ADVERTISEMENT

ಹುಬ್ಬಳ್ಳಿ: ಹಾಲು ಪೂರೈಕೆಯಲ್ಲಿ ತುಸು ಚೇತರಿಕೆ

ಧಾರವಾಡ ಹಾಲು ಒಕ್ಕೂಟಕ್ಕೆ ಬೇಡಿಕೆಯಷ್ಟು ಹಾಲು ಪೂರೈಸುವ ಸವಾಲು

ಗೋವರ್ಧನ ಎಸ್.ಎನ್.
Published 11 ಸೆಪ್ಟೆಂಬರ್ 2023, 8:57 IST
Last Updated 11 ಸೆಪ್ಟೆಂಬರ್ 2023, 8:57 IST
ಧಾರವಾಡ ಹಾಲು ಒಕ್ಕೂಟದ ಆಡಳಿತ ಕಚೇರಿ–ಪ್ರಜಾವಾಣಿ ಚಿತ್ರ
ಧಾರವಾಡ ಹಾಲು ಒಕ್ಕೂಟದ ಆಡಳಿತ ಕಚೇರಿ–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಕಾಲುಬಾಯಿ ರೋಗ, ಚರ್ಮಗಂಟು ರೋಗ, ಮೇವಿನ ಕೊರತೆ ಕಾರಣ ಧಾರವಾಡ ಹಾಲು ಒಕ್ಕೂಟಕ್ಕೆ ಪೂರೈಕೆಯಾಗುತ್ತಿದ್ದ ಹಾಲಿನ ಪ್ರಮಾಣ ಕುಸಿದಿತ್ತು. ಕೆಲವು ತಿಂಗಳಿಂದ ಹಾಲು ಪೂರೈಕೆಯಲ್ಲಿ ಚೇತರಿಕೆ ಕಂಡಿದೆ.

ಇತ್ತೀಚಿಗೆ ಸುರಿದ ಮಳೆ, ರಾಸುಗಳಲ್ಲಿ ಕಾಣಿಸಿಕೊಂಡ ರೋಗ ನಿಯಂತ್ರಣಕ್ಕೆ ಬಂದಿರುವ ಕಾರಣ ಒಕ್ಕೂಟಕ್ಕೆ ಪೂರೈಕೆಯಾಗುವ ಹಾಲಿನ ಪ್ರಮಾಣ ಏರಿಕೆಯಾಗಿದೆ. ರೋಗ, ಮೇವಿನ ಕೊರತೆಯಿಂದ ಕಂಗೆಟ್ಟಿದ್ದ ರೈತರು ಮತ್ತು ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೂ ಒಂದಿಷ್ಟು ಆದಾಯ ಸಿಗುತ್ತಿದೆ.

ಹಾಲಿನ ಪುಡಿ ಉತ್ಪಾದನೆ ಸ್ಥಗಿತ: ಒಕ್ಕೂಟದ ಮೂಲಕ ಮಾರುಕಟ್ಟೆಗೆ ಬೇಡಿಕೆಯ‌ಷ್ಟು ಹಾಲು, ಮೊಸರು, ಬೆಣ್ಣೆ, ತುಪ್ಪ ಪೂರೈಕೆಯಾಗುತ್ತಿದೆ. ಹೆಚ್ಚು ಹಾಲು ಪೂರೈಕೆ ಇನ್ನೂ ಸಾಧ್ಯವಾಗದ ಕಾರಣ ಹಾಲಿನಪುಡಿ ಉತ್ಪಾದನೆ ಸದ್ಯಕ್ಕೆ ಸ್ಥಗಿತಗೊಂಡಿದೆ. 

ADVERTISEMENT

‘ಧಾರವಾಡ ಹಾಲು ಒಕ್ಕೂಟವು ಹುಬ್ಬಳ್ಳಿ–ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ 671 ಹಾಲು ಉತ್ಪಾದಕರ ಸಂಘಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ನಿತ್ಯ 1.25 ಲಕ್ಷ ಲೀಟರ್‌ ಹಾಲು ಹಾಗೂ 20 ಸಾವಿರ ಲೀಟರ್‌ ಮೊಸರಿನ ಬೇಡಿಕೆ ಇದೆ. ಸದ್ಯ ಒಕ್ಕೂಟದ ವ್ಯಾಪ್ತಿಯಲ್ಲಿ 1.20 ಲಕ್ಷ ಲೀಟರ್‌ ಹಾಲು ಪೂರೈಕೆಯಾಗುತ್ತಿದೆ’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಎನ್‌.ಎಸ್‌. ಕುಡಿಯಾಲಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮೊದಲು 1.40 ಲೀಟರ್‌ವರೆಗೆ ಹಾಲು ಪೂರೈಕೆಯಾಗುತ್ತಿತ್ತು. ಹಾಲು ಪೂರೈಕೆ ಕುಸಿತವಾಗಿದ್ದರಿಂದ ₹30–₹40 ಲಕ್ಷದವರೆಗೆ ಆದಾಯವೂ ಕುಸಿತವಾಗಿತ್ತು. ಸದ್ಯ ಹಾಲು ಪೂರೈಕೆಯಲ್ಲಿ ಶೇ 10ರಷ್ಟು ಚೇತರಿಕೆ ಕಂಡಿದ್ದರೂ, ಬೇಡಿಕೆಯಷ್ಟು ಹಾಲು ಸಂಗ್ರಹವಾಗುತ್ತಿಲ್ಲ. ಇತರೆ ಒಕ್ಕೂಟಗಳಿಂದ ಹೆಚ್ಚುವರಿ ಹಾಲು ಖರೀದಿಸಲಾಗುತ್ತಿದೆ. ಇದರಿಂದ ಬಂದ ಆದಾಯ ಖರ್ಚು–ವೆಚ್ಚಕ್ಕೆ ಸರಿಹೋಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಒಕ್ಕೂಟ ವ್ಯಾಪ್ತಿಯಲ್ಲಿ ಆಕಳು ಹಾಲಿಗೆ ಲೀಟರ್‌ಗೆ ₹37, ಎಮ್ಮೆ ಹಾಲಿಗೆ ₹46 ದರವನ್ನು ಪೂರೈಕೆದಾರರಿಗೆ ನೀಡುತ್ತೇವೆ. ಇತರೆಡೆಯಿಂದ ಹಾಲು ಖರೀದಿಸಲು ಪರಿಷ್ಕೃತ ದರದಂತೆ ಲೀಟರ್‌ಗೆ ₹3 ಹೆಚ್ಚುವರಿಯಾಗಿ ನೀಡುತ್ತಿದ್ದೇವೆ. ನಮ್ಮಲ್ಲೇ ಬೇಡಿಕೆಯಷ್ಟು ಹಾಲು ಪೂರೈಕೆಯಾದರೆ ಆ ಹಣ ಉಳಿಯುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

‘ಕ್ಷೀರಭಾಗ್ಯ ಮತ್ತೆ ಆರಂಭಿಸಲಿ’
‘ಒಕ್ಕೂಟ ವ್ಯಾಪ್ತಿಯ ವಿವಿಧ ಹಾಲು ಉತ್ಪಾದಕರ ಸಂಘಗಳಿಗೆ ಭೇಟಿ ನೀಡಿ ಹೆಚ್ಚು ಹಾಲು ಉತ್ಪಾದನೆಗೆ ಕ್ರಮ ವಹಿಸಲಾಗುತ್ತಿದೆ. ಆಸಕ್ತರಿಗೆ ಆಕಳು ಕೊಳ್ಳಲು ಶೇ 3ರ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಲಾಗುತ್ತಿದೆ. ಒಂದು ಸಂಘದ ಸದಸ್ಯರಿಗೆ 15 ಹಸುಗಳನ್ನು ಖರೀದಿಸಲು ಅವಕಾಶವಿದೆ. ಹೈನುಗಾರಿಕೆ ಉತ್ತೇಜನಕ್ಕಾಗಿ ಸಬ್ಸಿಡಿಯಲ್ಲಿ ಮ್ಯಾಟ್‌ ಮೇವು ಕಟರ್‌ ಹಾಲು ಹಿಂಡುವ ಯಂತ್ರವನ್ನು ಒದಗಿಸುತ್ತಿದ್ದೇವೆ’ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ ಬಣವಿ ತಿಳಿಸಿದರು. ‘ಈ ಹಿಂದೆ ಕ್ಷೀರಭಾಗ್ಯ ಯೋಜನೆಯಡಿ ಹೆಚ್ಚು ಹಾಲು ಮಾರಾಟವಾಗುತ್ತಿತ್ತು. ಯೋಜನೆಯನ್ನು ಮತ್ತೆ ಆರಂಭಿಸಿದರೆ ಹೆಚ್ಚಿನ ಜನರು ಹೈನುಗಾರಿಕೆಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಾರೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.