ADVERTISEMENT

ಹುಟ್ಟೂರಲ್ಲಿ ಸಚಿವ ಶಿವಳ್ಳಿ ಅಂತ್ಯಸಂಸ್ಕಾರ

ಜನ ನಾಯಕನ ಒಡನಾಟ ನೆನೆದು ಕಣ್ಣೀರಿಟ್ಟ ಸಿ.ಎಂ, ಡಿಕೆಶಿ, ವಿನಯ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 20:20 IST
Last Updated 23 ಮಾರ್ಚ್ 2019, 20:20 IST
ಕುಂದಗೋಳ ತಾಲ್ಲೂಕಿನ ಯರಗುಪ್ಪಿಯಲ್ಲಿ ಸಚಿವ ಸಿ.ಎಸ್. ಶಿವಳ್ಳಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಿವಳ್ಳಿ ಅವರ ಪತ್ನಿ ಕುಸುಮಾ ಅವರಿಗೆ ಸಾಂತ್ವನ ಹೇಳುವ ವೇಳೆ ತಾವೂ ಗದ್ಗದಿತರಾದರು– ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ಕುಂದಗೋಳ ತಾಲ್ಲೂಕಿನ ಯರಗುಪ್ಪಿಯಲ್ಲಿ ಸಚಿವ ಸಿ.ಎಸ್. ಶಿವಳ್ಳಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಿವಳ್ಳಿ ಅವರ ಪತ್ನಿ ಕುಸುಮಾ ಅವರಿಗೆ ಸಾಂತ್ವನ ಹೇಳುವ ವೇಳೆ ತಾವೂ ಗದ್ಗದಿತರಾದರು– ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಹೃದಯಾಘಾತದಿಂದ ಹಠಾತ್ ನಿಧನರಾದ ಸಚಿವ ಸಿ.ಎಸ್. ಶಿವಳ್ಳಿ ಅವರ ಅಂತ್ಯಸಂಸ್ಕಾರ, ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರು ಕುಂದಗೋಳ ತಾಲ್ಲೂಕಿನ ಯರಗುಪ್ಪಿಯಲ್ಲಿ ಶನಿವಾರ ನಡೆಯಿತು. ನದಿಯಂತೆ ಹರಿದುಬಂದ ಜನರು, ತಮ್ಮ ನೆಚ್ಚಿನ ನಾಯಕನಿಗೆ ಕಂಬನಿಯ ವಿದಾಯ ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪುಷ್ಪ ನಮನ ಸಲ್ಲಿಸುತ್ತಿದ್ದಂತೆಯೇ ಭಾವುಕರಾದರು. ಶಿವಳ್ಳಿ ಅವರ ಪತ್ನಿ ಕುಸುಮಾ ಹಾಗೂ ಮೂವರು ಮಕ್ಕಳು ಅಳುತ್ತಿದ್ದ ದೃಶ್ಯ ಕಂಡೊಡನೆ ಕಣ್ಣೀರು ಹಾಕಿದರು. ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದರು.

‘ಕೆಲ ದಿನಗಳ ಹಿಂದೆ ನನ್ನನ್ನು ಭೇಟಿಯಾಗಿದ್ದ ಶಿವಳ್ಳಿ, ಅವನ ಕೆಲವು ನೋವುಗಳನ್ನು ಹೇಳಿಕೊಂಡಿದ್ದ. ಹೊರಡುವಾಗ ನಮಸ್ಕಾರ ಮಾಡಿ ಹೋದ. ಇವತ್ತು ನಾನು ಆತನ ಹೆಣ ನೋಡ್ತಾ ಇದ್ದೀನಿ. ಮಾತನಾಡಲು ನನ್ನಿಂದ ಆಗುತ್ತಿಲ್ಲ’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕಣ್ಣೀರಾದರು.

ADVERTISEMENT

ಒಡನಾಟವನ್ನು ನೆನೆದ ಮಾಜಿ ಸಚಿವ ವಿನಯ ಕುಲಕರ್ಣಿ ಅವರೂ ಗಳಗಳನೆ ಅತ್ತರು. ಜಿಲ್ಲಾ, ತಾಲ್ಲೂಕು ಮಟ್ಟದ ನಾಯಕರಿಗೂ ದುಃಖ ತಡೆಯಲಾಗಲಿಲ್ಲ. ನಾಯಕರ ಭಾವುಕತೆ, ದುಃಖ, ಕಣ್ಣೀರು ‘ಸರಳ ಸಜ್ಜನ ನಾಯಕ’ ಶಿವಳ್ಳಿ ಅವರ ವ್ಯಕ್ತಿತ್ವವನ್ನು ಚಿತ್ರಿಸಿದಂತೆನಿಸಿತು. ಕುಟುಂಬದ ಗುರುಗಳಾದ ಶರಣಯ್ಯ ಹಿರೇಮಠ ಅವರು ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿದರು. ಅಂತ್ಯಸಂಸ್ಕಾರದ ವೇಳೆ, ಪತ್ನಿ ಹಾಗೂ ಮಕ್ಕಳ ದುಃಖದ ಕಟ್ಟೆಯೊಡೆಯಿತು.

ಹರಿದು ಬಂದ ಜನ ಸಾಗರ: ಶಿವಳ್ಳಿ ಅವರ ಪಾರ್ಥಿವ ಶರೀರವನ್ನು, ಕುಂದಗೋಳದ ಜೆಎಸ್ಎಸ್‌ ವಿದ್ಯಾಪೀಠದಲ್ಲಿ ಶುಕ್ರವಾರ ತಡರಾತ್ರಿ ವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಜನರು ಆ ಹೊತ್ತಿನಲ್ಲೂ ಅಂತಿಮ ನಮನ ಸಲ್ಲಿಸಿದರು. ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಹುಟ್ಟೂರು ಯರಗುಪ್ಪಿಗೆ ಕೊಂಡೊಯ್ಯಲಾಯಿತು.

ದರ್ಶನ ಪಡೆದ ಜನರು, ಹತ್ತಾರು ಎಕರೆಯ ಹೊಲದಲ್ಲಿ ಅಲ್ಲಲ್ಲಿ ಹೋಗಿ ನಿಂತುಕೊಂಡಿದ್ದರು. ಕಣ್ಣು ಹಾಯಿಸಿದ ಕಡೆಯೆಲ್ಲ ಜನರೇ ತುಂಬಿದ್ದರಿಂದ ಜಾತ್ರೆ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಯಿತು. ‘ಬಡವರ ಬಂಧು ಶಿವಳ್ಳಿ’ ಘೋಷಣೆ ಮೊಳಗುತ್ತಲೇ ಇತ್ತು.

ಪರೀಕ್ಷೆ ಬರೆದ ಮಗಳು: ಅಪ್ಪನ ಅಗಲಿಕೆಯ ದುಃಖದಲ್ಲಿಯೇ, ಹುಬ್ಬಳ್ಳಿಯ ಪರೀಕ್ಷಾ ಕೇಂದ್ರದಲ್ಲಿ ಪುತ್ರಿ ರೂಪಾ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಳು. ನಂತರ, ತಂದೆಯ ಅಂತ್ಯಕ್ರಿಯೆಗಾಗಿ ಯರಗುಪ್ಪಿಗೆ ತೆರಳಿದಳು.

*ಹೋರಾಟದಿಂದಲೇ ಸಾರ್ವಜನಿಕ ಜೀವನ ಪ್ರವೇಶಿಸಿದ ಸಿ.ಎಸ್. ಶಿವಳ್ಳಿ ಅವರು‌ ಕೊನೆಯತನಕ ಪ್ರಾಮಾಣಿಕರಾಗಿ ಉಳಿದ ಅಪರೂಪದ ರಾಜಕಾರಣಿ

-ಸಿದ್ದರಾಮಯ್ಯ, ಅಧ್ಯಕ್ಷ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.