ಹುಬ್ಬಳ್ಳಿ: ಲವ್ ಜಿಹಾದ್ ಪ್ರಕರಣಗಳಿಂದ ಹಿಂದೂ ಯುವತಿಯರು, ಮಹಿಳೆಯರನ್ನು ರಕ್ಷಿಸಲು ಶ್ರೀರಾಮ ಸೇನೆ ವತಿಯಿಂದ ಸಹಾಯವಾಣಿ ಆರಂಭಿಸಲಾಗಿದೆ. ಇಂತಹ ಪ್ರಕರಣಗಳು ನಿಲ್ಲುವವರೆಗೆ ನಿರಂತರವಾಗಿ ಸಹಾಯವಾಣಿ ಕಾರ್ಯನಿರ್ವಹಿಸಲಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹಾಯವಾಣಿಗೆ ಚಾಲನೆ ನೀಡಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದೂ ಯುವತಿಯರು ಮತ್ತು ಮಹಿಳೆಯರು ಸಹಾಯವಾಣಿ ಸಂಖ್ಯೆ 90904 43444ಗೆ ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಕರೆ ಮಾಡಬಹದು. ತಕ್ಷಣ ಅವರ ಸಮಸ್ಯೆಗೆ ಸ್ಪಂದಿಸಲಾಗುವುದು. ಲವ್ ಜಿಹಾದ ಮಾತ್ರವಲ್ಲದೆ ಇತರ ಪ್ರೇಮ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿರುವ ನಮ್ಮ ಸಂಘಟನೆಯ ಕಚೇರಿಯಿಂದ ಸಹಾಯವಾಣಿಯನ್ನು ನಿರ್ವಹಣೆ ಮಾಡಲಾಗುವುದು. ಇದಕ್ಕೆ ವಕೀಲರು, ಮಹಿಳಾ ಆಪ್ತಸಮಾಲೋಚಕರನ್ನೊಳಗೊಂಡ ಐವರ ತಂಡ ಕಾರ್ಯನಿರ್ವಹಿಸಲಿದೆ ಎಂದರು.
ಸಹಾಯವಾಣಿಗೆ ಕರೆ ಮಾಡಿದ ಮಹಿಳೆಯರು, ಯುವತಿಯರಿಗೆ ಆಪ್ತ ಸಮಾಲೋಚನೆ ಮೂಲಕ ಧೈರ್ಯ ತುಂಬಲಾಗುವುದು. ಹಿಂದೂ ಮಹಿಳೆಯರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬಾರದು. ನಿಮ್ಮ ಜತೆಗೆ ಶ್ರೀರಾಮಸೇನಾ ಸಂಘಟನೆ ಇರಲಿದೆ ಎಂದು ಹೇಳಿದರು.
ಹಿಂದೂ ಯುವತಿಯರು, ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಪ್ರೀತಿ, ಪ್ರೇಮದ ಹೆಸರಿನಲ್ಲಿ ಇಸ್ಲಾಂನ ಕುತಂತ್ರದಿಂದ ಅತ್ಯಾಚಾರ, ಮತಾಂತರ ಮಾಡಲಾಗುತ್ತಿದೆ. ಇತಿಹಾಸದ ಕಾಲದಿಂದಲೂ ಇಸ್ಲಾಂನ ಕ್ರೌರ್ಯ ನಿರಂತರವಾಗಿ ನಡೆಯುತ್ತಲಿದೆ. ಇಂತಹ ಕ್ರೂರಿಗಳಿಗೆ ತಕ್ಕ ಉತ್ತರ ಕೊಡಲು ಹಿಂದೂ ಯುವತಿಯರು ಮತ್ತು ಮಹಿಳೆಯರಿಗೆ ಶ್ರೀ ರಾಮ ಸೇನಾದಿಂದ ಅಗತ್ಯ ತರಬೇತಿ ನೀಡಲಾಗುವುದು ಎಂದರು.
ಹಿಂದೂ ಯುವತಿಯರ ಕೊಲೆಗಳು ನಡೆದಾಗ ರಾಜಕಾರಣಿಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವ ಬದಲು ಕಾನೂನು ಪ್ರಕ್ರಿಯೆ ಬಿಗಿಗೊಳಿಸಬೇಕು. ಕಾನೂನಿನಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಸಾಕ್ಷ್ಯ ಸಿಗಲಿಲ್ಲವೆಂದು ಬಿಡುಗಡೆ ಮಾಡಿದರೆ ಇಬ್ಬರಿಗೂ ನಾವೇ ತಕ್ಕ ಶಿಕ್ಷೆ ವಿಧಿಸುತ್ತೇವೆ ಎಂದರು.
ಇಸ್ಲಾಂನಲ್ಲಿ ಮಹಿಳೆಯರಿಗೆ ಗೌರವ, ರಕ್ಷಣೆ ಇಲ್ಲ. ಹಿಂದೂ ಯುವತಿಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮುಸ್ಲಿಂರು ಹಿಂದೂ ಯುವತಿಯರಿಗೆ ತೊಂದರೆ ಕೊಟ್ಟರೆ ನಾವು ಕೋರ್ಟ್‌ಗೆ ಹೋಗಲ್ಲ. ಬದಲಾಗಿ ನಾವೇ ತಕ್ಕ ಉತ್ತರ ಕೊಡುತ್ತೇವೆ ಎಂದು ಎಚ್ಚರಿಸಿದರು.
ಹಿಂದೂ ಯುವತಿಯರ ಪಾಲಕರು ಸಹಿತ ಮಕ್ಕಳ ಮೇಲೆ ನಿಗಾವಹಿಸಬೇಕು. ಅವರನ್ನು ಹದ್ದುಬಸ್ತಿನಲ್ಲಿಡಬೇಕು. ಅವರ ಕಾಲೇಜ್‌ಗೆ ಭೇಟಿಕೊಟ್ಟು ಪರಿಶೀಲಿಸಬೇಕು. ಪಶ್ಚಾತ್ತಾಪ ಪಡುವ ಬದಲು ಎಚ್ಚೆತ್ತುಕೊಳ್ಳಬೇಕು ಎಂದರು.
ಸರ್ಕಾರ, ಪೊಲೀಸ್ ಇಲಾಖೆ ವಿಫಲ ಆಗಿರುವುದರಿಂದ ನಾವು ಸಹಾಯವಾಣಿ ಆರಂಭಿಸಬೇಕಾಯಿತು. ನೈತಿಕವಾಗಿ ನಾವು ಈ ಜವಾಬ್ದಾರಿ ತೆಗೆಕೊಂಡಿದ್ದೇವೆ. ನಾವು 2500 ಮುಸ್ಲಿಂ ಯುವತಿಯರನ್ನು ಹಿಂದೂ ಐವಕರೊಂದಿಗೆ ಮದುವೆ ಮಾಡಿಸಿದ್ದೇವೆ. ಅವರಿಗೆ ರಕ್ಷಣೆ ಒದಗಿಸಿ ಉದ್ಯೋಗ ಸಹ ನೀಡಲಾಗಿದೆ. ಆದರೆ ಮುಸ್ಲಿಂ ರ ಉದ್ದೇಶವೇ ಬೇರೆ ನಮ್ಮ ಉದ್ದೇಶ ಬೇರೆ ಎಂದು ಹೇಳಿದರು.
ಸತ್ಯ ಪ್ರಮೋದೇಂದ್ರ ಸ್ವಾಮೀಜಿ, ಮಹೇಶ ರೋಖಡೆ, ಅಣ್ಷಪ್ಪ ದಿವಟಗಿ, ವಿನಯ ಅಂಗ್ರೋಳಿ, ಅಕ್ಷಯ ಮಾವಿನಕಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.