ADVERTISEMENT

ಸೀಗೆ ಹುಣ್ಣಿಮೆ: ರೈತರಲ್ಲಿ ಸಂಭ್ರಮ

ಭೂತಾಯಿಗೆ ಚರಗ ಚೆಲ್ಲುವ ಆಚರಣೆ ನಾಳೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 5:55 IST
Last Updated 16 ಅಕ್ಟೋಬರ್ 2024, 5:55 IST
ಉಪ್ಪಿನಬೆಟಗೇರಿಯ ಹೊಲವೊಂದರಲ್ಲಿ ರೈತಾಪಿ ಕುಟುಂಬದ ಸದಸ್ಯರು ಶೀಗೆ ಹುಣ್ಣಿಮೆಯಂದು ಬನ್ನಿ ಮರದ ಕೆಳಗೆ ಕಲ್ಲುಗಳನ್ನಿಟ್ಟು ಪೂಜೆ ಸಲ್ಲಿಸಿದರು (ಸಂಗ್ರಹ ಚಿತ್ರ)
ಉಪ್ಪಿನಬೆಟಗೇರಿಯ ಹೊಲವೊಂದರಲ್ಲಿ ರೈತಾಪಿ ಕುಟುಂಬದ ಸದಸ್ಯರು ಶೀಗೆ ಹುಣ್ಣಿಮೆಯಂದು ಬನ್ನಿ ಮರದ ಕೆಳಗೆ ಕಲ್ಲುಗಳನ್ನಿಟ್ಟು ಪೂಜೆ ಸಲ್ಲಿಸಿದರು (ಸಂಗ್ರಹ ಚಿತ್ರ)   

ಉಪ್ಪಿನಬೆಟಗೇರಿ: ಸೀಗೆ ಹುಣ್ಣಿಮೆ ಹಬ್ಬ ಎಂದರೆ ಉತ್ತರ ಕರ್ನಾಟಕದ ರೈತರ ಕುಟುಂಬಗಳಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿರುತ್ತದೆ. ಸಂದು ಕಂಬಳಿ ಹೊದ್ದು, ತಲೆ ಮೇಲೆ ಬಿದಿರಿನ ಬುಟ್ಟಿಯಲ್ಲಿ ಕರಿದ ಖಾದ್ಯ, ತಿಂಡಿ ತಿನಿಸು, ಪೂಜಾ ಸಾಮಗ್ರಿ ಇಟ್ಟುಕೊಂಡು ಹೋಗುವುದು ಸಾಮಾನ್ಯ ಚಿತ್ರಣ.

ಕೆಲ ರೈತರು ಎತ್ತಿನ ಬಂಡಿಯಲ್ಲಿ ಸಾಗಿದರೆ, ಮತ್ತೆ ಕೆಲವರು ಸೈಕಲ್, ದ್ವಿಚಕ್ರ ವಾಹನ, ಟ್ರ‍್ಯಾಕ್ಟರ್, ಕಾರು ಇನ್ನಿತರೆ ವಾಹನದಲ್ಲಿ ಹೊಲಕ್ಕೆ ತೆರಳುತ್ತಾರೆ.

ಗ್ರಾಮೀಣ ಭಾಗದಲ್ಲಿ ಅ.17ರಂದು ಸೀಗೆ ಹುಣ್ಣಿಮೆ ಹಬ್ಬ ಆಚರಿಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಪ್ಪಿನಬೆಟಗೇರಿ ಸೇರಿದಂತೆ ಸುತ್ತಲಿನ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಲಾಗುತ್ತದೆ.

ADVERTISEMENT

ಹಬ್ಬದಂದು ಹೊಲಗಳಿಗೆ ತೆರಳಿ ಬನ್ನಿ ಮರದ ಪಕ್ಕ ಐದು ಕಲ್ಲುಗಳನ್ನು ಇಟ್ಟು ಅವುಗಳಿಗೆ ವಿಭೂತಿ, ಕುಂಕುಮ, ಭಂಡಾರ, ಹಚ್ಚಿ ಹೂ ಮುಡಿಸಿ, ಹಂಗನೂಲ ತೊಡಿಸಿ, ಎಲೆ ಅಡಿಕೆ, ಜೋಳದ ದಂಟು ಇಟ್ಟು ಪೂಜೆ ಮಾಡುತ್ತಾರೆ. ವಿಶೇಷ ಖಾದ್ಯಗಳ ನೈವೇದ್ಯ ಅರ್ಪಿಸಲಾಗುತ್ತದೆ. ಹೊಲದ ತುಂಬ ‘ಹುಲಗೋ ಸುರಾಂಬ್ಲೋ’ ಎನ್ನುತ್ತ ಚರಗ ಚೆಲ್ಲಲಾಗುತ್ತದೆ. ನಂತರ ಎಲ್ಲರೂ ಕುಳಿತು ಭೋಜನ ಸವಿಯುತ್ತಾರೆ.

ಭೂತಾಯಿಯ ಸೀಮಂತ ಕಾರ್ಯಕ್ಕೆ ಜೋಳದ ಕಡುಬು, ವಡೆ, ಮೊಸರು, ಪುಂಡಿಪಲ್ಯೆ, ಕಾಳಿನ ಪಲ್ಯೆ, ಮೆಣಸಿನಕಾಯಿ, ಚಟ್ನಿ, ಮೊಸರು, ಚಿತ್ರಾನ್ನ, ಹುರಕ್ಕಿ ಹೋಳಿಗೆ, ಚಕ್ಕುಲಿ, ಕೋಡುಬಳೆ, ಚಪಾತಿ, ಶೇಂಗಾಚಟ್ನಿ, ಕುಂಬಳ ಪಲ್ಯೆ, ಬದನೆ ಪಲ್ಯೆ, ಚವಳಿ ಪಲ್ಯೆ, ಅನ್ನದ ಬಾನ, ಮಡಿಕೆಕಾಳು ಪಲ್ಯೆ, ಕಿಚಡಿ ತಯಾರಿಸಿ ಎಡೆ ಹಿಡಿದು ಚರಗ ಚೆಲ್ಲುವುದು ವಿಶೇಷ.

ಗ್ರಾಮೀಣ ಭಾಗದಲ್ಲಿ ಸೀಗೆ ಹುಣ್ಣಿಮೆಯನ್ನು ಹಿಂದೂ‍–ಮುಸ್ಲಿಮರು ಒಟ್ಟಾಗಿ ಆಚರಿಸುತ್ತಾರೆ. ಭೋಜನ ಸವಿದ ನಂತರ ಹಿರಿಯರು ತಾಂಬೂಲ ತಿನ್ನುತ್ತ ಮರದ ನೆರಳಲ್ಲಿ ವಿಶ್ರಾಂತಿ ಪಡೆದರೆ, ಮಹಿಳೆಯರು ಹಾಡಿನ ಬಂಡಿ ಕಟ್ಟಿ ಹಾಡುತ್ತಾರೆ. ಮಕ್ಕಳು, ಯುವಕರು ಗಾಳಿಪಟ ಹಾರಿಸಿ ಸಂಭ್ರಮಿಸುತ್ತಾರೆ.

ಸೀಗೆ ಹುಣ್ಣಿಮೆಯಂದು ರೈತಾಪಿ ಜನರು ಭೂತಾಯಿಗೆ ಚರಗ ಚೆಲ್ಲುವ ಸಂಪ್ರದಾಯವಿದೆ. ಇದರಿಂದ ಉತ್ತಮ ಮಳೆ ಸಮೃದ್ಧ ಬೆಳೆ ಬರುತ್ತದೆ ಎಂಬ ನಂಬಿಕೆ ಇದೆ
ಕುಮಾರ ವಿರೂಪಾಕ್ಷ ಸ್ವಾಮೀಜಿ, ಮೂರುಸಾವಿರ ವಿರಕ್ತಮಠ ಉಪ್ಪಿನಬೆಟಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.