ADVERTISEMENT

ಅಕಾಲಿಕ ಮಳೆಯಿಂದ ಬೆಳೆ ನಷ್ಟ: ಮೆಣಸಿನಕಾಯಿ ಬೆಳೆಗಾರರ ಕಣ್ಣೀರು

ವಾಸುದೇವ ಮುರಗಿ
Published 8 ಡಿಸೆಂಬರ್ 2021, 3:00 IST
Last Updated 8 ಡಿಸೆಂಬರ್ 2021, 3:00 IST
ಗುಡಗೇರಿ ಗ್ರಾಮದಲ್ಲಿ ಹೊಲವೊಂದರಲ್ಲಿ ಗಿಡದಲ್ಲೃ ಬಾಡಿರುವ ಮೆಣಸಿನಕಾಯಿ
ಗುಡಗೇರಿ ಗ್ರಾಮದಲ್ಲಿ ಹೊಲವೊಂದರಲ್ಲಿ ಗಿಡದಲ್ಲೃ ಬಾಡಿರುವ ಮೆಣಸಿನಕಾಯಿ   

ಗುಡಗೇರಿ: ಅಕಾಲಿಕ ಮಳೆಯಿಂದಾಗಿ ಕೊಳೆರೋಗ ಉಲ್ಬಣಿಸಿ ಮೆಣಸಿನಕಾಯಿ ಗಿಡದಲ್ಲಿಯೇ ಬಾಡುತ್ತಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಕುಂದಗೋಳ ತಾಲ್ಲೂಕಿನ ಮೆಣಸಿನಕಾಯಿಗೆ ಅಪಾರ ಬೇಡಿಕೆಯಿದೆ. ಇಲ್ಲಿ ಬೆಳೆಯುವ ಮೆಣಸಿನಕಾಯಿಯು ರುಚಿಯುಕ್ತ ಹಾಗೂ ಉತ್ತಮ ತಳಿಯಾದ ಕಾರಣ ರಾಜ್ಯದಬಳ್ಳಾರಿ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ ವರ್ತಕರು ಇಲ್ಲಿಗೆ ಬಂದು ಖರೀದಿಸುತ್ತಾರೆ.

ಕಳೆದ ವರ್ಷ ಮೆಣಸಿನಕಾಯಿಗೆ ‘ಬಂಗಾರ’ದ ಬೆಲೆ ಬಂದಿದ್ದರಿಂದ ಈ ವರ್ಷ ಹೆಚ್ಚಿನ ರೈತರು 8 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ, ಅಕಾಲಿಕ ಮಳೆಯಿಂದಾಗಿ ಸಮೃದ್ಧ ಫಸಲು ನೆಲಕಚ್ಚುವಂತಾಗಿದೆ. ಕೊಳೆ ರೋಗದಿಂದ ದಿನದಿಂದ ದಿನಕ್ಕೆ ಗಿಡದಲ್ಲಿಯೇ ಕಾಯಿಗಳು ಒಣಗುತ್ತಿವೆ.

ADVERTISEMENT

‘ಮಡಿ, ನಾಟಿ ಮಾಡಿ ಗಿಡ ಬೆಳೆಸಲು ಸಾಕಷ್ಟು ಹಣ ಖರ್ಚಾಗಿದೆ. ಅನೇಕ ರೋಗ ತಾಗಿದ್ದರಿಂದ ಔಷಧ ಉಪಚಾರ ಮಾಡಿ, ಮಕ್ಕಳ ರೀತಿ ಗಿಡಗಳನ್ನು ಬೆಳೆಸಿದ್ದೆವು. ಈಗ ಗಿಡ ಬಾಡುವುದನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತಿದೆ’ ಎಂದು ಗುಡಗೇರಿಯ ರೈತ ಬೆಳೆ ರಕ್ಷಕ ಸಂಘದ ಅಧ್ಯಕ್ಷ ಸಂಜೀವಗೌಡ ತಿಮ್ಮನಗೌಡ್ರ ಹೇಳಿದರು.

‘ಹಿಂಗ್ ಬೆಳೆ ಕೈಕೊಟ್ರ ಕಮತಾ ಮಾಡುವುದು ಹೆಂಗರೀ. ಸಾಲ–ಸೋಲ ಮಾಡಿ ಬೆಳೆ ಬೆಳಿಸಿದ್ದೀವ್ರಿ. ಮುಂದಿನ ವರ್ಷ ಕಮತಾ ಮಾಡುವುದು ಹೆಂಗ್ ಅಂತ ಚಿಂತಿ ಆಗೈತ್ರಿ’ ಎನ್ನುತ್ತಾರೆ ರೈತ ಚಂದ್ರು ಮಳಲಿ.

ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಮೆಣಸಿನಕಾಯಿ ಬೆಳೆದು ನಷ್ಟ ಅನುಭವಿಸಿದ ರೈತರು ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.