ಅಳ್ನಾವರ: ಮಲೆನಾಡಿನ ಸೆರಗಿನ ಈ ಭಾಗದಲ್ಲಿ ಮಳೆ ವಿರಮಿಸಿದ್ದು, ಮುಖ್ಯ ಬೆಳೆಗಳಾದ ಕಬ್ಬು, ಭತ್ತ ಕಟಾವು ಕಾರ್ಯ ಚುರುಕುಗೊಂಡಿದೆ. ಹಲವೆಡೆ ಬೆಳೆದ ಗೋವಿನಜೋಳ ಕಟಾವು ಮುಕ್ತಾಯದ ಹಂತದಲ್ಲಿದೆ. ತಾಲೂಕಿನಾದ್ಯಂತ ಹೊಲಗಳಲ್ಲಿ ಕಾರ್ಮಿಕರು ಒಕ್ಕಲು ಮಾಡುವ ನೋಟ ಎಲ್ಲೆಡೆ ಕಂಡುಬರುತ್ತಿದೆ.
ತಾಲ್ಲೂಕಿನಲ್ಲಿ ಸುಮಾರು 1,895 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಹಾಗೂ 1,740 ಹೆಕ್ಟೇರ್ ಭತ್ತ, 1,920 ಹೆಕ್ಟೇರ್ ಗೋವಿನಜೋಳ ಬೆಳೆಯಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿವೆ.
ಹೊರ ರಾಜ್ಯದ ಕಾರ್ಮಿಕರು: ‘ಪ್ರತಿ ವರ್ಷ ಈ ಭಾಗದ ಕಬ್ಬು ಕಟಾವು ಮಾಡಲು ಮಹಾರಾಷ್ಟ್ರದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಸದ್ಯ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದ್ದು, ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರು ಬಂದಿದ್ದಾರೆ’ ಎಂದು ಕಾಶೇನಟ್ಟಿ ರೈತ ರಾಯಪ್ಪ ಹುಡೇದ ತಿಳಿಸಿದರು.
ಬಿಹಾರದಲ್ಲಿ ಗೋಧಿ ಮುಂತಾದ ಪೈರು ಕಟಾವು ಮಾಡುವ ಕಾರ್ಮಿಕರು ಇಲ್ಲಿ ಕಬ್ಬು ಕಟಾವಿಗೆ ಬಂದಿದ್ದು, ಈ ಕಾರ್ಯಕ್ಕಾಗಿ ತಮ್ಮದೇ ವಿಶೇಷ ಆಯುಧ ಬಳಕೆ ಮಾಡುತ್ತಿರುವುದಾಗಿ ಕಾರ್ಮಿಕ ಅಶೋಕಕುಮಾರ ಹೇಳಿದರು.
ಬಿಹಾರ ಮೂಲದವರು ಈ ಭಾಗದಲ್ಲಿ ಕಟ್ಟಿಗೆ ಪೀಠೋಪಕರಣ ತಯಾರಿಕೆ, ಹೊಸ ಮನೆ ಕಟ್ಟಲು ಟೈಲ್ಸ್ ಕೂಡಿಸುವುದು ಮುಂತಾದ ಕಾರ್ಯಗಳಿಗೆ ಬರುತ್ತಿದ್ದರು. ಸದ್ಯ ಕೃಷಿ ಕ್ಷೇತ್ರಕ್ಕೂ ಅವರು ಲಗ್ಗೆ ಇಟ್ಟಿದ್ದು, ಎರಡರಿಂದ ಮೂರು ತಿಂಗಳು ಕೈತುಂಬ ಕೆಲಸ ಇದೆ.
‘ಅಳ್ನಾವರ ಭಾಗದಲ್ಲಿ ಸ್ಥಳೀಯ ಕೃಷಿ ಕಾರ್ಮಿಕರ ಕೊರತೆ ಸದಾ ಕಾಡುತ್ತಿದೆ. ಬಿಹಾರದಿಂದ ಕಾರ್ಮಿಕರು ಬಂದಿದ್ದರಿಂದ ನಮ್ಮ ಕಬ್ಬು ಬೇಗ ರವಾನೆ ಆಗುತ್ತಿದೆ’ ಎಂದು ಬೆಣಚಿ ಗ್ರಾಮದ ರೈತ ಕೃಷ್ಣ ಗೌಡಪ್ಪನವರ ಹೇಳಿದರು.
ಡೋರಿ, ಕುಂಬಾರಕೊಪ್ಪದಲ್ಲಿ ಹಳಿಯಾಳ ಸಕ್ಕರೆ ಕಾರ್ಖಾನೆಯಿಂದ ಕೊಪ್ಪಳ ಭಾಗದ ಸುಮಾರು 15 ಕುಟುಂಬಗಳು ಕಬ್ಬ ಕಟಾವು ಮಾಡಲು ಹೊಲಗಳಲ್ಲಿ ಟೆಂಟು ಹಾಕಿ ಬೀಡು ಬಿಟ್ಟಿವೆ.
‘ಕೊಪ್ಪಳದಲ್ಲಿ ಈಗ ಕೆಲಸ ಕಡಿಮೆ ಇದೆ. ಕಾರ್ಖಾನೆಯವರು ಹಾಗೂ ರೈತರು ಸೇರಿ ಪ್ರತಿ ಟನ್ ಕಬ್ಬು ಕಟಾವಿಗೆ ₹ 550 ನಮಗೆ ನೀಡುತ್ತಾರೆ. ನಮಗೆ ಬೇಕಾದ ಆಹಾರ ಪದಾರ್ಥ, ಕಿರಾಣಿ ದಿನಸಿ ರೈತರೇ ನೀಡುತ್ತಾರೆ’ ಎಂದು ಕೊಪ್ಪಳದ ಕಾರ್ಮಿಕ ಕನಕಪ್ಪ ಬಳೂಟಗಿ ಹೇಳುತ್ತಾರೆ.
‘ಈ ಬಾರಿ ಅತಿಯಾದ ಮಳೆಗೆ ಸರಿಯಾದ ಫಸಲು ಬಂದಿಲ್ಲ. ಮಳೆಗೆ ಭತ್ತದ ಪೀಕು ನೆಲಕ್ಕುರುಳಿದೆ. ವಾಡಿಕೆಯಂತೆ ಅಕ್ಟೋಬರ್ ತಿಂಗಳಲ್ಲಿ ಭತ್ತ ಕಟಾವು ಮುಗಿಯಬೇಕು. ಆದರೆ ನವೆಂಬರ್ ಮುಗಿಯುತ್ತ ಬಂದರೂ ಭತ್ತ ಕಟಾವು ಸರಿಯಾಗಿ ಆರಂಭ ಆಗಿಲ್ಲ. ಫಸಲು ಮೊಳಕೆ ಒಡೆದು ರೈತನಿಗೆ ಕಷ್ಟ ಆಗಿದೆ. ಕಬ್ಬು ಇಳುವರಿಯಲ್ಲಿಯೂ ಗಣನೀಯ ಕುಸಿತ ಕಂಡಿದೆ. ಗೋವಿನ ಜೋಳ ಕೈಕೊಟ್ಟಿದೆ, ರೈತನ ಬದುಕು ಸಂಕಷ್ಟದಲ್ಲಿದೆ. ಸಮೀಪದ ಹಳಿಯಾಳ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ಕಬ್ಬು ಕಾರ್ಖಾನೆಗಳಿಗೆ ಕಬ್ಬು ಕಳುಹಿಸಲಾಗುತ್ತಿದೆ’ ಎಂದು ಕುಂಬಾರಕೊಪ್ಪ ಗ್ರಾಮದ ರೈತ ಅಶೋಕ ಜೋಡಟ್ಟಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.