ADVERTISEMENT

ಹುಬ್ಬಳ್ಳಿ: ಕಾಯಕಯೋಗಿ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 4:27 IST
Last Updated 17 ನವೆಂಬರ್ 2024, 4:27 IST
<div class="paragraphs"><p>ಶಿವಲಿಂಗೇಶ್ವರ ಸ್ವಾಮೀಜಿ</p></div>

ಶಿವಲಿಂಗೇಶ್ವರ ಸ್ವಾಮೀಜಿ

   

ಹುಬ್ಬಳ್ಳಿ: ತಾಲ್ಲೂಕಿನ ಮಂಟೂರು, ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಅಡವಿಸಿದ್ಧೇಶ್ವರ ಮಠ ಹಾಗೂ ಶಿವಮೊಗ್ಗ ಜಿಲ್ಲೆ ಬಳ್ಳಿಗಾವಿಯ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಯಾಗಿದ್ದ ಶಿವಲಿಂಗೇಶ್ವರ ಸ್ವಾಮೀಜಿ (82) ಭಾನುವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.

ಹೃದಯಾಘಾತವಾಗಿದ್ದ ಸ್ವಾಮೀಜಿ ಅವರನ್ನು ಇಲ್ಲಿನ ತತ್ವದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿದ್ದ ಅವರು ಭಾನುವಾರ ಬೆಳಿಗ್ಗೆ ಕೊನೆಯುಸಿರು ಎಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.‌ ಮಂಟೂರು ಮಠದ ಅವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಭಕ್ತರು ತಿಳಿಸಿದ್ದಾರೆ.

ADVERTISEMENT

ಶಿವಲಿಂಗೇಶ್ವರ ಸ್ವಾಮಿಜಿ ಅವರು, ಮಂಟೂರು ಹಾಗೂ ಬಮ್ಮಿಗಟ್ಟಿ ಅಡವಿಸಿದ್ಧೇಶ್ವರ ಮಠ,

ಹುಬ್ಬಳ್ಳಿ ಹರುಷದೇವರ ಮಠ, ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಗೆರಕೊಪ್ಪ- ಬೊಪ್ಪಗೊಂಡನಕೊಪ್ಪ ಇಂದೂಧರೇಶ್ವರ ಮಠ, ಶಿಕಾರಿಪುರ ತಾಲ್ಲೂಕು ಬೆಳ್ಳಿಗಾವಿಯ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠ ಹಾಗೂ ಬೀದರ ಜಿಲ್ಲೆ ಬಸವಕಲ್ಯಾಣ ಕೆಳಗಿ ಪೀಠದ ಪೀಠಾಧಿಪತಿಗಳಾಗಿದ್ದರು.

'ಮಂಟೂರು ಗ್ರಾಮದ ಗುರುಪಾದಮ್ಮ-ಶಿವಜೋಗಯ್ಯ ದಂಪತಿ ಮಗನಾಗಿ 1943 ಜುಲೈ 2ರಂದು ಜನಸಿದ್ದ ಅವರು, ಬಾಲ್ಯದ ವಿದ್ಯಾಭ್ಯಾಸವನ್ನು ಮಂಟೂರಿನಲ್ಲಿ ಪೂರ್ಣಗೊಳಿಸಿದ್ದರು. ಮುಂದಿನ ವಿದ್ಯಾಭ್ಯಾಸ ಶಿವಯೋಗ ಮಂದಿರದಲ್ಲಿ ಮುಗಿಸಿ, ವಾರಾಣಾಸಿಯಲ್ಲಿ ಎಂ.ಎ. ಸಂಸ್ಕೃತ ಅಧ್ಯಯನ ಮಾಡಿದ್ದರು. ಮಂಟೂರಿನಲ್ಲಿ ಶಿವಲಿಂಗೇಶ್ವರ ಪ್ರೌಢಶಾಲೆ ಸ್ಥಾಪಿಸಿ‌ ಸ್ಥಳೀಯ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಿದ್ದರು. ಕಲಘಟಗಿಯ ಬಮ್ಮಿಗಟ್ಟಿ ಗ್ರಾಮದ ಅಡವಿಸಿದ್ಧೇಶ್ವರ ಮಠವನ್ನು ಭಕ್ತರ ದೇಣಿಗೆಯಿಂದ ಅಭಿವೃದ್ಧಿ ಪಡಿಸಿ, ಮಾದರಿ ರಥ ನಿರ್ಮಿಸಿದ್ದರು.‌ ನಶಿಸಿ ಹೋಗುತ್ತಿದ್ದ ಅಲ್ಲಮಪ್ರಭು ಅವರ ಮನೆಯನ್ನು ಅನುಭವ ಮಂಟಪ‌ವನ್ನಾಗಿ ಮಾಡಲು ಸ್ವಾಮೀಜಿ ಸಿದ್ಧತೆ ನಡೆಸಿದ್ದರು. ಅವರ ಗ್ರಂಥ ಪ್ರಕಟಣೆಗಳ ಮೂಲಕ ವಚನಗಳ ಸಂರಕ್ಷಣೆ ನಡೆಸಿದ್ದರು' ಎಂದು ಸ್ವಾಮೀಜಿ ಅಪ್ತ, ಭಕ್ತ ಈರಯ್ಯ ನೆಲ್ಲೂರಮಠ ತಿಳಿಸಿದ್ದಾರೆ.

ಶಿವಲಿಂಗೇಶ್ವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರ ಕೋರಿಕೆ ಮೇರೆಗೆ ಎರಡು ದಿನಗಳ ಹಿ‌ಂದೆಯೇ, ಇಂದೂಧರ ದೇವರ ಅವರನ್ನು ಆಸ್ಪತ್ರೆ ಆವರಣದಲ್ಲಿ ಮಂಟೂರು ಮತ್ತು ಬಳ್ಳಿಗಾವಿಯ ಅಲ್ಲಮಪ್ರಭು ಅನುಭಾವ ಪೀಠದ ಉತ್ತರಾಧಿಕಾರಿಯನ್ನಾಗಿ ಸಾಂಕೇತಿಕವಾಗಿ ಘೋಷಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.