ಹುಬ್ಬಳ್ಳಿ: ಕರ್ನಾಟಕ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್, ಧಾರವಾಡ ಜಿಲ್ಲಾ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ರಾಜ್ಯ ರ‍್ಯಾಂಕಿಂಗ್ ನಾಲ್ಕನೇ ಸ್ಕೇಟಿಂಗ್ ಚಾಂಪಿಯನ್‌ಷಿಪ್ ಅನ್ನು ಸೆ.14 ಮತ್ತು ಸೆ.15 ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಕಾಡಪ್ಪನವರ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಒಂಟಿ ಹನುಮಂತ ದೇವಸ್ಥಾನ ಸಮೀಪದ ದತ್ತಾ ಪ್ರಾಪರ್ಟೀಸ್‌ನಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
ಸೆ. 14ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರೂಲರ್ ಸ್ಕೇಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಇಂದೂಧರ ಸೀತಾರಾಮ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಪಾಲ್ಗೊಳ್ಳಲಿದ್ದಾರೆ. ಭಾರತೀಯ ಸ್ಕೇಟಿಂಗ್ ತಂಡದ ಕೋಚ್ ಎಚ್.ಆರ್. ರವೀಶ ಮಾರ್ಗದರ್ಶನದಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಒಂದನೇ ರ‍್ಯಾಂಕಿಂಗ್, ಶಿವಮೊಗ್ಗ–ಎರಡನೇ ಮತ್ತು ಮೈಸೂರಿನಲ್ಲಿ ಮೂರನೇ ರ‍್ಯಾಂಕಿಂಗ್ ಚಾಂಪಿಯನ್‌ಷಿಪ್ ಈಗಾಗಲೇ ಪೂರ್ಣಗೊಂಡಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ರ‍್ಯಾಂಕಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳ 400 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಪ್ರತಿ ಕ್ರೀಡಾಪಟುವಿಗೆ ₹700 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಇನ್‌ಲೈನ್ ಮತ್ತು ಕ್ವಾರ್ಡ್ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
5 ವರ್ಷ ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ವಿವಿಧ ವಯೋಮಾನದ ಬಾಲಕಿಯರು, ಬಾಲಕರು, ಮಹಿಳೆಯರು ಹಾಗೂ ಪುರುಷರು ಪಾಲ್ಗೊಳ್ಳಬಹುದು. 200 ಮೀಟರ್‌ನಿಂದ 10,000 ಮೀಟರ್ ವರೆಗೆ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.
ಬಿ.ಎ. ಪಾಟೀಲ, ಲಿಂಗರಾಜ ಅಂಗಡಿ, ವಸಂತ ಭಸ್ಮೆ, ಜಗದೀಶ ಜಕರಡ್ಡಿ, ಧಾರವಾಡ ಜಿಲ್ಲೆಯ ಕೋಚ್ ಶಶಿಧರ ಪಾಟೀಲ, ಅಕ್ಷಯ ಸೂರ್ಯವಂಶಿ, ವಿರೂಪಾಕ್ಷಿ ಕಮ್ಮಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.