ADVERTISEMENT

ಧಾರವಾಡ | ಶಾಲಾ ಪ್ರಾರಂಭೋತ್ಸವ: ಜಿಲ್ಲಾಧಿಕಾರಿಯಿಂದ ಪಾಠ

​ಪ್ರಜಾವಾಣಿ ವಾರ್ತೆ
Published 31 ಮೇ 2024, 23:53 IST
Last Updated 31 ಮೇ 2024, 23:53 IST
   

ಧಾರವಾಡ: ನಗರದ ಸರ್ಕಾರಿ ಮಾದರಿ ಪ್ರಾಯೋಗಿಕ ಉರ್ದು ಮತ್ತು ಕನ್ನಡ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆ‌ರ್‌.ಜೆ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.

8ನೇ ತರಗತಿಯ ಇಂಗ್ಲಿಷ್‌ ಪಠ್ಯಪುಸ್ತಕದ ‘ದಿ ಸ್ವಾನ್‌ ಅಂಡ್‌ ದಿ ಪ್ರಿನ್ಸಸ್‌’ ಜನಪದ ನಾಟಕವನ್ನು ಬೋಧಿಸಿದರು. ಐವರು ವಿದ್ಯಾರ್ಥಿನಿಯರನ್ನು ನಾಟಕದ ಪಾತ್ರವರ್ಗದಲ್ಲಿ (ರಾಜ, ಮಂತ್ರಿ...) ಪರಿಚಯಿಸಿ ಕತೆ ವಿವರಿಸಿದರು. 30 ನಿಮಿಷ ಅವರು ಶಿಕ್ಷಕಿಯಾಗಿ ಪಾಠ ಮಾಡಿ, ಸರಳವಾಗಿ ವಿವರಿಸಿದರು.

ಕಪ್ಪು ಹಲಗೆ ಮೇಲೆ ಪದಗಳನ್ನು ಬರೆದು ಮಕ್ಕಳಿಗೆ ವಿವರಿಸಿದರು. ಪಾಠದ ಪ್ರತಿ ಸಾಲಿನ ಪದಗಳಿಗೆ (ಥ್ರೋನ್‌– ಸಿಂಹಾಸನ, ಪರ್ ಹ್ಯಾಪ್ಸ್‌– ಬಹುಶಃ...) ಕನ್ನಡ ಅರ್ಥ ತಿಳಿಸಿದರು.

ADVERTISEMENT

ಪಾಠಕ್ಕೆ ಪೂರಕವಾಗಿ ಹಾಸ್ಯ ಪ್ರಸಂಗಗಳನ್ನು ಹೇಳಿದರು. ಪಾಠ ಗಮನವಿಟ್ಟು ಓದಿ, ವಿಷಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿ ಹೇಳಿದರು.

ನಂತರ ಅವರು ವಿದ್ಯಾರ್ಥಿನಿಯೊಬ್ಬರಿಂದ ಪಾಠದ ಒಂದು ಪ್ಯಾರಾವನ್ನು ಓದಿಸಿದರು.

‘ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಕಲಿಕೆ, ಬೋಧನೆಗೆ ಪ್ರೇರೇಪಿಸಲು ಪಾಠ ಮಾಡಿದೆ. ಶಾಲೆಯಲ್ಲಿ ಜಿಲ್ಲಾಧಿಕಾರಿ ಪಾಠ ಮಾಡಿದ್ದನ್ನು ಮಕ್ಕಳು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಬಾಲಕಿಯರಿಗೆ ಪಾಠ ಮಾಡಿದ್ದು ತುಂಬಾ ಖುಷಿ ನೀಡಿತು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.