ADVERTISEMENT

ಶಿಕ್ಷಣ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೂರುಸಾವಿರ ಮಠದ ಕ್ರಾಂತಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2023, 6:01 IST
Last Updated 31 ಆಗಸ್ಟ್ 2023, 6:01 IST
ಹುಬ್ಬಳ್ಳಿಯ ಮೂರುಸಾವಿರ ಮಠದ ಚಿತ್ರ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಮೂರುಸಾವಿರ ಮಠದ ಚಿತ್ರ –ಪ್ರಜಾವಾಣಿ ಚಿತ್ರ   

ಪೂರ್ಣಿಮಾ ಗೊಂದೆನಾಯ್ಕರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರವಿತ್ರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹುಬ್ಬಳ್ಳಿಯೂ ಸುಪ್ರಸಿದ್ಧ ತಾಣವಾಗಿದೆ. ಸಾಕಷ್ಟು ಮಠಗಳಿಂದ ಕೂಡಿದ್ದ ‘ಪೂಬಳ್ಳಿ’ (ಹುಬ್ಬಳ್ಳಿ)ಯಲ್ಲಿ ಮಠಗಳ ಸಂಖ್ಯೆ ಕ್ಷಿಣಿಸಿದರೂ ಕೆಲವು ಮಠಗಳು ಮಾತ್ರ ಭಕ್ತ ಗಣದ ಮನದಲ್ಲಿ ನೆಲೆಸಿವೆ.

ಹೌದು...ಹುಬ್ಬಳ್ಳಿಯ ಕೇಂದ್ರ ಸ್ಥಾನದಲ್ಲಿರುವ ಹೂಬಳ್ಳಿಯ ಹೂವುಗಳಂತೆ ಶೋಭಿಸುವ ಜಗದ್ಗುರು ಮೂರುಸಾವಿರಮಠವು 12ನೇ ಶತಮಾನದಲ್ಲಿ ನಿರ್ಮಾಣಗೊಂಡು ಅಪಾರ ‍ಪ್ರಮಾಣದ ಭಕ್ತರನ್ನು ಹೊಂದಿದೆ. ಈ ಮಠವೂ ತನ್ನದೆಯಾದ ವೈಶಿಷ್ಟ್ಯತೆ ಹೊಂದಿದೆ.

ADVERTISEMENT

ಕಲಚೂರಿಯ 12ನೇ ಶತಮಾನದ ಶಿರಸಿಯ ಶಿಲಾಶಾಸನದಲ್ಲಿ ಮೂರುಸಾವಿರಮಠದ ಉಲ್ಲೇಖವಿದೆ. ಶೈವ ಮೂಲದ ತಾಯಿ ಬೇರಿನಿಂದ ಈ ಮಠವು ಅಲ್ಲಮ ಸಂಪ್ರದಾಯದ ಶೂನ್ಯ ಸಿಂಹಾಸನ ಪೀಠವಾಗಿ ಉತ್ಕ್ರಾಂತಿಯಾಗಿದೆಯೆ೦ದು ಊಹಿಸಲಾಗಿದೆ. ಈ ಹುಬ್ಬಳ್ಳಿಯ ತಪೋವನದ ಗವಿಯಲ್ಲಿ ಉಗ್ರ ಅನುಷ್ಠಾನಗೈದು ಲಿಂಗೈಕ್ಯರಾದ ಜಗದ್ಗುರು ಗುರುಸಿದ್ಧ ಗುರುಸಿದ್ಧರಾಜಯೋಗೀಂದ್ರರ ಜಾಗೃತ ಸಮಾಧಿಯು ಶ್ರೀಮಠದ ಬಲಭಾಗದಲ್ಲಿ ‘ಹುಚ್ಚನ ಗದ್ದಿಗೆ’ ಎಂದೇ ಭಕ್ತರು ಕರೆಯುತ್ತಾರೆ.

ಮೂರುಸಾವಿರಮಠದ ಹುಚ್ಚನೆಂದರೆ ಬೆಂಕಿಯ ಕೆಂಡ. ಅವನ ಅ೦ಗಾರ ಹಿಡಿದು ಆಣೆಮಾಡಿದರೆ ಸಮಸ್ಯೆ ಪರಿಹಾರ ಸಿಗುತ್ತದೆ ಎ೦ಬುದು ಭಕ್ತರ ನಂಬಿಕೆ. ಕಿತ್ತೂರು ಚನ್ನಮ್ಮನ ಸಂಸ್ಥಾನ ಅವನತಿಯ ನ೦ತರ ಅದೇ ಸಂಸ್ಥಾನದ ಕಟ್ಟಗೆಗಳನ್ನೇ ಈ ಮಠಕ್ಕೆ ಜೋಡಿಸಲಾಗಿದೆ. ತಾಳೆಗ್ರಂಥಗಳನ್ನು ಸಂಗ್ರಹಿಸಿಡಲು ಓಲೆಮಠ ಕಟ್ಟಲಾಯಿತು. ಈ ಮಠದ ಪೂರ್ವ ಸ್ಥಾನವೆಂದು ಪೂರ್ವದ ಮೂರುಸಾವಿರಮಠವೆಂದು ಕರೆಯಲಾಗುತ್ತಿದೆ.

‘ಮೂರುಸಾವಿರಮಠ’ ಹೆಸರಿಗೆ ಕಾರಣ...

ಅಲ್ಲಮ ಪ್ರಭುವಿನ ಶೂನ್ಯ ಪೀಠದ ಪರಂಪರೆಯಲ್ಲಿ ಅನೇಕ ಜಗದ್ಗುರು ಪೀಠಗಳು, ನಿರ೦ಜನ ಪೀಠಗಳು ಕನ್ನಡ ನಾಡಿನಲ್ಲಿ ಉದಯಿಸಿದವು. ಕಲ್ಯಾಣದ ಕ್ರಾಂತಿಯಾಯಿತು. ಆಗ ಅಲ್ಲಿಯ ಮೂರುಸಾವಿರ (3000) ಜನ ಭಕ್ತ ಮಹೇಶ್ವರರು ಪೂವಳ್ಳಿ (ಹುಬ್ಬಳ್ಳಿ)ಗೆ ಬಂದು ಈ ಧರ್ಮಪೀಠದಲ್ಲಿ ತಂಗಿದರು. ಈ ಐತಿಹಾಸಿಕ ಘಟನೆಯ ಪರಿಣಾಮವಾಗಿ ಮೂರುಸಾವಿರಮಠ ಆಯಿತೆಂದು ಹಲವರ ಅಭಿಪ್ರಾಯ. ಮಠದ ಆವರಣದಲ್ಲಿ ಲಿಂಗೈಕ್ಯ ಜಗದ್ಗುರುಗಳ ಸುಮಾರು 30 ಗದ್ದುಗೆಗಳಿದ್ದು, ನಿತ್ಯ ಪೂಜಾ ಕಾರ್ಯಕ್ರಮ ನಡೆಯುತ್ತವೆ. 51ನೇ ಪೀಠಾಧಿಪತಿಗಳಾಗಿ ಗುರುರಾಜಯೋಗೀಂದ್ರ ಸ್ವಾಮೀಜಿ ಇದ್ದಾರೆ.

ನಿತ್ಯ ಅನ್ನ ದಾಸೋಹ

ಮೂರು ಸಾವಿರ ಮಠದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇದೆ. ಅನ್ನ ದಾಸೋಹಿಗಳಿಂದ ದವಸ, ಧಾನ್ಯಗಳನ್ನು ಸಂಗ್ರಹಿಸಿ ನಿತ್ಯ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದೆ. 

ಶ್ರಾವಣದ ಕಡೆ ಸೋಮವಾರ ಜಾತ್ರೆ

ಅಪಾರ ಪ್ರಮಾಣದ ಭಕ್ತರನ್ನು ಹೊಂದಿದ ಮಠದಲ್ಲಿ ಪ್ರತಿ ವರ್ಷ ಶ್ರಾವಣದ ಕಡೆಯ ಸೋಮವಾರ ಮಠದ ಜಾತ್ರೆ ನಡೆಯುತ್ತದೆ. ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯುತ್ತವೆ. ಹೋಳಿ ಹಬ್ಬದ ಅಂಗವಾಗಿ ‘ಜಗ್ಗಲಗಿ ಹಬ್ಬ’, ದಸರಾ ಹಬ್ಬ, ಮಹಾಶಿವರಾತ್ರಿ, ಕಾರ್ತಿಕೋತ್ಸವ, ಬಸವ ಜಯಂತಿ ಕಾರ್ಯಕ್ರಮಗಳು ನಡೆಯುತ್ತವೆ.

ಶಿಕ್ಷಣಕ್ಕೆ ಆದ್ಯತೆ

‘ಮಠದಲ್ಲಿ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, ಶಾಲೆ, ಕಾಲೇಜು, ಐಟಿಐ ಸೇರಿದಂತೆ ಶಿಕ್ಷಣಕ್ಕೂ ಮಹತ್ವ ನೀಡಿದೆ. 1965ರಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಳೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಅಷ್ಟೇ ಅಲ್ಲದೆ ಮಠದ ವತಿಯಿಂದ ಘಟಪ್ರಭಾದಲ್ಲಿ ಶಾಲೆ, ಟಿಬಿ ರೋಗಿಗಳಿಗಾಗಿಯೇ ಆಸ್ಪತ್ರೆ ನಿರ್ಮಿಸಲಾಗಿದೆ’ ಎಂದು ಹೇಳುತ್ತಾರೆ ಮಠದ ಟ್ರಸ್ಟಿ ಅಮರೇಶ ಹಿಪ್ಪರಗಿ.

ಹುಬ್ಬಳ್ಳಿಯ ಮೂರುಸಾವಿರ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.