ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಗೆ ಮೂಲ ಸೇವೆಯಿಂದ ದೂರವಾಗುವ ಸ್ಥಿತಿ

ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರೈಸಲಾಗದ ಹೆಚ್ಚಿನ ಕಾರ್ಯಭಾರ

ಗಣೇಶ ವೈದ್ಯ
Published 21 ನವೆಂಬರ್ 2024, 6:43 IST
Last Updated 21 ನವೆಂಬರ್ 2024, 6:43 IST
ಹುಬ್ಬಳ್ಳಿಯ ಅಂಗನವಾಡಿಯೊಂದರಲ್ಲಿ ಕಲಿಕೆಯಲ್ಲಿ ನಿರತ ಮಕ್ಕಳು (ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿಯ ಅಂಗನವಾಡಿಯೊಂದರಲ್ಲಿ ಕಲಿಕೆಯಲ್ಲಿ ನಿರತ ಮಕ್ಕಳು (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆಟ, ಪಾಠದ ಜೊತೆಗೆ ಆರೈಕೆ ಜವಾಬ್ದಾರಿ ನಿಭಾಯಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕಾರ್ಯಭಾರ ವಹಿಸಲಾಗಿದ್ದು, ನಿತ್ಯವೂ ಸಂಕಷ್ಟ ಎದುರಿಸುವಂತಾಗಿದೆ. ತಮಗೆ ವಹಿಸಲಾದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವುದು ಕಷ್ಟ ಎಂಬ ಅಳುಕು ಅವರಿಗೆ ಕಾಡುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ 3–6 ವರ್ಷದೊಳಗಿನ 40 ಸಾವಿರಕ್ಕೂ ಅಧಿಕ ಮಕ್ಕಳಿದ್ದಾರೆ. 1,622 ಅಂಗನವಾಡಿ ಕೇಂದ್ರಗಳಿವೆ. 1,622 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 1,616 ಅಂಗನವಾಡಿ ಸಹಾಯಕಿಯರ ಹುದ್ದೆಗಳೂ ಮಂಜೂರಾಗಿವೆ. ಆದರೆ, 43 ಕಾರ್ಯಕರ್ತೆಯರ ಮತ್ತು 255 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಅಂಗನವಾಡಿಗಳ ಹೊಣೆಯನ್ನು ಸಮೀಪದ ಅಂಗನವಾಡಿಯ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ಮಕ್ಕಳನ್ನು ನೋಡಿಕೊಳ್ಳುವುದು, ಪಾಠ ಮಾಡುವುದು ಅಲ್ಲದೇ ಗರ್ಭಿಣಿಯರಿಗೆ ಪೂರಕ ಪೌಷ್ಟಿಕ ಆಹಾರ ಪೂರೈಸುವುದು, ಆರೋಗ್ಯ ತಪಾಸಣೆ, ಮಾಹಿತಿ ಸೇವೆ, ಆರೋಗ್ಯ ಮತ್ತು ಪೌಷ್ಟಿಕತೆ ಮಾಹಿತಿ, ಚುಚ್ಚುಮದ್ದು ನೀಡುವುದು ಹೀಗೆ ಹಲವು ಕಾರ್ಯಭಾರ ಕಾರ್ಯಕರ್ತೆಯರಿಗೆ ಹೊರಿಸಲಾಗಿದೆ. ಇವೆಲ್ಲದರ ಜೊತೆಗೆ ಸಮೀಪದ ಅಂಗನವಾಡಿ ಕೇಂದ್ರಗಳನ್ನೂ ನೋಡಿಕೊಳ್ಳಬೇಕು.

ADVERTISEMENT

‘ಸರ್ಕಾರದ ಯಾವುದೇ ಯೋಜನೆ ಬಂದರೂ ಮೊದಲು ಅಂಗನವಾಡಿ ಕಾರ್ಯಕರ್ತೆಯರನ್ನೇ ತೊಡಗಿಸಲಾಗುತ್ತದೆ. 50ಕ್ಕೂ ಅಧಿಕ ಅಂಕಿ ಅಂಶಗಳ ದಾಖಲೆಪತ್ರಗಳನ್ನು ನಿರ್ವಹಿಸಬೇಕು. ಕೆಲ ಮಾಹಿತಿ ಮೊಬೈಲ್‌ನಲ್ಲೂ ಅಪ್‌ಡೇಟ್ ಮಾಡಬೇಕು. ಅನ್ಯ ಜವಾಬ್ದಾರಿಗಳ ನಡುವೆ ನಮ್ಮ ಮೂಲ ಸೇವೆಯನ್ನೇ ನಿಭಾಯಿಸಲು ಆಗದ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಧಾರವಾಡ ಗ್ರಾಮೀಣ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ಹಣ ಪಾವತಿ ವಿಳಂಬ: ‘ನಮಗೆ ನಾಲ್ಕು ತಿಂಗಳಿನಿಂದ ಗೌರವಧನ ಪಾವತಿ ಆಗಿರಲಿಲ್ಲ. ಕಳೆದ ತಿಂಗಳು ಜಿಲ್ಲೆಯಲ್ಲಿ ಗೌರವಧನ ಬಿಡುಗಡೆ ಆಗಿದೆ. ಗೌರವಧನವೂ ನಾಲ್ಕು ತಿಂಗಳು ಬಾರದ್ದಕ್ಕೆ ತುಂಬಾ ತೊಂದರೆ ಅನುಭವಿಸಿದೆವು. ಜೀವನ ನಿರ್ವಹಣೆ ಕಷ್ಟವಾಗಿತ್ತು. ಈ ಸಮಸ್ಯೆ ಪದೇ ಪದೇ ಆಗುತ್ತಿದೆ’ ಎಂದು ಅವರು ಹೇಳಿದರು.

ಮಕ್ಕಳಿಗೆ, ಗರ್ಭಿಣಿಯರಿಗೆ ಮೊಟ್ಟೆ ಪೂರೈಸುವ ಕಾರ್ಯವನ್ನೂ ಇವರು ನಿರ್ವಹಿಸುತ್ತಿದ್ದಾರೆ. ಒಂದು ಮೊಟ್ಟೆಗೆ ₹6ರಂತೆ ಸರ್ಕಾರ ಹಣ ನೀಡುತ್ತದೆ. ಆದರೆ ಮೊಟ್ಟೆ ದರ ಕೆಲವೊಮ್ಮೆ ₹6ಕ್ಕಿಂತ ಹೆಚ್ಚಾಗುತ್ತದೆ. ಮೊಟ್ಟೆ ಖರೀದಿಯ ಬಿಲ್ ಪಾವತಿ ಕೂಡ ಕೆಲವೊಮ್ಮೆ ವಿಳಂಬವಾಗುತ್ತದೆ. ಆಗ ಅವರು ಸಾಲ ಮಾಡಿ ಹಣ ತಂದು ಕಾರ್ಯನಿರ್ವಹಣೆ ಮಾಡುತ್ತಾರೆ.

‘ಸರ್ಕಾರ ನಮ್ಮ ಗೌರವಧನ ಹಾಗೂ ವಿವಿಧ ಬಿಲ್‌ಗಳನ್ನು ಕಾಲಕಾಲಕ್ಕೆ ಪಾವತಿಸಬೇಕು. ಅನಗತ್ಯ ಕೆಲಸಗಳನ್ನು ಮಾಡಿಸುವ ಬದಲು ನಮ್ಮ ಮೂಲ ಸೇವಾ ಕಾರ್ಯಕ್ಕೆ ಒತ್ತುಕೊಡಬೇಕು. ಆ ಮೂಲಕ ಪುಟಾಣಿಗಳ ಪಾಠ–ಆರೈಕೆ ಬಗ್ಗೆ ಹೆಚ್ಚಿನ ಗಮನ ನೀಡಲು ಅವಕಾಶ ಮಾಡಿಕೊಡಬೇಕು’ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಆಶಯ.

ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆಗಳನ್ನು ಶೀಘ್ರವೇ ಪೂರ್ಣಗೊಳಿಸಿ ಅಂಗನವಾಡಿಗೆ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ನಿಯೋಜಿಸಲಾಗುವುದು.
–ಹುಲಿಗೆಮ್ಮ ಕುಕನೂರ, ಉಪ ನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಪೂರ್ಣಗೊಳ್ಳದ ನೇಮಕಾತಿ ಪ್ರಕ್ರಿಯೆ
ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ 22 ಕಾರ್ಯಕರ್ತೆಯರು 253 ಸಹಾಯಕಿಯರ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ ತಿಂಗಳೇ ಕಳೆದರೂ ಈ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳುತ್ತಿಲ್ಲ. ಇನ್ನುಳಿದ 21 ಕಾರ್ಯಕರ್ತೆಯರ ಹುದ್ದೆಗಳಿಗೆ ಸಹಾಯಕಿಯರಿಗೆ ಬಡ್ತಿ ನೀಡಲಾಗುತ್ತಿದೆ. ಇದು ಕೂಡ ಪರಿಶೀಲನೆ ಹಂತದಲ್ಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.