ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡಿಗರ ತೆರಿಗೆಯಲ್ಲಿ ಕೇರಳದವರನ್ನು ಸಾಕಲು ಮುಂದಾಗಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದ್ದಾರೆ.
‘ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಲ್ಲಿ ಕನ್ನಡಿಗರ ಬದಲು ಕೇರಳದ ಯುವಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಕೇರಳದ ಯುವಕರನ್ನು ಚಾಲಕ ಹುದ್ದೆಗೆ ನೇಮಿಸುವ ಮೂಲಕ ಕನ್ನಡಿಗರಿಗೆ ಪಂಗನಾಮ ಹಾಕಲಾಗುತ್ತಿದೆ. ಈ ಹುದ್ದೆಗೆ ಕನ್ನಡಿಗರು ಸಿದ್ಧರಿರಲಿಲ್ಲವೇ’ ಎಂದು ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಾಕಿ, ಪ್ರಶ್ನಿಸಿದ್ದಾರೆ.
‘ಚಾಲಕರು ಖಾಸಗಿ ಏಜೆನ್ಸಿ ಮೂಲಕ ನೇಮಕವಾಗಿದ್ದಾರೆ ಎಂಬುದು ಬರೀ ಸಬೂಬು. ಇದು ಕಾಂಗ್ರೆಸ್‌ನ ‘ಯುವನಿಧಿ ಗ್ಯಾರಂಟಿ’ಯ ಹಕೀಕತ್ತು’. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಷ್ಠೆ ಕರ್ನಾಟಕ ಅಥವಾ ಕನ್ನಡಿಗರ ಪರ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಮತ ಹಾಕಲು ಕನ್ನಡಿಗರು ಬೇಕು. ಆದರೆ, ನಿಯತ್ತು ಮಾತ್ರ ಇನ್ನೊಬ್ಬರ ಪರ’ ಎಂದು ಅವರು ದೂರಿದ್ದಾರೆ.
‘ಅಸಂಬದ್ಧ ಟ್ವೀಟ್‌ಗಳಿಂದ ಅಜ್ಞಾನ ಪ್ರದರ್ಶಿಸಬೇಡಿ’
ಬೆಂಗಳೂರು: ‘ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೊ? ವಿರೋಧ ಪಕ್ಷದ ನಾಯಕ ಅಸ್ವಿತ್ವದಲ್ಲಿದ್ದಾರೆ ಎಂದು ತಿಳಿಸಲೊ? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದಿರುವ ಯಕ್ಷ ಪ್ರಶ್ನೆ’ ಎಂದು ಆರ್. ಅಶೋಕ ಅವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟಕಿಯಾಡಿದ್ದಾರೆ.
ಅಶೋಕ ಅವರ ಟ್ವೀಟ್‌ಗೆ ತಮ್ಮ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಸಾರಿಗೆ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆಯು ಕೇಂದ್ರ ಸರ್ಕಾರದ ನೀತಿ ಯೋಜನೆಯಂತೆ ಜಾರಿಯಾಗಿದೆ. ಎಲೆಕ್ಟ್ರಿಕ್ ಬಸ್‌ಗಳನ್ನು ಸಾರಿಗೆ ಸಂಸ್ಥೆಗಳು ನೇರವಾಗಿ ಖರೀದಿಸುವಂತಿಲ್ಲ, ಖಾಸಗಿ ಕಂಪನಿಯವರು ಮಾಲೀಕತ್ವ ಹೊಂದಿರುತ್ತಾರೆ. ಅವರಿಗೆ ಕೇಂದ್ರ ಸರ್ಕಾರವು ನೇರವಾಗಿ ಸಬ್ಸಿಡಿ ನೀಡುತ್ತದೆ ಹಾಗೂ ಚಾಲಕರನ್ನು ನಿಯೋಜಿಸುವ ಕಾರ್ಯವು ಖಾಸಗಿ ಅವರಿಗೆ ನೀಡಲಾಗಿದೆ’ ಎಂದಿದ್ದಾರೆ.
‘ಚಾಲಕರ ವೇತನ, ಆಯ್ಕೆ ಯಾವುದರಲ್ಲಿಯೂ ಸಾರಿಗೆ ಸಂಸ್ಥೆಗಳಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ಬಸ್‌ಗಳ ಕಾರ್ಯಾಚರಣೆ ಹೊಣೆ ಮಾತ್ರ ಸಾರಿಗೆ ಸಂಸ್ಥೆಗಳದ್ದು. ಈ ವಿಷಯವನ್ನು ನಮ್ಮ ಸಾರಿಗೆ ಸಚಿವರು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ತಮಗೆ ಅದು ಅರ್ಥವಾಗದಿರುವುದು ನಿಜಕ್ಕೂ ಶೋಚನೀಯ’ ಎಂದು ಟೀಕಿಸಿದ್ದಾರೆ.
‘ಯುವಕರಿಗೆ ಅದರಲ್ಲಿಯೂ ರಾಜ್ಯದ ಯುವಕರಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಲು ಕಾರಣವಾದ ಕೇಂದ್ರ ಬಿಜೆಪಿ ಸರ್ಕಾರದ ಈ ಯೋಜನೆಯ ಬಗೆಗಿನ ತಮ್ಮ ನೋವು, ದುಃಖ ಮತ್ತು ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ತವಕ ನಿಮ್ಮಲ್ಲಿದ್ದರೆ ದಯವಿಟ್ಟು ನಿಮ್ಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿ ಉತ್ತರ ಪಡೆಯಿರಿ. ಅಸಂಬದ್ಧ ಟ್ವೀಟ್‌ಗಳ ಮೂಲಕ ಅಜ್ಞಾನ ಪ್ರದರ್ಶಿಸಬೇಡಿ’ ಎಂದು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.