ADVERTISEMENT

ನವಲಗುಂದ | ಖರೀದಿಗೆ ಬಾರದ ಗ್ರಾಹಕರು: ಕುರಿಗಾಹಿಗಳ ಬದುಕು ಅತಂತ್ರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 5:36 IST
Last Updated 21 ಮಾರ್ಚ್ 2024, 5:36 IST
ನವಲಗುಂದ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ಕುರಿ–ಮೇಕೆಗಳನ್ನು ಕುರಿಗಾಹಿಗಳು ಮಾರಾಟಕ್ಕೆ ತಂದಿದ್ದರು
ನವಲಗುಂದ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ಕುರಿ–ಮೇಕೆಗಳನ್ನು ಕುರಿಗಾಹಿಗಳು ಮಾರಾಟಕ್ಕೆ ತಂದಿದ್ದರು   

ನವಲಗುಂದ: ಉತ್ತರ ಕರ್ನಾಟಕದ ಕುರಿ–ಮೇಕೆಗಳ ಪ್ರಮುಖ ಮಾರುಕಟ್ಟೆಗಳಲ್ಲೊಂದಾದ ನವಲಗುಂದ ಮಾರುಕಟ್ಟೆಯಲ್ಲಿ ಪ್ರತಿ ಮಂಗಳವಾರ ನಡೆಯುವ ವಹಿವಾಟಿಗೆ ಖರೀದಿದಾರರು ಬಾರದ ಕಾರಣ ಕುರಿಗಳ ಬೆಲೆ ಇಳಿಕೆಯಾಗಿ ಕುರಿಗಾಹಿಗಳ ಬದುಕು ಅತಂತ್ರವಾಗಿದೆ.

ಮಳೆ ಬೆಳೆ ಇಲ್ಲದೆ ಹಳ್ಳ ನದಿಗಳು ಬತ್ತಿ ಹೋಗುವುದರಿಂದ ಕುರಿ–ಮೇಕೆಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಆಹಾರ ನೀರಿಗಾಗಿ ಹಗಲು–ರಾತ್ರಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕುರಿಗಾಹಿಗಳ ಕೈಯಲ್ಲಿ ಹಣ ಇಲ್ಲದ ಕಾರಣ ಅಧಿಕ ಸಂಖ್ಯೆಯಲ್ಲಿ ಕುರಿ–ಮೇಕೆಗಳ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಕುರಿಗಳ ಸಂಖ್ಯೆ ಅಧಿಕವಾಗಿದೆ.

ಹುಬ್ಬಳ್ಳಿ, ಧಾರವಾಡ, ನರಗುಂದ, ರೋಣ ಸೇರಿದಂತೆ ಅಕ್ಕಪಕ್ಕದ ತಾಲ್ಲೂಕುಗಳಿಂದ ಕುರಿಗಾಹಿಗಳು ಕುರಿಗಳನ್ನು ತಂದು ಮಾರುತ್ತಾರೆ. ಸುತ್ತಮುತ್ತಲಿನ ಮಾಂಸಾಹಾರಿ ಖಾನಾವಳಿ ಮತ್ತು ಢಾಬಾ ಮಾಲೀಕರು ಸಹ ಮಾರುಕಟ್ಟೆಯಲ್ಲಿ ಕುರಿ ಖರೀದಿಸುತ್ತಾರೆ. ದೂರದ ಬಳ್ಳಾರಿ, ಹಾಸನ, ಬೆಂಗಳೂರು ಜಿಲ್ಲೆಯ ವರ್ತಕರೂ ವ್ಯಾಪಾರಕ್ಕೆ ಬರುವುದುಂಟು.

ADVERTISEMENT

ಮೂರು ತಿಂಗಳ ಹಿಂದೆ ₹10ಸಾವಿರದಿಂದ ₹15 ಸಾವಿರಕ್ಕೆ ಮಾರಾಟವಾಗುವ ಕುರಿಗಳು ಈಗ ₹5ಸಾವಿರಕ್ಕೆ ಮಾರಾಟವಾಗುತ್ತಿವೆ. ಮಾರಾಟದಲ್ಲಿ ಮಧ್ಯವರ್ತಿಗಳ ಪಾಲು ದೊಡ್ಡದಿದೆ. ಅವರೇ ಕುರಿಗಳ ಬೆಲೆ ನಿಗದಿಗೊಳಿಸುತ್ತಾರೆ. ಇದರಿಂದ ಕುರಿಗಾರರಿಗೆ ಮೋಸವಾಗುತ್ತಿದೆ’ ಎಂದು ಕುರಿಗಾಹಿ ಸಿದ್ದಪ್ಪ ಅವರು ಆರೋಪಿಸುತ್ತಾರೆ.

ನವಲಗುಂದ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ಕುರಿ–ಮೇಕೆಗಳನ್ನು ಕುರಿಗಾಹಿಗಳು ಮಾರಾಟಕ್ಕೆ ತಂದಿದ್ದರು

‘ಸರ್ಕಾರ ನೆರವಿಗೆ ಬರಲಿ‌’

‘ಈ ಭಾಗದಲ್ಲಿ ಕುರುಬ ಸಮುದಾಯ ಅಧಿಕ ಸಂಖ್ಯೆಯಲ್ಲಿರುವುದರಿಂದ ಸಾವಯವ ಗೊಬ್ಬರ ಮಾಂಸ ಉಣ್ಣೆ ಹಾಗೂ ಚರ್ಮ ವ್ಯಾಪಾರದಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಬರಗಾಲದ ಬವಣೆಯಿಂದ ತೊಂದರೆಯಲ್ಲಿರುವ ಕುರಿಗಾಹಿಗಳ ನೆರವಿಗೆ ಸರ್ಕಾರ ತಕ್ಷಣ ಯೋಜನೆ ಕೆಗೆತ್ತಿಕೊಳ್ಳಬೇಕು’ ಎಂಬುದು ಈ ಭಾಗದ ಕುರಿಗಾರರ ಒಕ್ಕೊರಲಿನ ಕೋರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.