ಹುಬ್ಬಳ್ಳಿಯಿಂದ ಊರಿಗೆ ಹೋಗುವ ಅವಸರ. ಇನ್ನೇನು ಕೆಲವೇ ನಿಮಿಷಗಳಲ್ಲಿ ರೈಲು ಪ್ಲಾಟ್ ಫಾರ್ಮ್‌ಗೆ ಬಂದು ನಿಲ್ಲುತ್ತದೆ. ಮೈ ಕೊರೆಯುವ ಚಳಿಯಲ್ಲಿ ರಾತ್ರಿ ಪ್ರಯಾಣಿಸಬೇಕಾಗಿದೆ; ಹೊದಿಕೆ ತರುವುದು, ಟೊಪ್ಪಿಗೆ ಹಾಕಿಕೊಳ್ಳುವುದು ನೆನಪೇ ಆಗಿಲ್ಲ. ಬ್ಯಾಗಿನಲ್ಲಿಯೂ ಇಟ್ಟುಕೊಂಡಿಲ್ಲ. ಆದರೂ ಚಿಂತೆ ಬೇಡ. ಯಾಕೆಂದರೆ ರೈಲು ನಿಲ್ದಾಣದಲ್ಲಿಯೇ ಉಚಿತವಾಗಿ ಸ್ವೆಟರ್, ಬ್ಲ್ಯಾಂಕೆಟ್, ಟವಲ್ ಸಿಗುತ್ತದೆ!
ಹಾಗಾದರೆ ರೈಲು ನಿಲ್ದಾಣದಲ್ಲಿ ಬಟ್ಟೆಗಳ ಅಂಗಡಿ ಇದೆಯಾ ಎಂದು ಪ್ರಶ್ನಿಸಬೇಡಿ. ಅಂಗಡಿ ಇದ್ದರೂ ಅವರು ಉಚಿತವಾಗಿ ಕೊಡುತ್ತಾರಾ ಎನ್ನುವ ಯೋಚನೆಯನ್ನೂ ಮಾಡಬೇಡಿ. ಬಡವರಿಗೆ ಮತ್ತು ಅಗತ್ಯ ಇರುವ ಪ್ರಯಾಣಿಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ನೈರುತ್ಯ ರೈಲ್ವೆ, ಹುಬ್ಬಳ್ಳಿ ಪರ್ಲ್ಸ್ ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಿಲ್ದಾಣದ ಪ್ರವೇಶ ದ್ವಾರದಲ್ಲಿ ‘ಪಬ್ಲಿಕ್ ಸ್ಟೋರ್’ ಆರಂಭಿಸಿದೆ. ಇದು ಸಾರ್ವಜನಿಕರು ಮುಕ್ತವಾಗಿ ಬಳಸಬಹುದಾದ ಸ್ಟೋರ್. ಜನರಿಂದ ಸಂಗ್ರಹಿಸಿದ ಸ್ವೆಟರ್, ಶೂ, ಬ್ಲ್ಯಾಂಕೆಟ್, ಬಟ್ಟೆಗಳು, ಪಾದರಕ್ಷೆಗಳನ್ನು ಶೇಖರಿಸಿ ಒಂದು ಕಡೆ ಇಡಲಾಗಿದೆ.
ಪ್ರಯಾಣಿಕರು ತಮಗೆ ಅಗತ್ಯ ಇರುವ ಬಟ್ಟೆಯನ್ನು ತೆಗೆದುಕೊಂಡು ಹೋಗಿ, ತಮ್ಮ ಬಳಿ ಇರುವ ಬಟ್ಟೆಯನ್ನು ಸ್ಟೋರ್‌ನಲ್ಲಿ ಇಟ್ಟು ಹೋಗುತ್ತಾರೆ. ಇದನ್ನು ನಿರ್ವಹಣೆ ಮಾಡಲು ಯಾವ ಸಿಬ್ಬಂದಿಯೂ ಇಲ್ಲ. ಜನರೇ ತಮಗೆ ಬೇಕಾದ ಬಟ್ಟೆ ತೆಗೆದುಕೊಳ್ಳುತ್ತಾರೆ. ರೈಲ್ವೆ ಇಲಾಖೆ ಮತ್ತು ಲಯನ್ಸ್ ಕ್ಲಬ್‌ನ ಈ ಕೆಲಸದಿಂದ ಕೋವಿಡ್ ಹಾಗೂ ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ದಿಢೀರನೆ ಸೋಂಕು ಹರಡಲು ಶುರುವಾದಾಗ ಅನೇಕ ಜನರು ಹುಬ್ಬಳ್ಳಿಯಲ್ಲಿ ಉಳಿದರು. ಅವರಿಗೆ ವಿವಿಧ ಸರ್ಕಾರಿ ವಸತಿ ನಿಲಯಗಳಲ್ಲಿ ಆಶ್ರಯ ಕಲ್ಪಿಸಲಾಯಿತು. ವಲಸೆ ಕಾರ್ಮಿಕರು ಮರಳಿ ತಮ್ಮ ರಾಜ್ಯಗಳಿಗೆ ಹೋಗಲು ಸರ್ಕಾರ ಹಲವಾರು ‘ಶ್ರಮಿಕ ಎಕ್ಸ್‌ಪ್ರೆಸ್’ ರೈಲುಗಳನ್ನು ಓಡಿಸಿತು. ಒಂದೇ ಬಟ್ಟೆಯ ಮೇಲೆ ದಿನಗಟ್ಟಲೆ ಇದ್ದವರಿಗೆ ‘ಪಬ್ಲಿಕ್ ಸ್ಟೋರ್’ ಬಟ್ಟೆಗಳು ಶ್ರೀಮಂತ ಖಜಾನೆಯಾಗಿದ್ದವು.
ಈ ಸ್ಟೋರ್ ಪಕ್ಕದಲ್ಲಿ ಫ್ರಿಜ್ ಕೂಡ ಇದೆ. ಇರುವ ಆಹಾರವನ್ನು ಕೆಡದಂತೆ ಮತ್ತು ಚೆಲ್ಲದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣ ಮುಗಿಸಿ ಹೋಗುವಾಗ ತಮ್ಮಲ್ಲಿ ಉಳಿದ ಹಣ್ಣು, ನೀರು, ಚಿಪ್ಸ್ ಹಾಗೂ ಇನ್ನಿತರ ಪದಾರ್ಥವನ್ನು ಫ್ರಿಜ್‌ನಲ್ಲಿ ಇಟ್ಟು ಹೋಗಬಹುದು. ಅಗತ್ಯ ಇರುವವರು ಆಹಾರ ತೆಗೆದುಕೊಳ್ಳುತ್ತಾರೆ.
‘ಹಲವು ಪ್ರಯಾಣಿಕರು ಕೆಲ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಬಿಟ್ಟು ಬರುತ್ತಾರೆ. ಮುಂಬೈ, ಪುಣೆ, ಬೆಂಗಳೂರು, ದೆಹಲಿ, ಸಿಕಂದರಾಬಾದ್ ಹೀಗೆ ದೂರದ ಊರುಗಳಿಗೆ ಇಲ್ಲಿಂದ ಕಾರ್ಮಿಕರು ಹೋಗಿ ಬರುವುದು ಸಾಮಾನ್ಯ. ಅವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಪಬ್ಲಿಕ್ ಸ್ಟೋರ್ ಆರಂಭಿಸಿದ್ದೇವೆ. ಒಂದು ವರ್ಷದಿಂದ ಹಲವರು ಬಟ್ಟೆಗಳನ್ನು ತೆಗೆದುಕೊಂಡು ಹೋದರೆ, ಇನ್ನೂ ಕೆಲವರು ಅಲ್ಲಿ ಬಟ್ಟೆಗಳನ್ನು ಇಟ್ಟು ಹೋಗುತ್ತಾರೆ’ ಎನ್ನುತ್ತಾರೆ ರೈಲ್ವೆ ಸಿಬ್ಬಂದಿ.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿದ್ದ ಬಸವರಾಜ ಹೊಳ್ಳಿ ಎನ್ನುವ ಪ್ರಯಾಣಿಕರು ಈ ಕುರಿತು ಪ್ರತಿಕ್ರಿಯಿಸಿ ‘ಸ್ಟೋರ್‌ನಿಂದ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗುತ್ತದೆ. ದೂರದ ಊರುಗಳಿಗೆ ಹೋಗುವವರು ಹೊದ್ದುಕೊಳ್ಳಲು ಏನೂ ಇಲ್ಲದೆ ಚಳಿಯಲ್ಲಿ ನಡುಗುವುದನ್ನು ನೋಡಿದ್ದೇನೆ. ಸ್ಟೋರ್‌ನ ವ್ಯಾಪಕ ಪ್ರಚಾರವಾದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಪಬ್ಲಿಕ್ ಸ್ಟೋರ್ ಬಗ್ಗೆ ನಿಲ್ದಾಣದ ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಬೇಕು’ ಎಂದರು.
ನಿರ್ವಹಣೆ ಸವಾಲು: ಸ್ಟೋರ್‌ನಲ್ಲಿ ಅನೇಕ ಬಟ್ಟೆಗಳನ್ನು ಇಡಲಾಗಿದೆ. ಲಾಕ್‌ಡೌನ್ ತೆರವಿನ ಬಳಿಕ ಸೋಂಕಿನ ಭೀತಿಯ ಕಾರಣಕ್ಕಾಗಿ ಬಹಳಷ್ಟು ಜನ ಅವುಗಳನ್ನು ಮುಟ್ಟುತ್ತಿಲ್ಲ. ನಿರ್ವಹಣೆಗೆ ಸಿಬ್ಬಂದಿಯಿಲ್ಲದ ಕಾರಣ ಅನೇಕ ಸಲ ನಾಯಿಗಳು ಸ್ಟೋರ್‌ನಲ್ಲಿ ಮಲಗಿದ್ದ ಉದಾಹರಣೆಗಳೂ ಇವೆ. ಆದ್ದರಿಂದ ನಿರ್ವಹಣೆ ಮಾಡುವುದು ಅಗತ್ಯವಿದೆ. ಇದರಿಂದ ಹೆಚ್ಚು ಜನರಿಗೆ ಉಪಯೋಗವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.