ADVERTISEMENT

ಶತ್ರು ಭೈರವಿ ಯಾಗ, ಹೋಮ–ಹವನ ಮಾಡಿಸುವುದರಲ್ಲಿ ಡಿಕೆಶಿ ಪರಿಣತ: ಶೆಟ್ಟರ್‌ ಲೇವಡಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 14:38 IST
Last Updated 2 ಜೂನ್ 2024, 14:38 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ‘ಶತ್ರು ಭೈರವಿ ಯಾಗ, ಹೋಮ–ಹವನ ಇವುಗಳನ್ನು ಮಾಡಿಸುವುದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೆಚ್ಚು ಪರಿಣತರಿದ್ದಾರೆ. ಆ ತಾಕತ್‌ ಅವರಿಗಿದೆ’ ಎಂದು ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಲೇವಡಿ ಮಾಡಿದರು.  

‘ಯಾಗ ಹಾಗೂ ಹೋಮ–ಹವನ ಮಾಡಿಸುವುದರಿಂದ ಯಾರ ವಿನಾಶವೂ ಆಗಲ್ಲ. ಒಂದು ವೇಳೆ ಆಗುವುದಿದ್ದರೆ ಎಲ್ಲರೂ ನಿತ್ಯ ಅದನ್ನೇ ಮಾಡಿಸುತ್ತಿದ್ದರು. ಇದೆಲ್ಲಾ ಸುಳ್ಳು. ಇದರಲ್ಲಿ ನನಗೆ ನಂಬಿಕೆಯೂ ಇಲ್ಲ. ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಯಾರಾದರೂ ಮಾಡಿಸಿದ್ದರೆ, ಅದಕ್ಕೆ ಪ್ರತಿಯಾಗಿ ಶಿವಕುಮಾರ್ ಅಂತಹದ್ದೇ ಯಾಗ ಮಾಡಿಸಬಲ್ಲರು. ಈ ಹಿಂದೆ ಬೆಳಿಗ್ಗೆ 4 ಗಂಟೆಗೆ ಹೋಗಿ ಅವರು ಯಾಗ ಮಾಡಿಸಿದ್ದೂ ಇದೆ’ ಎಂದು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ಅವರ ತಪ್ಪಿನಿಂದಲೇ ರಾಜ್ಯ ಸರ್ಕಾರ ಪತನ:

ADVERTISEMENT

‘ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಗರಣಗಳು, ಕಾಂಗ್ರೆಸ್‌ ನಾಯಕರ ಒಳ ಜಗಳ ಹಾಗೂ ಅವರ ತಪ್ಪಿನಿಂದಲೇ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಪತನವಾಗಲಿದೆ’ ಎಂದು ಶೆಟ್ಟರ್‌ ಅಭಿಪ್ರಾಯಪಟ್ಟರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸಚಿವ ಬಿ.ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಬೇಕು’ ಎಂದೂ ಆಗ್ರಹಿಸಿದರು.

ಈ ಪ್ರಕರಣದ ಕುರಿತಂತೆ ಪ್ರತಿಕ್ರಿಯಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಯಾವುದೇ ಸಂಬಂಧವಿಲ್ಲದ ಒಂಬತ್ತು ಕಂಪನಿಗಳಿಗೆ ಹಣ ವರ್ಗಾಯಿಸಲಾಗಿದೆ. ಸಂಬಂಧಿಸಿದಂತೆ ಈವರೆಗೂ ಸಚಿವರ ರಾಜೀನಾಮೆ ಪಡೆದಿಲ್ಲ. ಮೊದಲು ಸಚಿವರ ರಾಜೀನಾಮೆ ಪಡೆದು ಬಂಧಿಸಿ, ಸಿಬಿಐ ತನಿಖೆಗೆ ಒಪ್ಪಿಸಬೇಕು. ಆಗ ಹಗರಣದಲ್ಲಿ ಯಾರ‍್ಯಾರು ಇದ್ದಾರೆ ಎನ್ನುವ ಸತ್ಯಾಂಶ ಬಹಿರಂಗವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.