ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಹುಬ್ಬಳ್ಳಿ–ಧಾರವಾಡ ಗೂಡ್ಸ್ ಟ್ರಾನ್ಸ್‌ಪೋರ್ಟರ್ಸ್ ಮತ್ತು ಲಾರಿ ಮಾಲೀಕರ ಸಂಘ ಹಾಗೂ ತುಂಗಾಭದ್ರಾ ಮರಳು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಕರಾಳ ದಿನ ಆಚರಿಸಿದರು. ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಲಾರಿ ಚಾಲಕರು ಮತ್ತು ಮಾಲೀಕರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಸೋಮವಾರದಿಂದ ಬುಧವಾರದವರೆಗೆ(ಜೂನ್ 28ರಿಂದ 30) ಕರಾಳ ದಿನವನ್ನಾಗಿ ಆಚರಿಸುತ್ತಿದ್ದೇವೆ. ನ್ಯಾಯಯುತವಾದ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಲಾರಿಯ ಕನಿಷ್ಠ ಬಾಡಿಗೆಯನ್ನು ಕಿಲೋಮೀಟರ್ ಆಧಾರದಲ್ಲಿ ನಿಗದಿಪಡಿಸಬೇಕು. ಟೋಲ್ ವೆಚ್ಚ, ಲೋಡ್, ಅನ್‌ಲೋಡ್ ವೆಚ್ಚವನ್ನು ಸರಕುದಾರರರೇ ಪಾವತಿಸಬೇಕು. ಹುಬ್ಬಳ್ಳಿಯಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸಬೇಕು. ಡೀಸೆಲ್ ಮತ್ತು ಪೆಟ್ರೋಲ್ ಅನ್ನು ಜಿಎಸ್‌ಟಿಗೆ ಒಳಪಡಿಸಬೇಕು. ಟ್ರಾನ್ಸ್‌ಪೋರ್ಟ್ ಮಾಲೀಕರಿಗೆ ಕಡಿಮೆ ದರಕ್ಕೆ ಡೀಸೆಲ್ ಮತ್ತು ಪೆಟ್ರೋಲ್ ಪೂರೈಬೇಕು. ಪೊಲೀಸ್ ಹಾಗೂ ಆರ್‌ಟಿಒ ಅಧಿಕಾರಿಗಳ ಕಿರುಕುಳ ತಡೆಯಬೇಕು ಎಂದು ಒತ್ತಾಯಿಸಿದರು.
ಸಂಘದ ರವೀಂದ್ರ ಬೆಳಮಕರ, ಶಶಿಧರ ಕೊರವಿ, ಸುರೇಶ ದೊಡ್ಡಮನಿ, ಪ್ರಭಾಕರ ಉಪಾಧ್ಯ, ಮಹಾದೇವಪ್ಪ ಅಮರಗೋಳ, ಹೊನ್ನಪ್ಪ ಸೊಲಾರಗೊಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.