ವಿಶ್ವೇಶತೀರ್ಥ ವೇದಿಕೆ(ಹುಬ್ಬಳ್ಳಿ): 'ಮತಾಂತರ ಮಾಡುವ ಮೂಲಕ ಕೆಲವರು ಹಿಂದೂ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದ್ದು, ಎಲ್ಲರೂ ಸಂಘಟಿತರಾಗಿ ಸಮುದಾಯದ ರಕ್ಷಣೆಗೆ ಮುಂದಾಗಬೇಕು' ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಹೇಳಿದರು.
ಇಲ್ಲಿನ ಕುಸಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್'ನಲ್ಲಿ ಶನಿವಾರದಿಂದ ಆರಂಭವಾದ ಎರಡು ದಿನದ ಅಖಿಲ ಭಾರತ ಮಾಧ್ವ ಮಹಾಮಂಡಲದ 29ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ ಹಾಗೂ ನ್ಯಾಯಸುಧಾ ಮಂಗಲೋತ್ಸವದಲ್ಲಿ ಅವರು ಮಾತನಾಡಿದರು.
'ಒಂದೆಡೆ ಹಿಂದೂ ಸಮಾಜ ಒಡೆಯುತ್ತಿದ್ದರೆ ಮತ್ತೊಂದೆಡೆ ಇತರ ಸಂಘಟನೆಗಳು ಮಾಧ್ವ ಮತ್ತು ಹಿಂದೂ ಸಮುದಾಯದ ನಡುವೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡುತ್ತಿವೆ. ಇದು ಮಾಧ್ವರ ಪ್ರಗತಿಗೆ ತೊಡಕಾಗುತ್ತಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಹಾಗೂ ಮಾಧ್ವರು ಸಂಘಟಿತರಾಗಿ ಗಟ್ಟಿಯಾಗಿ ನಿಲ್ಲಬೇಕು. ಪೇಜಾವರ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಿದೆ' ಎಂದರು.
'ಮಾಧ್ವ ಸಮಾಜದಲ್ಲಿರುವ ಯಾರಿಗೇ ಕಷ್ಟ ಎದುರಾದರೂ, ಸಮಾಜದ ಎಲ್ಲರೂ ಸಂಘಟಿತರಾಗಿ ಅವರ ನೆರವಿಗೆ ನಿಲ್ಲಬೇಕು. ಮತಾಂತರವನ್ನು ಗಮದಲ್ಲಿಟ್ಟುಕೊಂಡು ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಬೇಕು' ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಎ. ಹರಿದಾಸ ಭಟ್ಟ, 'ದೇಶದಲ್ಲಿ ಅವೈದಿಕ ದರ್ಶನಗಳು ಪ್ರಾಬಲ್ಯ ಮೆರೆದಾಗ ವೈದಿಕ ದರ್ಶನ ಪ್ರತಿಪಾದಿಸಿದವರು ಶ್ರೀ ಶಂಕರಾಚಾರ್ಯರು. ಆತ್ಮನೆಂಬ ಒಂದು ಸತ್ಯವಾದ ತತ್ವ ಇದೆ ಎಂದು ಸಾಧಿಸಿದರು. ಜಗತ್ತು ಮಿಥ್ಯ ಎನ್ನುವ ಮೂಲಕ ಜಗತ್ತಿನ ಅಸ್ತಿತ್ವವನ್ನೂ ನಿರಾಕರಿಸಿದರು' ಎಂದರು.
'ಈ ತತ್ವಜ್ಞಾನ ಸಮ್ಮೇಳನ ಮಾಧ್ವ ಸಮಾಜದ ಸಂಭ್ರಮದ ಸಮಾವೇಶ. ಇಲ್ಲಿ ನಾವೆಲ್ಲ ಒಂದೇ ಸಮಾಜದ ಬಾಂಧವರು ಎಂಬ ಐಕ್ಯತೆ ಮೂಡಬೇಕು. ಸಮಾಜದ ಬಗ್ಗೆ ಚಿಂತನೆಗಳು ನಡೆದು, ತಪ್ಪುಗಳಿದ್ದರೆ ತಿದ್ದಿಕೊಂಡು ಸರಿಯಾದ ದಾರಿಯಲ್ಲಿ ನಡೆಯುವಂತಾಗುವ ಸಂದೇಶಗಳು ಸಿಗಬೇಕು. ಸಮಾಜದ ಕುಂದು-ಕೊರತೆಗಳ ವಿಮರ್ಶೆ ನಡೆದು ಆರೋಗ್ಯವಂತ ಬಲಿಷ್ಠ ಸಮಾಜ ನಿರ್ಮಾಣಗೊಳ್ಳಬೇಕು' ಎಂದು ಹೇಳಿದರು.
ಶಿರೂರ ಮಠದ ವೇದವರ್ಧನ ತೀರ್ಥರು, ಬನ್ನಂಜೆ ರಾಘವೇಂದ್ರ ತೀರ್ಥರು, ಅದುಮಾರು ಮಠದ ಈಶಪ್ರಿಯ ತೀರ್ಥರು, ಲೇಖಕ ಚಕ್ರವರ್ತಿ ಸೂಲಿಬೆಲೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀಕಾಂತ ಕೆಮ್ತೂರ, ಎಚ್.ವಿ. ಗೌತಮ, ಗುಜ್ವಾಡಿ ನಾಯಕ, ಶ್ರೀಪಾದ ಸಿಂಗನಮಲ್ಲಿ, ಅನಂತರಾಜ ಭಟ್, ಕೃಷ್ಣರಾಜ ಕೆಮ್ತೂರ, ಸಿ.ಎಚ್. ಬದರೀನಾಥಾಚಾರ್ಯ, ಎ.ಪಿ. ಐತಾಳ, ವನಜಾ ಕಾಥೋಟೆ, ಅಶ್ವಿನಿ ಬ್ಯಾಡಗಿ, ಸುನೀಲ ಗುಮಾಸ್ರೆ, ಮನೋಹರ ಪರ್ವತಿ, ವಿಶ್ವನಾಥ ಕುಲಕರ್ಣಿ, ಸುಶೀಲೇಂದ್ರ ಕುಂದರಗಿ ಇದ್ದರು.
'ಮತಪ್ರಸಾರ ಮತ್ತಷ್ಟು ವ್ಯಾಪಕವಾಗಲಿ'
'ನಮ್ಮ ಮತಪ್ರಸಾರ ಮತ್ತು ಸಮಾಜ ಸಂಘಟನೆಯ ಪ್ರಯತ್ನ ದಕ್ಷಿಣಭಾರತದ ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ. ಅದು ಇನ್ನೂ ವ್ಯಾಪಕವಾಗಿ ನಡೆಯಬೇಕು' ಎಂದು ಪ್ರೊ. ಎ. ಹರಿದಾಸ ಭಟ್ಟ ಹೇಳಿದರು.
'ಅನೇಕ ವರ್ಷಗಳಿಂದ ನಾವು ಶ್ರದ್ಧಾ-ಭಕ್ತಿಯಿಂದ ಪಾರಾಯಣ ಮಾಡುತ್ತ ಬಂದಿರುವ ಗ್ರಂಥಗಳನ್ನು ಓದಬಾರದು, ಅವುಗಳನ್ನು ಸುಟ್ಟುಹಾಕಬೇಕು ಎಂಬ ಮಾತು ಕೇಳಿ ಬರುತ್ತಿದೆ. ಕುಹಕಿಗಳ ಈ ಆಕ್ಷೇಪಕ್ಕೆ ನಮ್ಮ ಉಪನ್ಯಾಸಕರು, ವಿದ್ವಾಂಸರೂ ಗಮನಹರಿಸಬೇಕು. ಸಾರ್ವಜನಿಕ ಸಭೆಗಳಲ್ಲಿ ಮತಾಂತರ ಪ್ರವರ್ತಕರನ್ನು, ಮಹನೀಯರನ್ನು ಅವಹೇಳನ ಮಾಡಬಾರದು. ಸಮಾಜದ ಪೀಠಾಧೀಶರನ್ನು, ಸಮಾಜದ ಕೆಲವು ನ್ಯೂನತೆಗಳನ್ನು ಸಾಮಾಜಿಕ ಜಾಲತಾಣದ ಮೂಲಕ ನಮ್ಮವರೇ ಟೀಕಿಸುತ್ತಿದ್ದಾರೆ. ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದರಿಂದ ಸಮಾಜದ ಹಿತಕ್ಕೆ ಧಕ್ಕೆ ತಂದಂತಾಗುತ್ತದೆ' ಎಂದು ಅಭಿಪ್ರಾಯಪಟ್ಟರು.
*
ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠ ತತ್ವಜ್ಞಾನ ಪ್ರಸಾರದಲ್ಲಿ ಗುರುಕುಲವನ್ನೂ ಮೀರಿಸಿದೆ. ಮಾಧ್ವ ಸಮಾಜದಲ್ಲಿರುವ ನ್ಯೂನತೆ ಸರಿಪಡಿಸುವ ಬಗ್ಗೆ ಈ ಸಮಾವೇಶ ಪ್ರಮುಖ ಪಾತ್ರವಹಿಸುತ್ತಿದೆ.
-ವಿದ್ಯೇಶತೀರ್ಥ, ಭಂಡಾರಕೇರಿ ಮಠ
*
ಭಗವಂತ ಮಾತ್ರ ಎಲ್ಲರನ್ನೂ ರಕ್ಷಿಸಿ, ಕಾಯುವವನು. ಅವನಿಲ್ಲದೆ ಜಗತ್ತೇ ಇಲ್ಲ. ಎಲ್ಲರ ಒಳಿತು ಬಯಸುವ ಅವನು ಸರ್ವೋತ್ತಮ ಆಗಿದ್ದಾನೆ
-ವಿಶ್ವವಲ್ಲಭತೀರ್ಥರು, ಸೋದೆ ವಾದಿರಾಜಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.