ADVERTISEMENT

ಧಾರವಾಡ | ದೇಸಿ ಊಟ, ಪೇಢಾ, ಗಿರ್ಮಿಟ್‌ಗೆ ಮನಸೋಲದವರಿಲ್ಲ...

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 5:50 IST
Last Updated 31 ಆಗಸ್ಟ್ 2023, 5:50 IST
ಧಾರವಾಡ ಪೇಢಾ
ಧಾರವಾಡ ಪೇಢಾ   

ಮಂಜುನಾಥ ಎಲ್‌.

ಹುಬ್ಬಳ್ಳಿ– ಧಾರವಾಡ ಎಂದರೆ ಥಟ್ಟನೆ ಎಲ್ಲರಿಗೂ ನೆನಪಿಗೆ ಬರುವುದು ಇಲ್ಲಿನ ಹೆಸರಾಂತ ಸಿಹಿ ತಿನಿಸು ’ಪೇಢಾ‘.  ಪೇಢಾವು ತನದೇ ಆದ ವಿಶಿಷ್ಟ ರುಚಿಯಿಂದಾಗಿ ರಾಜ್ಯದಲ್ಲಷ್ಟೆಯಲ್ಲ ವಿಶ್ವದೆಲ್ಲೆಡೆ ಹೆಸರಾಗಿದ್ದು, ರುಚಿ ಹಾಗೂ ಗುಣಮಟ್ಟಕ್ಕಾಗಿ ಜಿಯಾಗ್ರಫಿಕಲ್‌ ಇಂಡಿಕೇಷನ್‌ (ಜಿ.ಐ–ಭೌಗೋಳಿಕ ಸೂಚಿಕೆ) ಮಾನ್ಯತೆ  ಕೂಡ ಪಡೆದಿದೆ.

ಇಲ್ಲಿನ ‘ಪೇಢಾ’ ಹಾಲು, ಸಕ್ಕರೆ, ಶುದ್ಧವಾದ ತುಪ್ಪದ ಹದಭರಿತ ಮಿಶ್ರಣದ ಸಿಹಿತಿನಿಸು ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಸ್ವಾದಿಷ್ಟವಾದ ರುಚಿಯೊಂದಿಗೆ ವಿಶ್ವದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದೆ.

ADVERTISEMENT

ಇದರ ಇತಿಹಾಸವನ್ನು ಕೆಣಕುತ್ತಾ ಹೋದರೆ, 19ನೇ ಶತಮಾನದಲ್ಲಿಯೇ ಜಿಲ್ಲೆಯಲ್ಲಿ ತನ್ನ ಉಗಮವನ್ನು ಪ್ರಸ್ತುತ ಪಡಿಸುತ್ತಾ ಹೋಗುತ್ತದೆ. ಅಂದು ಉತ್ತರ ಭಾರತದಿಂದ ವಲಸೆ ಬಂದ ಕುಟುಂಬವೊಂದು ಧಾರವಾಡದಲ್ಲಿ ನೆಲೆ ನಿಂತು, ಪೇಢಾ ತಯಾರಿಕೆಯಲ್ಲಿ ತೊಡಗಿತು. ಈ ತಿನಿಸು ಕ್ರಮೇಣ ‘ಧಾರವಾಡ ಪೇಢಾ’ ಎಂದು ಹೆಸರಾಯಿತು.

ಆರಂಭದಲ್ಲಿ ಧಾರವಾಡ ಲೈನ್‌ಬಜಾರನ ಅಂಗಡಿಯೊಂದರಲ್ಲಿ ಮಾರಾಟವಾಗುತ್ತಿದ್ದ ಪೇಢಾವು ಇದೀಗ ಜಿಲ್ಲೆಯ ಎಲ್ಲಾ ತಾಲ್ಲೂಕು, ಪಟ್ಟಣಗಳ ಅಂಗಡಿಗಳಲ್ಲಿಯೂ ಮಾರಾಟವಾಗುತ್ತಿದೆ. ಅದರಲ್ಲೂ ಹುಬ್ಬಳ್ಳಿ–ಧಾರವಾಡದ ಬಹುತೇಕ ರಸ್ತೆಗಳ ಅಂಗಡಿಗಳ ಸಾಲಿನಲ್ಲಿ ಒಂದಾದರೂ ಪೇಢಾ ಮಾರಾಟದ ಅಂಗಡಿಯೂ ಇದ್ದೇ ಇರುತ್ತದೆ. ಜೊತೆಗೆ ಇತರೆ ಜಿಲ್ಲೆಗಳಲ್ಲಿಯೂ ಅಂಗಡಿಯನ್ನು ತೆರೆಯುವ ಮೂಲಕ ಅಲ್ಲಿನ ಜನರಿಗೂ ಸ್ವಾದಿಷ್ಟವಾದ ತನ್ನ ಸಿಹಿಯನ್ನು ಉಣಬಡಿಸುತ್ತಿದೆ. ಅಷ್ಟರಮಟ್ಟಿಗೆ ಧಾರವಾಡ ಪೇಢಾದ ರುಚಿಯು ನಾಡಿನ ಎಲ್ಲರ ಮನೆ– ಮನಸ್ಸುಗಳಲ್ಲಿ ತುಂಬಿಕೊಂಡಿದೆ.

ಗೋಧಿ ಹುಗ್ಗಿಗೂ ಮಾನ್ಯತೆ

ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಗುಡಿ ಕೈಗಾರಿಕೆಯೊಂದರಲ್ಲಿ ತಯಾರಾಗುವ ಉತ್ತರ ಕರ್ನಾಟಕದ ಪ್ರಸಿದ್ಧ ಸಿಹಿ ತಿನಿಸುಗಳಲ್ಲಿ ಒಂದಾದ ಗೋಧಿ ಹುಗ್ಗಿಗೂ ಕೇಂದ್ರ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಮಿತಿ (ಸಿಎಸ್‌ಐಆರ್‌)– ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಮಾನ್ಯತೆ ದೊರೆತಿದೆ.

ಗೋಧಿ, ಬೆಲ್ಲ, ಗಸಗಸೆ, ಗೋಡಂಬಿ, ಏಲಕ್ಕಿ ಮಿಶ್ರಣದೊಂದಿಗೆ ಗೋಧಿ ಹುಗ್ಗಿ ಪೇಸ್ಟ್‌ನ್ನು ತಯಾರಿಸಿ,  225 ಗ್ರಾಂ ಡಬ್ಬದಲ್ಲಿ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ. ಇದು ಸಹ ಧಾರವಾಡ ಜಿಲ್ಲೆಯ ಸಿಹಿ ತಿನಿಸುಗಳ ಪಟ್ಟಿಯಲ್ಲಿ ಒಂದಾಗಿದೆ.

ಜೋಳದ ರೊಟ್ಟಿ

ಹುಬ್ಬಳ್ಳಿ–ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಗಟ್ಟಿ ಊಟ ಎಂದರೆ ಬಿಸಿ ಬಿಸಿ ಜೋಳದ ರೊಟ್ಟಿ ಊಟ. ಜಿಲ್ಲೆಯ ಬಹುತೇಕರ ಮನೆಗಳಲ್ಲಿ ನಿತ್ಯ ಜೋಳದ ರೊಟ್ಟಿ ಊಟ ಇದ್ದೇ ಇರುತ್ತದೆ. ಅಲ್ಲದೇ ಇಲ್ಲಿನ ಉಪಾಹಾರ ದರ್ಶಿನಿ, ಹೋಟೆಲ್‌, ಖಾನಾವಳಿಗಳಲ್ಲಿ ಜೋಳದ ರೊಟ್ಟಿ ಊಟಕ್ಕೆ ಮೊದಲ ಆದ್ಯತೆ.

ಬಿಸಿ ಬಿಸಿ ರೊಟ್ಟಿ, ಕೆಂಪುಚಟ್ನಿ, ಅಗಸಿ ಚಟ್ನಿ, ಶೇಂಗಾ ಚಟ್ನಿ, ಗುರಾಳ ಚಟ್ನಿ, ಮಿರ್ಚಿ ಬಜ್ಜಿ, ಎಣ್ಣೆಗಾಯಿ ಪಲ್ಯ ಸೇರಿದಂತೆ ವಿವಿಧ ಬಗೆಯ ತರಕಾರಿ ಪಲ್ಯ, ಮೊಸರು, ಮಜ್ಜಿಗೆ, ಮೆಂತೆ ಸೊಪ್ಪು, ಅನ್ನ, ಬೆಳೆ ಸಾರು, ತಿಳಿಸಾರು ಹೀಗೆ ಬಗೆ ಬಗೆಯ ರುಚಿಯನ್ನು ಒಳಗೊಂಡಿರುವ ಇಲ್ಲಿನ ರೊಟ್ಟಿ ಊಟವನ್ನು ಎಲ್ಲ ಜಾತಿ, ಧರ್ಮದ ಜನರು ಇಷ್ಟಪಡುತ್ತಾರೆ.

ಹುಬ್ಬಳ್ಳಿಯ ಸಿದ್ಧಾರೂಢ ಅಜ್ಜನ ಜಾತ್ರೆ, ರಥೋತ್ಸವ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಜಾತ್ರೆ, ಉತ್ಸವಗಳಲ್ಲಿಯೂ ಇಲ್ಲಿನ ದೇಸಿಯ ಖಡಕ್‌ ರೊಟ್ಟಿ ಊಟಕ್ಕೆ ಹೆಚ್ಚು ಆದ್ಯತೆ. ಮದುವೆ, ಸಭೆ– ಸಮಾರಂಭಗಳಲ್ಲಿಯೂ ಈ ಭಾಗದ ದೇಸಿಯ ರೊಟ್ಟಿ ಊಟ ಇದ್ದೇ ಇರುತ್ತದೆ.

ಸಾವಜಿ ಸ್ಪೆಷಲ್

ಹುಬ್ಬಳ್ಳಿಯ ‘ಊಟದ ಮೆನು’ವಿನಲ್ಲಿ ಸಾವಜಿ ಖಾನಾವಳಿಗಳಿಗೆ ವಿಶೇಷ ಸ್ಥಾನ. ಮಾಂಸಾಹಾರಿ ಪ್ರೀಯರಿಗೆ ಇಷ್ಟವಾದ ತಾಣವೂ ಹೌದು. ಹುಬ್ಬಳ್ಳಿ–ಧಾರವಾಡದ ಬಹುತೇಕ ರಸ್ತೆಗಳಲ್ಲಿ ಈ ಖಾನಾವಳಿಗಳು ಕಾಣಸಿಗುತ್ತವೆ. ಚಿಕನ್, ಮಟನ್ ಊಟ ಎಂದರೆ ಸಾವಜಿ ಖಾನಾವಳಿಗೆ ಹೋಗಬೇಕು ಎನ್ನುವಷ್ಟರ ಮಟ್ಟಿಗೆ ಇಲ್ಲಿ ಪ್ರಸಿದ್ಧವಾಗಿದೆ. 

ಗಿರ್ಮಿಟ್‌, ಮಿರ್ಚಿ ಬಜ್ಜಿ

ಧಾರವಾಡ ಪೇಢಾ, ಜೊಳದ ರೊಟ್ಟಿ ಊಟದ ರೀತಿಯಲ್ಲಿ ಇಲ್ಲಿ ವಿಶೇಷವಾಗಿ ತಯಾರಿಸುವ ಗಿರ್ಮಿಟ್‌– ಮಿರ್ಚಿ ಬಜ್ಜೆಗೆ ಮನಸೋಲದವರೇ ಇಲ್ಲ!ಹುಬ್ಬಳ್ಳಿ–ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿನ ಹೋಟೆಲ್‌, ಮನೆಗಳಲ್ಲಿ ಮಂಡಕ್ಕಿ ಗಿರ್ಮಿಟ್‌, ಬಜ್ಜಿ ತಯಾರಿಸುತ್ತಾರೆ. ಇದು ಇಲ್ಲಿನ ಬಹುತೇಕರ ಇಷ್ಟವಾದ ತಿನಿಸು ಕೂಡ ಆಗಿದೆ. ಸಂಜೆಯಾಗುತ್ತಿದಂತೆ ನಗರದ ಬಹುತೇಕ ಬಿದಿ ಬದಿಯ ಗಾಡಿ ಹೋಟೆಲ್‌ಗಳಲ್ಲಿ ಗಿರ್ಮಿಟ್‌, ಬಿಸಿ ಬಿಸಿ ಮಿರ್ಚಿ ಬಜ್ಜಿ ತಯಾರಿಸಿ ಮಾರಾಟ ಮಾಡುವುದನ್ನು ಕಾಣಬಹುದು. 

ಜೋಳದ ರೊಟ್ಟಿ ಊಟ
ಬೆಸನ್ ಲಾಡು
ಗಿರ್ಮಿಟ್‌ ಮಿರ್ಚಿ ಬಜ್ಜಿ
ಹುಬ್ಬಳ್ಳಿಯ ಹೋಟೆಲ್‌ವೊಂದರಲ್ಲಿ ಸಿಬ್ಬಂದಿಯೊಬ್ಬರು ಗಿರ್ಮಿಟ್‌ ಮಾಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.