ಅಣ್ಣಿಗೇರಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಬಿಜೆಪಿಯನ್ನು ಬೆಂಬಲಿಸಬೇಕು. ಈ ಮೂಲಕ ಅಭಿವೃದ್ಧಿಗೆ ನೆರವಾಗಬೇಕು ಎಂದು ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಸ್ಥಳೀಯ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸೋಮವಾರ ಪುರಸಭೆ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ ‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಪಟ್ಟಣ ತಾಲ್ಲೂಕು ಕೇಂದ್ರವಾಗಿ ಸುತ್ತಮತ್ತಲಿನ ಗ್ರಾಮಗಳ ಜನರಿಗೆ ಉತ್ತಮ ಆಡಳಿತ ನೀಡುತ್ತಿದೆ. ಶಾಶ್ವತ ಕುಡಿಯುವ ನೀರಿನ ಸೌಲಭ್ಯ, ಆದಿಕವಿ ಪಂಪ ಸ್ಮಾರಕ ಭವನ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಲಾಗಿದೆ’ ಎಂದರು.
ಶಾಸಕ ಜಗದೀಶ ಶೆಟ್ಟರ್ ಮಾತನಾಡಿ ‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತವಿದ್ದು, ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ನೀಡಿದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲ ವರ್ಗದ ಜನರಿಗೆ ಆದ್ಯತೆ ನೀಡಿದೆ. ಕಿಸಾನ್ ಸಮ್ಮಾನ ಯೋಜನೆ, ಚಕ್ಕಡಿ ರಸ್ತೆಗಳ ಅಭಿವೃದ್ದಿ, ಬೀಜಗೊಬ್ಬರಗಳ ಸರಬರಾಜು ಸೇರಿದಂತೆ ಮೊದಲಾದ ಜನಪರ ಕೆಲಸ ಮಾಡುತ್ತಿದೆ’ ಎಂದರು.
ಸ್ಥಳೀಯ ಪುರಸಭೆಗೆ ಬಿಜೆಪಿಯಿಂದ 23 ಅಭ್ಯಥಿಗಳನ್ನು ಸ್ಥಳೀಯರಿಗೆ ಪರಿಚಯಿಸಲಾಯಿತು. ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೀರಣ್ಣ ಜಡಿ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲೂಕು ಘಟಕದ ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡ್ರ, ಶಿವಾನಂದ ಹೊಸಳ್ಳಿ, ವಿಜಯಕುಮಾರ ಕಂಬಿಮಠ, ತವನೇಶ ನಾವಳ್ಳಿ, ಶಿವಾನಂದ ಹೊಸಳ್ಳಿ, ಮಹೇಶ ಸುಣಗಾರ, ಜಗದೀಶ ಚವಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.