ADVERTISEMENT

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳು

ಸಾರಸ್ವತಪುರದ ಶಾಂತದುರ್ಗ ಅಪಾರ್ಟ್‌ಮೆಂಟ್‌ನಲ್ಲಿರುವ 40ಕ್ಕೂ ಹೆಚ್ಚು ಕುಟುಂಬಗಳ ಗೋಳು

ಶಿವಕುಮಾರ ಹಳ್ಯಾಳ
Published 17 ಜುಲೈ 2019, 20:10 IST
Last Updated 17 ಜುಲೈ 2019, 20:10 IST
ಸಾಂತದುರ್ಗಾ ಅಪಾರ್ಟ್‌ಮೆಂಟ್‌ ಮುಂಭಾಗದಲ್ಲಿ ತುಂಬಿಕೊಂಡಿರುವ ಕೊಳಚೆ ನೀರು 
ಸಾಂತದುರ್ಗಾ ಅಪಾರ್ಟ್‌ಮೆಂಟ್‌ ಮುಂಭಾಗದಲ್ಲಿ ತುಂಬಿಕೊಂಡಿರುವ ಕೊಳಚೆ ನೀರು    

ಧಾರವಾಡ: ಸಾರಸ್ವತಪುರ ಬಡಾವಣೆಯಲ್ಲಿರುವ ಶಾಂತದುರ್ಗಾ ಅಪಾರ್ಟ್‌ಮೆಂಟ್‌ ಒಳಗೆ ಕೊಳಚೆ ನೀರು ಸೇರುತ್ತಿರುವುದರಿಂದ, ಅಲ್ಲಿನ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.

ಕಳೆದ ಎರಡು ತಿಂಗಳುಗಳಿಂದ ಶಾಂತದುರ್ಗಾ ಅಪಾರ್ಟ್‌ಮೆಂಟ್‌ ಒಳಗೆ ಕೊಳಚೆ ನೀರು ನುಗ್ಗುತ್ತಿದೆ. ಇದರಿಂದಾಗಿ ಅಕ್ಷರಶಾಃ ಕೊಳಚೆ ಪ್ರದೇಶವಾಗಿ ಇದು ಮಾರ್ಪಟ್ಟಿದೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ 40 ಮನೆಗಳಿವೆ. ಇಲ್ಲಿ ವಾಸವಿರುವ ಅಷ್ಟೂ ಕುಟುಂಬಗಳ ನಿತ್ಯದ ಜೀವನ ನರಕವಾಗಿದೆ.

‘ಸಾರಸ್ವತಪುರ ಎತ್ತರದ ಪ್ರದೇಶದಲ್ಲಿದೆ. ತಾವು ವಾಸವಿರುವ ಶಾಂತದುರ್ಗಾ ಅಪಾರ್ಟ್‌ಮೆಂಟ್‌ ತಗ್ಗಿನಲ್ಲಿದೆ. ಅಪಾರ್ಟ್‌ಮೆಂಟ್‌ ಹಿಂಭಾಗದಲ್ಲಿರುವ ಪ್ರತಿಮಾ ಅಪಾರ್ಟ್‌ಮೆಂಟ್‌ನ ಕೊಳಚೆ ನೀರು ತಮ್ಮ ಅಪಾರ್ಟ್‌ಮೆಂಟ್‌ಗೆ ಬಂದು ಸೇರುತ್ತದೆ. ಇದರಿಂದ ಇಲ್ಲಿನ ಪಾರ್ಕಿಂಗ್‌ ಸ್ಥಳದಲ್ಲಿ ಕೊಳಚೆ ನೀರುತುಂಬಿ ತುಳುಕುತ್ತದೆ. ಹೀಗಾಗಿ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ’ ಎಂದು ನಿವಾಸಿ ಎಸ್‌.ಎಂ. ಉದಯಶಂಕರ ಸಮಸ್ಯೆ ಬಿಚ್ಚಿಟ್ಟರು.

ADVERTISEMENT

‘ಪಾರ್ಕಿಂಗ್‌ ಸ್ಥಳದಲ್ಲಿಯೇ ಲಿಫ್ಟ್‌ ಇರುವುದರಿಂದ, ಅದರೊಳಗೂ ಕೊಳಚೆ ನೀರು ತುಂಬಿಕೊಳ್ಳುತ್ತದೆ. ಈ ನೀರನ್ನು ಹೊರಕ್ಕೆ ಹಾಕಲು ಒಂದು ಟ್ಯಾಂಕ್ ನಿರ್ಮಿಸಿದ್ದೇವೆ. ಅದು ತುಂಬುತ್ತಿದ್ದಂತೆ, ಪಂಪ್‌ನಿಂದ ನೀರನ್ನು ಹೊರಕ್ಕೆ ಹಾಕಲಾಗುತ್ತಿದೆ’ ಎಂದು ಉದಯಶಂಕರ ತಿಳಿಸಿದರು.

‘ಕಳೆದ ಎರಡು ವರ್ಷಗಳಿಂದ ಇಲ್ಲಿನ ನಿವಾಸಿಗಳು ಈ ತೊಂದರೆ ಅನುಭವಿಸುತ್ತಿದ್ದೇವೆ. ಈ ಕುರಿತು ಪಾಲಿಕೆ ಆಯುಕ್ತರಿಗೂ ಮನವಿ ಸಲ್ಲಿಸಿದ್ದೇವೆ. ಜತೆಗೆ ಹಿಂದಿನ ಪ್ರತಿಮಾ ಅಪಾರ್ಟ್‌ಮೆಂಟ್‌ನವರಿಗೂ ತಿಳಿಸಿದ್ದೇವೆ. ಆದರೆ, ಯಾರೊಬ್ಬರು ಈ ಸಮಸ್ಯೆ ಕುರಿತು ಸ್ಪಂದಿಸಿಲ್ಲ. ಪಾರ್ಕಿಂಗ್‌ ಸ್ಥಳದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಇದೀಗ ಅಲ್ಲಿ ಕೊಳಚೆ ನೀರು ಬಂದು ತುಂಬಿಕೊಳ್ಳುತ್ತಿರುವುದರಿಂದ ಮಕ್ಕಳಿಗೆ ಆಡಲೂ ಸ್ಥಳಾವಿಲ್ಲದಂತಾಗಿದೆ’ ಎಂದು ಗೋಳಿಟ್ಟರು.

ಇದೇ ಅಪಾರ್ಟ್‌ಮೆಂಟ್ ನಿವಾಸಿ ಸುಧೀರ್ ಕದಂಡ ಪ್ರತಿಕ್ರಿಯಿಸಿ,‘ಕಳೆದ ಐದು ವರ್ಷಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದೇನೆ. ಈ ಹಿಂದೆ ಇಲ್ಲಿ ಯಾವುದೇ ತೊಂದರೆ ಇರಲಿಲ್ಲ. ಎರಡು ವರ್ಷಗಳಿ ಹಿಂದೆ ಅಪಾರ್ಟ್‌ಮೆಂಟ್‌ ಹಿಂಭಾಗದಲ್ಲಿ ಪ್ರತಿಮಾ ಅಪಾರ್ಟ್‌ಮೆಂಟ್‌ ನಿರ್ಮಾಣವಾದ ಮೇಲೆ ಈ ತೊಂದರೆ ಎದುರಾಗಿದೆ. ಅಲ್ಲಿ ಅವರು ನೀರು ಹರಿದು ಹೋಗಲು ಒಳಚರಂಡಿಗೆ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಅದು ನಮಗೆ ಸಮಸ್ಯೆಯಾಗಿ ಪರಿಣಮಿಸಿದೆ. ಅಲ್ಲಿನ ನಿವಾಸಿಗಳಿಗೆ ಹೇಳಿದರೆ, ಅಪಾರ್ಟ್‌ಮೆಂಟ್ ಮಾಲೀಕರ ಗಮನಕ್ಕೆ ತರುತ್ತೇವೆ ಎನ್ನುತ್ತಿದ್ದಾರೆಯೇ ಹೊರತು, ಅದರ ದುರಸ್ತಿ ಆಗಿಲ್ಲ’ ಎಂದರು.

ಅರವಿಂದ ಶಾನಭಾಗ್ ಪ್ರತಿಕ್ರಿಯಿಸಿ,‘ಇದೀಗ ನಿವಾಸಿಗಳೇ ಸೇರಿಕೊಂಡು ₹70 ಸಾವಿರ ಹಣ ಸಂಗ್ರಹಿಸಿ ಚರಂಡಿ ನೀರು ಹರಿದುಹೋಗಲು ಚರಂಡಿ ನಿರ್ಮಿಸುತ್ತಿದ್ದೇವೆ. ಇದು ತಾತ್ಕಾಲಿಕ ಪರಿಹಾರವಷ್ಟೇ. ಆದರೆ ಈ ನಿವಾಸಿಗಳಿಗೂ ಬದುಕಲು ಹಕ್ಕು ಇದೆ ಎಂದು ಅರಿತು ಪಾಲಿಕೆಯವರು ಸಮಸ್ಯೆ ಸರಿಪಡಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.