ಹುಬ್ಬಳ್ಳಿ: ಅವಳಿ ನಗರದಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಸ್ಮಾರ್ಟ್‌ಸಿಟಿ ಯೋಜನೆಯಡಿ ಸೈಕಲ್ ‘ಸವಾರಿ’ ಆರಂಭಗೊಂಡು 10 ತಿಂಗಳಾಗಿವೆ. ಆದರೆ, ಬಳಕೆದಾರರ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗಿಲ್ಲ.
ಮಲೇಷ್ಯಾದಿಂದ ತರಿಸಲಾದ 340 ಬೈಸಿಕಲ್‌ಗಳನ್ನು ಇಡಲೆಂದೇ ನಗರದ 34 ಕಡೆ ಸೈಕಲ್ ನಿಲ್ದಾಣಗಳಿವೆ.ಈವರೆಗೆ 2,356 ಸ್ಮಾರ್ಟ್‌ಕಾರ್ಡ್ ವಿತರಣೆಯಾಗಿದೆ. ವಾರಾಂತ್ಯ ಮತ್ತು ವಿಶೇಷ ಸಂದರ್ಭದಲ್ಲಿ ದಿನಕ್ಕೆ 200ಕ್ಕೂ ಹೆಚ್ಚು ಮಂದಿ ಸೈಕಲ್ ಬಳಸಿದರೆ, ಉಳಿದ ದಿನಗಳಲ್ಲಿ ಸಂಖ್ಯೆಯು ನಿತ್ಯ 90 ರಿಂದ 100ಕ್ಕೆ ಸೀಮಿತಗೊಳ್ಳುತ್ತದೆ.
‘ಕಳೆದ ಜನವರಿವರೆಗೆ ನಿತ್ಯ 120 ರಿಂದ 130 ಮಂದಿ ಸೈಕಲ್ ಸವಾರಿ ಮಾಡುತ್ತಿದ್ದರು. ನಂತರ ತಾಪಮಾನ ಏರಿಕೆಯಾಯಿತು, ಆನಂತರ ಮಳೆ ಸುರಿಯಿತು. ‘ಶಕ್ತಿ’ ಯೋಜನೆ ಬಳಿಕ ಹೆಣ್ಣುಮಕ್ಕಳು ಸರ್ಕಾರಿ ಬಸ್‌ಗಳಲ್ಲೇ ಹೆಚ್ಚು ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಸೈಕಲ್ ಸವಾರಿ ಹೆಚ್ಚಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿಲ್ಲ’ ಎಂದು ಟ್ರಿನಿಟಿ ಟೆಕ್ನಾಲಜೀಸ್ ಸಾಫ್ಟ್‌ವೇರ್ ಸಲ್ಯೂಷನ್ಸ್ ಸಂಸ್ಥೆಯ ಯೋಜನೆ ವ್ಯವಸ್ಥಾಪಕ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸೈಕಲ್ ಹೊಂದಿಲ್ಲದವರು, ಮಕ್ಕಳು, ಫಿಟ್‌ನೆಸ್ ಆಸಕ್ತರು ಈ ಸೈಕಲ್‌ಗಳನ್ನು ಬಳಸುತ್ತಾರೆ. ಸೈಕಲ್ ಸವಾರಿಗಾಗಿ ಸ್ಮಾರ್ಟ್ ಕಾರ್ಡ್ ಪಡೆಯಲು ₹300 ಶುಲ್ಕವಿದ್ದು, ಇದರಲ್ಲಿ ₹ 100 ವಿಮೆ, ₹ 100 ನೋಂದಣಿಗೆ ಬಳಕೆಯಾಗಿ, ₹ 100 ಕರೆನ್ಸಿ ನೀಡಲಾಗುತ್ತದೆ. ಒಂದು ಗಂಟೆ ಸವಾರಿ ಮಾಡಿದರೆ ₹5 ಶುಲ್ಕವಿದೆ. ಕರೆನ್ಸಿ ಮುಗಿದ ಬಳಿಕ ರಿಚಾರ್ಜ್ ಮಾಡಿಸಿಕೊಳ್ಳಬಹುದು. ಒಂದು ವರ್ಷದ ನಂತರ ₹200 ನವೀಕರಣ ಶುಲ್ಕ ಪಾವತಿಸಿದರೆ, ₹100 ರಿಚಾರ್ಜ್ ಸಹ ಸಿಗಲಿದೆ. ಇಂತಹ ಉತ್ತಮ ಯೋಜನೆಯ ಅನುಕೂಲವನ್ನು ಹೆಚ್ಚಿನ ಜನರು ಪಡೆದುಕೊಳ್ಳಬೇಕು’ ಎಂದು ಹೇಳಿದರು.
‘ಸೈಕಲ್‌ಗಳು ಸಹ ಉತ್ತಮ ಗುಣಮಟ್ಟದಿಂದ ಕೂಡಿದ್ದು, ತುಕ್ಕು ಹಿಡಿಯುವುದಿಲ್ಲ, ಪಂಕ್ಚರ್ ಆಗುವುದಿಲ್ಲ. ನಿಂತಲ್ಲೇ ನಿಂತರೂ ಹಾನಿಗೀಡಾಗುವುದಿಲ್ಲ. ಸುಸ್ಥಿತಿಯಲ್ಲಿಡಲು ಆಗಾಗ್ಗೆ ಸಣ್ಣ ಪುಟ್ಟ ರಿಪೇರಿ ಮಾಡಲಾಗುತ್ತದೆ’ ಎಂದರು.
‘ಸವಾರಿ ಯೋಜನೆ ಆರಂಭದ ದಿನಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆನಂತರ ಬಿರುಬಿಸಿಲು, ಮಳೆ ಸುರಿದಿದ್ದರಿಂದ ಸೈಕಲ್ ಬಳಕೆದಾರರ ಸಂಖ್ಯೆ ಕಡಿಮೆಯಾಯಿತು. ಈಗೀಗ ತುಸು ಏರಿಕೆ ಕಾಣುತ್ತಿದೆ. ಸೈಕಲ್ ಬಳಕೆಯಿಂದಾಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಹಲವು ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ’ ಎಂದು ಸ್ಮಾರ್ಟ್‍ಸಿಟಿ ಯೋಜನೆಯ ಐಟಿಸಿ ವ್ಯವಸ್ಥಾಪಕ ಸುಜಯ್ ತಿಳಿಸಿದರು.
ಬೈಸಿಕಲ್ ಬಳಕೆಯಿಂದ ಬರುವ ಆದಾಯ ಕಡಿಮೆ ಇದೆ. ಯೋಜನೆಯಡಿ ವಿವಿಧ ವಿಭಾಗಗಳಲ್ಲಿ 25 ಮಂದಿ ಕೆಲಸ ಮಾಡುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಪ್ರತ್ಯೇಕ ನಿಧಿ ಮೀಸಲಿಡಲಾಗಿದೆ-ಮಹೇಶ್, ಯೋಜನಾ ವ್ಯವಸ್ಥಾಪಕ, ಟ್ರಿನಿಟಿ ಟೆಕ್ನಾಲಜೀಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.