ADVERTISEMENT

ಹುಬ್ಬಳ್ಳಿ: ವಿದ್ಯುತ್‌ ಕಳ್ಳತನಕ್ಕೆ ಬೀಳದ ಕಡಿವಾಣ

ಶ್ರೀಕಾಂತ ಕಲ್ಲಮ್ಮನವರ
Published 28 ಅಕ್ಟೋಬರ್ 2024, 4:58 IST
Last Updated 28 ಅಕ್ಟೋಬರ್ 2024, 4:58 IST
<div class="paragraphs"><p> ವಿದ್ಯುತ್‌</p></div>

ವಿದ್ಯುತ್‌

   

ಹುಬ್ಬಳ್ಳಿ: ವಿವಿಧ ಯೋಜನೆಗಳಡಿ ಉಚಿತ ಹಾಗೂ ರಿಯಾಯಿತಿ ದರದಲ್ಲಿ ವಿದ್ಯುತ್‌ ನೀಡುತ್ತಿದ್ದರೂ ಧಾರವಾಡ ಜಿಲ್ಲೆಯಲ್ಲಿ ವಿದ್ಯುತ್‌ ಕಳ್ಳತನ ಮುಂದುವರಿದಿದೆ. ವಿದ್ಯುತ್‌ ಕಳ್ಳತನ ತಡೆಯಲು ಹರಸಾಹಸ ಪಡುತ್ತಿರುವ ಇಲಾಖೆಗೆ ಇದು ಸಮಸ್ಯೆ ತಂದೊಡ್ಡಿದೆ. ಅರಿವಿನ ಕೊರತೆ ಹಾಗೂ ಏನೂ ಆಗಲ್ಲ ಎನ್ನುವ ಅಸಡ್ಡೆಯ ಕಾರಣದಿಂದಾಗಿ ಪ್ರಕರಣಗಳು ಹೆಚ್ಚಾಗಿವೆ ಎನ್ನುತ್ತವೆ ಇಲಾಖೆಯ ಮೂಲಗಳು.

ಇಂದಿನ ಜೀವನ ಶೈಲಿಗೆ ವಿದ್ಯುತ್‌ ಅವಶ್ಯಕ ವಸ್ತುವಾಗಿದೆ. ಸಮರ್ಪಕ ವಿದ್ಯುತ್‌ ಪೂರೈಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ.  ಗೃಹ ಬಳಕೆಗಾಗಿ 200 ಯೂನಿಟ್‌ವರೆಗೆ ಉಚಿತ, 10 ಎಚ್‌ಪಿ ಸಾಮರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಹಾಗೂ ಸಣ್ಣ ಕೈಗಾರಿಕೆಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಪೂರೈಸುತ್ತಿದೆ. ಇಷ್ಟರ ಹೊರತಾಗಿಯೂ ವಿದ್ಯುತ್‌ ಕಳ್ಳತನ ಪ್ರಕರಣಗಳು ನಿಯಂತ್ರಣಕ್ಕೆ ಬಾರದಿರುವುದು ಇಲಾಖೆಗೆ ತಲೆನೋವು ತಂದಿದೆ.

ADVERTISEMENT

ವಿವಿಧ ರೀತಿಯ ಕಳ್ಳತನ:

ವಿದ್ಯುತ್‌ ತಂತಿಗೆ ಕೊಕ್ಕೆ ಹಾಕಿ, ನೇರವಾಗಿ ವಿದ್ಯುತ್‌ ಕಳ್ಳತನ ಮಾಡುವ ಪ್ರಕರಣಗಳನ್ನು ಕೊಗನೈಜೆಬಲ್‌ ಪ್ರಕರಣಗಳಡಿ ದಾಖಲು ಮಾಡಲಾಗುತ್ತದೆ. ಗೃಹ ಬಳಕೆಯ ವಿದ್ಯುತ್‌ ಸಂಪರ್ಕವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು, ವಿದ್ಯುತ್‌ ಮೀಟರ್‌ನಲ್ಲಿ ಏರುಪೇರು ಮಾಡುವುದು ಹಾಗೂ ಇತ್ಯಾದಿ ಪ್ರಕರಣಗಳನ್ನು ನಾನ್‌– ಕೊಗನೈಜೆಬಲ್‌ ಪ್ರಕರಣಗಳಡಿ ದಾಖಲು ಮಾಡಲಾಗುತ್ತದೆ.

ಮದುವೆ, ಸಮಾರಂಭಗಳಲ್ಲಿ ಪಕ್ಕದ ವಿದ್ಯುತ್‌ ತಂತಿಗೆ ಕೊಕ್ಕೆ ಹಾಕುವುದು, ಮನೆ ಕಟ್ಟುವಾಗ ಕೊಕ್ಕೆ ಹಾಕುವುದು ಹಾಗೂ ಹೊಲಗಳಲ್ಲಿ ನೀರಾವರಿ ಪಂಪ್‌ ಸೆಟ್‌ಗೆ ವಿದ್ಯುತ್‌ ಸಂಪರ್ಕ ಪಡೆಯಲು ಕೊಕ್ಕೆ ಹಾಕುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಕೆಇಆರ್‌ಸಿ ನಿಯಮಾವಳಿಗಳಂತೆ, ದಂಡ ವಿಧಿಸಲಾಗುತ್ತದೆ. ಇಂತಹದ್ದೆ ಅಪರಾಧವನ್ನು ಪುನರಾವರ್ತನೆ ಮಾಡಿದರೆ ಅವರ ವಿರುದ್ಧ ಎಫ್‌.ಐ.ಆರ್‌ ದಾಖಲಿಸಲಾಗುತ್ತದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತದೆ. ಅಪರಾಧ ಸಾಬೀತಾದರೆ 6 ತಿಂಗಳವರೆಗೆ ಜೈಲುಶಿಕ್ಷೆಯೂ ಆಗಬಹುದು.

ಪ್ರಕರಣಗಳಲ್ಲಿ ಏರಿಳಿತ:

ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ, ವಿದ್ಯುತ್‌ ಕಳ್ಳತನ ಪ್ರಕರಣಗಳು ನಿಯಂತ್ರಣವಾಗಿಲ್ಲ. ಏರಿಳಿತ ಕಂಡುಬಂದಿದೆ. 2021ರಲ್ಲಿ 132, 2022ರಲ್ಲಿ 105 ಹಾಗೂ 2023ರಲ್ಲಿ 123 ಕೊಗನೈಜೆಬಲ್‌ ಪ್ರಕರಣಗಳು ದಾಖಲಾಗಿವೆ. ಮೂರು ವರ್ಷಗಳ ಅವಧಿಯಲ್ಲಿ 1,42,103 ಯೂನಿಟ್‌ ವಿದ್ಯುತ್‌ ದುರುಪಯೋಗವಾಗಿದೆ. ಅಂದಾಜು ₹ 29,04,101 ದಂಡ ವಿಧಿಸಲಾಗಿದೆ.

 ಇದೇ ರೀತಿ ನಾನ್‌– ಕೊಗನೈಜೆಬಲ್‌ ಪ್ರಕರಣಗಳಲ್ಲೂ ಆಗಿದೆ. 2021ರಿಂದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 1,759 ಪ್ರಕರಣಗಳು ದಾಖಲಾಗಿವೆ. 12,18,080 ಯೂನಿಟ್‌ ವಿದ್ಯುತ್‌ ದುರುಪಯೋಗವಾಗಿದೆ. ₹ 2,71,35,709 ದಂಡ ವಿಧಿಸಲಾಗಿದೆ.

2021ರಿಂದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 2,119 ಪ್ರಕರಣಗಳು ದಾಖಲಾಗಿವೆ. 13,60,183 ಯೂನಿಟ್‌ಗಳ ದುರುಪಯೋಗವಾಗಿದೆ. ₹ 3,00,39,810 ದಂಡ ವಿಧಿಸಲಾಗಿದೆ.

ರೈತರ ಅಳಲು:

ನೀರಾವರಿ ಪಂಪ್‌ಸೆಟ್‌ಗಳಿಗೆ ನಿರಂತರ  ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ. ಇದಲ್ಲದೇ, ಗುಣಮಟ್ಟದ ವಿದ್ಯುತ್‌ ಕೂಡ ಇರುವುದಿಲ್ಲ. ಹೀಗಾಗಿ ರೈತರು ವಿದ್ಯುತ್‌ ಕೇಂದ್ರದ ನೇರ ತಂತಿಮಾರ್ಗಕ್ಕೆ ಕೊಕ್ಕೆ ಹಾಕಿ, ವಿದ್ಯುತ್ ಪಡೆಯುತ್ತಾರೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.

ಹೊಲಗಳಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಿ, ಬೋರ್‌ವೆಲ್‌ ಕೊರೆಯಿಸಿಕೊಂಡಿರುತ್ತಾರೆ. ವರ್ಷವಿಡೀ ಬೆಳೆ ಬೆಳೆಯಬೇಕಾದರೆ ಬೋರ್‌ವೆಲ್‌ನಿಂದ ನಿರಂತರವಾಗಿ ನೀರು ಪಡೆಯಬೇಕಾಗುತ್ತದೆ. ಇದಕ್ಕೆ ನಿರಂತರ ವಿದ್ಯುತ್‌ ಬೇಕಾಗುತ್ತದೆ. ಆದರೆ, ಸರ್ಕಾರ ಹಗಲಿನ ವೇಳೆ 3–4 ತಾಸು ಮಾತ್ರ ವಿದ್ಯುತ್‌ ನೀಡುತ್ತದೆ. ಇದು ಸಾಕಾಗುವುದಿಲ್ಲ. ಅದಕ್ಕಾಗಿ ರೈತರು ವಿದ್ಯುತ್‌ ಕಂಬಕ್ಕೆ ಕೊಕ್ಕೆ ಹಾಕುತ್ತಾರೆ ಎನ್ನುತ್ತಾರೆ ರೈತ ಮುಖಂಡರು.

ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಈಗ ನೀಡುತ್ತಿರುವ ವಿದ್ಯುತ್‌ನ ಗುಣಮಟ್ಟದ ಬಗ್ಗೆಯೂ ರೈತರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಉತ್ತಮ ಗುಣಮಟ್ಟದ ವಿದ್ಯುತ್‌ ಇರದಿದ್ದರೆ ಪಂಪ್‌ಸೆಟ್‌ ಮೋಟಾರ್‌ ಕಾರ್ಯನಿರ್ವಹಿಸುವುದಿಲ್ಲ. ನೀರಾವರಿ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಗುಣಮಟ್ಟದ ವಿದ್ಯುತ್‌ ನೀಡಬೇಕು ಎಂದು ಅವರು ಒತ್ತಾಯಿಸಿದರು.

‘ನಗರವಾಸಿಗಳಿಗೆ ಐಷಾರಾಮಿ ಜೀವನ ಕಳೆಯಲು ದಿನವಿಡೀ ನಿರಂತರ ವಿದ್ಯುತ್‌ ನೀಡಲಾಗುತ್ತದೆ. ಅನ್ನ ಬೆಳೆಯುವ ರೈತನಿಗೆ ಕೇವಲ 3–4 ತಾಸು ವಿದ್ಯುತ್‌ ನೀಡಿದರೆ ಹೇಗೆ? ಇನ್ನೊಂದೆಡೆ, ಕೈಗಾರಿಕೋದ್ಯಮಿಗಳ ಲಕ್ಷಾಂತರ ರೂಪಾಯಿ ವಿದ್ಯುತ್‌ ಶುಲ್ಕವನ್ನು ಸರ್ಕಾರ ಮನ್ನಾ ಮಾಡುತ್ತದೆ. ರೈತರ ಪರವಾಗಿರಬೇಕಾದ ಸರ್ಕಾರ, ಬಂಡವಾಳಶಾಹಿಗಳ ಪರವಾಗಿರುವುದು ದುರ್ದೈವ’ ಎಂದು ರೈತ ಮುಖಂಡ ಗಂಗಾಧರ ಪಾಟೀಲಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.