ADVERTISEMENT

ಹುಬ್ಬಳ್ಳಿ : ಜವಳಿ ಪಾರ್ಕ್‌ ಸ್ಥಾಪನೆ ನನೆಗುದಿಗೆ

ಗೋವರ್ಧನ ಎಸ್‌.ಎನ್‌.
Published 10 ಆಗಸ್ಟ್ 2024, 5:37 IST
Last Updated 10 ಆಗಸ್ಟ್ 2024, 5:37 IST
<div class="paragraphs"><p>ಜವಳಿ ಪಾರ್ಕ್ (ಸಾಂದರ್ಭಿಕ ಚಿತ್ರ)</p></div>

ಜವಳಿ ಪಾರ್ಕ್ (ಸಾಂದರ್ಭಿಕ ಚಿತ್ರ)

   

– ‍ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ನವಲಗುಂದದಲ್ಲಿ ಜವಳಿ ಪಾರ್ಕ್‌ ನಿರ್ಮಾಣಕ್ಕೆ ಒಂದೂವರೆ ವರ್ಷದ ಹಿಂದೆ ಅನುಮೋದನೆ ದೊರೆತು, ಜಾಗ ನೀಡಿದ್ದರೂ ಈವರೆಗೆ ಆರಂಭಗೊಂಡಿಲ್ಲ. 

ADVERTISEMENT

2023ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಜವಳಿ ಪಾರ್ಕ್‌ ನಿರ್ಮಾಣಕ್ಕೆ ಮಂಜೂರಾತಿ ನೀಡಿ, ಬಜೆಟ್‌ನಲ್ಲಿ ಘೋಷಿಸಿತ್ತು. ಜಲಸಂಪನ್ಮೂಲ ಇಲಾಖೆಯ ಕಾಡಾ (ಕಮಾಂಡ್‌ ಏರಿಯಾ ಡೆವಲಪ್‌ಮೆಂಟ್‌ ಪ್ರೋಗ್ರಾಮ್ಸ್‌ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು) ವ್ಯಾಪ್ತಿಯ 15 ಎಕರೆ ಜಮೀನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೆ, ಇಲ್ಲಿ ಉದ್ಯಮಗಳು ಸ್ಥಾಪನೆಯಾಗಿ, 5 ಸಾವಿರ ಜನರಿಗೆ ಉದ್ಯೋಗ ಸಿಗುವ ಭರವಸೆ ಮಾತ್ರ ಈಡೇರಿಲ್ಲ. 

‘ಲೀಸ್‌ಗೆ ನೀಡಿದರೆ ಆ ಜಾಗದಲ್ಲಿ ಶಾಶ್ವತ ಕಟ್ಟಡ ನಿರ್ಮಿಸುವಂತಿಲ್ಲವೆಂಬ ಷರತ್ತು ವಿಧಿಸಲಾಗಿದೆ. ನಿಯಮ ಸರಳೀಕರಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಸದ್ಯ ಇದು ಸರ್ಕಾರದ ಮಟ್ಟದಲ್ಲಿದೆ’ ಎಂದು ಕೈಮಗ್ಗ ಹಾಗೂ ಜವಳಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಜವಳಿ ಉದ್ಯಮಕ್ಕಾಗಿಯೇ ಜಾಗ ಮಾಡಿಕೊಡುವುದು ಯೋಜನೆಯ ಉದ್ದೇಶವಾಗಿದೆ. ಕೈಗಾರಿಕೆ ಸ್ಥಾಪನೆಗಾಗಿ ಭೂಪರಿವರ್ತನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳು ಸರಳವಾಗಿ ಪೂರ್ಣಗೊಳ್ಳುವುದರಿಂದ ಉದ್ಯಮಿಗಳಿಗೆ ಅನುಕೂಲವಾಗುತ್ತದೆ. ಆದರೆ, ಇಲಾಖೆ ನಿಯಮದಿಂದ ಉದ್ಯಮಿಗಳು ಸಾಲ ಪಡೆಯಲು ಸಮಸ್ಯೆಯಾಗುತ್ತದೆ. ಬೇರೆಡೆ ಜಾಗ ಸಿಕ್ಕರೂ ಜವಳಿ ಪಾರ್ಕ್‌ ನಿರ್ಮಾಣಕ್ಕೆ ಕ್ರಮ ವಹಿಸಬಹುದು’ ಎಂದರು.

‘ಜವಳಿ ಉದ್ಯಮಕ್ಕೆ ಧಾರವಾಡ ಜಿಲ್ಲೆ ಪ್ರಶಸ್ತವಾಗಿದೆ. ಜಿನ್ನಿಂಗ್‌ ಹಾಗೂ ಪ್ರೆಸ್ಸಿಂಗ್‌ ಉದ್ಯಮಗಳು ಮತ್ತೆ ಚೇತರಿಸಿಕೊಳ್ಳುತ್ತಿವೆ. ಜವಳಿ ಪಾರ್ಕ್‌ ನಿರ್ಮಾಣದಿಂದ ಪೂರಕ ಉದ್ಯಮಗಳ ಬೆಳವಣಿಗೆ ಸಾಧ್ಯವಾಗುತ್ತದೆ. ಹೆಚ್ಚಿನ ಉದ್ಯೋಗಾವಕಾಶದೊಂದಿಗೆ ರಫ್ತಿಗೂ ಹೇರಳ ಅವಕಾಶ ಸಿಗುತ್ತದೆ. ಈ ಭಾಗದಲ್ಲಿ ಹೆಚ್ಚು ಹತ್ತಿ ಬೆಳೆಯುವುದರಿಂದ ಉದ್ಯಮಕ್ಕೆ ಅನುಕೂಲಕರವಾಗಿದೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸದಸ್ಯ ವಿನಯ ಜವಳಿ ತಿಳಿಸಿದರು.

‘ಜಿಲ್ಲೆಯಲ್ಲಿ ಕೆಲವೇ ಜವಳಿ ಕೈಗಾರಿಕೆಗಳಿದ್ದು, ಉದ್ಯಮ ಅಭಿವೃದ್ಧಿಗೆ ಇಚ್ಛಾಶಕ್ತಿ ತೋರಬೇಕಿದೆ. ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಜಾಗ, ಸರ್ಕಾರಿ ಜಾಗ ಇಲ್ಲವೇ ಖಾಸಗಿ ಜಾಗವನ್ನೂ ಖರೀದಿಸಿ, ನೀಡಬಹುದು. ಕೇಂದ್ರ ಸರ್ಕಾರವೂ ಅನೇಕ ಅನುಕೂಲ ಕಲ್ಪಿಸುತ್ತಿದ್ದು, ಉದ್ಯೋಗಸೃಷ್ಟಿಯ ದೃಷ್ಟಿಯಿಂದಾದರೂ ಸರ್ಕಾರ ಕ್ರಮ ವಹಿಸಬೇಕು. ಸ್ಥಳೀಯ ಜನಪ್ರತಿನಿಧಿಗಳು ಒತ್ತಡ ಹೇರಬೇಕು’ ಎಂದು ಅಭಿಪ್ರಾಯಪಟ್ಟರು.   

‘ಸರ್ಕಾರ ಕ್ರಮ ವಹಿಸಲಿ’

‘ನನ್ನ ಅವಧಿಯಲ್ಲಿ ಮಂಜೂರು ಮಾಡಿಸಿದ್ದ ಶಿಗ್ಗಾವಿಯ ಜವಳಿ ಪಾರ್ಕ್‌ ಪ್ರಾರಂಭಗೊಂಡಿದೆ. ಆದರೆ ರಾಣೆಬೆನ್ನೂರು ಹಾಗೂ ನವಲಗುಂದದಲ್ಲಿ ಜಾಗ ನೀಡಿದರೂ ಆರಂಭಗೊಂಡಿಲ್ಲ. ನವಲಗುಂದದಲ್ಲಿ ಎದುರಾಗಿರುವ ಸಮಸ್ಯೆ ನಿವಾರಿಸಿ ಜವಳಿ ಪಾರ್ಕ್‌ ಸ್ಥಾಪಿಸಲು ಸರ್ಕಾರ ಶೀಘ್ರ ಕ್ರಮ ವಹಿಸಬೇಕು’ ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಆಗ್ರಹಿಸಿದರು. ‘ನಿರಂತರವಾಗಿ ಉಪಯೋಗ ಮಾಡುತ್ತಿದ್ದರೆ ಜಾಗದ ಲೀಸ್‌ ಸಹ ಮುಂದುವರಿಯುತ್ತದೆ. ಹೀಗಾಗಿ ಉದ್ಯಮಿಗಳಿಗೆ ಯಾವುದೇ ತೊಂದರೆಯಾಗದು. ಸಂಬಂಧಪಟ್ಟ ಸಚಿವರು ಹಾಗೂ ಶಾಸಕರಿಗೂ ಈ ಬಗ್ಗೆ ತಿಳಿಸಿದ್ದೇನೆ. ಸ್ಥಳೀಯರಲ್ಲಿ ಕೌಶಲ ಹೆಚ್ಚಿಸಿ ಉದ್ಯೋಗಾವಕಾಶ ನೀಡುವ ಪಾರ್ಕ್‌ ಸ್ಥಾಪನೆಗೆ ಸರ್ಕಾರ ವಿಳಂಬ ಮಾಡಬಾರದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.