ಹುಬ್ಬಳ್ಳಿ: ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಿಲ್ಲಾ ಕೇಂದ್ರವು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ಉದ್ಯೋಗ ಮೇಳ ಹಾಗೂ ತರಬೇತಿ ಕಾರ್ಯಕ್ರಮಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಇಲಾಖೆಯ ನವನಗರದ ಉದ್ಯೋಗ ವಿನಿಮಯ ಕೇಂದ್ರದಲ್ಲಿ 11,287 ಮಂದಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ನಿತ್ಯವೂ 6ರಿಂದ 8 ಅಭ್ಯರ್ಥಿಗಳು ಇಲಾಖೆಯ ಕಚೇರಿಗೆ ಬಂದು ಉದ್ಯೋಗಕ್ಕಾಗಿ ನೋಂದಣಿ ಮಾಡಿಸುತ್ತಿದ್ದಾರೆ.
ಹೆಸರು ನೋಂದಣಿ ಮಾಡಿಕೊಂಡವರು ಕೆಲಸ ಸಿಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಇನ್ನೊಂದೆಡೆ ತರಬೇತಿ ಹಾಗೂ ಉಪನ್ಯಾಸಗಳ ಮೂಲಕ ಉದ್ಯೋಗ ಆಕಾಂಕ್ಷಿಗಳ ಕೌಶಲ ಹೆಚ್ಚಳ ಮಾಡುವ ಕೆಲಸವೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್ ಸೇರಿದಂತೆ ಪದವಿ ಪಡೆದು ಅರ್ಜಿ ಸಲ್ಲಿಸಿದವರು ನಿರಾಸೆ ಅನುಭವಿಸುವಂತೆ ಆಗಿದೆ.
‘ಇಲ್ಲಿ ಅರ್ಜಿ ಸ್ವೀಕರಿಸುವ ಕೆಲಸ ಮಾತ್ರ ಆಗುತ್ತಿದೆ. ನೌಕರಿ ಕೊಡಿಸುತ್ತಿಲ್ಲ’ ಎಂಬುದು ಆಕಾಂಕ್ಷಿಗಳ ಬೇಸರದ ನುಡಿ.
ಇಲಾಖೆಯ ನಿಷ್ಕ್ರಿಯತೆಗೆ ಸಿಬ್ಬಂದಿ ಕೊರತೆಯೇ ಪ್ರಮುಖ ಕಾರಣ. ಬಹಳ ವರ್ಷಗಳಿಂದ ಪೂರ್ಣಾವಧಿಯ ಸಹಾಯಕ ನಿರ್ದೇಶಕರ ನೇಮಕವಾಗಿಲ್ಲ. ದಾವಣಗೆರೆಯ ಸಹಾಯಕ ನಿರ್ದೇಶಕ ಗಿರೀಶ್ ಕೆ.ಎನ್. ಅವರಿಗೆ ಈ ಕೇಂದ್ರದ ಹೆಚ್ಚುವರಿ ಹೊಣೆ ನೀಡಲಾಗಿದೆ. ಅವರು ಹಾವೇರಿ, ಧಾರವಾಡ ಹಾಗೂ ಹುಬ್ಬಳ್ಳಿ ಕೇಂದ್ರಗಳ ‘ಪ್ರಭಾರಿ’ಯಾಗಿದ್ದು, ಅಧಿಕಾರ ವಹಿಸಿಕೊಂಡು ಹೋದವರು ಒಮ್ಮೆಯೂ ಹುಬ್ಬಳ್ಳಿಯ ಕಚೇರಿಗೆ ಬಂದಿಲ್ಲ.
ಹಿಂದೆ ಕೊಪ್ಪಳದ ಸಹಾಯಕ ನಿರ್ದೇಶಕರು ಇಲ್ಲಿಯ ಪ್ರಭಾರಿ ಅಧಿಕಾರಿ ಆಗಿದ್ದರು. ಅಧಿಕಾರಿ ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ.
ಏಕೈಕ ಸಿಬ್ಬಂದಿ: ಸದ್ಯಕ್ಕೆ ಇಲ್ಲಿ ಇರುವುದು ಟೈಪಿಸ್ಟ್ ಒಬ್ಬರೇ. ಸಹಾಯಕ ಉದ್ಯೋಗ ಅಧಿಕಾರಿ (ಎಇಒ), ಎಫ್.ಡಿ.ಎ, ಎಸ್.ಡಿ.ಸಿ, ಗ್ರೂಪ್–ಡಿ ದರ್ಜೆಯ ಎರಡು ಹುದ್ದೆಗಳು ಖಾಲಿ ಇವೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಸಿಬ್ಬಂದಿಯ ಅವಧಿಯೂ ಈಚೆಗೆ ಮುಕ್ತಾಯವಾಗಿದೆ. ಟೈಪಿಸ್ಟ್ ರಜೆಯ ಮೇಲೆ ತೆರಳಿದರೆ ಕಚೇರಿಯ ಬೀಗ ಹಾಕಲಾಗಿರುತ್ತದೆ.
ನೋಂದಣಿಗೆ ಸೀಮಿತ: ನಿರುದ್ಯೋಗಿಗಳಿಗೆ ಶೈಕ್ಷಣಿಕ ಮತ್ತು ವೃತ್ತಿ ತರಬೇತಿ, ಉಪನ್ಯಾಸ ಆಯೋಜನೆ, ಶಾಲಾ ಕಾಲೇಜುಗಳಲ್ಲಿ ಸಮ್ಮೇಳನ, ಕೆಪಿಎಸ್‌ಸಿಯ ವಿವಿಧ ಸ್ಪರ್ಧಾತ್ಮಕ ಹುದ್ದೆಗಳಿಗೆ ತರಬೇತಿ ನೀಡುವುದು, ಖಾಸಗಿ ಕಂಪನಿಗಳನ್ನು ಆಹ್ವಾನಿಸಿ ಉದ್ಯೋಗ ಮೇಳ ಆಯೋಜಿಸುವುದು. ಉದ್ಯೋಗಿ ಆಕಾಂಕ್ಷಿಗಳ ಮಾಹಿತಿಯನ್ನು ವಿವಿಧ ಕಂಪನಿಗಳಿಗೆ ರವಾನಿಸುವುದು ಇಲಾಖೆಯ ಪ್ರಮುಖ ಕಾರ್ಯಗಳು. ಆದರೆ, ಪ್ರಸ್ತುತ ಇವ್ಯಾವುದು ನಡೆಯುತ್ತಿಲ್ಲ.
2020ರ ಜನವರಿ ತಿಂಗಳಲ್ಲಿ ವಿವಿಧ ಕಂಪನಿಗಳ ಸಹಭಾಗಿತ್ವದಲ್ಲಿ ಹುಬ್ಬಳ್ಳಿಯಲ್ಲಿ ಮೆಗಾ ಉದ್ಯೋಗ ಮೇಳ ನಡೆಸಲಾಗಿತ್ತು. ಆ ಬಳಿಕ ಯಾವುದೇ ಮೇಳ ನಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.