ಹುಬ್ಬಳ್ಳಿ: ಸಾರ್ವಜನಿಕರ ನಿದ್ದೆಗೆಡಿಸಿದ್ದ ಇಲ್ಲಿನ ಕಾರವಾರ ರಸ್ತೆಯ ಕೆಂಪಗೆರೆ ಮತ್ತು ಧಾರವಾಡದ ಹೊಸ ಯಲ್ಲಾಪುರದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮೂರ್ನಾಲ್ಕು ದಶಕಗಳಿಂದ ಸಂಗ್ರಹವಾಗಿರುವ ಕಸಕ್ಕೆ ಶೀಘ್ರದಲ್ಲಿಯೇ ಮುಕ್ತಿ ಸಿಗಲಿದೆ.
21 ಎಕರೆ ಪ್ರದೇಶದಲ್ಲಿ ಕೆಂಪಗೆರೆ ಘಟಕ ಇದ್ದು, ಇಲ್ಲಿ 3.60 ಲಕ್ಷ ಟನ್ ಕಸ ಸಂಗ್ರಹವಾಗಿದೆ. ಹೊಸ ಯಲ್ಲಾಪುರದ 1.20 ಲಕ್ಷ ಟನ್ ಹಳೆ ಕಸ ಇದೆ. ಹುಬ್ಬಳ್ಳಿಯಲ್ಲಿ ಪ್ರತಿ ದಿನ 300 ಟನ್ ಕಸ ಉತ್ಪತ್ತಿಯಾದರೆ, ಧಾರವಾಡದಿಂದ 120 ಟನ್ ಕಸ ಸಂಗ್ರಹವಾಗುತ್ತದೆ.
ಘಟಕದಿಂದ ಬರುವ ಹೊಗೆ, ದುರ್ವಾಸನೆ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೇಸಿಗೆಮಡ್ಡಿ (ಗಾರ್ಬೇಜ್ ಯಾರ್ಡ್) ತೆರವು ಹೋರಾಟ ಸಮಿತಿ ಸದಸ್ಯರು ಘಟಕದ ಬಳಿ ಮೂರು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದರು.
ಈಗ ಕೆಂಪಗೆರೆ ಘಟಕದ ಕಸ ನಿರ್ವಹಣೆಗೆ ₹22 ಕೋಟಿ, ಹೊಸಯಲ್ಲಾಪುರದ ಕಸ ನಿರ್ವಹಣೆಗೆ ₹6 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು, ಗುಜರಾತ ಮೂಲದ ಡಿ.ಎಚ್.ಪಾಟೀಲ ಕಂಪನಿ ಟೆಂಡರ್ ಪಡೆದಿದೆ.
ಕಂಪನಿಯ ಸಿಬ್ಬಂದಿ ಎರಡೂ ಘಟಕದಲ್ಲಿ ಈಗಾಗಲೇ ಸರ್ವೆ ಕಾರ್ಯ ಆರಂಭಿಸಿದ್ದು, ಸಿಬ್ಬಂದಿ ನಿಯೋಜನೆ, ವೇಬ್ರಿಡ್ಜ್ ಸೇರಿದಂತೆ ಇನ್ನಿತರ ಯಂತ್ರೋಪಕರಣಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಬಿ.ಎಂ, ‘ಪ್ರತಿ ದಿನ 1 ಸಾವಿರ ಟನ್ ಕಸವನ್ನು ಜರಡಿ ಹಿಡಿದು ಮಣ್ಣು, ಪ್ಲಾಸ್ಟಿಕ್, ಗಾಜು, ಕಬ್ಬಿಣದಂತಹ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಅದರಲ್ಲಿ ಬರುವ ಮಣ್ಣನ್ನು ನಿರ್ಮಾಣ ಹಂತದಲ್ಲಿರುವ ಹೊಸ ಬಡಾವಣೆಗಳಲ್ಲಿ ಹಾಕಲಾಗುತ್ತದೆ’ ಎಂದರು.
‘ಇಲ್ಲಿ ಸಂಗ್ರಹವಾಗಿರುವ ಕಸದಲ್ಲಿ ಗೊಬ್ಬರ ಪ್ರಮಾಣ ಸಿಗುವುದು ತೀರಾ ಕಡಿಮೆ. ಶೇ 60–70ರಷ್ಟು ಮಣ್ಣು ಸಿಗಲಿದೆ. ಕಸ ವಿಂಗಡಣೆ ಪ್ರಕ್ರಿಯೆ ಮುಗಿದ ನಂತರ ಕಂಪನಿಯು ಲ್ಯಾಂಡ್‌ಸ್ಕೇಪ್ ಮಾಡಲಿದ್ದು, ನಂತರ ಪಾರ್ಕಿಂಗ್ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸುವ ಕಲ್ಪಿಸುವ ಚಿಂತೆ ಇದೆ’ ಎಂದು ಮಾಹಿತಿ ನೀಡಿದರು.
ಕಸ ನಿರ್ವಹಣೆ ಪ್ರಕ್ರಿಯೆ ಮುಗಿಯಲು ಒಂದೂವರೆ ವರ್ಷ ಬೇಕಾಗುತ್ತದೆ. ಈ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ (ಎನ್‌ಜಿಟಿ) ಪ್ರತಿ ಆರು ತಿಂಗಳಿಗೊಮ್ಮೆ ವರದಿ ನೀಡಬೇಕಿದ್ದು, ತಕ್ಷಣ ಕಾರ್ಯ ಆರಂಭಿಸುವಂತೆ ಕಂಪನಿಗೆ ಸೂಚಿಸಲಾಗಿದೆ. ಆಗಸ್ಟ್ ಅಂತ್ಯದಲ್ಲಿ ಕಾರ್ಯ ಆರಂಭಿಸುವಂತೆ ಸೂಚಿಸಲಾಗಿದೆ ಎಂದರು.
ಘಟಕದಲ್ಲಿ ಈಗಾಗಲೇ ಕಸದಿಂದ ಗೊಬ್ಬರ ತಯಾರಿಕೆಗೆ ಅಂದಾಜು ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ಅಲ್ಲಿ ಈಗಾಗಲೇ ಕೆಲವು ಸಿಬ್ಬಂದಿಯನ್ನು ನಿಯೋಜಿಸಿ ಕಾರ್ಯ ಆರಂಭಿಸಲಾಗಿದೆ. ಇನ್ನೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.
ಘಟಕಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಬರುವುದು ಬಹುತೇಕ ಕಡಿಮೆಯಾಗಿದೆ. ಮೂಲದಲ್ಲೇ ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸಿ ವಾರಕ್ಕೆ ಒಂದು ಅಥವಾ ಎರಡು ಟ್ರಿಪ್ ಅನ್ನು ಸಿಮೆಂಟ್ ಕಾರ್ಖಾನೆಗಳಿಗೆ ಕಳಿಸಲಾಗುತ್ತಿದೆ ಎಂದರು.
ಕಾಂಪೌಂಡ್ ನಿಮಾಣಕ್ಕೆ ₹3 ಕೋಟಿ: ಕೆಂಪಗೆರೆಯ ಹೇಸಿಗೆಮಡ್ಡಿ (ಗಾರ್ಬೇಜ್ ಯಾರ್ಡ್) ಸುತ್ತ ಕಾಂಪೌಂಡ್ ನಿರ್ಮಿಸಲು 15ನೇ ಹಣಕಾಸು ಯೋಜನೆಯಲ್ಲಿ ₹3 ಕೋಟಿ ಮೀಸಲಿಡಲಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಯಾರ್ಡ್ ಬಳಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಇದರಿಂದಾಗಿ ಸಾರ್ವಜನಿಕರು, ದ್ವಿಚಕ್ರವಾಹನ ಸವಾರರು ಭಯದಲ್ಲಿ ಸಂಚರಿಸುವಂತಾಗಿತ್ತು.
ಸುರಕ್ಷತೆ ದೃಷ್ಟಿಯಿಂದ ಯಾರ್ಡ್ ಸುತ್ತ ಕಾಂಪೌಂಡ್ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು.
ಅವಳಿ ನಗರದಲ್ಲಿ ಕಸ ಸಮಸ್ಯೆ ನಿವಾರಣೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಹಸಿ ಒಣ ಕಸ ವಿಂಗಡಿಸಿ ಕೊಡುವ ಮೂಲಕ ಸಹಕಾರ ನೀಡಬೇಕು.–ಮಲ್ಲಿಕಾರ್ಜುನ ಬಿ.ಎಂ, ಕಾರ್ಯನಿರ್ವಾಹಕ ಎಂಜಿನಿಯರ್ ಘನತ್ಯಾಜ್ಯ ನಿರ್ವಹಣೆ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.