ADVERTISEMENT

ಹುಬ್ಬಳ್ಳಿ | ಕೋವಿಡ್‌ನಿಂದ ಕುಸಿದ ಬೇಡಿಕೆ: ವಾಣಿಜ್ಯ ಮಳಿಗೆ ಖಾಲಿ ಖಾಲಿ...

ಕಟ್ಟಡ ಮಾಲೀಕರಿಗೆ ನಷ್ಟ

ಎಂ.ನವೀನ್ ಕುಮಾರ್
Published 25 ಫೆಬ್ರುವರಿ 2022, 4:40 IST
Last Updated 25 ಫೆಬ್ರುವರಿ 2022, 4:40 IST
ಹುಬ್ಬಳ್ಳಿಯ ಕಾಂಪ್ಲೆಕ್ಸ್‌ವೊಂದರಲ್ಲಿ ಖಾಲಿ ಇರುವ ವಾಣಿಜ್ಯ ಮಳಿಗೆ– ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಕಾಂಪ್ಲೆಕ್ಸ್‌ವೊಂದರಲ್ಲಿ ಖಾಲಿ ಇರುವ ವಾಣಿಜ್ಯ ಮಳಿಗೆ– ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ   

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಬೇಡಿಕೆ ಕುಸಿದಿದೆ. ಪ್ರಮುಖ ಮಾರುಕಟ್ಟೆ ಪ್ರದೇಶ ಸೇರಿದಂತೆ ಬಡಾವಣೆ ಹಾಗೂ ಹೊರವಲಯಗಳ ವಾಣಿಜ್ಯ ಕಟ್ಟಡಗಳ ಮೇಲೆ ‘ಬಾಡಿಗೆಗೆ’ ಫಲಕ ಸಾಮಾನ್ಯವಾಗಿದೆ.

ನೋಟು ರದ್ದತಿ ನಂತರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು. ಕೋವಿಡ್ ಮೂರು ಅಲೆಗಳ ಕಾರಣದಿಂದಾಗಿ ವ್ಯಾಪಾರ– ಉದ್ದಿಮೆಗಳು ನಷ್ಟ ಅನುಭವಿಸಿದ್ದರಿಂದ ಮಳಿಗೆಗಳಿಗೆ ಹೆಚ್ಚಿನ ಬೇಡಿಕೆ ಇಲ್ಲದಂತಾಗಿದೆ ಎನ್ನುತ್ತಾರೆ ಕಟ್ಟಡ ಮಾಲೀಕರು.

ಮುಖ್ಯ ರಸ್ತೆಯಲ್ಲಿ ನಿರ್ಮಾಣವಾಗುವ ವಾಣಿಜ್ಯ ಮಳಿಗೆಗಳಿಗೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಬೇಡಿಕೆ ಕುದುರುತ್ತಿತ್ತು, ಆದರೆ, ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು ಬಾಡಿಗೆದಾರರಿಗೆ ಕಾಯುವಂತಾಗಿದೆ ಎನ್ನುತ್ತಾರೆ ಅವರು.

ADVERTISEMENT

ಕ್ರೆಡಾಯ್ ಹುಬ್ಬಳ್ಳಿ (ರಿಯಲ್ ಎಸ್ಟೇಟ್ ಡೆವಲಪರ್ಸ್‌ಗಳ ಸಂಘಟನೆಗಳ ಒಕ್ಕೂಟ) ಅಂದಾಜಿಸಿರುವಂತೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 400ರಿಂದ 500 ಕಟ್ಟಡಗಳಲ್ಲಿ ಅಂದಾಜು 4.50 ಲಕ್ಷ ಚದರ ಅಡಿ ವಾಣಿಜ್ಯ ಜಾಗ (ಕಮರ್ಷಿಯಲ್ ಸ್ಪೇಸ್) ಖಾಲಿ ಉಳಿದಿದೆ.

‘ಕಟ್ಟಡ ನಿರ್ಮಾಣವಾಗುವ ಹಂತದಲ್ಲಿ ಬಾಡಿಗೆದಾರರಿಂದ ವಿಚಾರಣೆ ಶುರುವಾಗಿತ್ತು. ಆದರೆ, ಕೋವಿಡ್ ಪರಿಣಾಮ ಯಾರೂ ಬರಲಿಲ್ಲ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಎರಡು ಅಂತಸ್ತಿಗೆ ಈಗ ಬಾಡಿಗೆಗೆ ಬಂದಿದ್ದಾರೆ. ಇನ್ನೂ ಎರಡು ಅಂತಸ್ತು ಖಾಲಿ ಉಳಿದಿದೆ’ ಎನ್ನುತ್ತಾರೆ ಅಧ್ಯಾಪಕ ನಗರದ ಕಾಂಪ್ಲೆಕ್ಸ್ ಮಾಲೀಕ ಮೋಹನ್ ಕಣಗಿಲ್.

‘ಕೋವಿಡ್ ಪರಿಣಾಮ ಮನೆಯಿಂದ ಕೆಲಸ ಮಾಡುವುದು ಆರಂಭವಾಯಿತು. ಇದು ವಾಣಿಜ್ಯ ಉದ್ದೇಶದ ಕಟ್ಟಡಗಳ ಬೇಡಿಕೆ ಕುಸಿಯುವಂತೆ ಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿಯೇ 45 ಸಾವಿರ ಮಂದಿ ಮನೆಯಿಂದ ಕೆಲಸ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ’ ಎನ್ನುತ್ತಾರೆ ಕ್ರೆಡಾಯ್ ಹುಬ್ಬಳ್ಳಿಯ ಅಧ್ಯಕ್ಷ ಪಿ.ಡಿ.ರಾಯ್ಕರ್.

ಬೆಂಗಳೂರಿನಿಂದ ಹೊರಗೆ ಆಸರೆಯಾಗಬಹುದು
ಬೆಂಗಳೂರಿನಿಂದ ಹೊರಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕಚೇರಿ ಆರಂಭಿಸುವವರಿಗೆ ಪ್ರೋತ್ಸಾಹ ನೀಡುವ ‘ಅವೇ ಫ್ರಂ ಬೆಂಗಳೂರು’ ಎಂಬ ಉಪಕ್ರಮವನ್ನು ಐಟಿ– ಬಿಟಿ ಇಲಾಖೆ ಘೋಷಿಸಿದೆ. ಇದು ಜಾರಿಯಾದರೆ ವಾಣಿಜ್ಯ ಕಟ್ಟಡಗಳಿಗೆ ಬೇಡಿಕೆ ಕುದುರಬಹುದು ಎನ್ನುತ್ತಾರೆ ಪಿ.ಡಿ. ರಾಯ್ಕರ್.

ಕಚೇರಿಗಳಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸುವ ಕಟ್ಟಡ ಮಾಲೀಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಇದಾಗಿದೆ. ಆದರೆ, ಕಟ್ಟಡದ ಶೇ60ರಷ್ಟು ಸ್ಥಳವನ್ನು ಐಟಿ– ಬಿಟಿಯವರಿಗೆ ಬಾಡಿಗೆಗೆ ನೀಡಬೇಕಾಗುತ್ತದೆ ಎನ್ನುತ್ತಾರೆ ಅವರು.

*
ನಮ್ಮ ಕಮರ್ಷಿಯಲ್ ಕಾಂಪ್ಲೆಕ್ಸ್‌ ಕಟ್ಟಡದ ಅರ್ಧದಷ್ಟು ಜಾಗ ಖಾಲಿ ಉಳಿದಿರುವುದರಿಂದ ನಷ್ಟವಾಗುತ್ತಿದೆ.
-ಮೋಹನ್ ಕಣಗಿಲ್, ಅಧ್ಯಾಪಕ ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.