ಧಾರವಾಡ: ಮತದಾರರ ಜಾಗೃತಿಗಾಗಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ ಗುರುವಾರ ನಗರದ ಕರ್ನಾಟಕ ಕಾಲೇಜು ಮಹಾದ್ವಾರದ ಬಳಿ ನಿರ್ಮಿಸಿರುವ ಮತದಾರ ಜಾಗೃತಿ ಸಂದೇಶ ಸಾರುವ ಮರಳು ಶಿಲ್ಪ ನಿರ್ಮಿಸಿ ಆಕರ್ಷಕ ಸೆಲ್ಫಿ ತೆಗೆಸಿಕೊಳ್ಳಲು ಆಹ್ವಾನಿಸಿತ್ತು.
ವಿದ್ಯಾರ್ಥಿಗಳು, ಯುವಜನರನ್ನೂ ಸೇರಿದಂತೆ ಹಲವರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಅಧಿಕಾರಿಗಳು, ಹಿರಿಯ ನಾಗರಿಕರೂ ಶಿಲ್ಪದೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಸ್ಥಳೀಯ ಕಲಾವಿದ ಮಂಜುನಾಥ ಹಿರೇಮಠ ಹಾಗೂ ಅವರ ಪುತ್ರ ಕಾಂತೇಶ ನಿರ್ಮಿಸಿರುವ ಮರಳು ಶಿಲ್ಪ ಕಲಾಕೃತಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಸತೀಶ ಲೋಕಾರ್ಪಣೆಗೊಳಿಸಿದರು.
ದೀಪಾ ಚೋಳನ್ ಅವರು ಸ್ಥಳೀಯ ಮಹಿಳೆಯರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಶ್ರೇಯಾ ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಮುಖದ ಮೇಲೆ ‘ಐ ವಿಲ್ ವೋಟ್ ಆನ್ ಏ.23’ ಎಂದು ಬರೆದುಕೊಂಡು ಎಲ್ಲರ ಗಮನ ಸೆಳೆದರು.
ಶಿಕ್ಷಕರಾದ ಎಫ್.ಬಿ. ಕಣವಿ, ಕೀರ್ತಿವತಿ ಮತ್ತು ತಂಡದವರ ಚುನಾವಣಾ ಗೀತೆಗಳು ಹಾಡಿದರು. ಈ ಮರಳು ಶಿಲ್ಪ ಕರ್ನಾಟಕ ಕಾಲೇಜು ಪ್ರವೇಶ ದ್ವಾರದ ಬಳಿಯೇ ಸ್ಥಾಪಿಸಲಾಗಿದ್ದು, ಮುಂದಿನ ಮೂರು ದಿನಗಳವರೆಗೆ ಇರಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ, ತೋಟಗಾರಿಕೆ ಉಪನಿರ್ದೇಶಕ ಡಾ. ರಾಮಚಂದ್ರ ಮಡಿವಾಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಸ್ವೀಪ್ ಸಮಿತಿಯ ಕೆ.ಎಂ. ಶೇಖ್, ಡಾ. ಆರ್.ಬಿ. ಸೋನೇಖಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.