ಹುಬ್ಬಳ್ಳಿ: 'ಪ್ರಸ್ತುತ ವರ್ಷ ಉತ್ತರ ಕರ್ನಾಟಕ ಭಾಗದಲ್ಲಿ ಕಬ್ಬು ಅರೆಯುವ ಹಂಗಾಮನ್ನು ಒಂದು ವಾರ ಮೊದಲು ಆರಂಭಿಸುವಂತೆ ಆದೇಶ ಹೊರಡಿಸಲಾಗಿದೆ' ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಈ ಮೊದಲು ನವೆಂಬರ್ 15ರಿಂದ ಕಬ್ಬು ಅರೆಯಲು ಆರಂಭಿಸುವಂತೆ ಆದೇಶಿಸಲಾಗಿತ್ತು. ರೈತರ ಒತ್ತಾಯ ಹಾಗೂ ಕಾರ್ಖಾನೆ ಮಾಲೀಕರ ಕೋರಿಕೆ ಮೇರೆಗೆ ನವೆಂಬರ್ 8ರಿಂದ ಆರಂಭಿಸಲು ತೀರ್ಮಾನಿಸಲಾಗಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಮೂರು ತಿಂಗಳ ಹಿಂದೆಯೇ ಆರಂಭಿಸಲಾಗಿದೆ' ಎಂದರು.
'ರಾಜ್ಯದಲ್ಲಿ ಆರು ಲಕ್ಷ ಹೆಕ್ಟೇರ್ ಕಬ್ಬು ಕಟಾವಿಗೆ ಸಿದ್ಧವಿದ್ದು, ಎಂಬತ್ತು ಕಾರ್ಖಾನೆಗಳು ಕಬ್ಬು ಅರೆಯಲಿವೆ. ಪ್ರತಿ ಟನ್ ಕಬ್ಬಿಗೆ ₹3,400 ಘೋಷಣೆ ಮಾಡಲಾಗಿದೆ. ಕಳೆದ ವರ್ಷ ₹3,150 ಇತ್ತು' ಎಂದು ತಿಳಿಸಿದರು.
'ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಪ್ರಕ್ರಿಯೆ ಮುಗಿದಿತ್ತು. ಈಗ ಮತ್ತೆ ಅದನ್ನು ವಿಸ್ತರಿಸಿ, 32 ಸಾವಿರ ಮೆಟ್ರಿಕ್ ಟನ್ ಖರೀದಿವರೆಗೆ ಹೆಚ್ಚಳ ಮಾಡಲಾಗಿದೆ. ಅದರ ಜೊತೆಗೆ ಸೋಯಾಬಿನ್ ಖರೀದಿ ಸಹ ವಿಸ್ತರಿಸಲಾಗಿದೆ. ದರ ಕುಸಿತವಾದಾಗಲೆಲ್ಲ ಬೆಳೆಗೆ ಬೆಂಬಲ ಬೆಲೆ ಘೋಷಿಸಿ ಎಪಿಎಂಸಿಯಲ್ಲಿ ಖರೀದಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಸೋಯಾಬಿನ್, ಹೆಸರು, ಸೂರ್ಯಕಾಂತಿ ಮತ್ತು ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿ, ಏಕಕಾಲದಲ್ಲಿ ಖರೀದಿಸಲಾಗಿದೆ' ಎಂದ ಸಚಿವರು, 'ಎಪಿಎಂಸಿ ಕಾಯ್ದೆ ಹಿಂಪಡೆದ ಕಾರಣ ರಾಜ್ಯದಲ್ಕಿನ 166 ಎಪಿಎಂಸಿ ₹200 ಕೋಟಿ ಲಾಭಗಳಿಸಿದೆ' ಎಂದು ತಿಳಿಸಿದರು.
'ನೂತನ ಜವಳಿ ಕಾಯ್ದೆ ಜಾರಿಗೆ ತರಲು ಉದ್ದೇಶಿಸಲಾಗಿದ್ದು, ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಸೇರಿದಂತೆ ಇತರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನೇಕಾರ ಸಮುದಾಯದ ಯುವಕರು ಬೇರೆ ಉದ್ಯೋಗದತ್ತ ಮುಖ ಮಾಡಿರುವುದರಿಂದ, ನೇಕಾರ ವೃತ್ತಿ ಕ್ಷೀಣಿಸುತ್ತಿದೆ. ಆದರೂ, ಅದಕ್ಕೆ ಉತ್ತೇಜನ ನೀಡಬೇಕೆನ್ನುವ ಕಾರಣಕ್ಕೆ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತಂದು, ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಉಚಿತ ವಿದ್ಯುತ್ ಸಹ ಪೂರೈಕೆ ಮಾಡಲಾಗುತ್ತಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.