ADVERTISEMENT

ಸರಕು ಸಾಗಣೆ ವಾಹನದಲ್ಲಿ ಜನರನ್ನು ಕರೆದೊಯ್ದರೆ ಕಠಿಣ ಕ್ರಮ

​ಪ್ರಜಾವಾಣಿ ವಾರ್ತೆ
Published 6 ಮೇ 2019, 13:34 IST
Last Updated 6 ಮೇ 2019, 13:34 IST
ಧಾರವಾಡದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ದೀಪಾ ಚೋಳನ್ ಮಾತನಾಡಿದರು. ಆರ್‌.ಎಸ್‌.ಚಿಣ್ಣನ್ನವರ, ಡಾ. ಬಿ.ಸಿ. ಸತೀಶ, ಜಿ. ಸಂಗೀತಾ, ಡಾ. ಶಿವಕುಮಾರ ಗುಣಾರೆ ಇತರರು ಇದ್ದಾರೆ.
ಧಾರವಾಡದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ದೀಪಾ ಚೋಳನ್ ಮಾತನಾಡಿದರು. ಆರ್‌.ಎಸ್‌.ಚಿಣ್ಣನ್ನವರ, ಡಾ. ಬಿ.ಸಿ. ಸತೀಶ, ಜಿ. ಸಂಗೀತಾ, ಡಾ. ಶಿವಕುಮಾರ ಗುಣಾರೆ ಇತರರು ಇದ್ದಾರೆ.   

ಧಾರವಾಡ: ‘ಉದ್ಯೋಗ ಅರಸಿ ನಗರಕ್ಕೆ ಬರುವ ಜನರನ್ನು ಸರಕು ಸಾಗಣೆ ಮತ್ತು ಕಟ್ಟಡ ಸಾಮಗ್ರಿಗಳ ವಾಹನಗಳಲ್ಲಿ ಕರೆದೊಯ್ಯುವ ಚಾಲಕರ ಮತ್ತು ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್‌ ಸೂಚಿಸಿದರು.

ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದ ಅವರು, ‘ದಿನನಿತ್ಯ ಉದ್ಯೋಗ ಅರಸಿ ಅನೇಕ ಕೂಲಿಕಾರ್ಮಿಕರು, ಸಾರ್ವಜನಿಕರು ನಗರ ಪ್ರದೇಶಗಳಿಗೆ ಅಸುರಕ್ಷಿತ ಹಾಗೂ ಅಪಾಯಕಾರಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಅದರಲ್ಲೂ ಸರಕು ಸಾಗಾಣಿಕೆ ವಾಹನಗಳಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ. ಇದಕ್ಕೆ ಸರಕು ಸಾಗಾಣಿಕೆ ವಾಹನಗಳ ಕಡಿಮೆ ದರ ಮತ್ತು ಉದ್ಯೋಗ ನೀಡುವವರ ನಿರ್ಲಕ್ಷ್ಯವೇ ಕಾರಣ. ಪ್ರಯಾಣಿಸುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದರೆ ಯಾವುದೇ ವಿಮೆ ಪರಿಹಾರ ಇವರಿಗೆ ಸಿಗುವುದಿಲ್ಲ. ಹೀಗಾಗಿ ನಿಯಮ ಬಾಹಿರ ವಾಹನಗಳಲ್ಲಿ ಪ್ರಯಾಣಿಸಬಾರದು ಎಂಬುದನ್ನು ಮನದಟ್ಟು ಮಾಡಬೇಕು’ ಎಂದರು.

‘ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳನ್ನು ಒಳಗೊಂಡ ರಸ್ತೆ ಸುರಕ್ಷತಾ ಸಮಿತಿ ರಚಿಸಬೇಕು. ಪ್ರತಿ ಗ್ರಾಮ, ಬಸ್‌ನಿಲ್ದಾಣ, ರೈಲು ನಿಲ್ದಾಣ, ಪಂಚಾಯ್ತಿ ಆವರಣ, ಸಮುದಾಯ ಭವನಗಳು ಸೇರಿದಂತೆ ಹೆಚ್ಚು ಜನಸಂದಣಿ ಇರುವ ಮತ್ತು ಕೂಲಿಕಾರ್ಮಿಕರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಈ ಕುರಿತು ಜನಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಬೀದಿನಾಟಕ, ಗೋಡೆಬರಹ, ಪೋಸ್ಟರ್, ವಿಡಿಯೋಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಿ, ಸರಕು ಸಾಗಾಣಿಕೆ ವಾಹನದಲ್ಲಿನ ಪ್ರಯಾಣ ಸುರಕ್ಷಿತವಲ್ಲ ಎಂಬುದನ್ನು ಜನರಿಗೆ ಮನದಟ್ಟು ಮಾಡಬೇಕು’ ಎಂದು ದೀಪಾ ಚೋಳನ್ ಹೇಳಿದರು.

ADVERTISEMENT

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ ಮಾತನಾಡಿ, ‘ಸರಕು ಸಾಗಾಣಿಕೆ ವಾಹನದಲ್ಲಿ ಜನರ ಕರೆದೊಯ್ಯುವುದು ಅಮಾನವೀಯ. ಪ್ರತಿ ಇಲಾಖೆಗಳ ಅಧಿಕಾರಿಗಳು ತಮ್ಮ ಸಲಹೆ ಸೂಚನೆ ನೀಡುವ ಮೂಲಕ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಮುಂದಾಗಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒಡಾ.ಬಿ.ಸಿ. ಸತೀಶ ಮಾತನಾಡಿ, ‘ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತ್ಯೇಕ ಜನಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಅಧಿಕಾರಿಗಳು ನಿಯಮಬಾಹಿರವಾಗಿ ಚಲಾಯಿಸುವ ವಾಹನಗಳನ್ನು ಪ್ರತಿನಿತ್ಯ ತಪಾಸಣೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ. ಅವರು ಮಾತನಾಡಿ, ‘ಕಾರ್ಖಾನೆ, ಕಂಪನಿ ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುವ ಮೂಲಕ ನಿಯಂತ್ರಿಸಲಾಗುವುದು. ಬೀಟ್ ಮಟ್ಟದಲ್ಲಿ ಜನರಿಗೆ ತಿಳಿವಳಿಕೆ ನೀಡಿ, ಜನರು ಸರಕುಸಾಗಣೆ ವಾಹನ ಬಳಸದಂತೆ ನೋಡಿಕೊಳ್ಳಲಾಗುವುದು’ ಎಂದರು.

ಮಹಾನಗರ ಡಿಸಿಪಿ ಡಾ. ಶಿವಕುಮಾರ ಗುಣಾರೆ, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ ಕವಲಿ ಅವರು ತಮ್ಮ ಇಲಾಖೆಗಳ ಮೂಲಕ ತೆಗೆದುಕೊಳ್ಳಲಾಗುತ್ತಿರುವ ಕ್ರಮದ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಡಿವೈಎಸ್‌ಪಿ ಗುರು ಮತ್ತೂರು, ಕಾರ್ಮಿಕ ಇಲಾಖೆ ಅಧಿಕಾರಿ ತರನುಂ ಬಂಗಾಲಿ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಉಪನಿರ್ದೇಶಕ ರಾಜೇಶ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.