ಧಾರವಾಡ: ಶಾಲೆಗಳು ಪುನರಾರಂಭವಾಗಿದ್ದು, ಪಠ್ಯಪುಸ್ತಕ ಪೂರೈಕೆ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಈವರೆಗೆ (ಮೇ 29) ಶಾಲೆಗಳಿಗೆ ಶೇ 47ರಷ್ಟು ಪಠ್ಯಪುಸ್ತಕ ಸರಬರಾಜು ಮಾಡಲಾಗಿದೆ.
ನವಲಗುಂದ ಬ್ಲಾಕ್ ಸರ್ಕಾರಿ ಅನುದಾನಿತ ಶಾಲೆಗಳಿಗೆ ಶೇ 10.14ರಷ್ಟು ಹಾಗೂ ಖಾಸಗಿ ಶಾಲೆಗಳಿಗೆ ಶೇ 10.25ರಷ್ಟು ಮಾತ್ರ ತಲುಪಿಸಲಾಗಿದೆ. ಹಲವು ಶಾಲೆಗಳಿಗೆ ಪಠ್ಯಪುಸ್ತಕ ತಲುಪಿಲ್ಲ. ಕೆಲವು ಶಾಲೆಗಳಲ್ಲಿ (ಧಾರವಾಡದ ನೆಹರು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ) ವಿದ್ಯಾರ್ಥಿಗಳು ಶಾಲಾರಂಭದ ದಿನದಿಂದಲೇ (ಮೇ 29) ಶಾಲೆಗೆ ಹಾಜರಾಗುತ್ತಿದ್ದಾರೆ.
ಎಲ್ಲೆಡೆ ಶಾಲೆಗಳಿಗೆ ಮೇ 31ರಿಂದ ವಿದ್ಯಾರ್ಥಿಗಳು ಆಗಮಿಸುವುದರಿಂದ ಬಹುತೇಕ ಶಾಲೆಗಳಿಗೆ ಸುಣ್ಣ, ಬಣ್ಣ ಬಳಿದು ಸಜ್ಜುಗೊಳಿಸಲಾಗಿದೆ.
‘ನಮ್ಮ ಶಾಲೆಯಲ್ಲಿ ಪಠ್ಯಪುಸ್ತಕ ಕೊಟ್ಟಿಲ್ಲ. ಶಿಕ್ಷಕರನ್ನು ಕೇಳಿದರೆ ಇಲಾಖೆಯಿಂದ ಶಾಲೆಗೆ ಪಠ್ಯಪುಸ್ತಕ ಬಂದಿಲ್ಲ, ಬಂದ ತಕ್ಷಣ ಕೊಡುತ್ತೇವೆ ಎನ್ನುತ್ತಾರೆ. ಶಾಲೆ ಆರಂಭದಲ್ಲೇ ಪಠ್ಯಪುಸ್ತಕ ವಿತರಿಸಿದರೆ ಅನುಕೂಲ’ ಎಂದು ಅಣ್ಣಿಗೇರಿ ತಾಲ್ಲೂಕು ಕೇಂದ್ರದ ಡಿ.ಬಿ.ಶಿರೂರು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ (ಉಚಿತ ವಿತರಣೆ) 29.48 ಲಕ್ಷ, ಖಾಸಗಿ ಶಾಲೆಗಳಿಗೆ (ಮಾರಾಟ) 10.97 ಲಕ್ಷ ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಸರ್ಕಾರಿ ಅನುದಾನಿತ ಶಾಲೆ ವಿಭಾಗದಲ್ಲಿ 17.31 ಲಕ್ಷ ಹಾಗೂ ಖಾಸಗಿ ಶಾಲೆ ವಿಭಾಗದಲ್ಲಿ 8.40 ಲಕ್ಷ ಪಠ್ಯಪುಸ್ತಕಗಳು ಏಜೆನ್ಸಿಯಿಂದ ಜಿಲ್ಲೆಗೆ ಪೂರೈಕೆಯಾಗಿವೆ.
ನಗರದ ಆರ್‌ಎನ್‌ಎಸ್ ಕ್ರೀಡಾಂಗಣ ಸಮೀಪದ ಸರ್ಕಾರಿ ಪಠ್ಯಪುಸ್ತಕ ಮಳಿಗೆಯಿಂದ ಶಾಲೆಗಳಿಗೆ ಪಠ್ಯಪುಸ್ತಕ ತಲುಪಿಸುವ ಕಾರ್ಯ ನಡೆಯುತ್ತಿದೆ. ಮೇ 29ರವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 6.69 ಲಕ್ಷ (ಶೇ 49.65) ಹಾಗೂ ಖಾಸಗಿ ಶಾಲೆಗಳಿಗೆ 2.80 ಲಕ್ಷ (ಶೇ 39.07) ಪಠ್ಯಪುಸ್ತಕ ಸರಬರಾಜು ಆಗಿದೆ.
‘ನವಲಗುಂದ ಮತ್ತು ಅಣ್ಣಿಗೇರಿ ತಾಲ್ಲೂಕಿನ ಬಹುತೇಕ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ತರಗತಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಪಠ್ಯಪುಸ್ತಕ ಪೂರೈಕೆ ವಿಳಂಬ ಮಾಡಿದರೆ ಬೋಧನೆಗೆ ತೊಂದರೆಯಾಗುತ್ತದೆ’ ಎಂದು ನವಲಗುಂದದ ಅಣ್ಣಿಗೇರಿಯ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಿಳಿಸಿದರು.
ಏಜೆನ್ಸಿಯಿಂದ ಪಠ್ಯಪುಸ್ತಕ ಮಳಿಗೆಗೆ ಪೂರೈಕೆಯಾಗಿರುವ ಎಲ್ಲ ಪಠ್ಯಪುಸ್ತಕಗಳನ್ನು ವಾರದೊಳಗೆ ಶಾಲೆಗಳಿಗೆ ತಲುಪಿಸಲಾಗುವುದು. ಪಠ್ಯಪುಸ್ತಕ ಸರಬರಾಜು ಕಾರ್ಯ ಚುರುಕಾಗಿ ಸಾಗಿದೆ-ಎಸ್.ಎಸ್.ಕೆಳದಿಮಠ ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.