ADVERTISEMENT

ಧಾರವಾಡದಲ್ಲಿ ತಯಾರಾಗಲಿದೆ ಸ್ಪುಟ್ನಿಕ್ ವಿ ಕೋವಿಡ್–19 ಲಸಿಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 19:30 IST
Last Updated 17 ಮೇ 2021, 19:30 IST
ಸ್ಪುಟ್ನಿಕ್ ವಿ ಲಸಿಕೆ
ಸ್ಪುಟ್ನಿಕ್ ವಿ ಲಸಿಕೆ   

ಬೆಂಗಳೂರು/ಹುಬ್ಬಳ್ಳಿ: ರಷ್ಯಾದಲ್ಲಿ ಅಭಿವೃದ್ಧಿಪಡಿಸಲಾಗಿರುವ ಸ್ಪುಟ್ನಿಕ್–ವಿ ಲಸಿಕೆಗಳನ್ನು ಶಿಲ್ಪಾ ಮೆಡಿಕೇರ್‌ ಲಿಮಿಟೆಡ್ (ಎಸ್‌ಎಂಎಲ್‌) ಕಂಪನಿಯು ಧಾರವಾಡದಲ್ಲಿ ತಯಾರಿಸಲಿದೆ. ಈ ವಿಚಾರವಾಗಿ ಕಂಪನಿಯು ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಜೊತೆ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ.

ರಾಯಚೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಶಿಲ್ಪಾ ಮೆಡಿಕೇರ್ ಲಿಮಿಟೆಡ್‌ ಕಂಪನಿಯು, ಧಾರವಾಡದಲ್ಲಿನ ತನ್ನ ಘಟಕದಲ್ಲಿ, ತನ್ನ ಅಂಗಸಂಸ್ಥೆಯಾದ ಶಿಲ್ಪಾ ಬಯಾಲಾಜಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮೂಲಕ ಲಸಿಕೆಯನ್ನು ತಯಾರಿಸಲಿದೆ. ಡಾ ರೆಡ್ಡೀಸ್ ಕಂಪನಿಯು ಸ್ಪುಟ್ನಿಕ್ ಲಸಿಕೆ ತಯಾರಿಕೆಗೆ ಅಗತ್ಯವಿರುವ ತಂತ್ರಜ್ಞಾನವನ್ನು ಶಿಲ್ಪಾ ಬಯಾಲಾಜಿಕಲ್ ಕಂಪನಿಗೆ ವರ್ಗಾವಣೆ ಮಾಡಲಿದೆ.

ಕಂಪನಿಗಳ ನಡುವೆ ಆಗಿರುವ ಒಪ್ಪಂದದ ಅನ್ವಯ, ಲಸಿಕೆಯನ್ನು ತಯಾರಿಸಿ ಕೊಡುವ ಹೊಣೆ ಶಿಲ್ಪಾ ಬಯಾಲಾಜಿಕಲ್‌ನದ್ದು. ಲಸಿಕೆಯ ವಿತರಣೆ ಹಾಗೂ ಮಾರಾಟದ ಹೊಣೆ ಡಾ ರೆಡ್ಡೀಸ್ ಕಂಪನಿಯದ್ದು. ಮುಂದಿನ ದಿನಗಳಲ್ಲಿ ಎರಡೂ ಕಂಪನಿಗಳು ಒಟ್ಟಾಗಿ ‘ಸ್ಪುಟ್ನಿಕ್ ಲೈಟ್’ ಲಸಿಕೆಯನ್ನು ತಯಾರಿಸುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲನೆ ನಡೆದಿದೆ ಎಂದು ಶಿಲ್ಪಾ ಮೆಡಿಕೇರ್ ಕಂಪನಿಯು ಷೇರು ಮಾರುಕಟ್ಟೆಗೆ ಸೋಮವಾರ ಮಾಹಿತಿ ನೀಡಿದೆ. ಸ್ಪುಟ್ನಿಕ್‌ ಲೈಟ್‌ ಕೋವಿಡ್–19 ವಿರುದ್ಧ ನೀಡುವ ಒಂದೇ ಡೋಸ್‌ನ ಲಸಿಕೆ.

ADVERTISEMENT

‘ಲಸಿಕೆ ಉತ್ಪಾದನೆಗೆ ಬೇಕಾದ ಯಂತ್ರೋಪಕರಣಗಳ ಅಳವಡಿಕೆ ಕಾರ್ಯ ನಡೆದಿದೆ. ಮುಂದಿನ ಎರಡು ತಿಂಗಳಲ್ಲಿ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಲಸಿಕೆ ಉತ್ಪಾದನೆ ಆರಂಭವಾಗಲಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.