶಿಕ್ಷಣ ಕೊಡಬೇಕೆಂದು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರ ಸರಕಾರದ್ದು. ಕನ್ನಡವೇ ನಮ್ಮೆಲ್ಲ ದೈನಿಕ ವ್ಯವಹಾರಕ್ಕೆ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಬೇಕಾದ್ದು. ಸರಕಾರವಾಗಲಿ, ಶಿಕ್ಷಣ ಮತ್ತು ಸಂಸ್ಕೃತಿ ಸಂಸ್ಥೆಗಳಾಗಲಿ ವ್ಯಾಪಾರ ವಾಣಿಜ್ಯ ವ್ಯವಹಾರಗಳಲ್ಲಿ ಕೂಡ ಕನ್ನಡ ಭಾಷೆಗೆ ಮೊದಲ ಆದ್ಯತೆಯ ಸ್ಥಾನ ಕೊಡಬೇಕು. ರಾಜ್ಯಭಾಷೆಯ ವಿಚಾರದಲ್ಲಿ ಎಷ್ಟು ಶ್ರಮಿಸಿದರೂ ಸಾಲದೆಂದು, ಎಷ್ಟು ಪ್ರೋತ್ಸಾಹ ಕೊಟ್ಟರೂ ಅದೆಂದಿಗೂ ಅತಿರೇಕ ಎನ್ನಿಸಿಕೊಳ್ಳಲಾರದೆಂದು ಕುವೆಂಪು ಅವರೇ ಹೇಳಿದ್ದಾರೆ. “ಪರಭಾಷೆಯ ಮೂಲಕದ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿಯನ್ನು ಬೆಂಡು ಮಾಡಿದೆ. ಅವರ ನರಗಳನ್ನು ದುರ್ಬಲಗೊಳಿಸಿದೆ. ಅವರನ್ನು ಬಾಯಿಪಾಟ ಮಾಡುವ ಗಿಳಿಗಳನ್ನಾಗಿ ಮಾಡಿದೆ. ಪ್ರತಿಭಾನ್ವಿತ ಸೃಷ್ಟಿಕಾರ್ಯಕ್ಕೆ ಅನರ್ಹರನ್ನಾಗಿ ಮಾಡಿದೆ.” ಎಂದು ಗಾಂಧೀಜಿ ಹೇಳಿದ್ದರು. ಅಲ್ಲದೆ ಈ ದೇಶ ಸ್ವಂತಂತ್ರವಾದ ಕೂಡಲೇ ಶಿಕ್ಷಣ ಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗಿ ಉಳಿಯುವುದಿಲ್ಲ ಎಂದೂ ಗಾಂಧೀಜಿ ಹೇಳಿದ್ದರು. ಆದರೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದ ಮೇಲೂ ನಮ್ಮ ದೇಶದ ಶಿಕ್ಷಣದ ಸ್ಥಿತಿ ಹ್ಯಾಗಿದೆ? ಪ್ರಾಥಮಿಕ ಶಿಕ್ಷಣದ ಆರಂಭದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳು ಸುರುವಾಗಿವೆ.

ಈ ಮಧ್ಯೆ ನಾಡಿನ ನದಿಗಳಲ್ಲಿ ಬೇಕಾದಷ್ಟು ನೀರು ಹರಿಯಿತು. ಶಾಲೆಗಳಲ್ಲಿ ಮಾತೃಭಾಷೆ, ರಾಜ್ಯಭಾಷೆ ಮತ್ತು ಕಲಿಕೆಯ ಭಾಷೆ ಯಾವುದಾಗಬೇಕೆಂದು ಜನರು, ಶಿಕ್ಷಣ ತಜ್ಞರು, ಗೋಕಾಕ ವರದಿ ಇತ್ಯಾದಿಗಳಾಗಿ ಕೊನೆಗೆ ನ್ಯಾಯಾಲಯದ ಮೆಟ್ಟಿಲನ್ನೂ ಏರಿ ಅಂತೂ ತೀರ್ಮಾನ ಹೊರಬಿದ್ದಾಗ ಕನ್ನಡ ಭಾಷೆಯ ಕುತ್ತಿಗೆಗೇ ಸಂಕಟ ಬಂದುದು ಗೊತ್ತಾಯಿತು. ಜನಪ್ರತಿನಿಧಿಗಳು, ಶಾಸಕರು ನಾಡಿನ ಮಕ್ಕಳ ಬಗ್ಗೆ ಅಪಾರವಾದ ಆಸಕ್ತಿ ತಳೆದರು; ಇಂಗ್ಲಿಷು ಅನ್ನದ ಭಾಷೆ. ಇಂಗ್ಲಿಷಿನಲ್ಲಿ ಓದಿದವರು ವಿಶಾಲ ಪ್ರಪಂಚದ ನಾಗರಿಕರಾಗುವರೆಂದು ಪ್ರಪಂಚದ ಯಾವುದೇ ಭಾಗದಲ್ಲಿ ನೌಕರಿ ಮಾಡಲು ಅರ್ಹರಾಗುವರೆಂದು, ಅವರ ಚಿಂತನೆ ವಿಶ್ವವ್ಯಾಪಿಯಾಗುವುದೆಂದು ಪ್ರಚಾರ ಮಾಡಿ ಆಂಗ್ಲ ಮಾಧ್ಯಮದ ಶಾಲೆಗಳನ್ನು ಸ್ಥಾಪಿಸಿ ಆ ಕಡೆಗೆ ಮಕ್ಕಳನ್ನು ಸೆಳೆಯತೊಡಗಿದರು.

ಈಗ ಪ್ರತಿವರ್ಷ ಸಾವಿರಾರು ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಸ್ಕೂಲುಗಳು ಹಳ್ಳಿ ಹಳ್ಳಿಗಳಲ್ಲಿ ಏಳತೊಡಗಿದವು. ಮತ್ತು ಇಂಥ ಸ್ಕೂಲುಗಳ ಆಡಳಿತ ಮಂಡಳಿಗಳಲ್ಲಿ ರಾಜಕಾರಣಿಗಳು ಜನಪ್ರತಿನಿಧಿಗಳೇ ಇದ್ದಾರೆ! ಈ ಎಲ್ಲ ಸಂಸ್ಥೆಗಳಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗಿ ಶಿಕ್ಷಣವೊಂದು ವ್ಯಾಪಾರವಾಗಿ ಪರಿವರ್ತನೆ ಹೊಂದಿವೆ. ನ್ಯಾಯವಾಗಿ ಸರಕಾರೀ ಕನ್ನಡ ಶಾಲೆಗಳಲ್ಲಿ ಸೌಕರ್ಯಗಳು ಹೆಚ್ಚಿ ಮಕ್ಕಳಿಗೆ ಬೆಂಚುಗಳು, ಕಂಪ್ಯೂಟರ್‌ಗಳು ಬರಬೇಕಿತ್ತು. ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯಗಳಿರಬೇಕಿತ್ತು. ಆದರೆ ಅಲ್ಲಿಯ ಮಕ್ಕಳನ್ನು ನೋಡಿದರೆ ನಿರ್ಗತಿಕರ ಮಕ್ಕಳಂತೆ ಕಾಣುತ್ತಾರೆ. ಸರಕಾರದ ಕನ್ನಡ ಶಾಲೆಗಳು ಮುಚ್ಚಿ ಖಾಸಗಿ ಇಂಗ್ಲಿಷ್ ಸ್ಕೂಲುಗಳು ಎದ್ದ ಸಂಖ್ಯೆ ನೋಡಿರಿ: 2013–14 ರಿಂದ 2017–18ರವರೆಗೆ ಅಂದರೆ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 13 ಲಕ್ಷ ಮಕ್ಕಳು ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳಲ್ಲಿ ಕಡಿಮೆ ಆಗಿ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಸುಮಾರು 15 ಲಕ್ಷ ಮಕ್ಕಳು ಹೆಚ್ಚಾಗಿದ್ದಾರೆ. ಸುಪ್ರೀಕೋರ್ಟ್ ಆದೇಶ ಬಂದ ನಂತರ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಅಧಿಕೃತವಾಗಿ ಆಂಗ್ಲ ಮಾಧ್ಯಮವಾಗಿ ಪರಿವರ್ತನೆ ಹೊಂದಿವೆ! ಸಾಲದ್ದಕ್ಕೆ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಮಕ್ಕಳನ್ನು ಸರಕಾರವೇ ಫೀಜು ಕೊಟ್ಟು ಆರ್.ಟಿ.ಇ. (ಶಿಕ್ಷಣ ಹಕ್ಕು ಕಾಯ್ದೆಯಂತೆ) ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದೆ. 2018–19ರ ಅವಧಿಯಲ್ಲಂತೂ ಸುಮಾರು ಮೂರುವರೆ ಲಕ್ಷ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಯಾದ ಭಯಾನಕ ಸುದ್ದಿ. “ನಿಜವಾಗಿ ಈಗಿಂದೀಗ ಇಂಗ್ಲಿಷಿನಿಂದ ರಾಜ್ಯಭಾಷೆಗೆ ಮಾಧ್ಯಮ ಪಲ್ಲಟಗೊಳ್ಳುವುದು ಶಿಕ್ಷಣದ ದೃಷ್ಟಿಯಿಂದ ಅತ್ಯಗತ್ಯವಾಗಿದೆ” ಎಂದು ಪಂಡಿತರು ಹೇಳಿದ್ದಾರೆ.

ಇದ್ಯಾವುದೂ ತನ್ನ ಗಮನಕ್ಕೆ ಬಂದಿಲ್ಲವೆಂಬಂತೆ ಸರಕಾರ ಜಾಣ ಮರೆವನ್ನು ಅಭಿನಯಿಸುತ್ತಿದೆ. ಮಾಧ್ಯಮದ ಎದುರಿಗೆ ಪ್ರಶ್ನಿಸಿದರೆ ಅಕಾಡೆಮಿ ಬೇಕೇ? ಪ್ರಾಧಿಕಾರ ಬೇಕೇ? ಕಾವಲು ಸಮಿತಿ ಬೇಕೇ ಎಂದು ಕೇಳಿ, ಕೊನೆಗೆ ತಪ್ಪಿತಸ್ಥರನ್ನು ಶಿಕ್ಷಿಸಲು ಕಿಂಚಿತ್ತೂ ಅಧಿಕಾರವಿಲ್ಲದ ಒಂದು ಸಂಸ್ಥೆಯನ್ನು ಸ್ಥಾಪಿಸಿ ಪಾರಾಗುತ್ತಿದೆ. ಹೀಗಾದಾಗ ಕನ್ನಡದ ಬಗ್ಗೆ ಯಾವುದಾದರೂ ಆಸೆ ಉಳಿಯುವುದು ಸಾಧ್ಯವೇ?

ಇಂಗ್ಲಿಷ್ ಭಾಷೆ ಅನೇಕ ಪ್ರಲೋಭನೆಗಳನ್ನು ಒಡ್ಡಿದ ಭಾಷೆ. ಇಂದಿಗೂ ಆ ಭಾಷೆ ಕಲಿಯದವನು ವಿದ್ಯಾವಂತನೇ ಅಲ್ಲ. ಯಾವುದೇ ಭಾಷೆ ಮನುಷ್ಯನ ತಿಳುವಳಿಕೆಯನ್ನು ತನ್ನ ರೀತಿಯಲ್ಲಿ ತಿದ್ದುತ್ತದೆ. ಇಂಗ್ಲಿಷ್ ಹಾಗೇ ಮಾಡಿತು. ನಮ್ಮ ಸಮಾಜ ತ್ವರಿತಗತಿಯಲ್ಲಿ ಬದಲಾವಣೆ ಹೊಂದುತ್ತಿರುವುದಕ್ಕೆ ಈ ಮಾಧ್ಯಮ ಕಾರಣವಾಗಿದೆ. ಇಂಗ್ಲಿಷ್ ಕಲಿತ ಮೇಲೆ ನಾವು ನಮ್ಮ ಇತಿಹಾಸದ ಕಲ್ಪನೆಯನ್ನು ರೂಪಿಸಿಕೊಂಡೆವು. ಈ ಐತಿಹಾಸಿಕ ಪ್ರಜ್ಞೆಯಿಂದ ನಮ್ಮ ಹಳೆಯ ಜ್ಞಾನಶಾಸ್ತ್ರವನ್ನು ರೂಪಿಸಿಕೊಂಡೆವು. ನಮ್ಮಲ್ಲಿರುವ ತರತಮ ಭಾವನೆಗಳಿಗೆ, ಮೌಲ್ಯಗಳಿಗೆ, ಕೀಳರಿಮೆಗೆ, ಸರಿತಪ್ಪುಗಳ ಕಲ್ಪನೆಗಳಿಗೆ ಈ ಭಾಷೆಯೇ ಕಾರಣವೆಂದರೂ ತಪ್ಪಿಲ್ಲ. ಇದರ ಪರಿಣಾಮವಾಗಿ ನಮ್ಮಲ್ಲಿದ್ದ ವಿಜ್ಞಾನಗಳೆಲ್ಲ ಗೊಡ್ಡು ಪುರಾಣಗಳಾದವು. ಆಯುರ್ವೇದದಂಥ ವಿಜ್ಞಾನ, ದೇವಸ್ಥಾನ ರಚನೆಯಂಥ ನಮ್ಮ ಇಂಜಿನಿಯರಿಂಗ್ ಕೂಡ ಗೊಡ್ಡು ಪುರಾಣಗಳಾಗಿ ವಿಶ್ವಾಸ ಕಳೆದುಕೊಂಡವು. ನೆಲ, ಹೊಲ ಕನ್ನಡವಾಗಿದ್ದರೂ ಕೃಷಿಶಾಸ್ತ್ರ ಕೂಡ ಇಂಗ್ಲಿಷಿನಲ್ಲಿ ರೂಪುಗೊಳ್ಳುತ್ತಿರುವ ವಿಪರ್ಯಾಸ ನಮ್ಮದಾಗಿದೆ.

ಈ ವಿಪರ್ಯಾಸವನ್ನು ತಡೆಗಟ್ಟುವುದಕ್ಕೆ ನನಗೆ ತೋರುತ್ತಿರುವ ದಾರಿ ಒಂದೇ ಒಂದು:

1) 1 ರಿಂದ 7ನೇ ತರಗತಿಯವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು (ಪ್ರಾಥಮಿಕ ಪೂರ್ವ ತರಗತಿಯೊಂದಿಗೆ) ರಾಷ್ಟ್ರೀಕರಣ ಮಾಡಬೇಕು; 2) ತುರ್ತಾಗಿ ತೀವ್ರವಾಗಿ ಸರಕಾರಿ ಶಾಲೆಗಳ ಸುಧಾರೀಕರಣ ನಡೆಯಬೇಕು; 3) ಅನಂತರದ 8 ನೆಯ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು. ಇದಾಗದಿದ್ದಲ್ಲಿ ರಾಜ್ಯಭಾಷೆಗಳಿಗೆ ಭವಿಷ್ಯವಿಲ್ಲ. ಖಂಡಿತ ಭವಿಷ್ಯವಿಲ್ಲ.

ತಾಯಿ ನುಡಿಯಲ್ಲಿ ಶಿಕ್ಷಣ ಕೊಡಬೇಕೆಂಬ ಸಿದ್ಧಾಂತ ಈಗ ಸರ್ವಸಮ್ಮತವಾಗಿದೆ, ನಮ್ಮ ಖಾಸಗಿ ಶಾಲೆ ನಡೆಸುವವರನ್ನು ಹೊರತು ಪಡಿಸಿ ಶಿಕ್ಷಣ ತಜ್ಞರೆಲ್ಲ ಸರ್ವಾನುಮತದಿಂದ ಒಪ್ಪುವ ಮಾತಿದು. ಆದರೆ ಅದಕ್ಕೆ ಅಡಚಣೆಗಳಿವೆಯೆಂದೂ ಹಿಂಜರಿಯುತ್ತಾರೆ. ಕನ್ನಡ ಸಾಹಿತ್ಯವನ್ನು ಕಲಿಸಬಹುದು, ಸಂಸ್ಕೃತ ಸಾಹಿತ್ಯವನ್ನು ಕಲಿಸಬಹುದು. ಆದರೆ ಮಹತ್ವದ ವಿಷಯಗಳಾದ ಭೌತಶಾಸ್ತ್ರ, ಗಣಿತ, ವೈದ್ಯಶಾಸ್ತ್ರ, ತಂತ್ರಜ್ಞಾನ - ಇವನ್ನು ಕನ್ನಡದಲ್ಲಿ ಕಲಿಸುವುದು ಸಾಧ್ಯವಿಲ್ಲವೆಂದೇ ಎಲ್ಲರೂ ಹೇಳುತ್ತಾರೆ. ನಾವು ಕಲಿಸಬೇಕಾದ ಶಾಸ್ತ್ರಜ್ಞಾನವೆಲ್ಲ ಇಂಗ್ಲಿಷಿನಲ್ಲಿ ಲಭ್ಯವಿರುವುದರಿಂದ, ಶಿಕ್ಷಕರೆಲ್ಲ ಇಂಗ್ಲಿಷಿನಲ್ಲಿ ಕಲಿತು ಬಂದವರಾದ್ದರಿಂದ ಇಂಗ್ಲಿಷ್ ಭಾಷೆಯೇ ಇದಕ್ಕೆ ಸರಿಯಾದ ಮಾಧ್ಯಮವೆಂಬುದನ್ನು ಎಲ್ಲರೂ ದೃಢವಾಗಿ ನಂಬಿಬಿಟ್ಟಿದ್ದಾರೆ. ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆಯಾಗಿರುವುದರಿಂದ ಅದು ನಮ್ಮ ಭಾಷೆಯೂ ಹೌದು, ನಮ್ಮ ರಾಷ್ಟ್ರದ ಸಂವಿಧಾನ ಆಂಗ್ಲ ಭಾಷೆಯನ್ನು ಭಾರತೀಯ ಭಾಷೆಯೆಂದು ಗುರುತಿಸಿದೆ. ಈ ಭಾಷೆ ವಸಾಹತುಶಾಹಿ ಇತಿಹಾಸದ ಒಂದು ಕೊಡುಗೆ ನಿಜ. ಆದರೆ ಇತಿಹಾಸವನ್ನು ಮರೆಯುವದಾದರೂ ಹ್ಯಾಗೆ? ಒಟ್ಟಿನಲ್ಲಿ ಶಿಕ್ಷಣ ಯಶಸ್ವಿಯಾಗಿ ನಡೆದು ಬಿಟ್ಟರೆ, ಭಾವನಾತ್ಮಕ ಕಾರಣಗಳಿಗಾಗಿ ತಾನಾಗಿ ಬಂದಿರುವ ಒಂದು ಭಾಷೆಯನ್ನು ಬಿಟ್ಟುಕೊಡುವುದು ಮೂರ್ಖತನವಾಗಬಹುದು. ನಮ್ಮ ದೇಶ ಉಳಿದ ದೇಶಗಳೊಂದಿಗೆ ಪ್ರಗತಿಪಥದಲ್ಲಿ ನಡೆಯಬೇಕಾದರೆ ಆಂಗ್ಲ ಭಾಷೆ ಅನಿವಾರ್ಯವಾಗುತ್ತದೆ ಎನ್ನುವುದು ಒಂದು ವಾದ. ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿಸಿದರೆ ಐತಿಹಾಸಿಕವಾಗಿ ನಾವು ಹಿಂದುಳಿಯಬಹುದು ಎಂಬ ಭಯವೂ ಕೆಲವರಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಭಾಷೆಯ ವ್ಯಾಮೋಹ ನಮ್ಮನ್ನು ಏನೂ ಯೋಚಿಸದಂತೆ ಮಾಡಿದೆ.

ಯಾಕೆಂದರೆ ವಿದ್ಯೆ ಎಂದರೆ ಇಂಗ್ಲಿಷ್ ಎನ್ನುವ ಸಮೀಕರಣ ನಮ್ಮಲ್ಲಿ ಮೊದಲಿನಿಂದ ಇದೆ. ಈ ವಾದವನ್ನು ಸಮರ್ಥಿಸುವಂತೆ ಅವರು ಸ್ಥಾಪಿಸಿಕೊಟ್ಟ ಸಂಸ್ಥೆಗಳು ಹಾಗೇ ಮುಂದುವರಿದಿವೆ. ಅವರೇ ನಿರ್ಮಿಸಿಕೊಟ್ಟ ಗ್ರಾಮ ತಾಲ್ಲೂಕು ಜಿಲ್ಲೆ, ಪ್ರಾಂತಗಳು, ಪ್ರಾಥಮಿಕ ಮಾಧ್ಯಮಿಕ ಉನ್ನತ ಶಾಲೆ ಕಾಲೇಜು ಕೊನೆಯಲ್ಲಿ ವಿಶ್ವವಿದ್ಯಾಲಯಗಳು - ಇವೆಲ್ಲ ಅವರಿಟ್ಟ ಕ್ರಮದಲ್ಲೇ ಮುಂದುವರಿದಿವೆ. ಬ್ರಿಟಿಷರು ಬಿಟ್ಟು ಹೋದ ಆಡಳಿತ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಅಂಚೆ ತಂತಿಯ ವ್ಯವಸ್ಥೆ, ವಿಶ್ವವಿದ್ಯಾಲಯಗಳ ವ್ಯವಸ್ಥೆ ಇದೆಲ್ಲ ಪರಸ್ಪರ ಅಂಟಿಕೊಂಡೇ ಮುಂದುವರಿಯುತ್ತಿವೆ. ಆದ್ದರಿಂದಲೇ ಈಗಲೂ ನಮ್ಮ ಹುಡುಗರು ಕಲಿಯುವುದು Light, Electricity ಮತ್ತುSound ನ್ನೆ ಶಿವಾಯಿ ಬೆಳಕು, ವಿದ್ಯುತ್ ಮತ್ತು ಧ್ವನಿಯನ್ನಲ್ಲ.

ಹಾಗಿದ್ದರೆ ಕನ್ನಡ ಭಾಷೆಗೆ ವಿಜ್ಞಾನದ ಮಾಧ್ಯಮವಾಗುವ ಶಕ್ತಿ ಇಲ್ಲವೆ? ಅಂದರೆ ಕನ್ನಡ ಪರ ಇದ್ದವರು ಹೇಳುವ ಉತ್ತರ: ಕನ್ನಡ ಭಾಷೆಗೆ ಒಂದೂವರೆ ಸಾವಿರ ವರ್ಷಗಳ ಸಾಹಿತ್ಯ ಪರಂಪರೆ ಇದೆ! ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಬಗ್ಗೆ ಎರಡು ಮಾತಿಲ್ಲ ನಿಜ. ಆದರೆ ಪ್ರಾಚೀನ ಕಾಲದಿಂದಲೂ ಸಂಸ್ಕೃತವೇ ನಮ್ಮ ಶಾಸ್ತ್ರಗ್ರಂಥಗಳಿಗೆ ತಾಯಿ. ಪಾಣಿನಿಯ ಅಷ್ಟಾಧ್ಯಾಯಿ, ಪತಂಜಲಿಯ ಮಹಾಭಾಷ್ಯ, ಭರತನ ನಾಟ್ಯಶಾಸ್ತ್ರ, ಕೌಟಿಲ್ಯನ ಅರ್ಥಶಾಸ್ತ್ರದಂಥ ಕೃತಿಗಳು ಒಂದಾದರೂ ಶಾಸ್ತ್ರಗ್ರಂಥ ಕನ್ನಡದಲ್ಲಿ ಅಥವಾ ದೇಶೀ ಭಾಷೆಗಳಲ್ಲಿ ಇಲ್ಲವಲ್ಲ! ಕನ್ನಡಕ್ಕೆ ಅದ್ಭುತವಾದ ಅಭಿವ್ಯಕ್ತಿ ಸಾಮರ್ಥ್ಯವನ್ನು ಕೊಟ್ಟವರು ವಚನಕಾರರು. ಆದರೂ ಆಡಳಿತ, ಶಿಕ್ಷಣ ಹಾಗೂ ಬೌದ್ಧಿಕ ಚಟುವಟಿಕೆಗಳ ಭಾಷೆ ಇಂಗ್ಲಿಷ್, ಪೂಜೆ ಪುನಸ್ಕಾರಗಳ ಭಾಷೆ ಸಂಸ್ಕೃತ, ಕನ್ನಡ ಮಾತ್ರ ಸಾಹಿತ್ಯದ ಭಾಷೆಯಾಗಿದೆ. ಇದರಿಂದಾಗಿ ಶಿಕ್ಷಣ ಮಾಧ್ಯಮವಾಗಲು ಕನ್ನಡ ಇನ್ನೂ ಹಿಂಜರಿಯುತ್ತಿದೆ. ಈಗ ಕನ್ನಡಕ್ಕೆ ನೆರವಾಗಬಲ್ಲ ಪ್ರಮುಖ ವ್ಯಕ್ತಿ ಮತ್ತು ಶಕ್ತಿ - ಶಿಕ್ಷಕ ಮಾತ್ರ!

ಸುದೈವದಿಂದ ಈ ಕಾಲದಲ್ಲಿ ಕೂಡ ನಮ್ಮ ದೇಶದ ವಿದ್ಯಾರ್ಥಿ-ಶಿಕ್ಷಕರ ಸಂಬಂಧ ಹಾರ್ದಿಕವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರ ಮೇಲಿನ ತಮ್ಮ ನಂಬಿಕೆಯನ್ನು ಇನ್ನೂ ಕಳೆದುಕೊಂಡಿಲ್ಲ. ಕನ್ನಡಕ್ಕೆ ಶಕ್ತಿ ತುಂಬುವಲ್ಲಿ ನಮ್ಮ ಶಿಕ್ಷಕರೆಲ್ಲ ಒಟ್ಟಾಗಿ ವಿಜ್ಞಾನದ ಪುಸ್ತಕ ಯಾವುದೇ ಭಾಷೆಯಲ್ಲಿರಲಿ ಅದನ್ನು ಕನ್ನಡದಲ್ಲಿ ಕಲಿಸುವ ಸಂಕಲ್ಪಕ್ಕೆ ಬದ್ಧರಾಗಬೇಕು. ಒಂದು ಕಾಲಕ್ಕೆ ನಮ್ಮ ಹಳೆಯ ಪಾಠಶಾಲೆಗಳಲ್ಲಿ ಸಂಸ್ಕೃತ ಗ್ರಂಥಗಳನ್ನು ಹೀಗೆಯೇ ಕಲಿಸಲಾಗುತ್ತಿತ್ತು. ಇದು ಮಾತ್ರ ನಾವು ಊಹಿಸಿದಷ್ಟು ಕಷ್ಟದ ಕೆಲಸವಲ್ಲ. ಒಂದು ಭಾಷೆಯಲ್ಲಿ ಪರಿಣತನಾದವನು ಯಾವ ಭಾಷೆಯನ್ನೂ ಬೇಕಾದಾಗ ಕಲಿಯಬಹುದು. ನಮ್ಮ ಶಿಕ್ಷಕರು ತಾವು ಬೇರೆ ಭಾಷೆಗಳನ್ನು ಕಲಿತು ಅಲ್ಲಿ ದೊರೆತದ್ದನ್ನು ಕನ್ನಡದಲ್ಲಿ ತಿಳಿಸುವ ಸಾಮರ್ಥ್ಯವನ್ನು ಪಡೆಯಬೇಕು. ಯಾಕೆಂದರೆ ಕನ್ನಡದಿಂದಲೇ ನಮ್ಮ ವಿದ್ಯಾರ್ಥಿಗಳ ತಿಳುವಳಿಕೆ ಅರಳಬೇಕಾಗಿದೆ. ಭಾಷೆ ಕೇವಲ ತಿಳುವಳಿಕೆಯ ಆಗರವಲ್ಲ. ಅದು ಯೋಚನೆಯ ಪ್ರಬಲವಾದ ಉಪಕರಣವಾಗಿದೆ. ವಿದ್ಯಾರ್ಥಿ ತನ್ನ ಭಾಷೆಯಲ್ಲಿ ಯೋಚಿಸುವುದನ್ನು ಮೊದಲು ಕಲಿಯಬೇಕು.
ಇನ್ನೊಂದು ವಿಚಾರ: ನಾವೆಷ್ಟೇ ಕನ್ನಡದಲ್ಲಿ ಯೋಚನೆ ಮಾಡುತ್ತೇವೆಂದರೂ ಅಣು ವಿಜ್ಞಾನದ ಬಗ್ಗೆ, ಫ್ರಾಯ್ಡ್‌ನ ಮನಃಶಾಸ್ತ್ರದ ಬಗ್ಗೆ ಹಾಗೂ ಇನ್ನಿತರೆ ಇಂಥ ಶಾಸ್ತ್ರಗಳ ಬಗ್ಗೆ ಕನ್ನಡದಲ್ಲಿ ಚರ್ಚಿಸುವುದು ಸಾಧ್ಯವಿಲ್ಲ ನಿಜ. ಒಮ್ಮೆಲೆ ಆಧುನಿಕವಾಗಲೆಳಸುವ ಮನುಷ್ಯನಿಗೆ ಇರುವ ಅನೇಕ ಮುಜುಗರಗಳಲ್ಲಿ ಇದೂ ಒಂದು. ಈ ದೃಷ್ಟಿಯಿಂದ ನೋಡಿದಾಗ ಮೈಸೂರು ವಿಶ್ವವಿದ್ಯಾಲಯದ ನಾಲ್ಕಾಣೆ ಪ್ರಚಾರ ಪುಸ್ತಿಕೆಗಳು ನೆನಪಾಗುತ್ತವೆ. ಈ ಚಿಕ್ಕ ಪುಸ್ತಿಕೆಗಳ ಲೇಖಕರು ಕನಿಷ್ಠಪಕ್ಷ ಆ ಪುಸ್ತಿಕೆಗಳ ಮಟ್ಟಿಗಾದರೂ ಕನ್ನಡದಲ್ಲಿ ವಿಚಾರ ಮಾಡುವಂತಾಯಿತು. ಅವರ ವಿಚಾರಗಳಾಗಲಿ, ಸಿದ್ಧಾಂತವಾಗಲಿ ಸ್ವೋಪಜ್ಞವಾಗಿರಲಿಲ್ಲ. ಆದರೆ ಸ್ವೋಪಜ್ಞವಾದ ವೈಚಾರಿಕತೆಯ ಅಭಿವ್ಯಕ್ತಿಗೆ ಒಂದು ಭಾಷೆ ಅಲ್ಲಿ ನಿರ್ಮಾಣವಾಯಿತು! ಇದು ಸಣ್ಣ ಮಾತಲ್ಲ.

ಸಾಹಿತ್ಯವೊಂದರಲ್ಲಿ ಮಾತ್ರ ಭಾಷೆಯ ಸೃಜನಶೀಲವಾದ ಉಪಯೋಗವಾಗುತ್ತದೆಂಬ ತಪ್ಪು ಗ್ರಹಿಕೆ ನಮ್ಮಿಂದ ದೂರವಾಗಬೇಕು. ಶಿಕ್ಷಣ ಕೂಡ ಒಂದು ಸೃಜನಶೀಲವಾದ ಕ್ರಿಯೆ, ಇದು ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧ, ವ್ಯವಸಾಯದ ಸಂಬಂಧ. ಶಿಕ್ಷಕ ಹೇಳಿದ್ದನ್ನು ವಿದ್ಯಾರ್ಥಿ ಬರೆದುಕೊಂಡು ಬಾಯಿಪಾಠ ಮಾಡಿ ಪರೀಕ್ಷೆಯ ಹೊತ್ತಿನಲ್ಲಿ ಅದನ್ನು ತಿರುಗಿ ಶಿಕ್ಷಕನಿಗೇ ಮುಟ್ಟಿಸುವುದು ಶಿಕ್ಷಣವಾಗುವುದಿಲ್ಲ. ಶಿಕ್ಷಣವು ಶಾಸ್ತ್ರಕ್ಕಿಂತ ಹೆಚ್ಚಾಗಿ ಒಂದು ಕಲೆ. ಶಿಕ್ಷಕ ನಟನಂತೆ ಒಬ್ಬ ಕ್ರಿಯಾಶೀಲ ಕಲಾವಿದ. ಅವನು ಭಾಷೆಯನ್ನು ಸೃಜನಶೀಲವಾಗಿ ಉಪಯೋಗಿಸುತ್ತಾನೆ. ಅವನ ಭಾಷೆ ವಿದ್ಯೆಯನ್ನು ಸೃಷ್ಟಿಸುತ್ತದೆ. ಶಿಕ್ಷಣದ ಮಾಧ್ಯಮ ಇಂಗ್ಲಿಷಿನಂಥ ಪರಭಾಷೆಯಾದರೆ ಈ ಸೃಜನಶೀಲತೆ ಸಾಧ್ಯವಾಗುವುದಿಲ್ಲ. ಅದಕ್ಕೆ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು. ಶಿಕ್ಷಕನೊಬ್ಬನ ಸಂಕಲ್ಪದಿಂದ ಮಾತ್ರ ಮಾಧ್ಯಮ ಬದಲಾಗುವುದಿಲ್ಲ. ನಾನು ಮೊದಲೇ ಹೇಳಿದ ಹಾಗೆ ಶಿಕ್ಷಣ ವ್ಯವಸ್ಥೆ ರಾಜ್ಯ ಸರಕಾರದ ಜವಾಬ್ದಾರಿಯಾಗಿರುವುದರಿಂದ ಸರಕಾರವೂ ಮನಸ್ಸು ಮಾಡಬೇಕು. ಜನತೆಯೂ ಅದನ್ನೇ ಬಯಸಬೇಕು. ಈ ಮೂರೂ - ಶಿಕ್ಷಕ, ಸರಕಾರ ಮತ್ತು ಜನ ಸೇರಿದಾಗಲೇ ಕನ್ನಡ ಮಾಧ್ಯಮ ಸುಲಭ ಸಾಧ್ಯ. ಈಗ ಸರಕಾರ ಮೊದಲು ಮುಂದೆ ಬಂದು ತತ್‌ಕ್ಷಣವೇ ಹಂಗಾಮಿ ಶಿಕ್ಷಕರನ್ನು ಕಾಯಮಾತಿಗೊಳಿಸಬೇಕು. ಶಿಕ್ಷಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಯಾವ ಸರಕಾರಕ್ಕೂ ಶೋಭೆಯಲ್ಲ.

ಪೂರ್ವ ತಯಾರಿಗಳು
ತಂತ್ರಾಂಶ
“ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಹಾಗಾದಲ್ಲಿ ಯಾವುದೇ ಪ್ರಶಸ್ತಿ, ಸರಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳುವಳಿ ಇತ್ಯಾದಿಗಳು ಯಾವವೂ ಆ ಭಾಷೆಯನ್ನು ಉಳಿಸಲಾರವು. ಇದಕ್ಕೆ ಸಂಸ್ಕೃತವೇ ಜ್ವಲಂತ ಉದಾಹರಣೆ. ಈ ದೃಷ್ಟಿಯಿಂದ ಜಾಗತೀಕರಣದ ಈ ಪರ್ವಕಾಲದಲ್ಲಿ ಭಾರತದ ಎಲ್ಲ ದೇಶ ಭಾಷೆಗಳೂ ತುಂಬ ಅಪಾಯಕರ ಸ್ಥಿತಿಯಲ್ಲಿವೆ ಎಂಬುದನ್ನು ನಿಸ್ಸಂಶಯವಾಗಿ ಒಪ್ಪಬಹುದು. ಇದಕ್ಕೆ ಮುಖ್ಯ ಕಾರಣ ಮನುಷ್ಯ ಸಮಾಜದ ಎಲ್ಲ ವಹಿವಾಟುಗಳೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬದಲಾಗುತ್ತಿರುವುದು. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಸರ್ವವ್ಯಾಪಿಯಾಗಿ ಆವರಿಸುತ್ತಿದೆ. ನಾವು ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಭಾಷೆಯಷ್ಟೇ ಸರ್ವಸಮರ್ಥವಾಗಿ ನಮ್ಮ ಭಾಷೆಯನ್ನು ಬಳಸಲು ಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ” ಎಂದು ಪೂರ್ಣಚಂದ್ರ ತೇಜಸ್ವಿ ಸಾರಿ ಸಾರಿ ಹೇಳಿದ್ದರು. ನಾಡಿನ ಸುಪ್ರಸಿದ್ಧ ವಿಜ್ಞಾನಿ ಡಾ. ರಾಜಾರಾಮಣ್ಣ ಕೂಡ ಇದೇ ಮಾತನ್ನು ಹೇಳಿದ್ದರು.

ಸದರಿ ಸಂದೇಶವನ್ನೇ ಹೊತ್ತುಕೊಂಡು ತೇಜಸ್ವಿ ಮತ್ತು ನಾನು ಅಂದಿನ ಅನೇಕ ಮಂತ್ರಿಗಳನ್ನು ಭೇಟಿಯಾಗಿ ತಂತ್ರಾಂಶದ ಅಗತ್ಯವನ್ನು ಹೇಳಿ ಕೂಡಲೇ ಈ ಬಗ್ಗೆ ಸರಕಾರ ಗಮನ ಹರಿಸಬೇಕೆಂದು ಕೇಳಿಕೊಂಡೆವು. ಭೇಟಿಯಾದರ‍್ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ಆಗ ಮುಂದೆ ಬಂದವರು ಸನ್ಮಾನ್ಯ ಯಡಿಯೂರಪ್ಪನವರು ಮತ್ತು ಅಂದಿನ ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿದ್ದ ಡಾ. ಮನು ಬಳಿಗಾರ್ ಅವರು. ಆಗ ಅವರು ಪ್ರೊ. ಚಿದಾನಂದ ಗೌಡರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿ ಅಗತ್ಯಕ್ರಮ ಕೈಗೊಳ್ಳಲು ಹೇಳಿದರು. ಸದರಿ ಸಮಿತಿ ತಂತ್ರಾಂಶದಲ್ಲಿ ಆಗಬೇಕಾದ ಕಾರ್ಯಕ್ರಮಗಳ ಒಂದು ಪಟ್ಟಿ ಮಾಡಿ ಅಂದಿನ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಿಗೆ ಕೊಟ್ಟರು. ಶ್ರೀ ದಯಾನಂದ ಇರೋತನಕ ಅಲ್ಲಿ ನಡೆದ ಒಳ್ಳೆಯ ಕಾರ್ಯಕ್ರಮ ಮುಂದುವರಿಯಿತು. ಅವರು ಬೇರೆ ಇಲಾಖೆಗೆ ಹೋದ ನಂತರ ಯಾರೂ ಆ ಕಡೆಗೆ ಗಮನ ಹರಿಸಲೇ ಇಲ್ಲ.

ಮಾಹಿತಿ ತಂತ್ರಜ್ಞಾನದ ವಿವಿಧ ಅಂಗಗಳಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗೆ ಸರಿಹೊಂದುವಂತೆ ಆಗಾಗ ಸರಕಾರಕ್ಕೆ ಸಲಹೆ ಕೊಡಲು ಒಂದು ತಜ್ಞರ ಸಮಿತಿಯ ಅಗತ್ಯವಿದೆ. ಇದರಲ್ಲಿ ಸಾಫ್ಟ್‌ವೇರ್ ತಂತ್ರಜ್ಞರು, ಭಾಷಾ ತಜ್ಞರು ಮತ್ತು ಕೆಲವು ಅಧಿಕಾರಿಗಳು ಇರಬೇಕು. ಐ-ಕ್ಯಾನ್ ಈಗ ಕನ್ನಡದ ಜಾಲತಾಣಗಳ ವಿಳಾಸಗಳನ್ನು ಕೊಡುವುದಕ್ಕೆ ಮುಂದಾಗಿದೆ. ಆದರೆ ಅದರಲ್ಲಿ ಕನ್ನಡವನ್ನು ಅಧಿಕೃತವಾಗಿ ಪ್ರತಿನಿಧಿಸುವವರಿಲ್ಲ.

ಕರ್ನಾಟಕ ಸರಕಾರ ತನ್ನ ಅನುದಾನದಲ್ಲಿ ರೂಪುಗೊಳ್ಳುವ ತಂತ್ರಾಂಶಗಳ ಲೈಸೆನ್ಸಿಂಗ್ ಏನಾಗಿರಬೇಕೆಂಬ ಬಗ್ಗೆ ಸ್ಪಷ್ಟವಾದ ನೀತಿ ಹೊಂದಿರಬೇಕು. ಕನ್ನಡದ ಶಿಷ್ಟತೆಯ ವಿಚಾರವನ್ನು ಯಾರು ನೋಡಿಕೊಳ್ಳಬೇಕು? ಇ-ಗವರ್ನನ್ಸ್? ಅಥವಾ ಕನ್ನಡ ಸಂಸ್ಕೃತಿ ಇಲಾಖೆ?

ಕರ್ನಾಟಕ ಸರಕಾರ ಯೂನಿಕೋಡ್ ಕನ್ಸಾರ್ಷಿಯಂ ಮತ್ತು ಆ ಬಗೆಯ Standerdization body ಗಳಲ್ಲಿ ಸದಸ್ಯತ್ವ ಪಡೆದು ಅಧಿಕೃತ ಪ್ರತಿನಿಧಿಯನ್ನು ನೇಮಿಸಬೇಕು. ತೆಲುಗು ಮತ್ತು ತಮಿಳು ಭಾಷೆಗಳು ಹೀಗೆ ಸದಸ್ಯತ್ವ ಪಡೆದುಕೊಂಡು ಅಧಿಕೃತ ಪ್ರತಿನಿಧಿಗಳನ್ನು ನೇಮಿಸಿವೆ.

ಕೋಶಗಳು

ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಯಾವುದೇ ಇಂಗ್ಲಿಷ್ ಪಠ್ಯವಾಗಲಿ, ಆಯಾ ವರ್ಷವೇ ಅದನ್ನು ಕನ್ನಡಕ್ಕೆ ಅನುವಾದ ಮಾಡಬೇಕು. ಇದಕ್ಕಾಗಿ ಸರಕಾರದ ಅಪ್ಪಣೆಗಾಗಿ ಕಾಯುತ್ತ ಕೂರಬಾರದು. ಈ ಕಾರ್ಯಕ್ಕೆ ಕನ್ನಡ ವಿಶ್ವವಿದ್ಯಾಲಯ ಮುಂದೆ ಬರಬೇಕು ಮತ್ತು ಅವರೇ ಆ ಕೃತಿಗಳನ್ನು ಪ್ರಕಟಿಸಬೇಕು. ಇದರಿಂದ ಶಿಕ್ಷಕ ಮತ್ತು ವಿದ್ಯಾರ್ಥಿ ಇಬ್ಬರಿಗೂ ಪ್ರಯೋಜನವಾಗುವುದರಲ್ಲಿ ಸಂಶಯವಿಲ್ಲ. ಏನಿಲ್ಲದಿದ್ದರೂ ವಿದ್ಯಾರ್ಥಿಗಳು ಇಂಥ ಪ್ರಕಟಣೆಗಳನ್ನು ‘ಗೈಡ್’ಗಳಂತೆ ಓದಿದರೂ ಪ್ರಯೋಜನಕಾರಿಯಾಗಿದೆ.
ವಿಜ್ಞಾನ ವಿಷಯಗಳಲ್ಲಿ ಹೊಸ ಶೋಧನೆಗಳು, ಚಿಂತನೆಗಳು ಸತತ ನಡೆಯುತ್ತಿರಬೇಕಾದರೆ, ಓದಿ ತಿಳಿದ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಸ್ವತಂತ್ರವಾದ ಸೃಜನಶೀಲ ಸಂಶೋಧನೆಗಳನ್ನು ಮಾಡಲು ಅನುಕೂಲವಾಗುವಂತೆ ಕೋಶಗಳ ರಚನೆಯಾಗಬೇಕು. ಮತ್ತು ಈ ಕೋಶಗಳು ದೇಶದ ಎಲ್ಲ ಭಾಷೆಗಳಿಗೆ ಸಾಮಾನ್ಯವಾದ ಮತ್ತು ಸಾಧ್ಯವಾದಷ್ಟೂ ಸಂಸ್ಕೃತ, ಇಂಗ್ಲಿಷ್ ತಾಂತ್ರಿಕ ಪದಗಳನ್ನು ಬಳಸಿಕೊಂಡು ತಯಾರಾಗಿರಬೇಕು. ಅಂದರೆ ನಡೆದ ಶೋಧಗಳ ವಿಷಯ ಸಂಬಂಧಪಟ್ಟ ಸಂಸ್ಥೆಗಳಿಗೆ, ಅಲ್ಲಿಯ ಪಂಡಿತರಿಗೆ ತಿಳಿಯುವಂತಾಗಬೇಕು. ಇದು ಬಹುದೊಡ್ಡ ಯೋಜನೆಯೆಂದು ತಲೆ ಕೆಡಿಸಿಕೊಳ್ಳಬೇಕಾದ್ದಿಲ್ಲ. ಯುಜಿಸಿಯಂಥ ಶಿಕ್ಷಣ ಸಂಸ್ಥೆ ಮುಂದೆ ಬಂದರೆ ಇದಕ್ಕೆ ನೆರವಿನ ಸಮಸ್ಯೆ ಉಂಟಾಗುವುದೇ ಇಲ್ಲ.

ಕೆಲವು ವೈದ್ಯರು ಸ್ಥಳೀಯ ರೋಗಿಗಳೊಂದಿಗೆ ವ್ಯವಹರಿಸುವಾಗ ತಮಗೇ ಗೊತ್ತಿಲ್ಲದ ಅನೇಕ ಪದಗಳನ್ನು ಸೃಷ್ಟಿ ಮಾಡಿರುತ್ತಾರೆ. ಕೆಲವು ಸಲ ಮೂಲಶಾಸ್ತ್ರಕ್ಕೇ ಸೇರಿಸಬಹುದಾದ ಆವಿಷ್ಕಾರಗಳನ್ನೂ ಮಾಡಿ ಕೃತಿ ರಚನೆ ಮಾಡಿದ್ದಾರೆ. ಅಂಥವರಲ್ಲಿ ಡಾ. ಎನ್.ಡಿ.ಪುರುಷೋತ್ತಮ್ ಮತ್ತು ಡಾ. ಸುರೇಶ್ ಹಾಗೂ ಡಾ. ರುದ್ರೇಶ್ ಅವರ ನೆನಪಾಗುತ್ತಿದೆ. ಇಂಥವರನ್ನು ಸರಕಾರ ಇಲ್ಲವೆ ಕನ್ನಡ ಪ್ರಾಧಿಕಾರದವರು ಗುರುತಿಸಿ ಅವರ ಪ್ರಯೋಜನ ನಾಡಿಗಾಗುವಂತೆ ಮಾಡಬೇಕು.

ಟಿ.ವಿ. ಜ್ಞಾನವಾಹಿನಿ

ಕನ್ನಡಕ್ಕೆ ಬೇರೆ ಭಾಷೆಯ ಚಲನಚಿತ್ರಗಳನ್ನು ಡಬ್ ಮಾಡಬಾರದೆಂದು ಕನ್ನಡ ಚಲನಚಿತ್ರ ಮಂಡಳಿ ನಿರ್ಣಯ ತಗೊಂಡದ್ದು ಸರಿಯಷ್ಟೆ. ಚಲನಚಿತ್ರಗಳನ್ನು ಡಬ್ ಮಾಡಬಾರದೆಂಬುದು ಯೋಗ್ಯವಾದ ನಿರ್ಣಯ. ಆದರೆ ಕನ್ನಡ ಟಿವಿಗಳಲ್ಲಿ ವಿದೇಶಗಳ ಇತಿಹಾಸ, ಎನಿಮಲ್ ಪ್ಲಾನೆಟ್, ಡಿಸ್ಕವರಿ ಮುಂತಾದ ಮಕ್ಕಳಿಗೆ ಯೋಗ್ಯ ಪಾಠವಾಗಬಹುದಾದ ಚಾನಲ್‌ಗಳಿವೆ. ಅವನ್ನೂ ಡಬ್ ಮಾಡಬಾರದೆಂದರೇನು? ಅವನ್ನೀಗ ನಮ್ಮ ಮಕ್ಕಳು ತೆಲುಗು, ತಮಿಳು ಟೀವಿಗಳಲ್ಲಿ ನೋಡುತ್ತಿದ್ದಾರೆ. ಅದರ ಬದಲು ಮನೆಯಿಂದಲೇ ಕನ್ನಡದಲ್ಲಿ ನೋಡಿದರೆ ಒಳ್ಳಯದಲ್ಲವೆ?

ಜಾಲತಾಣ

ಕನ್ನಡ ಸಾಹಿತ್ಯ, ಸಂಸ್ಕೃತಿಗಳು ಬೇರೆ ರಾಜ್ಯಗಳಿಗಿಂತ ಭಿನ್ನವಾಗಿವೆ, ವಿಶಿಷ್ಟವಾಗಿವೆ. ಆಧುನಿಕ ಕನ್ನಡ ಸಾಹಿತ್ಯ ಜಗತ್ತಿನ ಎಲ್ಲಾ ಚಿಂತನಾಕ್ರಮಗಳಿಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡಷ್ಟು ಭಾರತದ ಇತರ ಭಾಷೆಗಳು ತೆರೆದುಕೊಂಡಿಲ್ಲ. ಇಷ್ಟಿದ್ದರೂ ನಾವು ನಮ್ಮ ಹಿರಿಮೆಯನ್ನು ಹೊರಗಿನವರಿಗೆ ಸಮರ್ಥವಾಗಿ ವಿವರಿಸುವಲ್ಲಿ ವಿಫಲರಾಗಿದ್ದೇವೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳನ್ನು ಬೇರೆಯವರಿಗೆ ತಿಳಿಸುವುದು ಅಗತ್ಯ. ಈ ವಿಷಯದಲ್ಲಿ ನಾವು ತಮಿಳು, ಬಂಗಾಲಿ ಭಾಷೆಗಳಿಗಿಂತ ಹಿಂದೆ ಇದ್ದೇವೆ. ಈ ಕೆಲಸ ಯಶಸ್ವಿಯಾಗಿ ನಡೆಯಬೇಕಾದರೆ ಹೊರದೇಶಗಳಲ್ಲಿ ಕನ್ನಡ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು. ಆದರೆ ದುರ್ದೈವದ ಸಂಗತಿ ಎಂದರೆ ಹೊರನಾಡು ಮತ್ತು ಹೊರದೇಶಗಳಲ್ಲಿರುವ ಪೀಠಗಳನ್ನು ಸರಕಾರ ಮುಚ್ಚುತ್ತಿದೆ. ಬನಾರಸ್, ಅಹಮದಾಬಾದ್, ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಇದ್ದ ಪೀಠಗಳು ಇತ್ತೀಚೆಗೆ ಮುಚ್ಚಿ ಹೋಗಿವೆ.

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿರುವ ಕನ್ನಡ ಅಧ್ಯಯನ ಪೀಠವು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ವಿದೇಶಿಯರಿಗೆ ಕಲಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದೀಗ ಪೀಠವು ಕನ್ನಡೇತರರು ಕನ್ನಡವನ್ನು ಕಲಿಯಲು ಸಹಾಯ ಮಾಡುವಂಥ ‘ಕನ್ನಡ ಕಲಿಕೆ’ ಎಂಬ ಹೊಸಬಗೆಯ ಜಾಲತಾಣವನ್ನು ಸಿದ್ಧಪಡಿಸಿದೆ. ಈಗಾಗಲೇ 16 ಸಾವಿರಕ್ಕೂ ಹೆಚ್ಚು ಜನ ‘ಕನ್ನಡ ಕಲಿಕೆ’ ಜಾಲತಾಣದ ಮೂಲಕ ಕನ್ನಡವನ್ನು ಕಲಿಯುತ್ತಿದ್ದಾರೆ. ಈ ಪ್ರಯತ್ನವನ್ನು ಮುಂದುವರೆಸಿ ವರ್ಚುವಲ್ ತರಗತಿಗಳನ್ನು ನಡೆಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು.

ಒಂದು ಭಾಷೆಯ ಅತ್ಯಂತ ಸಂವೇದನಾಶೀಲವಾದ ಅಂಗಗಳೆಂದರೆ ಅದರ ಪುರಾಣ ಕಲ್ಪನೆ ಮತ್ತು ರೂಪಕ ಶಕ್ತಿ. ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಪಲ್ಲಟಕ್ಕೆ ಒಳಗಾಗಿರುವುದು ನಮ್ಮ ಭಾಷೆ. ಸದ್ಯದ ಪರಿಸ್ಥಿತಿಯಲ್ಲಿ ನೆನಪು ಮತ್ತು ಭವಿಷ್ಯದ ನಡುವಿನ ರಣಾಂಗಣವಾಗಿದೆ ನಮ್ಮ ಭಾಷೆ. ಸಾವಿರ ವರ್ಷಗಳ ಇತಿಹಾಸವುಳ್ಳ ನಮ್ಮ ಭಾಷೆಗೆ ಈ ತರಹದ ಕುತ್ತು ಹಿಂದೆಂದೂ ಬಂದಿರಲಿಲ್ಲ. ಇದನ್ನು ಎಲ್ಲರೂ ಸೇರಿ ಒಂದಾಗಿ ಬಗೆಹರಿಸಬೇಕು. ತಜ್ಞರ ಸಲಹೆಗಳನ್ನು ಗೌರವಿಸಬೇಕು. ವ್ಯಕ್ತಿ, ಪರಿಪೂರ್ಣನಲ್ಲ. ಸುದೈವದಿಂದ ನಮ್ಮಲ್ಲಿನ್ನೂ ಪರಿಣತ ವ್ಯಕ್ತಿಗಳಿದ್ದಾರೆ.

ಸಾಹಿತ್ಯದ ಏಕಮೇವ ಮಾಧ್ಯಮವಾಗಿದ್ದ ಭಾಷೆ ಇನ್ನು ಮುಂದೆ ಎಲ್ಲ ಶಾಸ್ತ್ರಗಳಿಗೂ ಮಾಧ್ಯಮವಾಗಬೇಕಾಗಿದೆ. ಒಂದು ಕಾಲಕ್ಕೆ ಸಂಸ್ಕೃತವು ಶಾಸ್ತ್ರದ ಮಾಧ್ಯಮವಾಗಿತ್ತು. ಆದರೆ ಶಾಸ್ತ್ರ ಚಿಂತನೆ ಭಾರತದ ಉಳಿದ ಭಾಷೆಗಳಲ್ಲಿಯೂ ನಡೆಯುತ್ತಿದೆ. ಸಾಹಿತ್ಯವನ್ನು ಹೊರತುಪಡಿಸಿ ಭಾಷೆ ಬೇರೆ ಚಿಂತನೆಯ ಕ್ರಮಗಳನ್ನು ಕಲಿಯತೊಡಗಿದೆ. ಮಾನವ ಶಾಸ್ತ್ರ ಮತ್ತು ಭೌತಿಕ ಶಾಸ್ತ್ರ ಭಾಷೆಯಲ್ಲಿ ಮೈದಾಳಲು ಕಾಯುತ್ತಿವೆ.

ಇಂಗ್ಲಿಷ್ ಕಲಿಯುವ ಮುನ್ನ ನಮ್ಮಲ್ಲಿ ವ್ಯಕ್ತಿ ಸಮಾಜದ ಅವಿಭಾಜ್ಯ ಅಂಗವಾಗಿದ್ದ. ಸಮಾಜ ಕಾಯ್ದುಕೊಂಡು ಬಂದ ಪರಂಪರೆಯನ್ನು ಅನುಸರಿಸುತ್ತಿದ್ದ. ಪರಂಪರೆಯೆಂದರೆ ಸಮಾಜದ ಶರೀರದಲ್ಲಿ ಹರಿಯುವ ರಕ್ತವಿದ್ದಂತೆ. ಆದ್ದರಿಂದ ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಬೆಳಗುವ ಪರಂಪರೆ ಒಂದೇ ಆಗಿತ್ತು ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತಗಳು ಕೃತಿಯಿಂದ ಸ್ಫೂರ್ತಿ ಪಡೆದವರು ಭಾವಗೀತೆಯನ್ನು ಸ್ಥಳೀಕರಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದರು. ಕನ್ನಡ ಸಾಹಿತ್ಯ ಈಗಲೂ ಸಮೃದ್ಧವಾಗಿ ಮುಂದುವರಿದು ಬೇರೆ ಭಾಷೆಗಳ ಮೇಲೂ ಪ್ರಭಾವ ಬೀರಿದ್ದು ಈಗಿನ ಕತೆ.

ಎರಡು ಕರ್ನಾಟಕ ಬೇಕೆನ್ನುವ ಮಹಾನುಭಾವರಿದ್ದಾರೆ. ಒಂದೇ ಜಿಲ್ಲೆಯನ್ನು ಎರಡಾಗಿ ಒಡೆಯಬೇಕೆಂಬವರೂ ಇದ್ದಾರೆ. ಅನೇಕ ಕರ್ನಾಟಕಗಳು ಒಂದಾಗುವುದಕ್ಕೇ ಏನೇನಾಯಿತೆಂದು ಕೊಂಚ ನೆನಪು ಮಾಡಿಕೊಳ್ಳೋಣ. ಒಂದಿರುವ ಜಿಲ್ಲೆಯನ್ನು ಎರಡು ಮಾಡಿ ಇಡೀ ಜಿಲ್ಲೆಯನ್ನು ಕಳೆದುಕೊಳ್ಳದಿರೋಣ. ಕರ್ನಾಟಕವಾಗಿ ಎಪ್ಪತ್ತು ವರ್ಷಗಳಾದರೂ ಒಂದು ಆಡಳಿತ ಭಾಷೆಯನ್ನು ನೂರಾರು ಸರಕಾರೀ ಆಜ್ಞೆಗಳನ್ನು ಹೊರಡಿಸಿದರೂ ತರಲಾಗದೆ ಕೈಸೋತು ಕೂತಿದ್ದೇವೆ. ಸಾಲದೆ? ಬ್ರಿಟಿಷರು ಕೊಟ್ಟ ಇಂಗ್ಲಿಷನ್ನೇ ಈಗಲೂ ತಿದ್ದುತ್ತ ಕೂತಿದ್ದೇವೆ.

ಕನ್ನಡಿಗರ ಸಾಮುದಾಯಿಕ ಹರವು ಈಗ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ವಿಶ್ವವ್ಯಾಪಿಯಾಗಿದೆ. ನೃಪತುಂಗನ ಕಾಲದಲ್ಲಿ ಕಾವೇರಿ ಮತ್ತು ಗೋದಾವರಿಗಳ ನಡುನೆಲವೆಂದು ಕವಿರಾಜಮಾರ್ಗದಲ್ಲಿ ಗುರುತಿಸಲಾಗಿತ್ತು. ಆ ನಂತರದ ಕಾಲದಲ್ಲಿ ಕರ್ನಾಟಕ ಮೂಲದ ಜನರು ಕರ್ನಾಟಕದ ಹೊರಗೆ ಸಂಚರಿಸಿ, ನೆಲಸಿ, ರಚಿಸಿ ಕನ್ನಡದ ಕಂಪನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಸರಿಸಿದರು. ಉದಾ: ಕನ್ನಡ ಮೂಲದ ವಚನ ಸಂಸ್ಕೃತಿಯ ಪ್ರಭಾವವಾಗದೆ ಹೋಗಿದ್ದರೆ ಪಾಲ್ಕುರಿಕೆ ಸೋಮನಾಥನೆಂಬ ಕವಿ ತೆಲುಗು ನಾಡು ನುಡಿಗಳಿಗೆ ದೊರೆಯುತ್ತಿರಲಿಲ್ಲ. ಮತ್ತು ಆ ಭಾಷೆಯಲ್ಲಿ ಹೊಸ ಬಗೆಯ ಕಾವ್ಯವೊಂದು ಉದಿಸುತ್ತಿರಲಿಲ್ಲ. ತೆಲುಗಿನ ವೇಮನನೂ ಕನ್ನಡದ ಶರಣ ಚಿಂತನೆಯಿಂದ ಪ್ರೇರಿತನಾದವನು.

ಚೀನಾ ದೇಶಕ್ಕೆ ಬೌದ್ಧ ಧರ್ಮವನ್ನು ಕೊಂಡೊಯ್ದ, ಇಡೀ ಪೂರ್ವೇಷಿಯಾದ ಸಂಸ್ಕೃತಿಯಲ್ಲಿ ಮೂಲಭೂತ ಬದಲಾವಣೆಯನ್ನುಂಟು ಮಾಡಿದ ಬೋಧಿಧರ್ಮ ನಮ್ಮ ಕಡಲ ತೀರದ ಹೊನ್ನಾವರದವನೆಂಬ ಐತಿಹ್ಯವಿದೆ. ಕನ್ನಡದ ತವನಿಧಿ ವಚನ ಸಾಹಿತ್ಯ ಇಂಗ್ಲಿಷಿಗೆ ಅನುವಾದವಾದ ಮೇಲೆ ಇಡೀ ಪ್ರಪಂಚದ ಓದುಗರನ್ನು ಸೆಳೆಯುತ್ತಿದೆ. ಕನ್ನಡದ ಹೆಚ್ಚು ಹೆಚ್ಚು ಕೃತಿಗಳು ಅನುವಾದವಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಸಾರಸ್ವತ ಲೋಕದ ಬಗೆಗಿನ ಗೌರವ ಜಗತ್ತಿನ ಕಣ್ಣಿನಲ್ಲಿ ಇನ್ನೂ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಹೀಗೆ ಕನ್ನಡ ಭಾಷಿಕರು ಮತ್ತು ಅವರ ಸಂಸ್ಕೃತಿ ಕಾವೇರಿ ಗೋದಾವರಿಗಳ ಸೀಮೆ ದಾಟಿ ಇಡೀ ಭಾರತವನ್ನು ವ್ಯಾಪಿಸಿ ಕಡಲುಗಳಾಚೆಯೂ ಹರಡಿ ಕನ್ನಡವನ್ನು ವಿಶ್ವಭಾಷೆ, ವಿಶ್ವಸಂಸ್ಕೃತಿಗಳಾಗಿಸುತ್ತಿವೆ. ನಮ್ಮ ಬದುಕಿಗೆ ಕನ್ನಡ ಭಾಷೆಯೊಂದೇ ಜೀವ, ಜೀವನ, ಪರಂಪರೆ ಮತ್ತು ಸಂಸ್ಕೃತಿ.

ಒಂದು ಕುಟುಂಬದ ಜೀವನಕ್ಕಾಗಿ ನಿರ್ಮಿತವಾದ ಮನೆಗೆ ಗೋಡೆಗಳಿರುತ್ತವೆ. ಎರಡು ಬಾಗಿಲುಗಳೂ ಇರುತ್ತವೆ. ಗೋಡೆಗಳು ನಮ್ಮನ್ನು ಪ್ರಪಂಚದಿಂದ ಬೇರ್ಪಡಿಸುತ್ತವೆ ಮತ್ತು ಕಾಪಾಡುತ್ತವೆ. ಬಾಗಿಲುಗಳು ಹೊರಗಿನ ಪ್ರಪಂಚದೊಡನೆ ಸಂಪರ್ಕ ಸಾಧಿಸಲು ಅನುಕೂಲ ಕಲ್ಪಿಸುತ್ತವೆ. ಈಗಿನ ನಮ್ಮ ಮನೆಯ ಗೋಡೆ ಒಡೆದು ಇರುವ ಬಾಗಿಲುಗಳಿಗೆ ಇನ್ನಷ್ಟು ಬಾಗಿಲು ಹಚ್ಚಿ ಬಯಲು ಮಾಡುವುದು ಬೇಡವೆಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.

ಈ ಗೌರವದ ಸ್ಥಾನಕ್ಕೆ ನನ್ನನ್ನು ಆರಿಸಿ ಆಶೀರ್ವದಿಸಿದ್ದಕ್ಕೆ ನನ್ನೆಲ್ಲ ಪೂಜ್ಯ ಹಿರಿಯರಿಗೆ ಸಹೋದರ ಸಹೋದರಿಯರಿಗೆ, ಈವರೆಗೆ ನನ್ನ ಮಾತುಗಳನ್ನು ಶಾಂತರೀತಿಯಿಂದ ಆಲಿಸಿದ್ದಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತೇನೆ.

-ನಮಸ್ಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.